ಗೌರಿ ಲಂಕೇಶ್ ಅವರ ಹತ್ತನೇ ಸಂಸ್ಮರಣಾ ದಿನದಂದು ನಿಮ್ಮ ಮುಂದೆ ಮಾತಾಡುವುದು ಒಂದು ವಿನೀತಭಾವವನ್ನು ಮೂಡಿಸುವ ಅನುಭವವಾಗಿದೆ. ಹಾಗಿದ್ದರೂ ಈ ಸ್ಫೂರ್ತಿಯುತ ಕಾರ್ಯಕ್ರಮದಲ್ಲಿ ಮಾತನಾಡುವಂತೆ ನನ್ನನ್ನು ಆಹ್ವಾನಿಸಿದ ತೀಸ್ತಾ ಮತ್ತು ಗೌರಿ ಟ್ರಸ್ಟ್‌ನ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅಗಾಧ ದೃಢತೆ ಹೊಂದಿದ್ದ ಧೈರ್ಯಶಾಲಿ ಪತ್ರಕರ್ತೆ, ಹೃದಯವುಳ್ಳ ಮಾನವತಾವಾದಿ ಮತ್ತು ಅತ್ಯುತ್ತಮ ಮಾನವ ಹಕ್ಕುಗಳ ಕಾರ್ಯಕರ್ತೆಯಾಗಿದ್ದು, ಎಲ್ಲರಿಗೂ ಪರಿಚಿತರಾಗಿದ್ದ ಗೌರಿ ಲಂಕೇಶ್ ಅವರ ಕುರಿತು ಚೆನ್ನಾಗಿ ಬಲ್ಲವರು, ಮಾತನಾಡುವವರು ಇರುವಾಗ ನಾನು ಮಾತನಾಡಿದರೆ, ಲೆಕ್ಕಕ್ಕಿಂತ ಹೆಚ್ಚು ಮಾತನಾಡಿದಂತಾದೀತು. ಹಾಗಾಗಿ ನಾನು ವಿಷಯದ ಬಗ್ಗೆಯಷ್ಟೇ, ಭಾರತ ಗಣರಾಜ್ಯಕ್ಕೆ ಎದುರಾಗಿರುವ ಅಪಾಯದ ಬಗ್ಗೆಯಷ್ಟೇ ಮಾತನಾಡುತ್ತೇನೆ.
ಕಾರ್ಯಕ್ರಮದ ಆರಂಭದಲ್ಲಿ ಹಾಡಲಾದ ಫೈಜ್ ಅಹ್ಮದ್ ಫೈಜ್ ಅವರ ಸ್ಫೂರ್ತಿದಾಯಕ ಹಾಡು- ಹಮ್ ದೇಖೇಂಗೆ! ಅದನ್ನು ಅವರು ಲಾಹೋರ್‌ನಲ್ಲಿ ಸಾವಿರಾರು ಜನರು ಸೇರಿದ್ದ ಸಭೆಯಲ್ಲಿ ಹಾಡಿದ್ದರು. ಪಾಕಿಸ್ತಾನದಲ್ಲಿ ಜಿಯಾ ಉಲ್ ಹಕ್- ಮಿಲಿಟರಿ ಸರ್ವಾಧಿಕಾರಿ ಆಗಿ ಬಂದತಕ್ಷಣ- ಅವರು ಹಾಡಿದ್ದರು: ಹಮ್ ದೇಖೇಂಗೆ… ನಾವು ನೋಡ್ತೀವಿ… ಉರುಳಿಸುತ್ತೇವೆ…ಮೊದಲ ಚರಣ ಹೀಗಿದೆ: ಲಾಝಿಮ್ ಹೈ ಕೆ ಹಮ್ ದೇಖೇಂಗೆ, ಸಬ್ ತಖ್ತ್ ಉಖಾಡೆ ಜಾಯೇಂಗೆ, ಹರ್ ಜಬರ್ದಸ್ತಿ ಮಿಟಾಯೇ ಜಾಯೆಂಗೆ… ಹೀಗೆ ಮುಂದುವರಿಯುವ (ಎಲ್ಲಾ ಸಿಂಹಾಸನಗಳನ್ನು ಕಿತ್ತೆಸೆಯಲಾಗುವುದು, ಎಲ್ಲ ದಬ್ಬಾಳಿಕೆಗಳನ್ನು ಅಳಿಸಲಾಗುವುದು) ಒಂದು ಸ್ಫೂರ್ತಿದಾಯಕ ಹಾಡಾಗಿದೆ. ಇಂತಹ ದಿಟ್ಟತನವೇ ನಮ್ಮ ನಡುವಿಂದ ಗೌರಿಯಂತಹ ಒಂದು ಸ್ಫೂರ್ತಿದಾಯಕ ವ್ಯಕ್ತಿತ್ವವನ್ನು ಅಳಿಸಲು ಕಾರಣವಾಗಿದೆ. ಹೀಗೆ ಮಾತನಾಡುವವರ ಬಾಯಿಗಳನ್ನು ಮುಚ್ಚಿಸುವುದು ಪ್ರಭುತ್ವಕ್ಕೆ ಅತ್ಯಗತ್ಯವಾಗಿದೆ. ಹಾಗಾಗಿಯೇ, ಗೌರಿ ಲಂಕೇಶ್, ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್ ಮತ್ತು ಎಂ.ಎಂ. ಕಲಬುರ್ಗಿ ಮುಂತಾದವರನ್ನು ಕೊಲ್ಲಲಾಗಿದೆ. ಅವರು, ಫ್ಯಾಸಿಸಂ ವಿರುದ್ಧದ ನಮ್ಮ ಹೋರಾಟದ ಧ್ವಜವನ್ನು ಮುಂದಕ್ಕೆ ಒಯ್ಯುವಂತೆ ನಮ್ಮನ್ನು ಪ್ರೇರೇಪಿಸುತ್ತಾರೆ. ನಾವು ಇಂದು ಒಂದು ಶಪಥ ಮಾಡೋಣ: ನಾವೆಲ್ಲರೂ ಭಾರತದಲ್ಲಿ ಫ್ಯಾಸಿಸಂ ಯಶಸ್ವಿಯಾಗದಂತೆ ಕೈಜೋಡಿಸುತ್ತೇವೆ; ನಾವು ಯಾವುದೇ ಬೆಲೆ ತೆತ್ತಾದರೂ ಅದನ್ನು ಸೋಲಿಸುತ್ತೇವೆ; ನಾವು ಒಂದು ಭಾರತ- ಒಂದು ಹೊಸ ಪ್ರಜಾಸತ್ತಾತ್ಮಕ ಭಾರತವನ್ನು ಕಟ್ಟುತ್ತೇವೆ. ಮತ್ತೆ ಹಳೆಯ ಭಾರತಕ್ಕೆ ಮರಳುವುದಲ್ಲ; ಒಂದು ಹೊಸ, ಪ್ರಜಾಸತ್ತಾತ್ಮಕ, ಪ್ರಗತಿಪರ ಭಾರತವನ್ನು ಕಟ್ಟುವುದು.
ಅದಿರಲಿ, ನಾನಿಂದು ಒಕ್ಕೂಟ ತತ್ವಕ್ಕೆ ಒದಗಿರುವ ಅಪಾಯಗಳ ಬಗ್ಗೆ ಮಾತನಾಡಬೇಕಾಗಿದೆ. ನೀವು ಊಹಿಸಿರಬಹುದಾದಂತೆ ನಾನು ತರಬೇತಿಯಿಂದ ಒಬ್ಬ ಅರ್ಥಶಾಸ್ತ್ರಜ್ಞ. ಇಲ್ಲಿರುವ ರಾಜಕೀಯ ಶಾಸ್ತ್ರಜ್ಞರು ರಾಜಕೀಯ ದೃಷ್ಟಿಕೋನದಿಂದ ಒಕ್ಕೂಟ ತತ್ವದ ಬಗ್ಗೆ ಮಾತನಾಡಲಿದ್ದಾರೆ. ಆದರೆ, ನಾನು ಆರ್ಥಿಕ ದೃಷ್ಟಿಕೋನದಿಂದ ಮಾತ್ರವೇ ಒಕ್ಕೂಟ ವ್ಯವಸ್ಥೆ ಅಥವಾ ತತ್ವಕ್ಕೆ ಎದುರಾಗಿರುವ ಅಪಾಯದ ಕುರಿತೇ ಮಾತನಾಡುವುದಕ್ಕೆ ನನ್ನನ್ನು ಸೀಮಿತಗೊಳಿಸುತ್ತೇನೆ. ಆರ್ಥಿಕ ಒಕ್ಕೂಟ ತತ್ವವು ಇಂದು ಹದಿನಾರನೇ ಹಣಕಾಸು ಆಯೋಗದ ಸ್ಥಾಪನೆ ಮತ್ತು ಕೇಂದ್ರದಿಂದ ಹೆಚ್ಚಿನ ಹಣಕ್ಕಾಗಿ ಹಲವಾರು ರಾಜ್ಯಗಳು ನಡೆಸುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.
ಗೆಳೆಯರೇ, ವಾಸ್ತವದಲ್ಲಿ ಭಾರತವು ಒಂದು ಏಕೀಕೃತ ದೇಶವಲ್ಲ; ಸಾಂವಿಧಾನಿಕವಾಗಿ ಭಾರತವು ಒಂದು ದೇಶಗಳ (nation and state) ಒಕ್ಕೂಟ. ಅದು ಹಲವು ರಾಷ್ಟ್ರೀಯತೆಗಳ ಒಕ್ಕೂಟ.
ನಾನು ಕೇರಳದಿಂದ ಬಂದಿರುವುದರಿಂದ ಹೇಳುತ್ತೇನೆ: ನಾವು ಶಾಲೆಯ ಸಮಯದಿಂದಲೇ ಎರಡು ಸಾಲುಗಳನ್ನು ಕೇಳುತ್ತಾ ಬಂದಿದ್ದೇವೆ. ಮಲಯಾಳಂ ಭಾಷೆಯಲ್ಲಿ; “ಭಾರತ ಎಂಬ ಹೆಸರು ಕೇಳಿದಾಗ ನಿಮ್ಮ ಹೃದಯವು ಸಂತೋಷದಿಂದ ತುಂಬಿಹೋಗಬೇಕು. ಕೇರಳವೆಂದು ಕೇಳಿದಾಗ ನಿಮ್ಮ ನರನರಗಳಲ್ಲಿ ರಕ್ತವು ಕುದಿಯಬೇಕು.” ನಾನೀಗ ಯಾರು? ನಾನು ಭಾರತೀಯನೇ? ಅಥವಾ ನಾನು ಕೇರಳೀಯನೆ? ನಾನು ಎರಡೂ ಹೌದು. ಈ ಯಮಳ (ಜೋಡಿ) ಅಸ್ತಿತ್ವ, ಅಸ್ಮಿತೆಗಳೇ ಪ್ರತಿಯೊಬ್ಬ ಭಾರತೀಯ ವ್ಯಕ್ತಿಯ ಪ್ರಜ್ಞೆಯನ್ನು ರೂಪಿಸಿವೆ.
ಈ ಪ್ರಜ್ಞೆ ಯಾವಾಗ ರೂಪುಗೊಂಡಿತು? ಅದು ವಸಾಹತುಶಾಹಿಯ ಕಾಲದಲ್ಲಿ ರೂಪುಗೊಂಡಿತು. ಇಂದು ನಾವು ನೋಡುವ, ಕಾಣುವ ಭಾರತ ಎಂಬ ಪ್ರದೇಶವು ನಮ್ಮೆಲ್ಲರ ಪ್ರಜ್ಞೆಯಲ್ಲಿ ಆಳವಾಗಿ ಬೇರೂರಿದೆ. ಅದು ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಅಸಾಧಾರಣವಾದ ತ್ಯಾಗ ಮತ್ತು ಅಸಾಧಾರಣವಾದ ಹೋರಾಟದಿಂದ ಪಡಿಮೂಡಿದೆ. ಅದುವೇ ಇಂದು ಇರುವ ಅಖಿಲ ಭಾರತದ ಪ್ರಜ್ಞೆ. ಆದರೆ, ಇದು ಮಾತ್ರವೇ ಭಾರತೀಯರಿಗೆ ಇರುವ ಪ್ರಜ್ಞೆಯಲ್ಲ. ಅದು ಒಂದು ಪ್ರದೇಶ, ಒಂದು ಭಾಷೆ, ಒಂದು ಸಂಸ್ಕೃತಿ ಇತ್ಯಾದಿಯಾಗಿ ಪ್ರಜ್ಞೆಗಳು ಬೆಳೆದು ವಸಾಹತುಶಾಹಿಯ ವಿರುದ್ಧದ ಹೋರಾಟದಲ್ಲಿ ಜೊತೆ ಸೇರಿದವು. ಪರಿಣಾಮವಾಗಿಯೇ ಭಾರತವು ಒಂದು ಒಕ್ಕೂಟ ರಾಷ್ಟ್ರವಾಗಿ ಮೂಡಿಬಂತು ಮಾತ್ರವಲ್ಲದೇ ಅದರೊಳಗೆ ಹಲವಾರು ಭಾಷಾವಾರು ರಾಜ್ಯಗಳ ಒಕ್ಕೂಟವಾಗಿಯೂ ಮೂಡಿಬಂತು. ಅವು ತಮ್ಮಿಂದ ತಾವೇ ಒಂದೊಂದು ಸಾಂಸ್ಕೃತಿಕ ಘಟಕಗಳಾಗಿವೆ. ಯಾರು ಈ ಜೋಡಿ ಅಸ್ಮಿತೆಯ ಬಾವುಟವನ್ನು ಎತ್ತಿಹಿಡಿದರು? ಕಮ್ಯುನಿಸ್ಟರು, ಎಡ ಮತ್ತು ಪ್ರಗತಿಪರ ಶಕ್ತಿಗಳು. ಇ.ಎಂ.ಎಸ್. ನಂಬೂದರಿಪಾಡ್, ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಕಮ್ಯುನಿಸ್ಟ್ ನಾಯಕ, ಒಂದು ಪುಸ್ತಕ ಬರೆದರು: “ಒಂನ್ನೆಕಾಲುಂಗೋಟಿ ಮಲಯಾಳಿಗಳ್” (ಒಂದೂ ಕಾಲು ಕೋಟಿ ಮಲಯಾಳಿಗಳು). ನಂತರ ಅವರು ಅದನ್ನು “ಕೇರಳಂ ಎಂಗಳುಡೆ ಮಾತೃಭೂಮಿ” (ಕೇರಳ ನಮ್ಮ ಮಾತೃಭೂಮಿ) ಎಂಬ ಹೆಸರಿನಲ್ಲಿ ಮತ್ತೆ ಬರೆದರು. ಪಿ. ಸುಂದರಯ್ಯ, ಆಂಧ್ರಪ್ರದೇಶದ ಕಮ್ಯುನಿಸ್ಟ್ ನಾಯಕ, ತೆಲಂಗಾಣ ಹೋರಾಟದ ಒಬ್ಬ ನಾಯಕ, “ವಿಶಾಲಾಂಧ್ರ” ಎಂಬ ಪುಸ್ತಕ ಬರೆದರು. ಭವಾನಿಸೇನ್, ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ನಾಯಕ “ನೂತೊನ್, ಬೊಂಗ್ಲಾ” (ನೂತನ ಬಂಗಾಳ) ಎಂಬ ಪುಸ್ತಕ ಬರೆದರು. ಈ ಪುಸ್ತಕಗಳೆಲ್ಲವು ಏನು? ಇವೆಲ್ಲವೂ ಭಾರತವು ಒಂದು ಏಕ ರಾಷ್ಟ್ರವಲ್ಲ; ಆದು ಹಲವಾರು ರಾಷ್ಟ್ರೀಯತೆಗಳ ಒಕ್ಕೂಟ, ಹಲವಾರು ಸಂಸ್ಕೃತಿಗಳ ಒಕ್ಕೂಟ, ಹಲವು ಭಾಷೆಗಳ ಒಕ್ಕೂಟ ಎಂದು ಪ್ರತಿಪಾದಿಸುವಂತವುಗಳು. ಆದುದರಿಂದ, ಪ್ರತೀ ಭಾರತೀಯರೂ ಈ ಜೋಡಿ ಅಸ್ಮಿತೆಯನ್ನು ಹೊಂದಿರುವುದೇ ಅಲ್ಲದೇ, ವಸಾಹತುಶಾಹಿ ಮತ್ತು ಸಾಮ್ರಾಜ್ಯವಾದ ವಿರೋಧಿ ಪ್ರಜ್ಞೆಯನ್ನೂ ಹೊಂದಿದ್ದಾರೆ.
ಆದರೆ, ಇಂದು ಫ್ಯಾಸಿಸ್ಟ್ ಪರಿಭಾಷೆಗಳಲ್ಲಿ ಇಂದು ನೀವು ನೋಡುತ್ತಿರುವ ಭಾರತವು ವಸಾಹತುಶಾಹಿ ವಿರೋಧಿಯಲ್ಲ. ಅವು ವಸಾಹತುಶಾಹಿಯ ಎದುರು ಕ್ಷಮೆ ಬೇಡುವಂತವು. ಅವರು ಬ್ರಿಟಿಷ್ ವಸಾಹತುಶಾಹಿಗೆ ಜೈಲಿನಿಂದ ಕ್ಷಮಾಪಣಾ ಪತ್ರಗಳನ್ನು ಬರೆದವರು. ಅದೇ ಹೊತ್ತಿಗೆ ಇತರರು ದಶಕಗಳ ಕಾಲ ಜೈಲಿನಲ್ಲಿ ಕಳೆದರು ಮತ್ತು ಸತ್ತರು ಕೂಡಾ. ಆದರೂ ಫ್ಯಾಸಿವಾದಿಗಳು ಇಂದು ರಾಷ್ಟ್ರೀಯತೆ, ದೇಶಪ್ರೇಮ ಇತ್ಯಾದಿಗಳ ಕುರಿತು ಉಪನ್ಯಾಸ ಬಿಗಿಯುತ್ತಿದ್ದಾರೆ. ಅವರು ವಸಾಹತುಶಾಹಿ, ಸಾಮ್ರಾಜ್ಯಶಾಹಿ ವಿರೋಧಿ ಸಿದ್ಧಾಂತಗಳ ಬೆಂಬಲಿಗರಲ್ಲ; ಬದಲಾಗಿ ಅವರು ಈ ಅಖಿಲ ಭಾರತೀಯ ಪ್ರಜ್ಞೆಯನ್ನು ಹಿಂದೂತ್ವವಾದಿ ಪ್ರಜ್ಞೆಯಿಂದ ಬದಲಿಸಲು ಬಯಸುವವರು. ಅದು ಒಂದು ಬದಲಿಯಾಗಬಹುದೇ? ಇಲ್ಲ! ಅದು ಬದಲಿಯಾಗಲಾರದು. ಯಾಕೆಂದರೆ, ಅದು ಭಾರತೀಯವಲ್ಲ. ಭಾರತದ ವೈವಿಧ್ಯತೆಯೂ ಅಖಿಲ ಭಾರತ ಪ್ರಜ್ಞೆಯನ್ನು ಆ ವಿಭಜನಕಾರಿ, ಕೋಮುವಾದಿ ತತ್ವಗಳಿಂದ ಬದಲಿಸಲು ಬಿಡಲಾರದು. ಆದರೆ, ಕಳೆದ ಅರವತ್ತು ವರ್ಷಗಳಿಂದ ಅವರು ಅದನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಭಾಗಶಃ ಯಶಸ್ವಿಯೂ ಆಗಿದ್ದಾರೆ ಕೂಡಾ. ಅವರೀಗ ಅಧಿಕಾರಕ್ಕೆ ಬಂದು ಹತ್ತು ವರ್ಷಗಳೂ ಆಗಿವೆ. ಆದರೆ, ಅವರಿಗೆ ಈಗಲೂ ಅದನ್ನು ಬಲಪ್ರಯೋಗವಿಲ್ಲದೇ ಮಾಡಲು ಸಾಧ್ಯವಿಲ್ಲ. ಭಾರತೀಯರು ಅದನ್ನು ಮಾಡುವಂತೆ ಬಲಪ್ರಯೋಗ. ಹಾಗೆಂದೇ ಈ ಸರಕಾರವು ಸರ್ವಾಧಿಕಾರಿಯಾಗುತ್ತಿದೆ. ಅದಕ್ಕಾಗಿಯೇ ಅವರು ಜನರ ಮೇಲೆ ಬೇರೆಬೇರೆ ರೂಪಗಳ ಹಿಂಸಾಚಾರಗಳನ್ನು ಬಳಸುತ್ತಿದ್ದಾರೆ. ಅದು ಬೇರೆಯೇ ರೀತಿಯಲ್ಲಿ ಯೋಚನೆ ಮಾಡುವವರ ವಿರುದ್ಧ, ಬೇರೆ ರೀತಿಯಲ್ಲಿ ಜೀವಿಸಲು ಬಯಸುವವರ, ಬೇರೆ ರೀತಿಯ ಉಡುಗೆ ತೊಡಲು ಬಯಸುವವರ ವಿರುದ್ಧ, ಬೇರೆಬೇರೆ ಭಾಷೆಗಳನ್ನು ಮಾತನಾಡಲು ಬಯಸುವವರ ವಿರುದ್ಧ. ಅದಕ್ಕಾಗಿಯೇ ಅವರು ಒಂದೇ ದೇಶ, ಒಂದೇ ಉಡುಗೆತೊಡುಗೆ, ಒಂದೇ ಭಾಷೆ ಮತ್ತು ಒಂದೇ ಚುನಾವಣೆ, ಒಂದೇ ರೀತಿಯ ಆಧ್ಯಾತ್ಮಿಕ ಚಿಂತನೆ ಇತ್ಯಾದಿಗಳನ್ನು ನಾವು ಅನುಸರಿಸಬೇಕೆಂದು ಬಯಸುತ್ತಾರೆ. ಇದುವೇ ಅವರು ಸೃಷ್ಟಿಸಲು ಯತ್ನಿಸುತ್ತಿರುವ ಭಾರತ.
ಅವರಿಗಿಂದು ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡಲು ಹಕ್ಕಿದೆಯೇ? ಇಲ್ಲ! ಅದು ಸಾಂವಿಧಾನಿಕವಾಗಿದ್ದರೂ! ಯಾಕೆಂದರೆ, ಅವರಿಗೆ ಸಂವಿಧಾನವೇ ಬೇಡ. ಅವರಿಗೆ ತ್ರಿವರ್ಣ ಧ್ವಜ ಬೇಡವಾಗಿತ್ತು, ಅವರಿಗೆ ಕೇಸರಿ ಧ್ವಜ ಬೇಕಿತ್ತು. ಅವರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನ ಬೇಡ, ಅವರಿಗೆ ಮನುಸ್ಮೃತಿ ಬೇಕು. ಇಂಥವರು ಇಂದು ನಮಗೆ ದೇಶಪ್ರೇಮ, ರಾಷ್ಟ್ರೀಯತೆ ಇತ್ಯಾದಿಗಳನ್ನು ಕಲಿಸಲು ಬರುತ್ತಿದ್ದಾರೆ.
ನಾನು ನಿಮಗೆ ಅವರು ಒಕ್ಕೂಟ ವ್ಯವಸ್ಥೆಯ ಬಗ್ಗೆ ಹೇಗೆ ಯೋಚಿಸುತ್ತಾರೆ ಎಂದು ತೋರಿಸಲು ಅವರ ಸೈದ್ಧಾಂತಿಕ ಗುರು ಮಾಧವ ಸದಾಶಿವ ಗೋಳ್ವಾಲ್ಕರ್ ಏನು ಬರೆದಿದ್ದಾರೆ ಎಂಬುದನ್ನು ಉಲ್ಲೇಖಿಸುತ್ತೇನೆ. ಅವರು 1961ರಲ್ಲಿ ಭಾರತದ ಮೊದಲ ಸಮಗ್ರತಾ ಮಂಡಳಿಗೆ ಪತ್ರ ಬರೆಯುತ್ತಾ ಹೀಗೆ ಹೇಳಿದ್ದಾರೆ, ಅದು ಇಲ್ಲಿ ಉಲ್ಲೇಖಿಸಲು ಅರ್ಹವಾದದ್ದು: “ಇಂದು ಒಕ್ಕೂಟ ತತ್ವದ ಮೂಲಕ ಸರಕಾರವು ಪ್ರತ್ಯೇಕತಾ ಭಾವನೆಯನ್ನು ಹುಟ್ಟುಹಾಕುವುದೇ ಅಲ್ಲದೆ, ಅದು ಅದನ್ನು ಬೆಳೆಸುತ್ತದೆ. ಅದು ಒಂದು ರಾಷ್ಟ್ರ ಎಂಬ ಕಲ್ಪನೆಯನ್ನು ವಿರೋಧಿಸುತ್ತದೆ ಮಾತ್ರವಲ್ಲ, ಅದನ್ನು ನಾಶಪಡಿಸುತ್ತದೆ. ಅದನ್ನು ಬೇರು ಸಮೇತ ಕಿತ್ತೊಗೆಯಬೇಕು, ಏಕರೂಪದ ಸರಕಾರವನ್ನು ಸ್ಥಾಪಿಸಬೇಕು ಮತ್ತು ಸಂವಿಧಾನವನ್ನು ಶುದ್ಧೀಕರಣಗೊಳಿಸಬೇಕು.” ಇದು 1961ರಲ್ಲಿ ಗೋಳ್ವಾಲ್ಕರ್ ಹೇಳಿದ್ದು. ಇದೇ ಆಧಾರದಲ್ಲಿ ಆರೆಸ್ಸೆಸ್ ಮತ್ತು ಜನಸಂಘ ಭಾಷಾವಾರು ಪ್ರಾಂತ್ಯಗಳ ರಚನೆಯನ್ನು ವಿರೋಧಿಸಿತ್ತು ಮಾತ್ರವಲ್ಲ ಸಂಯುಕ್ತ ಮಹಾರಾಷ್ಟ್ರ ಚಳವಳಿಯನ್ನೂ ವಿರೋಧಿಸಿತ್ತು. ಒಂದು ಸಲ ಗೋಳ್ವಾಳ್ಕರ್ ಅವರು ಮಹಾರಾಷ್ಟ್ರ ವಿರೋಧಿ ಸಭೆಯೊಂದರಲ್ಲಿ ಮಾತನಾಡುತ್ತಾ, ದೇಶದಲ್ಲಿ ಕೇಂದ್ರೀಕೃತ ಸರಕಾರವಿರಬೇಕು ಮತ್ತು ಕೇಂದ್ರವು ತೆರಿಗೆದಾರರನ್ನು/ಮತದಾರರನ್ನು (returnees) ಆಳಬೇಕೆಂದು ಹೇಳಿದ್ದರು.
ಆರೆಸ್ಸೆಸ್ಸಿನ ಬೈಬಲ್ ಆಗಿರುವ ಗೋಳ್ವಾಲ್ಕರ್ ಅವರ ಕೃತಿ “ಎ ಬಂಚ್ ಅಫ್ ಥಾಟ್ಸ್” (ಯೋಚನೆಗಳ ಒಂದು ಗೊಂಚಲು) ಹೀಗೆ ಹೇಳುತ್ತದೆ: “ಈ ಸಂವಿಧಾನದ ಹೂರಣವಾಗಿರುವ ಒಕ್ಕೂಟ ರಾಷ್ಟ್ರದ ಎಲ್ಲಾ ಚಿಂತನೆಗಳನ್ನು ಎಂದೆಂದಿಗೂ ಏಳದಂತೆ ಬಹಳ ಆಳದಲ್ಲಿ ಹೂಳಬೇಕು. ಎಲ್ಲಾ ಸ್ವಾಯತ್ತ, ಅರೆ ಸ್ವಾಯತ್ತ ರಾಜ್ಯಗಳನ್ನು ಭಾರತವೆಂಬ ರಾಷ್ಟ್ರದಲ್ಲಿ ತೊಡೆದುಹಾಕಬೇಕು. ಅಲ್ಲಿ ಯಾವುದೇ ವಿಭಜನಕಾರಿಯಾದ, ಒಡೆಯುವ, ಪ್ರಾದೇಶಿಕ, ಭಾಷಾವಾರು ಅಥವಾ ಇತರ ರೀತಿಯ ಹೆಮ್ಮೆಗಳು ಇರಬಾರದು. ಆದುದರಿಂದ, ಈ ಸಂವಿಧಾನವನ್ನು ಮರುಪರಿಶೀಲಿಸಿ, ಮರುರಚನೆ ಮಾಡಿ ಏಕರೂಪದ ಸರಕಾರವನ್ನು ಸ್ಥಾಪಿಸಬೇಕು.” ಇದು ಗೋಳ್ವಾಲ್ಕರ್! ಇದುವೇ ಅವರ ಕಾರ್ಯಕ್ರಮ ಆದುದರಿಂದಲೇ ನಾವು ಒಕ್ಕೂಟ ತತ್ವ ಎಂಬ ಪರಿಕಲ್ಪನೆಯನ್ನು ಬಹಳ ಬಲವಾಗಿ ಎತ್ತಿಹಿಡಿಯಬೇಕಾಗಿದೆ.
ಒಂದು ದೇಶ, ಒಂದು ಚುನಾವಣೆ ಎಂಬುದು ಶೂನ್ಯದಿಂದ ಬರುವುದಿಲ್ಲ. ಅದು ಹೊಸ ಸಂಸತ್ ಭವನದಲ್ಲಿ ಖಾಲಿ ಇರುವ ಕುರ್ಚಿಗಳನ್ನು ಕ್ಷೇತ್ರಗಳ ಪುನರ್ವಿಂಗಡಣೆ ಮೂಲಕ ತುಂಬಿಸಲು ಬರುತ್ತಿವೆ. ಈ ಪುನರ್ವಿಂಗಡಣೆ ಎಂಬುದು – ಜನಸಂಖ್ಯಾ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವ ದೇಶದ ಐದು ರಾಜ್ಯಗಳ ಪ್ರಾತಿನಿಧ್ಯವನ್ನು ಕಡಿಮೆ ಮಾಡಲಿದೆ. ಹಾಗೆ ಮಾಡುವುದರಿಂದ 1951ರಿಂದ ಅಸ್ತಿತ್ವದಲ್ಲಿರುವ 541 ಸದಸ್ಯರ ಸಂಸತ್ತಿನ ಮೂಲ ಚೈತನ್ಯವೇ ಸಾಯಲಿದೆ. ಅದಕ್ಕಾಗಿಯೇ ನಾವು ಒಂದು ಆರೋಗ್ಯಕರ ಒಕ್ಕೂಟವಾದಿ ವ್ಯವಸ್ಥೆಯ ಬಗ್ಗೆ ಜನರ ಜೊತೆ ಮಾತನಾಡುವುದು ಹಿಂದೆಂದಿಗಿಂತಲೂ ಅಗತ್ಯವಾಗಿದೆ.
ಈಗ, ನಾನು ಯಾವ ವಿಷಯದ ಬಗ್ಗೆ ಮಾತಾಡುತ್ತೇನೆಂದು ಹೇಳಿದ್ದೆನೋ, ಆ ವಿಷಯಕ್ಕೆ ಮರಳಿ ಬರುತ್ತೇನೆ; ಅದು ಆರ್ಥಿಕ ಒಕ್ಕೂಟವಾದ. ಅದು ನಾನು ಮಾತನಾಡಲಿರುವ ಬಿಕ್ಕಟ್ಟುಗಳ ಒಂದು ಅಂಶ ಮಾತ್ರ. ಯಾಕೆಂದರೆ, ನಾನು ಅದರ ಬಗ್ಗೆ ಮಾತನಾಡಲು ಮಾತ್ರ ಅರ್ಹತೆ ಹೊಂದಿರುವವನು. ಇಲ್ಲಿರುವ ಉಳಿದವರು ಇತರ ಅಂಶಗಳ ಬಗ್ಗೆ ಮಾತನಾಡಲಿದ್ದಾರೆ ಎಂಬುದು ಖಂಡಿತ. ಗೆಳೆಯರೇ, ಭಾರತದಲ್ಲಿ ಆರ್ಥಿಕ ಒಕ್ಕೂಟ ತತ್ವದ ಬಿಕ್ಕಟ್ಟು, ಅಂದರೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಆರ್ಥಿಕ ಅಥವಾ ಹಣಕಾಸಿನ ಸಂಬಂಧದ ಬಿಕ್ಕಟ್ಟು ಹೊಸದಾದುದು ಏನೂ ಅಲ್ಲ. ಕೆಲವು ವಿಷಯಗಳಲ್ಲಿ ನೋಡುವುದಾದಲ್ಲಿ ಈ ಬಿಕ್ಕಟ್ಟು ಮೂರು ಹಂತಗಳಲ್ಲಿ ಮುನ್ನಡೆದಿದೆ. 1950ರಿಂದ ನಮ್ಮ ಸಂವಿಧಾನ ಅಸ್ತಿತ್ವಕ್ಕೆ ಬಂದಿದೆ. ಆ ಕಾಲದಿಂದಲೇ ಬೇರೆಬೇರೆ ರೀತಿಯ ಭಿನ್ನಮತದ ಧ್ವನಿಗಳು ಕೇಳುತ್ತಾಬಂದಿವೆ. ಯಾಕೆಂದರೆ, ಸಂವಿಧಾನವೇ 1935ರ ಭಾರತ ಸರಕಾರ ಕಾಯಿದೆಯಿಂದ ಬಹಳಷ್ಟನ್ನು ಪಡೆದುಕೊಂಡಿತ್ತು. ಅದು ಭಾರತದ ಎಲ್ಲಾ ಪ್ರಾಂತ್ಯಗಳನ್ನು ಒಟ್ಟು ಸೇರಿಸಲು ಬ್ರಿಟಿಷ್ ವಸಾಹತುಶಾಹಿಯು ನಡೆಸಿದ ಪ್ರಯತ್ನವಾಗಿತ್ತು. ಸಂವಿಧಾನವು ಅದಕ್ಕಿಂತ ತೀರಾ ಪ್ರಗತಿಪರವಾದ ಒಂದು ದಾಖಲೆಯಾಗಿ ಹೊರಬಂದರೂ, ಆರ್ಥಿಕ ಒಕ್ಕೂಟ ತತ್ವವು ಕೆಲವು ತಜ್ಞರು ಹೇಳುವಂತೆ ಅರೆ ಒಕ್ಕೂಟವಾದಿ, ಉದ್ದೇಶದಲ್ಲಿ ಒಕ್ಕೂಟವಾದಿಯಾಗಿದ್ದರೂ, ವಾಸ್ತವದಲ್ಲಿ ಅದಾಗಿರದಿರುವಂತದ್ದು ಆಗಿತ್ತು. ಇದು ಪ್ರಾಥಮಿಕವಾಗಿ ಮೂರು ಅಥವಾ ನಾಲ್ಕು ಪ್ರಾಥಮಿಕ ಸಮಸ್ಯೆಗಳ ಕಾರಣದಿಂದಾಗಿತ್ತು. ನಾನಿದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಈ ಬಿಕ್ಕಟ್ಟು ಹೊಸದೆಂದು ನಾವು ತಿಳಿದುಕೊಳ್ಳಬಾರದು. ಇದು ಹೊಸದಾಗಿದ್ದರೂ, ಅಷ್ಟೊಂದು ಹೊಸದೇನೂ ಅಲ್ಲ. ಈ ಸಮಸ್ಯೆಗಳಲ್ಲಿ ಮುಖ್ಯವಾದುದೆಂದರೆ, ದೊಡ್ಡ ಸಂಖ್ಯೆಯ ತೆರಿಗೆಗಳನ್ನು ಕೇಂದ್ರ ಮಟ್ಟದಲ್ಲಿ ಸಂಗ್ರಹಿಸಲಾದರೂ, ರಾಜ್ಯ ಮಟ್ಟದಲ್ಲಿ ದೊಡ್ಡ ಪ್ರಮಾಣದ ವೆಚ್ಚಗಳನ್ನು ಭರಿಸಬೇಕಾದುದು. ಹೀಗಿರುವಾಗ ಎಷ್ಟು ಹಣವು ಎಲ್ಲಿಗೆ ಹೋಗಬೇಕು ಎಂಬುದನ್ನು ನಿರ್ಧರಿಸುವವರು ಯಾರು? ಸಂವಿಧಾನವು ಇದಕ್ಕಾಗಿ ಕಂಡುಕೊಂಡ ದಾರಿಯೆಂದರೆ ಹಣಕಾಸು ಆಯೋಗ. ಈ ಆಯೋಗವು ಐದು ವರ್ಷಗಳಿಗೆ ಒಮ್ಮೆ ರೂಪುಗೊಳ್ಳುವುದು ಮತ್ತು ಅದು ಎಷ್ಟು ತೆರಿಗೆಯನ್ನು ಕೇಂದ್ರವು ಸಂಗ್ರಹಿಸುವುದು ಮತ್ತು ಎಷ್ಟನ್ನು ಎಲ್ಲಾ ರಾಜ್ಯಗಳಿಗೆ ಕೊಡುವುದು ಎಂಬುದನ್ನು ನಿರ್ಧರಿಸುವುದು. ಇದನ್ನು ಲಂಬವಾದ ಆರ್ಥಿಕ ಸಮತೋಲನ ಎನ್ನಬಹುದು, ಇನ್ನೊಂದು ಸಮಾಂತರವಾದ ಸಮಸ್ಯೆಯಿದೆ. ಅದೆಂದರೆ, ಯಾವ ರಾಜ್ಯಕ್ಕೆ ಎಷ್ಟು ಸಿಗಬೇಕು, ಸಿಗುವುದು ಎಂಬುದು. ಇದನ್ನು ಹಣಕಾಸು ಆಯೋಗವು ನಿರ್ಧರಿಸುತ್ತದೆ. ಇದು ಸಾಂವಿಧಾನಿಕವಾದದ್ದು ಆದರೆ, ನಂತರ ಯೋಜನೆಗಳಿಗಾಗಿ ದೊಡ್ಡ ಮೊತ್ತದ ವೆಚ್ಚ ಮಾಡಬೇಕಾಗಿ ಬಂದಾಗ ನಾವು ಯೋಜನಾ ಆಯೋಗವನ್ನು ರೂಪಿಸಿದೆವು. ಯೋಜನಾ ಆಯೋಗದ ಕಾರ್ಯವೂ ಬಹಳ ಮುಖ್ಯವಾದದ್ದು. ಅದು ನಮ್ಮ ಹೂಡಿಕೆಯ ಆದ್ಯತೆಗಳು, ಅಭಿವೃದ್ಧಿ ಆದ್ಯತೆಗಳು ಎಲ್ಲೆಲ್ಲಿಂದ ಸಂಪನ್ಮೂಲಗಳನ್ನು ಸಂಗ್ರಹಿಸಬೇಕು ಇತ್ಯಾದಿಗಳನ್ನು ನಿರ್ಧರಿಸಬೇಕು. ಯೋಜನಾ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆಯಾಗಿರದೇ ಇದ್ದರೂ, ಕ್ರಮೇಣವಾಗಿ ಹಣಕಾಸು ಆಯೋಗಕ್ಕಿಂತ ಹೆಚ್ಚಿನ ಮಹತ್ವ ಪಡೆಯಲಾರಂಭಿಸಿತು. ಅದರ ಅರ್ಥವೆಂದರೆ, ದೇಶದಲ್ಲಿ ಹಣಕಾಸು ಆಯೋಗವು ಯೋಜನೇತರ ವೆಚ್ಚಗಳನ್ನು ನಿಭಾಯಿಸಿದರೆ, ಯೋಜನಾ ಆಯೋಗವು ಯೋಜನಾ ವೆಚ್ಚಗಳನ್ನು ನಿಭಾಯಿಸಲು ಆರಂಭಿಸಿತು. ಆದರೆ, ಇದು ಹಲವು ರಾಜ್ಯಗಳಲ್ಲಿ ಚಲಾವಣೆಯಲ್ಲಿ ಇಲ್ಲ. ಆದರೆ, ಯೋಜನಾ ಆಯೋಗವು ಸಾಂವಿಧಾನಿಕವಲ್ಲದಿದ್ದರೂ, ಯಾವ ಉದ್ದೇಶಕ್ಕಾಗಿ, ಯಾವ ರಾಜ್ಯಕ್ಕೆ ಎಷ್ಟು ಕೊಡಬೇಕು ಎಂಬುದನ್ನು ನಿರಾಧರಿಸಲು ಆರಂಭಿಸಿತು. ಇದು ಬಿಕ್ಕಟ್ಟಿಗೆ ಕಾರಣವಾಯಿತು. ಯೋಜನಾ ಆಯೋಗದ ಕಾರ್ಯವು ಮುಖ್ಯವಾಗಿದ್ದರೂ ಅದರ ಪಾತ್ರವು ಹಣಕಾಸು ಆಯೋಗದ ಪಾತ್ರಕ್ಕೆ ವ್ಯತಿರಿಕ್ತವಾಗಿದೆಯೇ? ಇದು ಎತ್ತಲಾದ ಮೊದಲ ಪ್ರಶ್ನೆ. ಎರಡನೆಯ ಪ್ರಶ್ನೆಯೆಂದರೆ, ಕೇಂದ್ರವು ಕೆಲವು ರಾಜ್ಯಗಳಿಗೆ ವಿವೇಚನೆಯ ಅನುದಾನಗಳನ್ನು ಕೊಡಲು ಆರಂಭಿಸಿತು. ವಿವೇಚನೆಯ ಅನುದಾನಗಳೆಂದರೆ, ಉದಾಹರಣೆಗೆ, ಕೇಂದ್ರ ವಲಯದ ಕಾರ್ಯಕ್ರಮಗಳು. ಇಲ್ಲಿ ಕೇಂದ್ರದ ಕಾರ್ಯಕ್ರಮಗಳಿಗಾಗಿ ಯಾವ ರಾಜ್ಯಕ್ಕೆ ಎಷ್ಟು ಹಣ ಹೋಗುತ್ತದೆ ಎಂದು ನಿರ್ಧರಿಸಲು ಯಾವುದೇ ಮಾನದಂಡವಾಗಲೀ, ಸೂತ್ರವಾಗಲೀ ಇಲ್ಲ. ಇದರ ಅರ್ಥವೆಂದರೆ, ಕೇಂದ್ರವು ಹಣಕಾಸು ಆಯೋಗದ ಶಿಫಾರಸುಗಳನ್ನು ಮೀರಿ ರಾಜಕೀಯ ಲಾಭದ ದೃಷ್ಟಿಯಿಂದ ಯಾವ ರಾಜ್ಯಕ್ಕೆ ಎಷ್ಟು ಹಣ ಬೇಕಾದರೂ ಕೊಡಬಹುದು, ಕೊಡದಿರಬಹುದು. ಇದು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಘರ್ಷಕ್ಕೆ ಇನ್ನೊಂದು ಪ್ರಮುಖ ಕಾರಣವಾಯಿತು. ಇದನ್ನು ಉಲ್ಬಣಗೊಳಿಸಲು ಇನ್ನೊಂದು ಕಾರಣವೆಂದರೆ, ಕೇಂದ್ರ ಸರಕಾರವು ಈ ವಿವೇಚನಾ ಅನುದಾನವನ್ನು ದುರುಪಯೋಗ ಮಾಡಿಕೊಂಡು ಕಾಲಕಾಲಕ್ಕೆ ರಾಜ್ಯಗಳ ಪಟ್ಟಿ ಮತ್ತು ಪಟ್ಟಿಯಲ್ಲಿರುವ ಕಾರ್ಯಗಳನ್ನು ಉಲ್ಲಂಘಿಸಿ ಅವುಗಳ ಕಾರ್ಯಕ್ರಮಗಳನ್ನು ವಶಪಡಿಸಿಕೊಳ್ಳಲು ಆರಂಭಿಸಿತು. ಇದೂ ಕೇಂದ್ರ ಮತ್ತು ರಾಜ್ಯಗಳ ನಡುವಿನ ಉದ್ವಿಘ್ನತೆಗೆ ಮತ್ತೊಂದು ಕಾರಣವಾಯಿತು.
ಇದನ್ನೂ ಓದಿ: ಗೌರಿ ಲಂಕೇಶ್ ಅವರಿಗೆ ALIFA ಬಹಿರಂಗ ಪತ್ರ | ‘ಬೆಂಕಿ ಮತ್ತು ಹೂವುವಿನಂತ ಗೌರಿ!’
ಸಂಘರ್ಷಕ್ಕೆ ಮತ್ತೊಂದು ಮುಖ್ಯ ಕಾರಣವೆಂದರೆ ಸಂವಿಧಾನದ ವಿಧಿ 293 ಪ್ರಕಾರ ಕೇಂದ್ರವು ರಾಜ್ಯಗಳಿಗೆ ನೀಡುವ ಸಾಲಗಳು. ಇದು ಹಣಕಾಸು ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಇದನ್ನೂ ಕೂಡಾ ಕೆಲವು ರಾಜ್ಯಗಳಿಗೆ ಮಾತ್ರ ರಾಜಕೀಯ ಪರಿಗಣನೆಯ ಆಧಾರದಲ್ಲಿ ಕೊಡಲಾಯಿತು. ಇದರಿಂದಾಗಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧವು ಸಮಾನರ ನಡುವಿನ ಸಂಬಂಧವಾಗಿ ಉಳಿಯದೇ ಸಾಲಕೊಡುವವರು ಮತ್ತು ಸಾಲಗಾರರ ನಡುವಿನ ಸಂಬಂಧವಾಗಿಬಿಟ್ಟಿತು.
ಮಗದೊಂದು ಕಾರಣವು ಚಿಕ್ಕದಾಗಿದ್ದರೂ ಗಮನಾರ್ಹವಾಗಿದೆ. ಅದೆಂದರೆ, ಆದಾಯ ಮತ್ತು ವೆಚ್ಚಗಳ ನಡುವಿನ ಅಂತರ ತುಂಬಿಸಲು ಕೇಂದ್ರವು ರಾಜ್ಯಗಳಿಗೆ ನೀಡುವ ನೆರವು. ಇದನ್ನು ಕೂಡಾ ರಾಜಕೀಯ ಲಾಭದ ಪರಿಗಣನೆಯ ಆಧಾರದಲ್ಲಿ ನೀಡಲಾಯಿತು. ಇವೆಲ್ಲಾ ಕಾರಣಗಳಿಂದಾಗಿ 1950ರಿಂದ ಆರಂಭವಾಗಿ, 1980ರ ದಶಕದ ತನಕವೂ, ಆಗಲೇ ಭಾರತದಲ್ಲಿ ಹಣಕಾಸು ಒಕ್ಕೂಟ ತತ್ವವು ಒತ್ತಡದಲ್ಲಿ ಇತ್ತು. ಅವೆಲ್ಲವೂ ನಾವು ಈಗ ಕಾಣುತ್ತಿರುವ- ದೊಡ್ಡ ಮಟ್ಟದಲ್ಲಿ ಇರಲಿಲ್ಲವಾದರೂ, ಹಲವಾರು ವಿಷಯಗಳ ಕುರಿತು- ರಾಜ್ಯಗಳ ತಗಾದೆ ಇತ್ತು. ಈ ಸಂಘರ್ಷವೇ ಸರ್ಕಾರಿಯಾ ಮುಂತಾದ ಆಯೋಗಗಳ ಸ್ಥಾಪನೆಗೆ ಕಾರಣವಾಯಿತು. ಇದು ನಾವು ಮಾತನಾಡುತ್ತಿರುವ ಮೊದಲನೆಯ ಹಂತ.
ಎರಡನೇ ಹಂತವು 1980ರ ದಶಕ ಮತ್ತು 1990ರ ದಶಕದಲ್ಲಿ ನಾವು ಕರೆಯುವ ಉದಾರೀಕರಣದ ಅವಧಿಯಲ್ಲಿ ನಡೆಯಿತು. ಈ ಉದಾರೀಕರಣದ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಆರ್ಥಿಕ ಸಂಬಂಧದ ಕೇಂದ್ರೀಕರಣ ನಡೆದಿದ್ದು, ಇದು ಮೆಚ್ಚುಗೆಗೇನೂ ಪಾತ್ರವಾಗಲಿಲ್ಲ. ಇದೂ ಕೂಡಾ ಮುಖ್ಯವಾದ ಪಾತ್ರವನ್ನು ವಹಿಸಿದೆ. ನೀವು ನೋಡಿದಲ್ಲಿ 1980ರ ದಶಕದ ಮೊದಲ ಭಾಗದತನಕ ಭಾರತದ ಹೆಚ್ಚಿನ ರಾಜ್ಯಗಳು ಕಂದಾಯ ಮಿಗತೆ ಬಜೆಟ್‌ಗಳನ್ನು ಹೊಂದಿದ್ದವು. ನಂತರವೇ ಹಿಂದೆಂದೂ ಕೇಳಿ ಅರಿಯದ ಕೊರತೆ ಬಜೆಟ್‌ಗಳು ಆರಂಭವಾದವು. ಕೇಂದ್ರ ಸರಕಾರವು ಉದಾರೀಕರಣದ ಭಾಗವಾಗಿ ಬಡ್ಡಿ ದರಗಳನ್ನು ಉದಾರೀಕರಣಗೊಳಿಸಿತು. ಪರಿಣಾಮವಾಗಿ ಬಡ್ಡಿದರವು ತೀವ್ರವಾಗಿ ಏರಿತು. ಯಾವುದಕ್ಕೆ? ರಾಜ್ಯಗಳು ಪಡೆದುಕೊಂಡ ಸಾಲಗಳಿಗೆ. ಆದರೆ, ಕೇಂದ್ರ ಸರಕಾರವು ಪಡೆದುಕೊಂಡ ಸಾಲಗಳಿಗೆ ಅಲ್ಲ! ಸರಾಸರಿಯಾಗಿ ರಾಜ್ಯ ಸರಕಾರಗಳ ಸಾಲದ ಬಡ್ಡಿ 10 ಶೇಕಡಾವನ್ನು ಮೀರಿದ್ದರೆ, ಕೇಂದ್ರ ಸರಕಾರದ ಸಾಲದ ಬಡ್ಡಿ ಏಳು ಶೇಕಡಾಕ್ಕಿಂತ ಕಡಿಮೆಯಿತ್ತು. ಇದರಿಂದಾಗಿ ಅಲ್ಪಸ್ವಲ್ಪ ಸಾಲ ಹೊಂದಿದ್ದ ರಾಜ್ಯಗಳು ಸಾಲದ ಬಿಕ್ಕಟ್ಟಿನ ಪರಿಸ್ಥಿತಿಗೆ ತಲುಪಿದವು. ಇದರಿಂದಾಗಿ ರಾಜ್ಯಗಳು ಸಾಲ ಮನ್ನಾ ಅಥವಾ ಹೆಚ್ಚುವರಿ ನೆರವು ಇತ್ಯಾದಿಗಳಿಗಾಗಿ ಕೇಂದ್ರವನ್ನು ಅವಲಂಬಿಸುವುದು ಹೆಚ್ಚಾಯಿತು.
ನಂತರ 1990ರ ದಶಕದ ನವ ಉದಾರೀಕರಣದ ಪ್ರಕಾರ ನೀವು ಹಣಕಾಸು ಕೊರತೆಯನ್ನು, ಸಾಲದ ಪ್ರಮಾಣವನ್ನು ಕಡಿಮೆ ಮಾಡಬೇಕಿತ್ತು. ಯಾಕೆ? ಉದಾರೀಕರಣವು ಒಂದು ರೀತಿಯಲ್ಲಿ ಹಣಕಾಸು ಸಾಂಪ್ರದಾಯಿಕತೆಗೆ ಕಾರಣವಾಯಿತು. ಇದಕ್ಕೆ ಜಾಗತಿಕ ಆಯಾಮವೂ ಇದೆ. ಇದರಿಂದ ಚಲನಶೀಲವಾದ ಬಂಡವಾಳವು ಹುಟ್ಟಿಕೊಂಡಿತು. ಈ ಬಂಡವಾಳವು ತ್ವರಿತ ಲಾಭಕ್ಕಾಗಿ ದೇಶದಿಂದ ದೇಶಕ್ಕೆ ಚಲಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಅವರು ಲಾಭವನ್ನು ಬಯಸುತ್ತಾರೆ ಮಾತ್ರವಲ್ಲ; ತಾವು ಪ್ರವೇಶಿಸುವ ದೇಶಗಳಲ್ಲಿ ಸ್ಥಿರತೆಯನ್ನು ಬಯಸುತ್ತಾರೆ. ಈ ಸ್ಥಿರತೆಯಲ್ಲಿ ಅವರು ನೋಡುವ ಒಂದು ಅಂಶವೆಂದರೆ, ಹಣಕಾಸು ಕೊರತೆ ಕಡಿಮೆಯಾಗಿರುವುದು. ಅಲ್ಲಿಗೆ ಅವರು ಬಂಡವಾಳವನ್ನು ಒಯ್ಯುತ್ತಾರೆ. ಹೀಗಾಗಿ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವನ್ನು ಸಂತುಷ್ಟಿಯಾಗಿಡಲು ಭಾರತ ಸರಕಾರಕ್ಕೂ ಹಣಕಾಸು ಕೊರತೆಯನ್ನು ಕಡಿಮೆ ಪ್ರಮಾಣದಲ್ಲಿ ಇಟ್ಟುಕೊಳ್ಳುವುದು ಅನಿವಾರ್ಯವಾಗುತ್ತದೆ.
ಭಾರತವು ಯಾವತ್ತೂ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿದೆ. ಹಾಗಾದರೆ ಆರೋಗ್ಯ, ಶಿಕ್ಷಣ ಮುಂತಾದ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಪಡೆಯುವುದಕ್ಕೆ ಇರುವ ಇನ್ನೊಂದು ದಾರಿ ಏನು? ಸಾಲ ಪಡೆಯುವುದು. ಕಡಿಮೆ ಮಟ್ಟದ ಹಣಕಾಸು ಕೊರತೆಯು ತಾತ್ವಿಕ ಮಹತ್ವ ಪಡೆದಿದ್ದು, ಅದು ಜಿಡಿಪಿಯ ಮೂರು ಶೇಕಡಾಕ್ಕಿಂತ ಕಡಿಮೆ ಇರಬೇಕಾಗುತ್ತದೆ. ಹಾಗಾಗಿ ಕೇಂದ್ರವು ಸಾಲ ಪಡೆಯುವುದನ್ನೂ ನಿಲ್ಲಿಸಬೇಕಾಯಿತು. ಸರಕಾರವು ತನ್ನ ಹಣಕಾಸು ಕೊರತೆಯನ್ನು ಕಡಿಮೆ ಮಟ್ಟದಲ್ಲಿ ಇಡಲು ಕಾನೂನು ಆಂಗೀಕರಿಸಿತು ಮತ್ತು ಕೇಂದ್ರದ ನೆರವು ಬೇಕಾದಲ್ಲಿ ರಾಜ್ಯಗಳೂ ಅಂತಹ ಕಾನೂನು ತರಬೇಕೆಂದು ಒತ್ತಡ ಹೇರಿತು. ಇದರ ಆರ್ಥವೆಂದರೆ, ಇನ್ನು ರಾಜ್ಯಗಳು ಕೂಡಾ ಸಾಲ ಪಡೆಯುವುದು ಸಾಧ್ಯವಿಲ್ಲ. ಜೊತೆಗೆ ಅವು ಈಗಾಗಲೇ ಸಾಲದ ಬಿಕ್ಕಟ್ಟಿನಲ್ಲಿವೆ ಮತ್ತು ಬಡ್ಡಿದರಗಳೂ ಹೆಚ್ಚಾಗಿವೆ. ಇದರಿಂದ ಜನತೆಯ ಸೇವೆಗಾಗಿ ಜನರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ರಾಜ್ಯ ಸರಕಾರಗಳ ಕೈಗಳನ್ನು ಕಟ್ಟಿಹಾಕಿದಂತಾಯಿತು. ಇದರಿಂದಾಗಿಯೇ ರಾಜ್ಯಗಳಿಗೆ ತಮ್ಮದೇ ಜನರಿಗೆ ಸೇವೆಗಳನ್ನು ನೀಡಲು ಸಾಧ್ಯವಿಲ್ಲದಂತಾಗಿದೆ. ಇದೊಂದು ಗಂಭೀರವಾದ ಸಮಸ್ಯೆ. ಇದಕ್ಕಾಗಿಯೇ, ಉದಾಹರಣೆಗೆ ಕೇರಳ ಸರಕಾರವು ಇದು ಸರಿಯೇ ಎಂದು ಪ್ರಶ್ನಿಸಿ ಸುಪ್ರೀಂಕೋರ್ಟಿನ ಮೊರೆಹೋಗಿದೆ. ಇದಲ್ಲದೇ ನೀವೂ ಕೂಡಾ ರಾಜ್ಯ ಸರಕಾರಗಳಿಗೆ ಇದನ್ನು ಹೇಳಬೇಕೆಂದು ಹಣಕಾಸು ಆಯೋಗಕ್ಕೆ ತಾಕೀತು ಮಾಡಿತು.
ಈಗ ನಾವು ಮೂರನೇ ಹಂತಕ್ಕೆ ಬರೋಣ. ಇದು 2014ರ ನಂತರ ಆರಂಭವಾಗಿದೆ. ಈ ಹಂತವು ಹೊಸ ಆರ್ಥಿಕ ಒಕ್ಕೂಟದ ಬಿಕ್ಕಟ್ಟನ್ನು ಉಂಟುಮಾಡಿತು. ಅದು ಆಗಲೇ ಇತ್ತು. ಆದರೆ ಅದು ಇನ್ನೂ ತೀರಾ ಹದಗೆಟ್ಟಿತು. ಆರಂಭದಲ್ಲಿ ಯೋಜನಾ ಆಯೋಗವನ್ನು ರದ್ದು ಮಾಡಲಾಯಿತು ಮತ್ತು ಅದರ ಜಾಗದಲ್ಲಿ ನೀತಿ ಆಯೋಗವನ್ನು ತರಲಾಯಿತು. ಇದರ ಪರಿಣಾಮ ಏನಾಯಿತು? ಹೌದು, ಯೋಜನಾ ಆಯೋಗದಲ್ಲಿ ಸಮಸ್ಯೆಯಿತ್ತು. ಆದರೆ, ಯಾವ ರಾಜ್ಯಕ್ಕೆ ಎಷ್ಟು ಯೋಜನಾ ವೆಚ್ಚ ನಿಗದಿ ಮಾಡಬೇಕು, ಹಣ ವಿನಿಯೋಗಿಸಬೇಕು ಎಂಬುದಕ್ಕೆ ಒಂದು ಕನಿಷ್ಟ ಸೂತ್ರ, ನಿಯಮವಾದರೂ ಇತ್ತು. ಗಾಡ್ಗೀಳ್ ಸೂತ್ರ, ನಂತರ ಮುಖರ್ಜಿ ಸೂತ್ರ ಇಂತವೆಲ್ಲಾ ಇದ್ದವು. ರಾಜ್ಯಗಳಿಗೆ ಯಾವುದಾದರೂ ದೂರುಗಳಿದ್ದರೆ, ಯೋಜನಾ ಆಯೋಗಕ್ಕೆ ಪ್ರಾತಿನಿಧ್ಯವನ್ನು ಕಳುಹಿಸಬಹುದಾಗಿತ್ತು ಮತ್ತು ಯೋಜನಾ ಆಯೋಗ ಕೂಡಾ ಪ್ರತಿ ವರ್ಷದ ಯೋಜನೆಯನ್ನು ರೂಪಿಸುವ ಮೊದಲು ಪ್ರತಿಯೊಂದೂ ರಾಜ್ಯದ ರಾಜಧಾನಿಗೆ ಭೇಟಿ ನೀಡಿ, ಅಲ್ಲಿನ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸುತ್ತಿತ್ತು. ಕೇಂದ್ರ ಮತ್ತು ರಾಜ್ಯಗಳ ನಡುವೆ ಏನೊಂದು ಸಂವಾದ ನಡೆಯುತ್ತಿತ್ತೊ ಅವೆಲ್ಲವನ್ನೂ ಯೋಜನಾ ಆಯೋಗದ ರದ್ದತಿಯೊಂದಿಗೆ ಮುಚ್ಚಲಾಯಿತು.
ಅದಲ್ಲದೇ, ಪ್ರಧಾನಮಂತ್ರಿ ನೇತೃತ್ವದಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ಒಂದು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಇತ್ತು. ಅದನ್ನೂ ರದ್ದು ಮಾಡಲಾಯಿತು. ನೀತಿ ಆಯೋಗವೆಂದರೆ ಏನು? ಅದು ಎನ್‌ಡಿಸಿಯ ಉಸ್ತುವಾರಿಯಲಿ ಕೆಲಸ ಮಾಡಬೇಕಿತ್ತು. ನೀತಿ ಆಯೋಗ ಎಂಬುದು ಯೋಜನಾ ಆಯೋಗಕ್ಕೆ ಹೋಲಿಸಿದಾಗ ಏನೇನೂ ಅಲ್ಲ. ಅದು ಕೇವಲ ಕೇಂದ್ರ ಸರಕಾರದ ಒಂದು ಇಲಾಖೆ ಆಗಿಬಿಟ್ಟಿದೆ. ಈ ನೀತಿ ಆಯೋಗವು ತನ್ನ ಸ್ವಂತ ಅನುದಾನಕ್ಕಾಗಿ ಕೇಂದ್ರ ಹಣಕಾಸು ಸಚಿವರ ಕೃಪೆಯಲ್ಲಿ ಇರಬೇಕಾಗಿದೆ. ಇದು ಪರಿಸ್ಥಿತಿ! ಇಲ್ಲಿ ಏನಾಯಿತು? ಹಣಕಾಸು ಆಯೋಗದ ಎಲ್ಲಾ ಅಧಿಕಾರಗಳನ್ನು ನೀತಿ ಆಯೋಗಕ್ಕಲ್ಲ; ಬದಲಾಗಿ ಹಣಕಾಸು ಸಚಿವಾಲಯಕ್ಕೆ ವರ್ಗಾಯಿಸಲಾಯಿತು.
ಹಣಕಾಸು ಮಂತ್ರಿಯಾಗಿ ಕುಳಿತಿರುವ ರಾಜಕೀಯ ಏಜೆಂಟ್ ಮತ್ತು ಅಲ್ಲಿ ಕುಳಿತಿರುವ ಬಾಬುಗಳು ಯಾವುದೇ ಸೂತ್ರ, ನಿಯಮ ಇಲ್ಲದೆಯೇ ಯಾವ ರಾಜ್ಯಕ್ಕೆ ಎಷ್ಟು ಹಣ ಸಿಗಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಪರಿಣಾಮ ಏನೆಂದರೆ, ನರೇಗಾ ಅಥವಾ ಕೇಂದ್ರ ಸರಕಾರದ ಪ್ರತಿಯೊಂದು ಯೋಜನೆ ಮತ್ತು ಕಾರ್ಯಕ್ರಮದಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸಿಗಬೇಕು ಎಂಬುದು ವಾಸ್ತವಿಕತೆಯನ್ನು ಆಧರಿಸದೇ ಹಣಕಾಸು ಸಚಿವಾಲಯದ ರಾಜಕೀಯ ನಿರ್ಧಾರವಾಗಿದೆ. ಇದುವೇ ಆರ್ಥಿಕ ಒಕ್ಕೂಟ ತತ್ವಕ್ಕೆ 2014ರ ನಂತರ ನೀಡಲಾದ ಮೊದಲ ದೊಡ್ಡ ಹೊಡೆತವಾಗಿದೆ.
ಎರಡನೆಯದು ಎಂದರೆ, ಹಣಕಾಸು ಆಯೋಗದಿಂದ ಹೊರತಾದ ಹಲವಾರು ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಿವೆ. ಹಿಂದೆ ಹೇಗಿತ್ತು ಎಂದರೆ, ಇಂತಹ ಕಾರ್ಯಕ್ರಮಗಳಿಗೆ ಕೇಂದ್ರ ಸರಕಾರವು ನೂರರಲ್ಲಿ ತೊಂಬತ್ತು ರೂ.ಗಳನ್ನು ವಿನಿಯೋಗಿಸಿದರೆ, ರಾಜ್ಯಗಳು ಕೇವಲ ಹತ್ತು ರೂ.ಗಳನ್ನು ವಿನಿಯೋಗಿಸುತ್ತಿದ್ದವು. ಇದು ಈ ಹೊಸ ಸರಕಾರ ಬಂದಮೇಲೆ 60:40 ಆಗಿದೆ. ಕೇಂದ್ರ 60 ಶೇಕಡಾ ಹಾಕಿದರೆ, ರಾಜ್ಯಗಳು 40 ಶೇಕಡಾ ಹಾಕಬೇಕು. ಇದು ಕಾಕತಾಳೀಯವಾಗಿ ವೈ.ವಿ.ರೆಡ್ಡಿ ನೇತೃತ್ವದ 14ನೇ ಹಣಕಾಸು ಆಯೋಗದ ವರದಿಯೊಂದಿಗೆ ತಾಳೆಯಾಗುತ್ತದೆ. ಅದು ಏನು ಹೇಳುತ್ತದೆ ಎಂದರೆ ರಾಜ್ಯಗಳಿಗೆ ಇನ್ನು ಮುಂದೆ 42 ಶೇಕಡಾ ಕೊಡಬೇಕು ಎಂದು. ಇದು ವೈ.ವಿ.ರೆಡ್ಡಿ ನೇತೃತ್ವದ 14ನೇ ಹಣಕಾಸು ಆಯೋಗವು ಮಾಡಿರುವ ಶಿಫಾರಸ್ಸು.
ಈಗ ಇದು ವಿಡಿಯೋದಲ್ಲಿ ದಾಖಲಾಗಿದೆ: ಪ್ರಧಾನಿ ನರೇಂದ್ರ ಮೋದಿ, ವೈ.ವಿ.ರೆಡ್ಡಿಯವರ ಸಂದರ್ಶನ ಕೋರಿ, ಇದನ್ನು ಇಳಿಸಿ, ಅಂದರೆ ರಾಜ್ಯ ಸರಕಾರಗಳ ಪಾಲನ್ನು ಇಳಿಸಿ 32 ಶೇಕಡಾದ ಆಸುಪಾಸು ಮಾಡಬೇಕೆಂದು ವಿನಂತಿ ಮಾಡಿದರು. ಆದರೆ, ಪ್ರಾಮಾಣಿಕತೆಗೆ ಹೆಸರಾಗಿರುವ ಮನುಷ್ಯನಾದ ರೆಡ್ಡಿಯವರು ಹಾಗೆ ಮಾಡಲು ನಿರಾಕರಿಸಿದರು. ಇದನ್ನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಬಿ.ವಿ.ಆರ್. ಸುಬ್ರಹ್ಮಣ್ಯಂ ವಿಡಿಯೋ ಒಂದರಲ್ಲಿ ಬಹಿರಂಗಗೊಳಿಸಿದ್ದಾರೆ. ಅದೀಗ ವರದಿಗಾರರ ಸಂಗ್ರಹದಲ್ಲಿದೆ. ಇದು ಏನೆಂದರೆ, ಹಿಂದೇ ಯಾರೊಬ್ಬರೂ ಪ್ರಧಾನಮಂತ್ರಿಯಾಗಿ ಹಣಕಾಸು ಆಯೋಗದ ಅಧ್ಯಕ್ಷರೊಬ್ಬರ ಜೊತೆಯಲ್ಲಿ ಈ ರೀತಿಯಾಗಿ ಮಾತನಾಡಿಲ್ಲ. ಆದರೆ, ನೀವೇನು ಮುಖ್ಯ ವಾಹಿನಿಯ ಮಾಧ್ಯಮಗಳು ಎಂದು ಕರೆಯುತ್ತೀರಾ, ಅವೆಲ್ಲವೂ ಈ ವಿಷಯವನ್ನು ಮುಚ್ಚಿಹಾಕಿವೆ.
ರಾಜ್ಯಗಳಿಗೆ ಈ 42 ಶೇಕಡಾ ಪಾಲು ಎಂಬುದು ಕೇಂದ್ರಕ್ಕೆ ದೊಡ್ಡ ಸಮಸ್ಯೆಯಾಯಿತು. ಪ್ರಧಾನ ಮಂತ್ರಿ ಆ ಯೋಜನಾ, ಪ್ರಧಾನ ಮಂತ್ರಿ ಈ ಯೋಜನಾ ಎಂದು ಕೇಳುತ್ತಿದ್ದೇವಲ್ಲ, ಅದಕ್ಕೆಲ್ಲಾ ಹಣಕಾಸು ಒದಗಿಸುವುದು ಹೇಗೆ? ಇದಕ್ಕೆ ಕೇಂದ್ರ ಸರಕಾರವು ಒಂದು ಹಾದಿಯನ್ನು ಕಂಡುಕೊಂಡಿತು. ಅಂದಹಾಗೆ ಇದು ಸಂಪೂರ್ಣವಾಗಿ ಅಸಾಂವಿಧಾನಿಕ ಏನಲ್ಲ. ಆದರೆ, ಇದು ಆರ್ಥಿಕ ಒಕ್ಕೂಟ ತತ್ವದ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತದೆ. ಅದೆಂದರೆ ಸೆಸ್ ಅಥವಾ ಸರ್‌ಚಾರ್ಜ್‌ಗಳು, ಅಂದರೆ ಮೇಲ್ತೆರಿಗೆ. ಆರೋಗ್ಯ ಸೆಸ್, ಶಿಕ್ಷಣ ಸೆಸ್, ರಸ್ತೆ ಸೆಸ್, ಮೂಲಸೌಕರ್ಯ ಸೆಸ್, ಕೃಷಿ ಕಲ್ಯಾಣ ಸೆಸ್, ಸ್ವಚ್ಛ ಭಾರತ್ ಸೆಸ್ ಹೀಗೆ ನೀವು ನೀಡುವ ಪ್ರತಿಯೊಂದು ಸೆಸ್… ಕೆಲವು ಸತ್ತಿವೆ, ಕೆಲವು ಹೊಸದಾಗಿ ಹುಟ್ಟಿಕೊಳ್ಳುತ್ತಿವೆ… ಈ ಸೆಸ್‌ಗಳನ್ನು ಯಾಕೆ ಹಾಕಲಾಗುತ್ತಿದೆ ಎಂದು ನಿಮಗೆ ಗೊತ್ತಿದೆಯೇ? ಯಾಕೆಂದರೆ ಈ ಸೆಸ್‌ಗಳು ಸಂಪೂರ್ಣವಾಗಿ ಕೇಂದ್ರ ಸರಕಾರಕ್ಕೆ ಸೇರುತ್ತವೆಯೇ ಹೊರತು, ರಾಜ್ಯ ಸರಕಾರಗಳಿಗೆ ಅದರ ಪಾಲು ಕೊಡಬೇಕಾಗಿಲ್ಲ. ಇದು ಸಾಂವಿಧಾನಿಕವಾಗಿ ನಡೆಯುವಂತದ್ದು; 100 ಶೇಕಡಾ ಇಟ್ಟುಕೊಳ್ಳಬಹುದು. ಅವರು ಎಲ್ಲಾ ಸೆಸ್‌ಗಳನ್ನು ಹೆಚ್ಚು ಮಾಡುತ್ತಿದ್ದಾರೆ. 2014ರಿಂದ ಹಿಡಿದು, ನರೇಂದ್ರ ಮೋದಿ ಸರಕಾರ ರಾಜ್ಯಗಳಿಗೆ ಯಾವುದೇ ಪಾಲುಕೊಡದೇ ಕಳೆದ ಹತ್ತು ವರ್ಷಗಳಲ್ಲಿ ವಸೂಲಿ ಮಾಡಿದ ಸೆಸ್ ಮೊತ್ತ ಎಷ್ಟು ಗೊತ್ತೆ? 36 ಲಕ್ಷ ಕೋಟಿ. ಇವುಗಳಲ್ಲಿ ಒಂದು ಪೈಸೆಯನ್ನೂ ರಾಜ್ಯ ಸರಕಾರಗಳೊಂದಿಗೆ ಹಂಚಿಕೊಳ್ಳಲಾಗಿಲ್ಲ.
ಸೆಸ್ ಏರಿಸದೆ, ನಿಮಗೆ ಆ ಪ್ರಧಾನಿ ಯೋಜನೆ, ಈ ಪ್ರಧಾನಿ ಯೋಜನೆಗಳಿಗೆ ಹಣ ಒದಗಿಸಲು ಯಾವುದೇ ದಾರಿಯಿಲ್ಲ.
ನೀವು ಶ್ರೀಮಂತರ ಕಾರ್ಪೊರೆಟ್ ತೆರಿಗೆಯನ್ನು 30 ಶೇಕಡಾದಿಂದ 22 ಶೇಕಡಾಕ್ಕೆ ಇಳಿಸಿದ್ದೀರಿ. ಇದು ಸೆಸ್ ಮೂಲಕ ಹಣಕಾಸು ಜವಾಬ್ದಾರಿಯನ್ನು ಕೇಂದ್ರದಿಂದ ಕಳಚಿಕೊಂಡು ರಾಜ್ಯಗಳ ತಲೆಗೆ ಕಟ್ಟುವ ಹೊಸ ವಿಧಾನವಾಗಿದೆ.
ಕೆಲವು ಪ್ರಧಾನ ಮಂತ್ರಿ ಯೋಜನೆಗಳನ್ನು ನೋಡಿ: ಉದಾಹರಣೆಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ನೋಡಿ. ಆರರಿಂದ ಎಂಟು ರಾಜ್ಯಗಳು ಇದು ನಮ್ಮ ರಾಜ್ಯಗಳಿಗೆ ಸೂಕ್ತವಲ್ಲ ಎಂದು ಅದರಿಂದ ಹಿಂದೆ ಸರಿದಿವೆ. ಅದರ ಆರ್ಥ ಕೇಂದ್ರೀಕೃತವಾಗಿ, ಪ್ರಾದೇಶಿಕ ಪರಿಗಣನೆಯಿಲ್ಲದೆ ಇಂತಹ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕೇರಳದಿಂದ ವಾಸ್ತವವಾಗಿ ಕಾಪಿ ಮಾಡಲಾದ ಆಯುಷ್ಮಾನ್ ಭಾರತ್ ಯೋಜನೆಯನ್ನು ನೋಡೋಣ. ಇದರ ಅಡಿಯಲ್ಲಿ ರಾಜ್ಯಗಳು ನಿರ್ಮಾಣ ಮಾಡುವ ಪ್ರತಿಯೊಂದು ಕಟ್ಟಡಕ್ಕೂ ಆಯುಷ್ಮಾನ್ ’ಮಂದಿರ’ ಎಂದು ನಾಮಕರಣ ಮಾಡಬೇಕೆಂದು ತಾಕೀತು ಮಾಡಲಾಯಿತು. ಸರಿ, ಅವುಗಳನ್ನು ’ಮಸ್ಜಿದ್’ ಎಂದು ಕರೆಯುವಂತಿಲ್ಲ. ಹಾಗಾದರೆ, ಮಂದಿರವೆಂದು ಏಕೆ ಕರೆಯಬೇಕು? ಹಲವು ರಾಜ್ಯಗಳು ಇದನ್ನು ತಿರಸ್ಕರಿಸಿದವು. ನಾವು ಹಿಂದಿನಿಂದಲೇ ಈ ಕಟ್ಟಡಗಳನ್ನು ಹೊಂದಿದ್ದೇವೆ, ನಮ್ಮದೇ ಹೆಸರುಗಳನ್ನು ಇಟ್ಟಿದ್ದೇವೆ. ನಿಮ್ಮ ಹೆಸರುಗಳನ್ನು ಯಾಕೆ ಇಡಬೇಕು? ಆಗ ಕೇಂದ್ರ ಸರಕಾರವು ಎರಡು ಅಥವಾ ಮೂರು ಷರತ್ತುಗಳನ್ನು ವಿಧಿಸಲಾಯಿತು. ಮೊದನೆಯದು ಅದನ್ನು ನಿರ್ದಿಷ್ಟ ಗಾತ್ರದಲ್ಲಿ ನಿರ್ದಿಷ್ಟ ಅಕ್ಷರಗಳಲ್ಲಿ, ನಿರ್ದಿಷ್ಟ ಶೈಲಿಯಲ್ಲಿ ಬರೆಯಬೇಕು; ಎರಡನೆಯದು ’ಏಕರೂಪತೆ’ ಇರುವಂತೆ ಒಂದೇ ಬಣ್ಣ ಬಳಸಬೇಕು (ಬಣ್ಣ ಯಾವುದೆಂದು ನನಗೆ ಸರಿಯಾಗಿ ನೆನಪಿಲ್ಲ!) ಮತ್ತು ಪ್ರಧಾನಿ ನರೇಂದ್ರ ಮೋದಿಯ ಸಿದ್ಧ ಚಿತ್ರ ಬಳಸಬೇಕು.
ಇನ್ನೊಂದು ಉದಾಹರಣೆ ಕೊಡುತ್ತೇನೆ. ಕೇರಳದಲ್ಲಿ ಲೈಫ್ ಮಿಷನ್ ಎಂಬುದೊಂದಿದೆ. ಅದು 2026ರ ಒಳಗೆ ಕೇರಳದಲ್ಲಿ ವಸತಿ ರಹಿತರು ಇರಬಾರದೆಂಬ ಗುರಿಯನ್ನು ಹೊಂದಿದೆ. ಇದಕ್ಕಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಪಾಲು ಪಡೆದುಕೊಳ್ಳುವುದು ರಾಜ್ಯಗಳ ಹಕ್ಕು. ಗ್ರಾಮೀಣ ಪ್ರದೇಶದಲ್ಲಿ ಅದು ಒಂದು ಮನೆಗೆ 75,000 ರೂ.ಗಳನ್ನು ನೀಡುತ್ತದೆ. ಕೇರಳದಲ್ಲಿ ಇಷ್ಟು ಹಣಕ್ಕೆ ಒಂದು ಶೌಚಾಲಯವನ್ನೂ ಕಟ್ಟಿಸಲಾಗುವುದಿಲ್ಲ. ಈ ಕೇಂದ್ರ ’ನಿಧಿಗೆ ನಾವು 3,75,000 ರೂ. ಹಣವನ್ನು ನೀಡುತ್ತೇವೆ ಎಂದು ಕೇರಳ ಸರಕಾರವು ಹೇಳಿತು. ಈ 75,000 ಮತ್ತು 3,75,000 ಹಣವನ್ನು ಸೇರಿಸಿ ಬಡವರಿಗೆ ಮನೆಗಳನ್ನು ಕಟ್ಟಲಾಯಿತು. ಹೀಗಿದ್ದೂ ಬಾಸ್ ಹೇಳುತ್ತಾರೆ: ’ಮೇರಾ ಫೋಟೋ ಲಗಾ!’ ನನ್ನ ಫೋಟೋ ಹಾಕೆಂದು! ನಿಮಗೆ 75,000 ಕೊಟ್ಟು ನಿನ್ನ ಫೋಟೋ ಹಾಕುವಂತೆ ಹೇಳುವ ಉದ್ಧಟತನ, ಅಹಂಕಾರ ಇದೆ! ಇದೇ ರೀತಿ ನಗರ ವಸತಿ ಯೋಜನೆಯಲ್ಲೂ. ಇವರ ಫೊಟೋ ಯಾಕೆ ಹಾಕಬೇಕು? ಹಲವು ರಾಜ್ಯಗಳು ಆತನ ಯೋಜನೆಯನ್ನೇ ತಿರಸ್ಕರಿಸಿ, ಸ್ವಂತ ಯೋಜನೆಯನ್ನು ರೂಪಿಸಿದವು. ಕರ್ನಾಟಕದಲ್ಲೂ ಇಂತಹ ಸಮಸ್ಯೆಗಳಿವೆ. ನನಗಿಂತ ಹೆಚ್ಚಾಗಿ ನಿಮಗೆ ಚೆನ್ನಾಗಿ ಗೊತ್ತಿದೆ.
ಇವೆಲ್ಲವೂ, ಒಕ್ಕೂಟ ತತ್ವದ ಮೇಲೆ ನಡೆಯುತ್ತಿರುವ ದಾಳಿ. ಒಬ್ಬ ವ್ಯಕ್ತಿಯ ಪ್ರಭಾವಳಿ ಅರಳಿಸಲು ಮತ್ತು ಸರ್ವಾಧಿಕಾರಿ ಪ್ರಭುತ್ವ ಸ್ಥಾಪಿಸಲು; ಜನರ ಸೇವೆ ಮಾಡಬೇಕಿದ್ದ ಒಂದು ಸರಕಾರವು ಮಾಡಬೇಕಿದ್ದ ಕೆಲಸಗಳನ್ನು ಮಾಡದೇ, ಒಕ್ಕೂಟ ತತ್ವದ ಮೇಲೆ ದಾಳಿ ಮಾಡಲು ಮತ್ತು ಆ ಮೂಲಕ ಸಂವಿಧಾನದ ಮೇಲೆಯೇ ದಾಳಿ ಮಾಡಲು ನಿಂತಿದೆ! ಇದೊಂದು ರಾಜಕೀಯ ಸಂಘರ್ಷವಾಗಿದೆ. ಕರ್ನಾಟಕವೂ ಇತರ ಕೆಲವು ರಾಜ್ಯಗಳಂತೆ ಬಾಧಿತವಾಗಿದೆ. ಯಾಕೆಂದರೆ, 14ನೇ ಹಣಕಾಸು ಆಯೋಗವು ವಾಸ್ತವದಲ್ಲಿ ಒಂದು ನಿರ್ದಿಷ್ಟ ಮೊತ್ತವನ್ನು ಶಿಫಾರಸು ಮಾಡಿತ್ತು ಮತ್ತು ಕೇಂದ್ರ ಸರಕಾರವು ಅದನ್ನು ತಿರಸ್ಕರಿಸಿತ್ತು ಎಂಬುದು ನನಗೆ ಗೊತ್ತಿದೆ. ಇದರಿಂದಾಗಿ ಕರ್ನಾಟಕವು ಹಲವು ಸಾವಿರ ಕೋಟಿ ರೂ.ಗಳನ್ನು ಕಳೆದುಕೊಂಡಿತು. ಈ ಸಮಸ್ಯೆಯನ್ನು ಹಲವಾರು ರಾಜ್ಯಗಳು ಅನುಭವಿಸುತ್ತಿವೆ. ಸೆಪ್ಟಂಬರ್ 12 ರಂದು ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಸಭೆ ಸೇರಿ, ಈ ಸಮಸ್ಯೆಯ ಕುರಿತು ಚರ್ಚಿಸಲಿವೆ. (ಇದನ್ನು ಅನುವಾದಿಸುವ ಹೊತ್ತಿಗೆ ಈ ರಾಜ್ಯಗಳು 50 ಶೇಕಡಾ ಪಾಲಿಗೆ ಬೇಡಿಕೆ ಸಲ್ಲಿಸಲು ನಿರ್ಧರಿಸಿವೆ.) ಆದುದರಿಂದ ಮುಖ್ಯವಾಗಿ, ಆರ್ಥಿಕ ಒಕ್ಕೂಟ ತತ್ವವನ್ನು ರಕ್ಷಿಸುವುದು- ಒಟ್ಟಾರೆಯಾಗಿ ಭಾರತದ ಒಕ್ಕೂಟ ತತ್ವವನ್ನು ರಕ್ಷಿಸಲು ಮತ್ತು ಭಾರತೀಯ ಪ್ರಜಾಪ್ರಭುತ್ವದ ಆತ್ಮವನ್ನು ಮತ್ತು ಭಾರತದ ವೈವಿಧ್ಯತೆಯನ್ನು ರಕ್ಷಿಸಲು ಸಾಮೂಹಿಕ ಹೋರಾಟಗಳು ಮುಖ್ಯವಾದದ್ದು. ಇದರಲ್ಲಿ ಗೌರಿ, ಕಲಬುರ್ಗಿ, ಪನ್ಸಾರೆ ಮತ್ತು ದಾಬೋಲ್ಕರ್ ಅವರ ತ್ಯಾಗಗಳು ನಮಗೆ ಸದಾ ಸ್ಫೂರ್ತಿಯಾಗಿರಲಿ ಎಂದು ಹಾರೈಸುತ್ತೇನೆ. ಧನ್ಯವಾದಗಳು.
ಪ್ರೊ. ರಾಮ್ ಕುಮಾರ್
ಕನ್ನಡಕ್ಕೆ: ನಿಖಿಲ್ ಕೋಲ್ಪೆ


