ಮಧ್ಯಪ್ರದೇಶದ ಸರ್ಕಾರಿ ಕಚೇರಿಗಳನ್ನು ಇನ್ನುಮುಂದೆ ಗೋ ಮೂತ್ರದಿಂದ ತಯಾರಿಸಿದ ಫಿನಾಯಿಲ್‌ನಿಂದ ಸ್ವಚ್ಚಗೊಳಿಸಲಾಗುವುದು ಎಂದು ಭಾನುವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ಕಛೇರಿಗಳ ಆವರಣವನ್ನು ಸ್ವಚ್ಚಗೊಳಿಸಲು ರಾಸಾಯನಿಕ ಫಿನಾಯಿಲ್‌ಗೆ ಬದಲಾಗಿ ಗೋಮೂತ್ರದಿಂದ ತಯಾರಿಸಿದ ಫಿನಾಯಿಲ್ ಅನ್ನೇ ಬಳಸಬೇಕು ಎಂಬುದಾಗಿ ರಾಜ್ಯದ ಸಾಮಾನ್ಯ ಆಡಳಿತ ಇಲಾಖೆ (GAD) ಆದೇಶ ಹೊರಡಿಸಿದೆ ಎಂದು GAD ಕಾರ್ಯದರ್ಶಿ ನಿವಾಸ್ ಶರ್ಮಾ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಸುಗಳ ರಕ್ಷಣೆಗಾಗಿ ನವೆಂಬರ್‌ನಲ್ಲಿ ನಡೆದ ಮೊದಲ ‘ಗೋವು ಕ್ಯಾಬಿನೆಟ್’ನಲ್ಲಿ ಗೋಮೂತ್ರ ಫಿನಾಯಿಲ್ ಬಳಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಶೃಂಗೇರಿಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿಗಳಲ್ಲಿ ಬಹುಪಾಲು ಸಂಘಪರಿವಾರದವರು
“ಗೋ ಮೂತ್ರದ ಸ್ಥಾವರವನ್ನು ಸ್ಥಾಪಿಸಲು ಮತ್ತು ಗೋಮೂತ್ರದ ಫಿನಾಯಿಲ್ ಕಾರ್ಖಾನೆಗಳನ್ನು ಸ್ಥಾಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉತ್ಪಾದನೆಗಿಂತ ಮೊದಲು ಬೇಡಿಕೆಯನ್ನು ಸೃಷ್ಟಿಸಲಾಗಿದೆ. ಈಗ, ಹಾಲುಕರೆಯದ ಹಸುಗಳನ್ನು ಜನರು ತ್ಯಜಿಸುವುದಿಲ್ಲ” ಎಂದು ಪಶುಸಂಗೋಪನಾ ಇಲಾಖೆ ಸಚಿವ ಪ್ರೇಮ್ ಸಿಂಗ್ ಪಟೇಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಕುನಾಲ್ ಚೌಧರಿ, “ಯಾವುದೇ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸದೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಹಸುಗಳ ಸ್ಥಿತಿಯನ್ನು ಸುಧಾರಿಸಲು ರಾಜ್ಯ ಸರ್ಕಾರ ಬಯಸಿದರೆ, ಅವರು ರಾಜ್ಯದಲ್ಲಿ ಕನಿಷ್ಠ ಕೆಲವು ಕಾರ್ಖಾನೆಗಳನ್ನು ಪ್ರಾರಂಭಿಸಿರಬೇಕಿತ್ತು” ಎಂದು ಟೀಕಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ರಾಹುಲ್ ಕೊಠಾರಿ, “ಇದು ಕಾಂಗ್ರೆಸ್ ನಾಯಕರ ಅಸ್ಪಷ್ಟ ಚಿಂತನೆ. ಯಾವುದೇ ಬೇಡಿಕೆಯಿಲ್ಲದೆ ಕಾರ್ಖಾನೆಯನ್ನು ಏಕೆ ಸ್ಥಾಪಿಸುತ್ತಾರೆ? ರಾಜ್ಯ ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಂಡಿದ್ದು, ಇತರ ರಾಜ್ಯಗಳೂ ಇದನ್ನು ಅನುಸರಿಸುತ್ತವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಘೋಷಿತ ತುರ್ತುಪರಿಸ್ಥಿತಿ ಜಾರಿ: ಹೋರಾಟಗಾರರ ಟ್ವಿಟರ್ ಅಮಾನತ್ತಿಗೆ ವಿರೋಧ


