‘ನಾವು ಗಾಂಧಿಯನ್ನೇ ಬಿಟ್ಟಿಲ್ಲ ಸ್ವಾಮಿ, ನೀವು ಯಾವ ಲೆಕ್ಕ?’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡತ್ತಾ, ಕೊಲೆ ಬೆದರಿಕೆ ಹಾಕಿದ್ದರು. ಬಳಿಕ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭಾನುವಾರ ಧಮೇಂದ್ರ ಅವರನ್ನು ಬಂಧಿಸಿದ್ದ ಪೊಲೀಸರು, ಸೋಮವಾರ ಮತ್ತೆ ಮೂವರನ್ನು ಬಂಧಿಸಿದ್ದಾರೆ. ಹಿಂದೂ ಮಹಾಸಭಾದ ಪ್ರಮುಖರಾದ ಕುಳಾಯಿಯ ರಾಜೇಶ್ ಪವಿತ್ರನ್ (40), ಅಡ್ಕಾರಿನ ಸಂದೀಪ್ ಗಣೇಶ್ ಶೆಟ್ಟಿ (40), ಬಂಟ್ವಾಳದ ಪ್ರೇಮ್ ರಾಜೇಶ್ ಶೆಟ್ಟಿ (48) ಬಂಧಿತರು.
ನಾಥೂರಾಮ್ ಗೋಡ್ಸೆ ಜನ್ಮ ದಿನಾಚರಣೆ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಪ್ರಕಟಿಸಿದ್ದ ಸಂಬಂಧ ಧರ್ಮೇಂದ್ರ ವಿರುದ್ಧ ಉಳ್ಳಾಲ ಠಾಣೆಯಲ್ಲಿ 2019ರಲ್ಲಿ ಪ್ರಕರಣ ದಾಖಲಾಗಿತ್ತು. 2017ರ ಡಿಸೆಂಬರ್ 22ರಂದು ಕರಾವಳಿ ಉತ್ಸವದಲ್ಲಿ ನಟ ಪ್ರಕಾಶ್ ರಾಜ್ ಕಾರ್ಯಕ್ರಮ ಮುಗಿಸಿ ಹೊರ ಬರುವಾಗ ಅವರ ಮೇಲೆ ಮೊಟ್ಟೆ ಎಸೆದ ಬಗ್ಗೆ ರಾಜೇಶ್ ಪವಿತ್ರನ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹನಿಟ್ರ್ಯಾಪ್ ನಡೆಸಿದ ಬಗ್ಗೆ ಕೂಡ ಈ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಈಗ ಕೊಲೆ ಬೆದರಿಕೆ ಪ್ರಕರಣದಲ್ಲಿ ಸಿಲುಕಿದ್ದಾರೆ.
ಇದನ್ನೂ ಓದಿ: ಸಿಎಂಗೆ ಕೊಲೆ ಬೆದರಿಕೆ ಹಾಕಿದ್ದ ಹಿಂದೂ ಮಹಾಸಭಾ ಕಾರ್ಯದರ್ಶಿ ಯೂಟರ್ನ್


