ಜನರ ಒತ್ತಾಯವಿಲ್ಲದಿದ್ದರೂ ಹಲವಾರು ಕಾನೂನುಗಳನ್ನು ಈ ದೇಶದಲ್ಲಿ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರೈತರ ಒತ್ತಾಯವಿಲ್ಲದೇ ಈ ಕಾಯ್ದೆಗಳನ್ನು ತರಲಾಗಿದೆ ಎಂದು ಸತ್ಯ ಒಪ್ಪಿಕೊಂಡಿದ್ದಾರೆ. ಹಾಗಾಗಿ ರೈತರಿಗೆ ಬೇಕಿಲ್ಲದ ಈ ಕಾನೂನುಗಳನ್ನು ಅವರು ವಾಪಸ್ ಪಡೆಯಬೇಕು ಮತ್ತು ರೈತವಿರೋಧಿ ಹೇಳಿಕೆ ನೀಡುವುದನ್ನು ನಿಲ್ಲಸಬೇಕು ಎಂದು ಕಿಸಾನ್ ಸಂಯುಕ್ತ ಮೋರ್ಚಾ ಆಗ್ರಹಿಸಿದೆ.
ಮೋರ್ಚಾದ ಪರವಾಗಿ ದರ್ಶನ್ ಪಾಲ್ ಪತ್ರಿಕಾ ಹೇಳಿಕೆ ನೀಡಿ, ರೈತರ ಹಕ್ಕೊತ್ತಾಯಗಳ ಬಗ್ಗೆ ಪ್ರಧಾನಿ ಮಂತ್ರಿಗೆ ಗಂಭೀರತೆ ಇಲ್ಲ. ಸರ್ಕಾರ ಒಂದು ಕಡೆ ರೈತರನ್ನು ಹೀಯಾಳಿಸುತ್ತಾ ಇನ್ನೊಂದು ಕಡೆ ಮಾತುಕತೆಗೆ ಸಿದ್ದ ಎನ್ನುವುದನ್ನು ನಂಬಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪಂಜಾಬ್‌ನ ಲೂಧಿಯಾನ ಜಿಲ್ಲೆಯ ಜಾಗ್ರಾವ್ನ್ ಮಾರುಕಟ್ಟೆಯಲ್ಲಿ ಪಂಜಾಬ್‌ನ 31 ರೈತ ಸಂಘಟನೆಗಳು ಜಂಟಿಯಾಗಿ ಕಿಸಾನ್ ಮಹಾಪಂಚಾಯತ್ ಆಯೋಜಿಸಿದ್ದವು. ಮಾರುಕಟ್ಟೆ ಅಂಗಳದ ತುಂಬೆಲ್ಲಾ ರೈತರು ಮತ್ತು ಸಾರ್ವಜನಿಕರು ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶಂಭು ಗಡಿಯಲ್ಲಿಯೂ ರೈತರು ಮಹಾಪಂಚಾಯತ್ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಟಿಕ್ರಿ ಮೋರ್ಚಾದಲ್ಲಿ ಸಿಸಿಟಿವಿ ಅಳವಡಿಸುವ ಹರಿಯಾಣ ಸರ್ಕಾರದ ಪ್ರಸ್ತಾಪವನ್ನು ವಿರೋಧಿಸಿರುವ ಅವರು ರೈತರ ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸಬಾರದೆಂದು ಆಗ್ರಹಿಸಿದ್ದಾರೆ.
ಕಿಸಾನ್ ಮಹಾಪಂಚಾಯತ್‌ಗಳನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ಆಯೋಜಿಸಲಾಗುವುದು. ಸಂಯುಕ್ತಾ ಕಿಸಾನ್ ಮೋರ್ಚಾ ತಂಡಗಳು ರಾಜ್ಯವಾರು ಮಹಾಪಂಚಾಯತ್‌ಗಳ ಕಾರ್ಯಕ್ರಮಗಳನ್ನು ಯೋಜಿಸುತ್ತಿವೆ. ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವವರೆಗೆ ಮತ್ತು ಎಂಎಸ್‌ಪಿಗೆ ಕಾನೂನು ಮಾನ್ಯತೆ ನೀಡುವವರೆಗೂ ಸಮುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಫೆಬ್ರವರಿ 12 – ಬಿಲಾರಿ, ಮೊರಾದಾಬಾದ್‌ನಲ್ಲಿ, 13 ಫೆಬ್ರವರಿ – ಪಿಡಿಎಂ ಕಾಲೇಜು ಬಹದ್ದೂರ್ ಬೈಪಾಸ್ ಬಳಿ, ಫೆಬ್ರವರಿ 18 – ರೈಸಿಂಗ್ ನಗರ, ಶ್ರೀ ಗಂಗನಗರ ರಾಜಸ್ಥಾನ, 19 ಫೆಬ್ರವರಿ – ಹನುಮನ್‌ಗರ್, ರಾಜಸ್ಥಾನ, ಫೆಬ್ರವರಿ 23 – ಸಿಕಾರ್, ರಾಜಸ್ಥಾನದಲ್ಲಿ ಕಿಸಾನ್ ಮಹಾಪಂಚಾಯತ್ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ದರ್ಶನ್ ಪಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ಲೂಧಿಯಾನ ಮಹಾಪಂಚಾಯತ್‌ನಲ್ಲಿ ಲಕ್ಷಕ್ಕೂ ಅಧಿಕ ರೈತರು ಭಾಗಿ: ಚಳವಳಿ ತೀವ್ರಗೊಳಿಸಲು ನಿರ್ಧಾರ


