ದೇಶದಲ್ಲಿ ಇಂಟರ್‌ನೆಟ್ ಬ್ಯಾನ್ ಬಗ್ಗೆ ಯಾವುದೇ ಕೇಂದ್ರೀಕೃತ ಮಾಹಿತಿಯಿಲ್ಲ ಮತ್ತು ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿಯ ಬಗ್ಗೆ ಸರ್ಕಾರವು ರಾಷ್ಟ್ರೀಯ ದತ್ತಾಂಶವನ್ನು ಸಹ ನಿರ್ವಹಿಸುವುದಿಲ್ಲ ಎಂದು ಗೃಹ ಸಚಿವಾಲಯ ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದೆ. ಉದ್ವಿಗ್ನತೆ ಮತ್ತು ಗಲಭೆಗಳ ಸಮಯದಲ್ಲಿ ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ನಿಯಂತ್ರಿಸುವ ವಿಧಾನದ ಬಗ್ಗೆಗಿನ ವಿವರಗಳನ್ನು ಸಚಿವಾಲಯ ಒದಗಿಸಿದ್ದು, ಇಂಟರ್‌ನೆಟ್ ಬ್ಯಾನ್ ಮಾಡುವುದರಿಂದ ವದಂತಿಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದೆ.
“ಇಂಟರ್‌ನೆಟ್‌ನಲ್ಲಿ ಮಾಹಿತಿಯು ವೇಗವಾಗಿ ಹರಿಯುತ್ತದೆ ಹಾಗೂ ದುರುಪಯೋಗದ ಸಾಧ್ಯತೆಯು ಇದೆ. ಉದ್ವಿಗ್ನತೆ ಮತ್ತು ಗಲಭೆಗಳ ಸಮಯದಲ್ಲಿ, ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಮತ್ತು ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ತಪ್ಪಿಸುವ ಹಿತದೃಷ್ಟಿಯಿಂದ ಸಂಬಂಧಪಟ್ಟ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿನ ಅಧಿಕಾರಿಗಳು ಟೆಲಿಕಾಂ ಸೇವೆಗಳನ್ನು / ಇಂಟರ್ನೆಟ್ ಬ್ಯಾನ್ ಮಾಡುತ್ತಾರೆ” ಎಂದು ಗೃಹ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಸದನಕ್ಕೆ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಕ್ರಿಶ್ಚಿಯನ್ನರ ಮೇಲಿನ ಹಿಂಸಾಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಯ್, “ಒಂದು ನಿರ್ದಿಷ್ಟ ಸಮುದಾಯಗಳ ವಿರುದ್ಧ ಅಥವಾ ಅವರ ಧಾರ್ಮಿಕ ಸಂಸ್ಥೆಗಳ ಮೇಲಿನ ದಾಳಿಯ ಬಗ್ಗೆ ನಿರ್ದಿಷ್ಟ ಡೇಟಾವನ್ನು ಕೇಂದ್ರೀತವಾಗಿ ನಿರ್ವಹಿಸಲಾಗುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟೈಟಾನಿಕ್ ಚಲನಚಿತ್ರ ನೋಡಿದ್ದೀರಾ?- ಲಸಿಕೆ ಆದ್ಯತೆಯ ಬಗ್ಗೆ ಬಾಂಬೆ ಹೈಕೋರ್ಟ್ ಹೇಳಿದ್ದೇನು?
ಹಿಂದೂ ದೇವಾಲಯಗಳ ಮೇಲಿನ ದಾಳಿಯಲ್ಲಿ ಹಠಾತ್ ಏರಿಕೆ ಕಂಡುಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಯ್, “ಸಾರ್ವಜನಿಕ ಆದೇಶ ಮತ್ತು ಪೊಲೀಸರು ರಾಜ್ಯದ ವಿಷಯವಾಗಿರುವುದರಿಂದ, ಅಪರಾಧ ತಡೆಗಟ್ಟುವಿಕೆ, ಪತ್ತೆ, ನೋಂದಣಿ, ತನಿಖೆ ಮತ್ತು ವಿಚಾರಣೆ ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳ ಅಡಿಯಲ್ಲಿ ಬರುತ್ತದೆ” ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಯನ್ನು ಕಠಿಣವಾಗಿ ಬಳಸಲಾಗಿಲ್ಲ ಎಂದು ಗೃಹಸಚಿವಾಲಯ ತಿಳಿಸಿದೆ. ಆದಾಗ್ಯೂ, ಸಚಿವಾಲಯ ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ 2017 ರಿಂದ ಯುಎಪಿಎ ಮತ್ತು ದೇಶದ್ರೋಹ ಕಾನೂನುಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳು ಸ್ಥಿರವಾಗಿ ಏರಿಕೆಯಾಗಿದೆ. 2015 ರಿಂದ ಯುಎಪಿಎ ಅಡಿಯಲ್ಲಿ 5,128 ಮತ್ತು ದೇಶದ್ರೋಹದ ಆರೋಪದ ಅಡಿಯಲ್ಲಿ 229 ಪ್ರಕರಣಗಳು ಭಾರತದಾದ್ಯಂತ ದಾಖಲಾಗಿವೆ.
ರಾಜ್ಯಸಭೆಯ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ, ಕೇಂದ್ರ ಗೃಹ ಸಚಿವ ಜಿ. ಕಿಶನ್ ರೆಡ್ಡಿ, ಇಂಟರ್‌ನೆಟ್‌ನಿಂದ ಎದುರಾಗುವ ಸವಾಲುಗಳು ಹಲವು, ಅದು ಅದರ ವಿಶಾಲತೆ ಮತ್ತು ಗಡಿ ರಹಿತವಾಗಿ ಹರಿಯುತ್ತದೆ. ಅಲ್ಲದೆ ಇಂಟರ್‌ನೆಟ್‌ನಲ್ಲಿನ ಮಾಹಿತಿಯು ವೇಗವಾಗಿ ಹರಿಯುತ್ತದೆ ಮತ್ತು ಇದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯು ಇದೆ ಎಂದು ಹೇಳಿದ್ದಾರೆ.
“ಉದ್ವಿಗ್ನತೆ ಮತ್ತು ಗಲಭೆಗಳ ಸಮಯದಲ್ಲಿ, ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಮತ್ತು ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ತಪ್ಪಿಸುವ ಹಿತದೃಷ್ಟಿಯಿಂದ ಸಂಬಂಧಪಟ್ಟ ರಾಜ್ಯಗಳು ಮತ್ತು ಕೇಂದ್ರಾಡಳಿತ ಸರ್ಕಾರದ ಅಧಿಕಾರಿಗಳು, ‘ಟೆಲಿಕಾಂ ಸೇವೆಗಳ ತಾತ್ಕಾಲಿಕ ಅಮಾನತು (ತಿದ್ದುಪಡಿ) ನಿಯಮಗಳು-2020’ ರಲ್ಲಿ ವ್ಯಾಖ್ಯಾನಿಸಲಾದ ಕಾರ್ಯವಿಧಾನಗಳ ಪ್ರಕಾರ ಟೆಲಿಕಾಂ ಸೇವೆಗಳನ್ನು ಸ್ಥಗಿತಗೊಳಿಸುವುದು ಮತ್ತು ಇಂಟರ್ನೆಟ್ ಬ್ಯಾನ್ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ನಾವು ಮನುಷ್ಯರಲ್ಲವೇ?’- ಬೆಂಗಳೂರಿನಲ್ಲಿ ಲೈಂಗಿಕ ಕಾರ್ಯಕರ್ತರ ಪ್ರತಿಭಟನೆ
ವಿಡಿಯೋ ನೋಡಿ>> ರೈತರಿಗೆ ಸಬ್ಸಿಡಿ ಎಂಬುದು ಸುಳ್ಳು. ಬದಲಿಗೆ ರೈತರೇ ಸರ್ಕಾರಕ್ಕೆ ಸಬ್ಸಿಡಿ ನೀಡುತ್ತಿದ್ದಾರೆ!


