ಬೆಂಗಳೂರು: ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿಯು ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದೆ. ಪರಿಶಿಷ್ಟ ಜಾತಿಗಳ ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ ಶೇ 6ರಷ್ಟು, ಮತ್ತು ಭೋವಿ, ಕೊರಚ, ಕೊರಮ, ಲಂಬಾಣಿ, ಬಂಜಾರ ಸೇರಿದಂತೆ ಇತರೆ ಸ್ಪೃಶ್ಯ ಸಮುದಾಯಗಳಿಗೆ ಶೇ 5ರಷ್ಟು ಮೀಸಲಾತಿ ನೀಡುವ ತೀರ್ಮಾನವನ್ನು ಸಮಿತಿ ವಿರೋಧಿಸಿದೆ. ಈ ನಿರ್ಧಾರದಲ್ಲಿ ಅಲೆಮಾರಿ ಸಮುದಾಯಗಳನ್ನು ಸ್ಪೃಶ್ಯ ಸಮುದಾಯಗಳ ಗುಂಪಿಗೆ ಸೇರಿಸಿರುವುದು ಆ ಸಮುದಾಯಗಳಿಗೆ ಮಾಡಿದ ಐತಿಹಾಸಿಕ ದ್ರೋಹ ಎಂದು ಸಮಿತಿ ಆರೋಪಿಸಿದೆ.
ನ್ಯಾ. ನಾಗನೋಹನ್ ದಾಸ್ ವರದಿಯು ನ್ಯಾಯಯುತವಾಗಿತ್ತು ಎಂದು ಸಮಿತಿ ಹೇಳಿದೆ. ಆ ವರದಿಯಲ್ಲಿ ಸಮುದಾಯಗಳ ಗುಂಪು ಮಾಡದೆ, ಹಿಂದುಳಿದಿರುವಿಕೆಯ ಆಧಾರದ ಮೇಲೆ ಐದು ಗುಂಪುಗಳನ್ನು ರಚಿಸಿ ಮೀಸಲಾತಿ ಹಂಚಲಾಗಿತ್ತು. ಅದರಂತೆ ಅಲೆಮಾರಿಗಳಿಗೆ ಪ್ರತ್ಯೇಕ ಗುಂಪು ಮಾಡಿ ಶೇ.1ರಷ್ಟು ಮೀಸಲಾತಿಯೊಂದಿಗೆ ಮೊದಲ ಆದ್ಯತೆ ನೀಡಲಾಗಿತ್ತು. ಆದರೆ, ಈಗಿನ ನಿರ್ಧಾರವು ಅವರಿಗೆ ಕೊನೆಯ ಆದ್ಯತೆ ನೀಡಿದೆ ಎಂದು ಸಮಿತಿ ತಿಳಿಸಿದೆ.
ಇದರ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿಯ ಅಹೋರಾತ್ರಿ ಹೋರಾಟವನ್ನು ಮುಂದುವರೆಸುವುದಾಗಿ ಸಮಿತಿ ಘೋಷಿಸಿದೆ. ಅಲೆಮಾರಿಗಳಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಹೋರಾಟಗಾರರ ಆಕ್ರೋಶ
ಹೋರಾಟಗಾರ ಹುಲಿಕುಂಟೆ ಮೂರ್ತಿ ಅವರು, “ನಾವು ಜಸ್ಟೀಸ್ ನಾಗನೋಹನ್ ದಾಸ್ ಅವರು ಅಲೆಮಾರಿಗಳಿಗೆ ನೀಡಿದ್ದ ಶೇ 1ರಷ್ಟು ಮೀಸಲಾತಿಗೆ ಕೈ ಹಾಕಬೇಡಿ ಎಂದು ಎಲ್ಲಾ ಸಮುದಾಯಗಳ ಮುಖಂಡರ ಬಳಿ ಅಂಗಲಾಚಿದ್ದೆವು. ಆದರೆ, ಅಸ್ಪೃಶ್ಯ ಸಮುದಾಯಗಳ ಮಂತ್ರಿಗಳು ಕೂಡ ಒಬ್ಬನೇ ಒಬ್ಬ ಸ್ಪೃಶ್ಯ ಮಂತ್ರಿಯ ಒತ್ತಡಕ್ಕೆ ಮಣಿದು ಅನ್ಯಾಯಕ್ಕೆ ಸಮ್ಮತಿಸಿದ್ದಾರೆ. ಈ ನಿರ್ಧಾರವನ್ನು ಸಹಿಸಿಕೊಂಡರೆ ನಾವು ಶವಗಳಿಗೆ ಸಮಾನ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರವಿಕುಮಾರ್ ಈಚಲಮರ ಅವರು ಮಾತನಾಡಿ, “ಅಲೆಮಾರಿ ಸಮುದಾಯಗಳು ಈಗಲೂ ಬಡತನ, ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಸಾಮಾಜಿಕ ತಾರತಮ್ಯದಿಂದ ಬಳಲುತ್ತಿವೆ. ಅವರಿಗೆ ಸರಿಯಾದ ಮನೆಗಳಿಲ್ಲ, ಶಾಲೆಗಳಿಲ್ಲ ಮತ್ತು ರಕ್ಷಣೆಯಿಲ್ಲ. ಅಂಥ ಸಮುದಾಯಗಳಿಗೆ ನ್ಯಾಯ ಕೊಡದೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ಹೋರಾಟ ಕೇವಲ ಮಾದಿಗರ ಹೋರಾಟವಲ್ಲ, ನೂರಾರು ಅಲೆಮಾರಿ ಸಮುದಾಯಗಳ ಹೋರಾಟ” ಎಂದು ಹೇಳಿದರು.
ಜಾಗೃತ ಕರ್ನಾಟಕದ ಮುತ್ತುರಾಜು ಅವರು, “ಸಿದ್ದರಾಮಯ್ಯನವರು ಅಲೆಮಾರಿ ಸಮುದಾಯಗಳಿಗೆ ಐತಿಹಾಸಿಕ ದ್ರೋಹ ಎಸಗಿದ್ದಾರೆ. ಅವರು ಅಲೆಮಾರಿ ಸಮುದಾಯಗಳನ್ನು ಮಾದಿಗ ಅಥವಾ ಹೊಲೆಯ ಸಂಬಂಧಿತ ಜಾತಿಗಳ ಪ್ರವರ್ಗದಲ್ಲಿ ಸೇರಿಸಬೇಡಿ ಎಂದು ನಾವು ಒತ್ತಾಯಿಸಿದ್ದೆವು. ಏಕೆಂದರೆ ಅವರು ಅಲ್ಲಿ ಏನನ್ನೂ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ, ಈಗ ಅವರನ್ನು ಸ್ಪೃಶ್ಯ ಜಾತಿಗಳ ಗುಂಪಿಗೆ ಸೇರಿಸಲಾಗಿದೆ. ಇದರಿಂದ ಅವರು ಉಸಿರಾಡಲೂ ಸಾಧ್ಯವಿಲ್ಲದ ಪರಿಸ್ಥಿತಿ ಬಂದಿದೆ” ಎಂದು ಆರೋಪಿಸಿದರು.
ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಾ, “ಸಿದ್ದರಾಮಯ್ಯನವರು ಈಗಲೂ ಎಚ್ಚೆತ್ತುಕೊಂಡು ಅಲೆಮಾರಿಗಳಿಗೆ ಪ್ರತ್ಯೇಕ ಗುಂಪು ಮಾಡಿ ಸ್ಪೃಶ್ಯ ಸಮುದಾಯಕ್ಕೆ ಕೊಟ್ಟಿರುವ ಮೀಸಲಾತಿಯಲ್ಲಿ ಹಂಚಿಕೆ ಮಾಡುವ ಮೂಲಕ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬಹುದು. ಇಲ್ಲದಿದ್ದರೆ ಈ ಕಳಂಕವು ಅವರಿಗೆ ಅಂಟಿಕೊಳ್ಳಲಿದೆ. ಈ ಹೋರಾಟವನ್ನು ಬೀದಿ ಹೋರಾಟ ಮತ್ತು ಕಾನೂನು ಹೋರಾಟ ಎರಡರ ಮೂಲಕವೂ ಮುಂದುವರೆಸುತ್ತೇವೆ. ಅನ್ಯಾಯದ ವಿರುದ್ಧ ನಾವು ಹೋರಾಡಿದ್ದೇವೆ ಎಂದು ಮುಂದಿನ ಪೀಳಿಗೆಗೆ ಹೇಳಲು ಈ ಹೋರಾಟ ಅಗತ್ಯವಾಗಿದೆ” ಎಂದರು.
ಶಿವಸುಂದರ್ ಅವರು, “ಒಂದು ತುತ್ತೂ ಸಿಗದವರನ್ನು, ಒಂದೆರಡು ತುತ್ತು ಕಡಿಮೆಯಾದವರ ಜೊತೆ ಸೇರಿಸುವುದು ಸಾಮಾಜಿಕ ನ್ಯಾಯವಲ್ಲ, ಅದು ಸಾಮಾಜಿಕ ಕ್ರೌರ್ಯ” ಎಂದು ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.
ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಸಂಪುಟ ಅಸ್ತು: ಎಡಗೈ, ಬಲಗೈಗೆ ತಲಾ ಶೇ 6, ಕೊಲಂಬೋ, ಅಲೆಮಾರಿಗಳಿಗೆ ಶೇ. 5 ಮೀಸಲಾತಿ


