ಆಸೆಗೆ, ಅಹಂಗೆ ಮಾರಿಕೊಂಡವರ ನೆಪಗಳು!
ಕರ್ನಾಟಕದ ಸದ್ಯದ ಬೆಳವಣಿಗೆಗಳಿಗೆ ಯಾರು ಕಾರಣ ಎಂಬ ಚರ್ಚೆ ನಡೆಯುತ್ತಿದೆ. ಶಾಸಕರು ಅಸಮಾಧಾನಗೊಂಡು ಮುಂಬೈ ತಲುಪಿದ್ದಾರೆ. ಅವರ ಕೆಲ ಮಾತುಗಳನ್ನು ಆಧಾರವಾಗಿಟ್ಟುಕೊಂಡು ರಾಜಕೀಯ ವಿಶ್ಲೇಷಕರು ಈ ಎಲ್ಲಾ ಘಟನೆಗಳ ಹಿಂದೆ ಯಾರು ಇರಬಹುದು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ.
ಘಟನೆಗಳಿಗೆ, ಟಿವಿ ಚರ್ಚೆ, ಪತ್ರಿಕಾ ವರದಿಗಳಲ್ಲಿ ಪ್ರಮುಖವಾಗಿ ಕಾಣುವವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಮನ್ವಯ ಸಮಿತಿ ಮುಖ್ಯಸ್ಥರಾಗಿ ಅವರು ವಿಫಲರಾಗಿದ್ದಾರೆ. ತಮ್ಮದೇ ಬೆಂಬಲಿಗರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲಾಗಲಿಲ್ಲ. ಮೇಲಾಗಿ ಅವರದೇ ಬೆಂಬಲಿಗರು ಮುಂಬೈ ಹೋಗಿರುವ ಕಾರಣ ಇಡೀ ಪ್ರಕರಣ ಹಿಂದೆ ಅವರ ಪಾತ್ರವೂ ದೊಡ್ಡದಿರಬಹುದು ಎಂಬ ಮಾತುಗಳಿವೆ.
ಹಾಗೆ ಮಾತನಾಡುವಾಗ ಕೆಲ ಶಾಸಕರನ್ನು ನೇರವಾಗಿ ಸಿದ್ದು ಶಿಷ್ಯರೆಂದು, ಅವರು ಹೇಳಿದರೆ ಖಂಡಿತಾ ಹಿಂತಿರುಗುತ್ತಾರೆ. ಅವರು ಮನಸ್ಸು ಮಾಡುತ್ತಿಲ್ಲ. ಮೇಲಾಗಿ ಸಿದ್ದರಾಮಯ್ಯನಿಗೂ ಸರಕಾರ ಉಳಿದು ಆಗಬೇಕಾದ್ದು ಏನೂ ಇಲ್ಲ – ಎಂಬೆಲ್ಲಾ ಮಾತುಗಳಿವೆ.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಿಕ್ಕಟ್ಟನ್ನು ಬಿಡಿಸಲು ಎಷ್ಟೇ ಪ್ರಯತ್ನಪಟ್ಟವರಂತೆ ಕಂಡರೂ ಅವರ ಬಗ್ಗೆ ಅನುಮಾನಗಳು ಇದ್ದೇ ಇವೆ. ಜೆಡಿಎಸ್ ಪಕ್ಷದ ಬೆಂಬಲಿಗರು ಅವರನ್ನೇ ವಿಲನ್ ಎಂಬಂತೆ ನೋಡುತ್ತಿದ್ದಾರೆ. ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಒಬ್ಬ ಪತ್ರಕರ್ತರಂತೂ ಇಡೀ ಸಿನಿಮಾಕ್ಕೆ ಸಿದ್ದರಾಮಯ್ಯನವರದೇ ಚಿತ್ರಕತೆ, ನಿರ್ದೇಶನ ಎಂದು ಪದೇ ಪದೇ ಹೇಳುತ್ತಿದ್ದಾರೆ.

ಅದೇ ಹೊತ್ತಲ್ಲಿ ಶಾಸಕರ ಅತೃಪ್ತಿಗೆ ಕಾರಣವಾಗಿ ಹೊಮ್ಮಿರುವ ಇನ್ನೊಬ್ಬ ಇನ್ನೊಬ್ಬರು ಲೋಕೋಪಯೋಗಿ ಸಚಿವರಾದ ಹೆಚ್. ಡಿ. ರೇವಣ್ಣ. ಬೆಂಗಳೂರಿನ ಶಾಸಕರು ಮುಂಬೈ ವಿಮಾನ ಹತ್ತುವ ಮುನ್ನ, ಎಲ್ಲಾ ಇಲಾಖೆಗಳಿಗೆ ಮೂಗು ತೂರಿಸುವ ರೇವಣ್ಣನೇ ಅಸಮಾಧಾನಕ್ಕೆ ಕಾರಣ ಎಂದು ಆರೋಪಿಸಿ ಹೊರಟಿದ್ದಾರೆ. ಹೀಗೆ ಆರೋಪ ಮಾಡುವವರಿಗೆ ಅವರದೇ ಆದ ಕಾರಣಗಳಿರಬಹುದು.
ಆದರೆ ಈ ಎಲ್ಲಾ ಕಾರಣಗಳ ಆಚೆ ದೊಡ್ಡ ದೊಡ್ಡ ವ್ಯಕ್ತಿಗಳಿದ್ದಾರೆ, ಆಮಿಷಗಳಿವೆ, ದುರಾಸೆ ಇದೆ ಎಂಬುದನ್ನು ನಮ್ಮ ಮಾಧ್ಯಮ ವ್ಯವಸ್ಥಿತವಾಗಿ ಮರೆ ಮಾಚಿದೆ. ಆ ಕಾರಣಕ್ಕೇನೆ ಈ ಬಾರಿ ‘ಆಪರೇಷನ್ ಕಮಲ’ ಎಂಬ ಪದ ಹೆಚ್ಚಾಗಿ ಕಿವಿಗೆ ಬೀಳಲೇ ಇಲ್ಲ. ಬದಲಾಗಿ ಕೇಳಿಸಿದ್ದು – ದೋಸ್ತಿ ಖತಮ್.
ಒಬ್ಬ ಶಾಸಕ ರಾಜೀನಾಮೆ ಕೊಟ್ಟ ತಕ್ಷಣ ಆತನನ್ನು ಮುಂಬೈಗೆ ಕರೆದುಕೊಂಡು ಹೋಗಲು ಒಂದು ವಿಮಾನ ರೆಡಿ ಇರುತ್ತದೆ. ಮುಂಬೈಗೆ ಹೋದ ನಂತರ ಅವರ ಭದ್ರತೆಗೆ ಮುಂಬೈ ಪೊಲೀಸರು ಬಂದು ನಿಲ್ಲುತ್ತಾರೆ. ಅವರು ಸುಪ್ರೀಂ ಕೋರ್ಟಿ ಅರ್ಜಿ ಸಲ್ಲಿಸಿದರೆ ಅವರ ಪರ ವಾದ ಮಂಡಿಸಲು ಬರುವ ವಕೀಲರಾದರೂ ಯಾರು?
ಈ ಎಲ್ಲಾ ಪ್ರಶ್ನೆಗಳನ್ನು ಗಾಳಿಗೆ ತೂರಿ, ಸಿದ್ದರಾಮಯ್ಯ ಮತ್ತು ರೇವಣ್ಣ ಎಂಬ ನೆಪ ಹುಡುಕುತ್ತಿದ್ದಾರೆ. ಎಲ್ಲದಕ್ಕೂ ಸಿದ್ದರಾಮಯ್ಯ, ರೇವಣ್ಣನಂತಹವರೇ ಕಾರಣ ಆಗೋದಾದ್ರೆ, ಸದ್ಯ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವುದೇನು? ಪಕ್ಕದ ಗೋವಾ ದಂತಹ ಸಣ್ಣ ರಾಜ್ಯದಲ್ಲಿ 15 ಕಾಂಗ್ರೆಸ್ ಶಾಸಕರ ಪೈಕಿ ಹತ್ತು ಜನ ಬಿಜೆಪಿ ಸೇರಿದ್ದಾರೆ. ಅಲ್ಲಿ ಯಾವ ಸಿದ್ದರಾಮಯ್ಯ ಯಾವ ರೇವಣ್ಣ ಇದ್ರು?
ಅಷ್ಟೇ ಏಕೆ, ಈಗ ಪಶ್ಚಿಮ ಬಂಗಾಳದ ಮುಕುಲ್ ರಾಯ್ ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂ ಪಾರ್ಟಿಗಳನ್ನು ತೊರೆದು ಬಿಜೆಪಿ ಸೇರಲು ಸಿದ್ಧ ಇರುವ ನೂರಕ್ಕೂ ಹೆಚ್ಚು ಶಾಸಕರ ಪಟ್ಟಿ ನನ್ನ ಜೇಬಿನಲ್ಲಿ ಇದೆ ಎಂದು ಹೇಳುತ್ತಾರಲ್ಲ ಅಲ್ಲಿ ಯಾವ ರೇವಣ್ಣ ಯಾವ ಸಿದ್ದರಾಮಯ್ಯ ಇದ್ದಾರೆ? 2014 ರ ನಂತರ ಹಲವು ರಾಜ್ಯಗಳಲ್ಲಿ ಚುನಾವಣೆಗಳು ನಡೆದಿವೆ. ಅಲ್ಲೆಲ್ಲಾ ನಡೆದಿದ್ದೇನು?
ಟಿವಿ ಚರ್ಚೆಗಳಲ್ಲಿ ಕುಳಿತು ಮಾತನಾಡುವವರು ಬೇಕೆಂದೇ ತಮ್ಮ ದೃಷ್ಟಿಕೋನವನ್ನು ಕರ್ನಾಟಕಕ್ಕೆ ಸೀಮಿತಗೊಳಿಸಿ ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸುತ್ತಿದ್ದಾರೆ. ಅವರಿಗೆ ಅದು ಸರಿ ಕಾಣಬಹುದು. ಅವರೆಲ್ಲಾ ಈ ಬೆಳವಣಿಗೆಗಳ ಹಿಂದೆ ಇರುವ ಅಮಿತ್ ಶಾ, ನರೇಂದ್ರ ಮೋದಿ ಕಾಣುವುದಿಲ್ಲ.
ಹೋಗಲಿ, ವಿಮಾನ ಹತ್ತಿಸುವ ಯಡಿಯೂರಪ್ಪ ಸಹಾಯಕ ಸಂತೋಷ್, ಜೊತೆಗೆ ಪ್ರಯಾಣಿಸುವ ಅಶೋಕ್ ಕೂಡಾ ಕಾಣುವುದಿಲ್ಲವೆ? ಅಷ್ಟರ ಮಟ್ಟಿಗೆ ಕಣ್ಣಿಗೆ ಪೊರೆ ಬೆಳೆಸಿಕೊಂಡರೆ ಹೇಗೆ?


