ಕರ್ನಾಟಕ ಸರ್ಕಾರ ‘ಕನ್ನಡಿಗರಿಗೆ’ ಗ್ರೂಪ್ ಸಿ ಮತ್ತು ಡಿ ವರ್ಗದ ಸರ್ಕಾರಿ ಉದ್ಯೋಗಗಳನ್ನು ಕಾಯ್ದಿರಿಸುವ ಆದೇಶ ಹೊರಡಿಸಿದ್ದು, ಖಾಸಗಿ ವಲಯದಲ್ಲಿ ಕೂಡಾ ಉದ್ಯೋಗಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದೆ.
ಈ ಆದೇಶದಂತೆ ಗುಮಾಸ್ತರು, ಅಕೌಂಟೆಂಟ್‌ಗಳು, ಮೇಲ್ವಿಚಾರಕರು, ಪಿಯೋನ್‌ಗಳು, ಸಹಾಯಕರು ಮತ್ತು ಇತರ ಕಚೇರಿ ಸಿಬ್ಬಂದಿಗಳನ್ನು ಒಳಗೊಂಡಿರುವ ಗ್ರೂಪ್ ಸಿ ಮತ್ತು ಡಿ ವಿಭಾಗಗಳಲ್ಲಿ ‘ಕನ್ನಡಿಗರನ್ನು’ ಮಾತ್ರ ನೇಮಕ ಮಾಡಲಾಗುತ್ತದೆ.
ಇದನ್ನೂ ಓದಿ: ಪ್ರಧಾನಿ ವಿರುದ್ಧ ಹೆಚ್ಚಿದ ಆಕ್ರೋಶ: ಉದ್ಯೋಗಕ್ಕಾಗಿ ತಟ್ಟೆ, ಲೋಟ ಬಡಿಯುತ್ತಿರುವ ಯುವಸಮೂಹ!
ಕನ್ನಡ ಪರ ಸಂಘಟನೆಗಳ ದೀರ್ಘಕಾಲದ ಬೇಡಿಕೆ ಸಧ್ಯಕ್ಕೆ ಈಡೇರಿದೆಯಾದರೂ ಇದು ಹಲವಾರು ಕಾನೂನು ತೊಡಕುಗಳನ್ನು ಎದುರಿಸುತ್ತದೆ ಎನ್ನಲಾಗಿದೆ.
ಸರ್ಕಾರದ ಈ ನಿರ್ಧಾರವನ್ನು ಸೆಪ್ಟೆಂಬರ್ 24 ರಂದು ವಿಧಾನಸಭೆಯ ಅಧಿವೇಶನದಲ್ಲಿ ಕಾನೂನು ಸಚಿವ ಜೆ.ಸಿ.ಮಧುಸ್ವಾಮಿ ಘೋಷಿಸಿದ್ದರು. ಸರ್ಕಾರಿ ಇಲಾಖೆಗಳಲ್ಲಿ ಅಥವಾ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (ಪಿಎಸ್‌ಯು) ಮಾತ್ರವಲ್ಲದೆ ಖಾಸಗಿ ಕಂಪನಿಗಳಲ್ಲಿಯೂ ರಾಜ್ಯದ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ ಎಂದು ಅವರು ಹೇಳಿದ್ದರು.
ಎ ಮತ್ತು ಬಿ ವಿಭಾಗದಲ್ಲಿ ಕೂಡಾ ಕನ್ನಡಿಗರಿಗೆ ಆದ್ಯತೆ ನೀಡಬೇಕು, ಇದರಲ್ಲಿ ಕಂಪನಿಯ ನಿರ್ವಹಣಾ ಮಟ್ಟದ ಹುದ್ದೆಗಳಲ್ಲಿಯು ಮೀಸಲಾತಿ ಇರಬೇಕೆಂದು ನಿರ್ದೇಶನ ಒತ್ತಿಹೇಳಿದೆ. “ಸರ್ಕಾರವು ನೀಡುವ ಪ್ರಯೋಜನಗಳು ಮತ್ತು ರಿಯಾಯಿತಿಗಳನ್ನು ಪಡೆದುಕೊಂಡಿರುವ ಎಲ್ಲಾ ಕೈಗಾರಿಕೆಗಳು ಮತ್ತು ಕಂಪೆನಿಗಳಿಗೆ ಇದು ಅನ್ವಯಿಸುತ್ತದೆ” ಎಂದು ಮಧುಸ್ವಾಮಿ ಹೇಳಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.
ಇದನ್ನೂ ಓದಿ: ಜುಲೈ ತಿಂಗಳೊಂದರಲ್ಲೇ 50 ಲಕ್ಷ ಉದ್ಯೋಗಗಳು ನಷ್ಟ: CMIE
“ಯಾವುದೇ ವ್ಯಕ್ತಿಯು 10 ವರ್ಷಗಳಿಗಿಂತ ಹೆಚ್ಚು ಕಾಲ ರಾಜ್ಯದಲ್ಲಿದ್ದು 10 ನೇ ತರಗತಿ ತನಕ ಕನ್ನಡ ಭಾಷೆಯನ್ನು ಅಧ್ಯಯನ ಮಾಡಿದವರನ್ನು ‘ಕನ್ನಡಿಗ’ ಎಂದು ಕರೆಯಲು ಅರ್ಹನಾಗಿರುತ್ತಾರೆ” ಎಂದು ನಿರ್ದೇಶನವು ಹೇಳಿದೆ.
ರಾಜ್ಯ ಸರ್ಕಾರವು ಈ ಘೋಷಣೆ ಮಾಡಿದ್ದರೂ, ಅದನ್ನು ಅನುಷ್ಠಾನಗೊಳಿಸುವಲ್ಲಿ ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರಿ ಮೂಲವೊಂದನ್ನು ಉಲ್ಲೇಖಿಸಿ ದಿ ಪ್ರಿಂಟ್ ಹೇಳಿದೆ. “ಸುಪ್ರೀಂ ಕೋರ್ಟ್ ಜೂನ್‌ನಲ್ಲಿ ಮಾಡಿದ ಆದೇಶವು ದೊಡ್ಡ ಅಡಚಣೆಯಾಗಿದೆ”. ಆದೇಶದಲ್ಲಿ “ಮೀಸಲಾತಿಯು ಮೂಲಭೂತ ಹಕ್ಕಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಜೊತೆಗೆ ಜನರನ್ನು ಹುದ್ದಗೆ ನೇಮಿಸಿಕೊಳ್ಳಲು ಯಾವುದೇ ಸರ್ಕಾರವು ಕಂಪನಿಗಳನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಅದು ಸೂಚಿಸಿತ್ತು.
ಅದಾಗ್ಯೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಈ ನಿರ್ಧಾರವನ್ನು ಜಾರಿಗೆ ತರುವ ಪ್ರಕ್ರಿಯೆಯನ್ನು ಸರ್ಕಾರ ಈಗಾಗಲೇ ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಭಾರತ ಯುವಜನರಿಗೆ ಉದ್ಯೋಗ ಕೊಡಲು ಸಾಧ್ಯವಿಲ್ಲ: ರಾಹುಲ್ ಗಾಂಧಿ


