ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯಬಾರದು ಮತ್ತು ವಿಡಿಯೋ ಮಾಡಬಾರದು ಎಂದು ಆದೇಶ ಹೊರಡಿಸಿದ್ದ ಸರ್ಕಾರ ರಾತ್ರೋರಾತ್ರಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಜುಲೈ 15- 16ರ ತಡರಾತ್ರಿ 2 ಗಂಟೆ ವೇಳೆಗೆ ಮುಖ್ಯಮಂತ್ರಿಯವರ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ನೂತನ ಆದೇಶ ಪ್ರತಿ ರವಾನೆಯಾಗಿದ್ದು, ಅದರಲ್ಲಿ ಸಾಲು ಸಾಲು ತಪ್ಪುಗಳು ಕಂಡು ಬಂದಿವೆ.
ನಿರ್ಬಂಧ ಆದೇಶವನ್ನು ತೆರವುಗೊಳಿಸಿ ಬಿಡುಗಡೆ ಮಾಡಲಾಗಿರುವ ನೂತನ ಆದೇಶದಲ್ಲಿ ಕನ್ನಡ ಪದಗಳನ್ನು ತಪ್ಪಾಗಿ ಬಳಸಲಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಬೇಜವಾಬ್ದಾರಿಯಿಂದ ಆದೇಶ ಹೊರಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ನಡಾವಳಿಗಳು’ ಎಂಬುದನ್ನು ‘ನಡವಳಿಗಳು’ ಎಂದೂ, ‘ಪ್ರಸ್ತಾವನೆ’ ಎಂಬುದನ್ನು ‘ಪ್ರಸತ್ತಾವನೆ’ ಎಂದೂ, ‘ಮೇಲೆ’ ಎಂಬುದನ್ನು ‘ಮೇಲೇ’ ಎಂದೂ ‘ಭಾಗ-1′ ಎಂಬುದನ್ನು ‘ಬಾಗ-1’ ಎಂದೂ ‘ಕರ್ನಾಟಕ’ ಎಂಬುದನ್ನು ‘ಕರ್ನಾಟ’ ಎಂದೂ ಎರಡು ಕಡೆ, ‘ಆಡಳಿತ’ ಎಂಬುದನ್ನು ‘ಆಡಳಿದ’ ಎಂದು ಬರೆಯಲಾಗಿದೆ. ಸರ್ಕಾರಿ ಆದೇಶದಲ್ಲಿನ ತಪ್ಪುಗಳನ್ನು ನೋಡಿ ಜನರು ಟ್ರೋಲ್ ಮಾಡಿದ್ದಾರೆ.

“ಆದೇಶ ಹಿಂಪಡೆದದ್ದು ಸ್ವಾಗತಾರ್ಹ, ಆದರೆ ಈ ರೀತಿಯಲ್ಲಿ ಟೈಪ್ ಮಾಡಿದ್ದು ನೋಡುದ್ರೆ, ಇದು ಮಧ್ಯರಾತ್ರಿಯ ಆದೇಶವಲ್ಲ, ಮದ್ಯರಾತ್ರಿಯ ಆದೇಶ ಅನಿಸುತ್ತಿದೆ” ಎಂದು ರಹಿಮಾನ್ ಜವೂರ್ ಎಂಬವರು ಅಭಿಪ್ರಾಯಪಟ್ಟಿದ್ದಾರೆ.

“ಹಿಂದಿ ಹೊಡೆತ, ಕನ್ನಡ ಕಡಿತ” ಎಂದು ಚಿಂತಕ ಹ.ರಾ.ಮಹೇಶ್ ಅಭಿಪ್ರಾಯಪಟ್ಟಿದ್ದಾರೆ.

“ಕನ್ನಡದ ಕಗ್ಗೊಲೆ. ಮುಖ್ಯಮಂತ್ರಿ ಬಸವರಾಜ್ ಬಾಮ್ಮಾಯಿರವರೇ ಇದು ಅರ್ಧ ರಾತ್ರಿ ಆದೇಶದ ಎಡವಟ್ಟೇ ಅಥವಾ ನಿಮ್ಮ ಸರ್ಕಾರದಲ್ಲಿ ನಡೆಯೋ ಕರ್ಮಕಾಂಡಗಳನ್ನು ಕಣ್ತಪ್ಪಿಸುವ ಸಲುವಾಗಿ ನಡೆದ ಅಚಾತುರ್ಯವೇ?” ಎಂದು ರಾಮಚಂದ್ರ ಎಂಬವರು ಪ್ರಶ್ನಿಸಿದ್ದಾರೆ.

ಹೀಗೆ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿಷೇಧಿಸಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ: ಬೊಮ್ಮಾಯಿ
‘ಸರ್ಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಮಾಡದಂತೆ ಹೊರಡಿಸಿದ್ದ ಆದೇಶದ ಬಗ್ಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ಯಾವುದೇ ರೀತಿಯ ನಿಷೇಧ ಆಗಬಾರದು, ಮೊದಲು ಇದ್ದಂತೆ ಇರಲಿ ಎಂಬ ಕಾರಣಕ್ಕೆ ಈ ಆದೇಶವನ್ನು ವಾಪಸು ಪಡೆಯುವ ತಾತ್ವಿಕ ತೀರ್ಮಾನ ತೆಗೆದುಕೊಂಡಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನಮ್ಮ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ. ನಾವು ಯಾವುದನ್ನೂ ಮುಚ್ಚಿಡುವುದಿಲ್ಲ. ಯಾರು ಏನೇ ಹೇಳಿಕೊಳ್ಳಲಿ. ಕೆಲವು ಸರ್ಕಾರಿ ನೌಕರರು ಸರ್ಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಮಾಡದಂತೆ ಬಹಳ ದಿನಗಳಿಂದ ಹೇಳುತ್ತಿದ್ದರು. ಅವರು ಹೇಳುವುದರಲ್ಲೂ ಅರ್ಥವಿದೆ. ಕೆಲವು ಹೆಣ್ಣು ಮಕ್ಕಳ ಫೋಟೊ ತೆಗೆದು ತೊಂದರೆ ಆಗಿತ್ತು’ ಎಂದಿದ್ದಾರೆ.



ಕರ್ನಾಟಕ ಸರ್ಕಾರ ಹಿಂಪಡೆದ ಮೊದಲ ಆದೇಶ ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದಿದ್ದಾರೆ ಮಾನ್ಯ ಮುಖ್ಯಮಂತ್ರಿಗಳು. ಆದರೆ, ಆ ಆದೇಶ ಹೊರಡಿಸಿದವರು ಯಾರು? ಅವರ ಮೇಲೆ ಏನು ಕ್ರಮ ಆಗಿದೆ? ಈ ಸುತ್ತೋಲೆಯಲ್ಲಿ ಆಗಿರುವ ದೋಷಗಳಿಗೆ ಯಾರು ಹೊಣೆ?
ತುಂಬಾ ಬೇಸರದ ವಿಷಯ!
ಇಂಥ ಜನ ವಿರೋಧಿ ಸರ್ಕಾರಿ ಆದೇಶವನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತಾರದೇ ಹೊರಡಿಸಲು ಸಾಧ್ಯವೇ, ಹಾಗೇನಾದ್ರೂ ಇದ್ದಲ್ಲಿ ಆ defacto chief ಮಿನಿಸ್ಟರ್ ಯಾರು ಸ್ವಾಮಿ, ಏನೇ ಆದರೂ ಪಠ್ಯಪರಿಷ್ಕರಣೆಗೆ ಸಂಬಂಧ ಪಟ್ಟಂತೆ ಘಟನೋತ್ತರ ಮಂಜುರಾತಿ ನೀಡಿದಂತೆ ಇದೂ ಕೂಡ ಮತ್ತೊಂದು ಸಂಗತಿ.