ಸಾಮಾನ್ಯ ಜನರ ಸ್ಥಿತಿ ನೆನೆದು ಆತಂಕವಾಗುತ್ತಿದೆ, ಇದಕ್ಕೆ ಹೋರಾಟ ಒಂದೇ ಪರಿಹಾರ: ಮೇಘಾ
“ಪೊಲೀಸರು ಹೇಗೆ ಟಾರ್ಚರ್ ಮಾಡುತ್ತಾರೆ ಎಂದು ಕೇಳಿದ್ದೆ. ಆದರೆ ನಿನ್ನೆ ನಾನೇ ಇದನ್ನು ಅನುಭವಿಸಿದೆ” ಎಂದು ನಟ ಚೇತನ್ ಅವರ ಪತ್ನಿ ಮೇಘಾ ಹೇಳಿದರು.
ನಟ ಚೇತನ್ ಅಹಿಂಸಾ ಅವರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಹಾಗೂ ಬಿಡುಗಡೆ ಆಗ್ರಹಿಸಿ ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಚೇತನ್ ಅವರನ್ನು ಶೇಷಾದ್ರಿಪುರಂ ಪೊಲೀಸರು ಕರೆದೊಯ್ದು, ಗಂಟೆಗಟ್ಟಲೆ ಯಾವುದೇ ಮಾಹಿತಿ ನೀಡದೆ, ಯಾಕೆ ಬಂಧಿಸಲಾಗಿದೆ ಎಂಬುದನ್ನು ತಿಳಿಸದೆ ತೊಂದರೆ ನೀಡಿದ್ದನ್ನು ಖಂಡಿಸಿದ ಮೇಘಾ ಅವರು, “ಸಾಮಾಜಿಕವಾಗಿ ಗುರುತಿಸಿಕೊಂಡಿರುವ ಒಬ್ಬ ಸೆಲೆಬ್ರಿಟಿಗೆ ಈ ಸ್ಥಿತಿ ಅಂದರೆ, ಸಾಮಾನ್ಯಜನರ ಸ್ಥಿತಿ ನೆನೆದರೆ ಭಯವಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.
ಮಂಗಳವಾರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆಯತನಕ ಚೇತನ್ ಎಲ್ಲಿದ್ದಾರೆಂದು ಗೊತ್ತಾಗಲಿಲ್ಲ. ಕರ್ನಾಟಕ ಜಾತ್ಯತೀತ ನೆಲ. ಆದರೆ ಕರ್ನಾಟಕದಲ್ಲಿ ಈ ಥರ ಆಗುತ್ತಿರುವುದನ್ನು ನೋಡಿದರೆ ಭಯವಾಗುತ್ತಿದೆ ಎಂದು ತಿಳಿಸಿದರು.
ನಾನು ಕಾನೂನಿನ ವಿಚಾರ ಮಾತನಾಡುವುದಿಲ್ಲ. ಕ್ಷುಲ್ಲಕ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸುಳ್ಳು ಆರೋಪ ಮಾಡಲಾಗುತ್ತಿದೆ. ಚೇತನ್ ಅಷ್ಟೇ ಅಲ್ಲ. ಅನೇಕ ಸಾಮಾಜಿಕ ಹೋರಾಟಗಾರರಿಗೆ ಈ ರೀತಿ ತೊಂದರೆ ನೀಡಲಾಗಿದೆ. ಗೌರಿ ಲಂಕೇಶ್ ಏನಾದರು, ಇತರೆ ಹೋರಾಟಗಾರರಿಗೆ ಯಾವ ರೀತಿ ಬೆದರಿಕೆಗಳು ಬರುತ್ತಿವೆ ಎಂಬುದು ಗೊತ್ತಿದೆ ಎಂದರು.
ಸೆಲೆಬ್ರಿಟಿ ಆದವರಿಗೆ ಇಷ್ಟು ತೊಂದರೆಯಾಗಿದ್ದು ನೋಡಿರಲಿಲ್ಲ. ನನಗೆ ಭಯ ಆಗಿದೆ. ಯಾಕೆಂದರೆ ಸಾಮಾನ್ಯ ಜನರ ಸ್ಥಿತಿ ನೆನೆದು ಆತಂಕವಾಗುತ್ತಿದೆ. ಇದಕ್ಕೆ ಇರುವ ಒಂದೇ ಒಂದು ಪರಿಹಾರವೆಂದರೆ ನಾವು ಇನ್ನೂ ಹೆಚ್ಚಿನ ಹೋರಾಟ ಮಾಡಬೇಕಿದೆ. ಬೇರೆ ವಿಧಿ ಇಲ್ಲ ಎಂದು ಎಚ್ಚರಿಸಿದರು.
“ನಾನು ಸುಮ್ಮನೆ ಇರುತ್ತೇನೆಂದರೆ ದಬ್ಬಾಳಿಕೆ ಮಾಡಿಯೇ ಮಾಡುತ್ತಾರೆ. ನಾವೆಲ್ಲ ಒಗ್ಗಟ್ಟಾಗಿ ಇರೋಣ. ಎಲ್ಲರನ್ನೂ ಜೈಲಿಗೆ ಹಾಕಲಿ. ನನ್ನನ್ನೂ ಹಾಕಲಿ. ನಾನು ಕೂಡ ಜೈಲಿಗೆ ಹೋಗಲು ಬಯಸುತ್ತೇನೆ. ಹೋರಾಟ ಮುಂದೆಯೂ ಆಗಲಿ” ಎಂದ ಅವರು ‘ಜೈ ಭೀಮ್’ ಎಂದು ಘೋಷಣೆ ಕೂಗಿದರು.
ಪ್ರೊ.ಹರಿರಾಮ್ ಮಾತನಾಡಿ, “ಉತ್ತರ ಭಾರತದ ಸಂಸ್ಕೃತಿಯನ್ನು ದಕ್ಷಿಣಕ್ಕೆ ಆಮದು ಮಾಡಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ಧಕ್ಕೆಯಾಗುತ್ತಿದೆ. ಇದನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ವಕೀಲನಾಗಿ ನಾನು ಹೇಳುವುದಾದರೆ ಚೇತನ್ ಟ್ವೀಟ್‌ನಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಲೀ ಪ್ರಚೋದನೆಯಾಗಲೀ, ನಿಂದನೆಯಾಗಲಿ ಇಲ್ಲ” ಎಂದು ಸ್ಪಷ್ಟಪಡಿಸಿದರು.
ವಕೀಲರಾದ ಅನಂತ ನಾಯಕ್ ಮಾತನಾಡಿ, “ಸಂಬಂಧಪಡದ ಸುಳ್ಳು ಕೇಸ್‌ಗಳನ್ನು ಹಾಕಿ ಚೇತನ್ ಅವರ ಚಳವಳಿ, ಚಿಂತನೆಗಳನ್ನು ಹೊಸಕಿ ಹಾಕುತ್ತೇವೆ ಎಂದು ತಿಳಿದಿದ್ದರೆ ಅದು ಪೊಲೀಸರ ಪೆದ್ದುತನ. ದೂರು ದಾಖಲಾದ ತಕ್ಷಣ ಅನೇಕ ಮುಖಂಡರು ಪೊಲೀಸ್ ಠಾಣೆಗೆ ಹೋದೆವು. ಅಧಿಕಾರಿಗಳ ಬಳಿ ಮಾಹಿತಿ ಪಡೆಯಲು ಮುಂದಾದೆವು. ಯಾರು ದೂರು ನೀಡಿದ್ದಾರೆ ಎಂದು ಕೇಳಿದೆವು. ಯಾರೂ ಮಾಹಿತಿ ನೀಡುತ್ತಿರಲಿಲ್ಲ. ದೊಡ್ಡವರ ಬಳಿ ಮಾತನಾಡಬೇಕು ಸರ್ ಎಂದರು. ಇನ್‌ಸ್ಪೆಕ್ಟರ್, ಎಸಿಪಿ, ಐಪಿಎಸ್ ಅಧಿಕಾರಿಯೂ ದೊಡ್ಡವರತ್ತ ಬೆರಳು ತೋರಿಸಿದರು. ಯಾರೀ ಬಿಗ್ ಬಾಸ್?” ಎಂದು ಪ್ರಶ್ನಿಸಿದರು.
ಭಾಸ್ಕರ್ ಪ್ರಸಾದ್ ಮಾತನಾಡಿ, “ಕಾಳಿ ಸ್ವಾಮೀಜಿ ಎಂಬ ಗೂಂಡಾ ನಾವು ಮಚ್ಚು ಹಿಡಿದು ಬಂದರೆ ನೀವ್ಯಾರು ಉಳಿಯುವುದಿಲ್ಲ ಎಂದಿರುವುದನ್ನು ನೋಡಿದ್ದೇವೆ. ಪೊಲೀಸರು ಆತನ ಮೇಲೆ ಕ್ರಮ ಜರುಗಿಸುವುದಿಲ್ಲ. ಸಚಿವ ಈಶ್ವರಪ್ಪನವರು ಈ ದೇಶದ ಭಾವುಟವನ್ನು ಬದಲಾಯಿಸುತ್ತೇವೆ ಎನ್ನುತ್ತಾರೆ. ಧನ ತಿನ್ನೋರ ಕೈ ಕತ್ತಿರಿಸಿ ಎಂದು ಹೇಳಿಕೆಗಳನ್ನು ನೀಡುತ್ತಾರೆ. ಅವರ ವಿರುದ್ಧ ಯಾರೂ ಕ್ರಮ ಜರುಗಿಸುವುದಿಲ್ಲ. ಆದರೆ ದಲಿತರು, ಆದಿವಾಸಿಗಳ ಪರ ಹೋರಾಡಿದ ಚೇತನ್ ವಿರುದ್ಧ ನೀವು ಕ್ರಮ ಜರುಗಿಸುತ್ತೀರಿ. ಒಬ್ಬೊಬ್ಬ ಹೋರಾಟಗಾರರನ್ನು ಕಂಡರೂ ನೀವು ಭಯ ಬೀಳುತ್ತೀರಿ. ಇವರಿಗೆ ರಾಜಕೀಯ ಶಕ್ತಿ ಇರುವುದರಿಂದಲೇ ಈ ರೀತಿ ವರ್ತಿಸುತ್ತಿದ್ದಾರೆ. ಇವರು ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಬೇಕು ಎಂದರು.
ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಚನ್ನಕೃಷ್ಣಪ್ಪ, ಸಿದ್ದರಾಜು, ಅಯ್ಯಪ್ಪ, ಗಡಿನಾಡು ಕನ್ನಡಿಗರ ಸಂಘಟನೆಯ ಅಧ್ಯಕ್ಷ ಸೈಯದ್ ಮಂಜು, ರಮೇಶ್, ನರಸಿಂಹಮೂರ್ತಿ ಮೊದಲಾದವರು ಪ್ರತಿಭಟನೆಯಲ್ಲಿ ಹಾಜರಿದ್ದರು.
ಇದನ್ನೂ ಓದಿರಿ: ಶಿವಮೊಗ್ಗ: ಹರ್ಷ ಹತ್ಯೆ ಪ್ರಕರಣದಲ್ಲಿ ಮತ್ತೆ ನಾಲ್ವರು ಆರೋಪಿಗಳ ಬಂಧನ


