ಒಡಿಶಾದ ಭುವನೇಶ್ವರ ನಗರದಲ್ಲಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ರಸ್ತೆ ಬದಿ ಸಾಂತಾ ಕ್ಲಾಸ್ ಟೋಪಿಗಳನ್ನು ಮಾರಾಟ ಮಾಡುತ್ತಿದ್ದ ಬಡ ವ್ಯಾಪಾರಿಗಳಿಗೆ ದುಷ್ಕರ್ಮಿಗಳ ಗುಂಪು ಕಿರುಕುಳ ನೀಡಿರುವ ಬಗ್ಗೆ ವರದಿಯಾಗಿದೆ.
ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ದುಷ್ಕರ್ಮಿಗಳ ಗುಂಪು, “ಇದು ಹಿಂದೂ ರಾಷ್ಟ್ರ, ಇಲ್ಲಿ ಕ್ರಿಶ್ಚಿಯನ್ ಸಾಮಗ್ರಿಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ” ಎಂದು ವ್ಯಾಪಾರಿಗಳನ್ನು ಬೆದರಿಸಿರುವುದು ಮತ್ತು “ನೀವು ಎಲ್ಲಿಯವರು ಹಾಗೂ ನೀವು ಹಿಂದೂಗಳೇ?” ಎಂದು ದುಷ್ಕರ್ಮಿಯೊಬ್ಬ ಪ್ರಶ್ನಿಸುತ್ತಿರುವುದು ಇದೆ.
ಈ ಪ್ರಶ್ನೆಗೆ, “ನಾವು ನಿಜವಾಗಿಯೂ ಹಿಂದೂಗಳಾಗಿದ್ದು, ಬಡವರಾಗಿರುವುದರಿಂದ ಸಾಂತಾ ಕ್ಲಾಸ್ ಟೋಪಿಗಳನ್ನು ಮಾರಾಟ ಮಾಡುತ್ತಿದ್ದೇವೆ” ಎಂದು ವ್ಯಾಪಾರಿಗಳು ಉತ್ತರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ, “ಇಲ್ಲಿ ಕೇವಲ ಜಗನ್ನಾಥ ದೇವರು ಮಾತ್ರ ಆಳಲು ಸಾಧ್ಯ. ಹಿಂದುಗಳಾಗಿ ನೀವೇಗೆ ಇದನ್ನು ಮಾಡುತ್ತಿದ್ಧೀರಿ? ಮೂಟೆ ಕಟ್ಟಿ ಇಲ್ಲಿಂದ ತಕ್ಷಣವೇ ತೆರಳಿ. ನಿಮಗೇನಾದರೂ ಮಾರಾಟ ಮಾಡಬೇಕಿದ್ದರೆ ಜಗನ್ನಾಥ ದೇವರ ಸಾಮಗ್ರಿಗಳನ್ನು ಮಾರಾಟ ಮಾಡಿ” ಎಂದು ಆತ ಪ್ರತಿಕ್ರಿಯೆ ನೀಡಿದ್ದಾನೆ.
ಇದಕ್ಕೆ, ಒಂದಿಬ್ಬರು ವ್ಯಾಪಾರಿಗಳು ನಾವು ರಾಜಸ್ಥಾನದಿಂದ ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ದುಷ್ಕರ್ಮಿ, “ನೀವು ಎಲ್ಲಿಯವರೆಗೆ ಕ್ರಿಶ್ಚಿಯನ್ ಕಲಾಕೃತಿಗಳನ್ನು ಮಾರಾಟ ಮಾಡುವುದಿಲ್ಲವೊ, ಅಲ್ಲಿಯವರೆಗೂ ನಿಮಗೆ ಯಾವುದೇ ತೊಂದರೆಯಿಲ್ಲ” ಎಂದು ಹೇಳಿದ್ದಾನೆ.
ಮತ್ತೊಂದೆಡೆಯೂ ಸಾಂತಾ ಕ್ಲಾಸ್ ಟೋಪಿಗಳನ್ನು ಮಾರಾಟ ಮಾಡುತ್ತಿದ್ದ ಬಡ ವ್ಯಾಪಾರಿಗಳ ಬಳಿ ತೆರಳಿದ ದುಷ್ಕರ್ಮಿ “ಇದು ಹಿಂದೂ ರಾಷ್ಟ್ರ. ಇಲ್ಲಿ ಯಾರೂ ಕ್ರಿಸ್ಮಸ್ ಹಬ್ಬ ಆಚರಿಸಲು ನಾವು ಅವಕಾಶ ನೀಡುವುದಿಲ್ಲ. ಬಿಜೆಪಿ ಅಡಿಯ ಹೊಸ ಒಡಿಶಾಗೆ ಸುಸ್ವಾಗತ” ಎಂದು ನಿಂದಿಸಿ, ವ್ಯಾಪಾರಿಗೆ ಬೆದರಿಕೆ ಒಡ್ಡಿದ್ದಾನೆ.


