ಕೇರಳದ ಕಣ್ಣೂರಿನ ಪಯ್ಯಂಬಲಂ ಬೀಚ್‌ಗೆ ಪ್ರವಾಸಕ್ಕೆ ತೆರಳಿದ ಕರ್ನಾಟಕದ ಮೂವರು ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಭಾನುವಾರ (ನ.2) ನಡೆದಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರದ ಅಫ್ನಾನ್ ಅಹ್ಮದ್ (26), ಬೀದರ್‌ನ ಮೊಹಮ್ಮದ್ ರೆಹಾನುದ್ದೀನ್ (26) ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಮೊಹಮ್ಮದ್ ಅಫ್ರೋಝ್ (25) ಮೃತರು.
ಬೆಂಗಳೂರಿನ ಅಲ್ ಅಮೀನ್ ಫಾರ್ಮಸಿ ಕಾಲೇಜಿನ 8 ಮಂದಿ ಡಿ ಫಾರ್ಮಾ ವಿದ್ಯಾರ್ಥಿಗಳು ಕೇರಳ ಪ್ರವಾಸದ ಭಾಗವಾಗಿ ಪಯ್ಯಂಬಲಂ ಬೀಚ್‌ಗೆ ತೆರಳಿದ್ದರು. ಈ ವೇಳೆ ಮೂವರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
3 medical students from #Karnataka,Afnan,Rehanuddin & Afroz drowned while bathing at #Payyambalam beach in #Kannur. Part of an 11 member group,8 had gone to beach when Afroz was swept away by strong currents. Afnan & Rehanuddin attempted to rescue him but were also pulled under. pic.twitter.com/A5kS3omqON
— Yasir Mushtaq (@path2shah) November 2, 2025
ವಾರಾಂತ್ಯದ ಹಿನ್ನೆಲೆ ಮೂರು ದಿನಗಳ ಪ್ರವಾಸ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳು, ಶುಕ್ರವಾರ ಬೆಂಗಳೂರಿನಿಂದ ಹೊರಟು ವಯನಾಡ್‌ಗೆ ಹೋಗಿದ್ದರು. ಅಲ್ಲಿಂದ ಶನಿವಾರ ರಾತ್ರಿ ಕಣ್ಣೂರು ತಲುಪಿದ್ದರು. ಭಾನುವಾರ 11 ಗಂಟೆಯ ಹೊತ್ತಿಗೆ ಪಯ್ಯಂಬಲಂ ಬೀಚ್‌ಗೆ ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿದೆ ಎಂದು ವರದಿಗಳು ಹೇಳಿವೆ.
ಪೊಲೀಸ್ ಮೂಲಗಳು ಹೇಳುವಂತೆ ಮೂವರು ಮೊದಲು ಸಮುದ್ರಕ್ಕೆ ಇಳಿದಿದ್ದರು. ಉಳಿದವರು ಅವರ ಹಿಂದೆ ಇದ್ದರು. ಮೃತರಲ್ಲಿ ಒಬ್ಬನಿಗೆ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಲು ಪ್ರಾರಂಭಿಸಿದ್ದ. ಉಳಿದ ಇಬ್ಬರು ಆತನ ಸಹಾಯಕ್ಕೆ ಧಾವಿಸಿದ್ದರು. ಈ ವೇಳೆ ಮೂವರನ್ನೂ ಅಲೆಗಳು ಎಳೆದುಕೊಂಡಿವೆ. ಉಳಿದ ಐವರು ಕೂಗಿಕೊಂಡಾಗ ಸ್ಥಳದಲ್ಲಿದ್ದ ಮೀನುಗಾರರು ಮತ್ತು ಕಡಲತೀರದ ಜೀವರಕ್ಷಕರು ರಕ್ಷಣೆಗೆ ಮುಂದಾದರು.
ಜೀವ ರಕ್ಷಕರು ಅಫ್ನಾನ್ ಮತ್ತು ರೆಹಾನುದ್ದೀನ್ ಅವರನ್ನು ಸಮುದ್ರದಿಂದ ಹೊರತೆಗೆದು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಕಣ್ಣೂರು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೀಚ್‌ಗೆ ಧಾವಿಸಿ ಎರಡು ಗಂಟೆಗಳ ಹುಡುಕಾಟ ನಡೆಸಿದ ಅಫ್ರೋಝ್ ಅವರ ಮೃತದೇಹ ಸಿಕ್ಕಿದೆ.


