Homeಕರ್ನಾಟಕಬಾನು ಮುಷ್ತಾಕ್‌ರನ್ನು ವಿರೋಧಿಸುತ್ತಿರುವವರು ಧರ್ಮಾಂಧರು: ಸಿಎಂ ಸಿದ್ದರಾಮಯ್ಯ

ಬಾನು ಮುಷ್ತಾಕ್‌ರನ್ನು ವಿರೋಧಿಸುತ್ತಿರುವವರು ಧರ್ಮಾಂಧರು: ಸಿಎಂ ಸಿದ್ದರಾಮಯ್ಯ

"ಕನ್ನಡ ತಾಯಿ ಬಗ್ಗೆ ಗೌರವ, ಅಭಿಮಾನ, ಪ್ರೀತಿ ಇಲ್ಲದೆ ಕನ್ನಡದಲ್ಲಿ ಬರೆಯುತ್ತಾರೆಯೇ?"

- Advertisement -
- Advertisement -

ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿರುವ ಬಗ್ಗೆ ‘ಧರ್ಮಾಂಧರು’ ಮಾತ್ರ ಮಾತನಾಡುತ್ತಾರೆ. ಅವರಿಗೆ ಇತಿಹಾಸ ತಿಳಿದಿಲ್ಲ, ಇತಿಹಾಸವನ್ನು ತಿಳಿದುಕೊಳ್ಳುವುದು ಒಳ್ಳೆಯದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, “ದಸರಾ ನಾಡ ಹಬ್ಬವನ್ನು ಎಲ್ಲರೂ ಆಚರಿಸುತ್ತಾರೆ. ಆದ್ದರಿಂದ, ಅದನ್ನು ಸಾಹಿತಿ, ಹೋರಾಟಗಾರ್ತಿ ಬಾನು ಮುಷ್ತಾಕ್ ಉದ್ಘಾಟನೆ ಮಾಡುವುದು ಸೂಕ್ತವಾಗಿದೆ ಎಂದು ಸ್ಪಷ್ಟಪಡಿಸಿದರು.

ಮೈಸೂರು ದಸರಾ ಉದ್ಘಾಟಕರ ಆಯ್ಕೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿಯಲ್ಲಿ ನನಗೆ ಅಧಿಕಾರ ನೀಡಲಾಗಿತ್ತು. ನಾನು ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರಿಗೆ ದಸರಾ ಉದ್ಘಾಟನೆಗೆ ಅವಕಾಶ ನೀಡಬೇಕೆಂದು ತೀರ್ಮಾನಿಸಿದೆ. ಹಿಂದೆಯೂ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟಿಸಿದ್ದಾರೆ ಎಂದು ತಿಳಿಸಿದರು.

ದಸರಾ ನಾಡ ಹಬ್ಬ, ಸಾಂಸ್ಕೃತಿಕ ಆಚರಣೆಯಾಗಿದೆ. ನಾಡ ಹಬ್ಬವನ್ನು ಇಂಥ ಧರ್ಮದವರೇ ಉದ್ಘಾಟಿಸಬೇಕೆಂದು ಇಲ್ಲ. ನಾಡ ಹಬ್ಬ ಎಲ್ಲರಿಗೂ ಹಬ್ಬವೇ. ಹಿಂದೂ, ಕ್ರಿಶ್ಚಿಯನ್, ಬೌದ್ಧ, ಜೈನರಿಗೆ ಹಬ್ಬ. ಮಹಾರಾಜರ ಆಡಳಿತ ಇಲ್ಲದಿರುವಾಗ ಹೈದರಾಲಿ, ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸುತ್ತಿದ್ದರು. ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ದಸರಾ ಆಚರಿಸಿದ್ದಾರೆ. ಇದೊಂದು ಧರ್ಮಾತೀತ, ಜಾತ್ಯಾತೀತ ಹಬ್ಬ. ಕರ್ನಾಟಕದಲ್ಲಿ ಬೂಕರ್ ಪ್ರಶಸ್ತಿ ಪಡೆದ ಸಾಹಿತಿಗಳು ಬಹಳ ಕಡಿಮೆ ಎಂದು ಸಿಎಂ ಹೇಳಿದರು.

ಕನ್ನಡ ತಾಯಿಯ ಬಗ್ಗೆ ಗೌರವ, ಅಭಿಮಾನ, ಪ್ರೀತಿ ಇಲ್ಲದೆ ಕನ್ನಡದಲ್ಲಿ ಬರೆಯುತ್ತಾರೆಯೇ?

ಜನ ಸಾಹಿತ್ಯ ಸಮ್ಮೇಳನದಲ್ಲಿ ಬಾನು ಮುಷ್ತಾಕ್ ಅವರು ಕನ್ನಡ ತಾಯಿಯ ಬಗ್ಗೆ ಗೌರವವಿಲ್ಲದೆ ಮಾತನಾಡಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, “ಕನ್ನಡ ತಾಯಿಯ ಬಗ್ಗೆ ಗೌರವ, ಅಭಿಮಾನ, ಪ್ರೀತಿ ಇಲ್ಲದೆ ಕನ್ನಡದಲ್ಲಿ ಬರೆಯುತ್ತಾರೆಯೇ?. ಬಿಜೆಪಿಯವರು ಕುಂಟು ನೆಪವನ್ನು ಹುಡುಕುತ್ತಿದ್ದಾರೆ. ಅವರು ರಾಜಕೀಯವಾಗಿ ಮಾತನಾಡುತ್ತಾರೆಯೇ ಹೊರತು, ಜಾತ್ಯಾತೀತವಾಗಿ ಮಾತನಾಡುವುದಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಢೋಂಗಿಗಳ ಮಾತು: ದನದ ಮಾಂಸ ತಿಂದು ಬರುತ್ತಾರೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, “ಇದೆಲ್ಲಾ ಢೋಂಗಿಗಳು ಮಾತನಾಡುವುದು. ಅವರು ಮಾತನಾಡುವುದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳುವುದಿಲ್ಲ” ಎಂದರು.

ದೀಪಾ ಭಾಸ್ತಿಯವರನ್ನು ಸನ್ಮಾನಿಸಲಾಗಿದೆ

ಎದೆಯ ಹಣತೆ ಭಾಷಾಂತರ ಮಾಡಿದ ದೀಪಾ ಭಾಸ್ತಿಯವರಿಗೂ ಅರಮನೆಯ ಮುಂದೆ ಗೌರವ ಸಲ್ಲಿಸಬೇಕಿತ್ತು ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, “ದೀಪಾ ಭಾಸ್ತಿ ಹಾಗೂ ಬಾನು ಮುಸ್ತಾಕ್ ಅವರಿಗೆ ತಲಾ ಹತ್ತು ಲಕ್ಷ ರೂಗಳನ್ನು ನೀಡಿ ಇಬ್ಬರನ್ನು ಸರ್ಕಾರ ಈಗಾಗಲೇ ಸನ್ಮಾನಿಸಿ, ಗೌರವಿಸಿದೆ ಎಂದು ತಿಳಿಸಿದರು.

ಧರ್ಮಯಾತ್ರೆ: ಬಿಜೆಪಿಯವರದ್ದು ಎಲ್ಲದರಲ್ಲೂ ರಾಜಕೀಯ

ಬಿಜೆಪಿಯವರು ಧರ್ಮಸ್ಥಳಕ್ಕೆ ಧರ್ಮಯಾತ್ರೆ ಕೈಗೊಳ್ಳುತ್ತಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮುಯ್ಯ, “ಬಿಜೆಪಿಯವರು ಎಲ್ಲದರಲ್ಲಿಯೂ ರಾಜಕೀಯ ಮಾಡುತ್ತಾರೆ. ಯಾತ್ರೆ ಹೋದರೆ ಹೋಗಲಿ. ಎಸ್‌ಐಟಿ ರಚನೆಯನ್ನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಸ್ವಾಗತಿಸಿದ್ದಾರೆ. ಸತ್ಯ ಹೊರ ಬರಬೇಕೆಂಬ ಕಾರಣದಿಂದ ಎಸ್ಐಟಿ ರಚನೆ ಮಾಡಲಾಗಿದೆ. ಇಲ್ಲದಿದ್ದರೆ ಧರ್ಮಸ್ಥಳದ ಬಗ್ಗೆ ಯಾವಾಗಲೂ ತೂಗುಗತ್ತಿ ಇರುತಿತ್ತು. ಈ ಸಂದೇಹವನ್ನು ಹೋಗಲಾಡಿಸಲು ಎಸ್‌ಐಟಿ ರಚನೆ ಮಾಡಲಾಗಿದೆ ಎಂದರು.

ದೂರುದಾರ ನ್ಯಾಯಾಲಯದ ಮುಂದೆ ಹೋಗಿ 164 ಹೇಳಿಕೆಯನ್ನು ನೀಡಿದ್ದಾರೆ. ಅನೇಕ ಸಂಘ, ಸಂಸ್ಥೆಗಳು ಎಸ್‌ಐಟಿ ರಚಿಸಬೇಕೆಂದು ಒತ್ತಾಯವನ್ನು ಮಾಡಿದ್ದರು. ಬಿಜೆಪಿಯವರು ಕೂಡ ಇದನ್ನು ಸ್ವಾಗತಿಸಿದ್ದರು. ಈಗ ಮಾತ್ರ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಧರ್ಮ ಗೊತ್ತಿಲ್ಲ ಎಂದು ಹೇಳಿದರು.

ಜಿಎಸ್‌ಟಿ ಎರಡು ಸ್ಲ್ಯಾಬ್ : ಪ್ರತಿ ವರ್ಷ 15 ಸಾವಿರ ಕೋಟಿ ನಷ್ಟ

ಕೇಂದ್ರ ಸರ್ಕಾರ ಜಿಎಸ್‌ಟಿ ಎರಡು ಸ್ಲ್ಯಾಬ್ ಮಾಡುವುದರಿಂದ ಪ್ರತಿ ವರ್ಷ 15 ಸಾವಿರ ಕೋಟಿ ರೂಪಾಯಿ ನಷ್ಟವಾಗಬಹುದೆಂದು ಅಂದಾಜಿಸಲಾಗಿದೆ. ತರ್ಕಬದ್ಧಗೊಳಿಸುವುದನ್ನು ಸ್ವಾಗತಿಸುತ್ತೇವೆ. ಆದರೆ, ಹಣಕಾಸಿನ (Revenue Protection) ರಕ್ಷಣೆಯಾಗಬೇಕೆನ್ನುವುದು ನಮ್ಮ ಉದ್ದೇಶ. ಅದಕ್ಕಾಗಿ ಎಂಟು ರಾಜ್ಯಗಳು ದೆಹಲಿಯಲ್ಲಿ ಚರ್ಚೆ ಮಾಡಿದೆ ಎಂದು ತಿಳಿಸಿದರು.

ಸಿನ್ ಗೂಡ್ಸ್ ಮೇಲೆ ಸೆಸ್ ಹಾಕಿ ಪರಿಹಾರ ಒದಗಿಸಲು ಜಿಎಸ್ ಟಿ ಮಂಡಳಿಗೆ ಸಲಹೆ

2017ರಲ್ಲಿ ಜಿಎಸ್‌ಟಿ ಜಾರಿಯಾದಾಗ 5 ವರ್ಷ ಮಾತ್ರ ಪರಿಹಾರ ನೀಡುವುದಾಗಿ ಹೇಳಿದ್ದರು. ಈಗ ಸುಮಾರು 12% ತೆರಿಗೆ ಬೆಳವಣಿಗೆಯಾಗಿದೆ. ಲಕ್ಷುರಿ(ಸಿನ್ ಗೂಡ್ಸ್ ) ವಸ್ತುಗಳಾದ ಸಿಗರೇಟ್, ಗುಟ್ಕಾ, ಪಾನ್ ಮಸಾಲಾ ಬೆಂಜ್ ಕಾರುಗಳಲ್ಲಿ ಓಡಾಡುವವ ಮೇಲೆ ಸೆಸ್ ಹಾಕಿ ನಮಗೆ ಪರಿಹಾರ ಕೊಡಿ ಎಂದು ಸಲಹೆ ನೀಡಿದ್ದೇವೆ. ಸಚಿವ ಕೃಷ್ಣಭೈರೇಗೌಡ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅವರೇ ಈಗ ಎಂಟು ರಾಜ್ಯಗಳ ಆರ್ಥಿಕ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಸೆಪ್ಟೆಂಬರ್ 3 ಮತ್ತು 4 ರಂದು ನಡೆಯಲಿರುವ ಸಭೆಯಲ್ಲಿ ಇದನ್ನು ಪ್ರಸ್ತಾಪ ಮಾಡಲಿದ್ದಾರೆ ಎಂದರು.

ರಾಜ್ಯಕ್ಕೆ ಅನ್ಯಾಯವಾಗಿರುವ ಬಗ್ಗೆ ಬಿಜೆಪಿಯವರು ಯಾವಾಗ ಧ್ವನಿ ಎತ್ತಿದ್ದಾರೆ?

ಜಿಎಸ್‌ಟಿ ವಿಚಾರವಾಗಿ ರಾಜ್ಯದ ಸಚಿವರು ಹಾಗೂ ಸಂಸದರು ನಿಯೋಗ ತೆರಳಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, “ಬಿಜೆಪಿಯ ಸಂಸದರು ಎಂದಿಗೂ ಇದನ್ನು ಒತ್ತಾಯಿಸುವುದಿಲ್ಲ. ಕರ್ನಾಟಕಕ್ಕೆ 11,950 ಕೋಟಿಗಳು ನಷ್ಟವಾಯಿತು. ಬಿಜೆಪಿ ಸಂಸದರು ಈ ಬಗ್ಗೆ ಮಾತನಾಡಿಯೇ ಇಲ್ಲ. ಧರ್ಮಸ್ಥಳಕ್ಕೆ ಧರ್ಮಯಾತ್ರೆ ಕೈಗೊಂಡಿದ್ದಾರೆ. ರಾಜ್ಯಕ್ಕೆ ಅನ್ಯಾಯವಾಗಿರುವ ಬಗ್ಗೆ ಯಾವಾಗ ಮಾತನಾಡಿದ್ದಾರೆ? ಧರ್ಮಸ್ಥಳದ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಸಮನಾಗಿ ಆಸ್ತಿ ನೋಂದಣಿ ಹೆಚ್ಚಳ

ಆಸ್ತಿ ನೋಂದಣಿ ಶುಲ್ಕ ಹೆಚ್ಚಳವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಸಮಾನವಾಗಿ ಶೇಕಡ ಒಂದರಷ್ಟನ್ನು ಹೆಚ್ಚಿಸಲಾಗಿದೆ ಎಂದರು.

ಧರ್ಮಸ್ಥಳ ಪ್ರಕರಣ:ಬೇರೆ ತನಿಖೆ ಅಗತ್ಯವಿಲ್ಲ

ಧರ್ಮಸ್ಥಳದ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕೆಂಬ ಬಿಜೆಪಿ ಒತ್ತಾಯವಿರುವ ಬಗ್ಗೆ ಮಾತನಾಡಿದ ಸಿಎಂ, “ಬಿಜೆಪಿ ಅಧಿಕಾರದಲ್ಲಿದ್ದು, ಸಿಬಿಐಗೆ ಯಾವ ಪ್ರಕರಣವನ್ನು ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು. ಎಸ್‌ಐಟಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ತನಿಖೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಬೇರೆ ತನಿಖೆಯ ಅಗತ್ಯವಿಲ್ಲ ಎಂದು ನಾನು ಭಾವಿಸಿದ್ದೇನೆ ಎಂದರು.

ಧರ್ಮಸ್ಥಳ: ಸತ್ಯ ತಿಳಿಯಬೇಕಿದೆ

ತನಿಖೆ ನಡೆಯುವಾಗ ಎಲ್ಲಾ ಪಕ್ಷಗಳು ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿರುವ ಬಗ್ಗೆ ಮಾತನಾಡಿದ ಸಿಎಂ ಧರ್ಮದ ಪರವಾಗಿ ಯಾತ್ರೆ ಮಾಡುತ್ತಿದ್ದು, ದೂರಿನ ಆಧಾರದ ಮೇಲೆ ಸತ್ಯವನ್ನು ತಿಳಿಯಬೇಕಾಗಿದೆ ಎಂದರು. ದಸರಾ ಏರ್ ಶೋ ವಿಜಯದಶಮಿ ದಿನವೇ ನಡೆಯಲಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ದ್ವಿಭಾಷಾ ಸೂತ್ರ ಜಾರಿಗೆ ಹೆಚ್ಚಿದ ಒತ್ತಡ; ರವೀಂದ್ರ ಕಲಾಕ್ಷೇತ್ರದ ಒಟ್ಟುಗೂಡಿದ ಚಿಂತಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -