“ದಯವಿಟ್ಟು ನಮ್ಮ ಮಕ್ಕಳನ್ನು ವಾಪಸ್ ತಂದುಕೊಡಿ” ಎಂದು ತೆಲಂಗಾಣ ಅಪಘಾತದ ಸ್ಥಳದಲ್ಲಿ ನೆರೆದಿದ್ದ ಸಾವಿರಾರು ಜನರ ಮುಂದೆ ಮೂವರು ಹೆಣ್ಣು ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಹೃದಯ ವಿದ್ರಾವಕವಾಗಿತ್ತು ಎಂದು ವರದಿಗಳು ಹೇಳಿವೆ.
ಇಂದು (ನ.3, ಸೋಮವಾರ) ಬೆಳಿಗ್ಗೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಮಂಡಲದ ಮಿರ್ಜಗೂಡ ಬಳಿ ಹೈದರಾಬಾದ್-ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಲ್ಲಿಕಲ್ಲುಗಳನ್ನು ತುಂಬಿದ್ದ ಲಾರಿ ಮತ್ತು ಸಾರಿಗೆ ಸಂಸ್ಥೆಯ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಈ ದುರಂತದಲ್ಲಿ ಸಾವನ್ನಪ್ಪಿದ 20 ಜನರಲ್ಲಿ ತನುಷಾ, ಸಾಯಿಪ್ರಿಯಾ ಮತ್ತು ನಂದಿನಿ ಎಂಬ ಮೂವರು ಸಹೋದರಿಯೂ ಸೇರಿದ್ದಾರೆ.
CHEVELLA BUS ACCIDENT: UPDATES
Heartbreaking!!!
Three sisters died in the Chevella bus accident 💔
Nandini (Degree First Year), Sai Priya (Degree Third Year), Tanush (MBA) visited hometown Tandur to attend a wedding.
This morning, while returning from Tandur to Hyderabad,… pic.twitter.com/TPc3BojvpY
— Revathi (@revathitweets) November 3, 2025
ಇವರ ತಾಯಿ ಅಂಬಿಕಾರ ಘಟನಾ ಸ್ಥಳದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು. “ಓ ದೇವರೆ..ನನ್ನ ಮಕ್ಕಳನ್ನು ವಾಪಸ್ ತಂದು ಕೊಡುವವರು ಯಾರು? ಅವರೇನು ತಪ್ಪು ಮಾಡಿದ್ದರು?” ಎಂಬ ತಾಯಿಯ ಆಕ್ರಂದನ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು ಎಂದು ವರದಿಗಳು ತಿಳಿಸಿವೆ.
ಮೂವರು ಸಹೋದರಿಯರು ಶುಕ್ರವಾರ (ಅ.31) ಹೈದರಾಬಾದ್‌ಗೆ ಹಿಂತಿರುಗಬೇಕಿತ್ತು, ಆದರೆ, ತಾಯಿ ಅಂಬಿಕಾ ವಾರಾಂತ್ಯದಲ್ಲಿ ಅವರನ್ನು ಮನೆಯಲ್ಲೇ ಇರಲು ಕೇಳಿಕೊಂಡಿದ್ದರು. ತನ್ನ ಹೆಣ್ಣುಮಕ್ಕಳೊಂದಿಗೆ ಕೆಲವು ದಿನಗಳನ್ನು ಕಳೆಯಬೇಕೆಂಬ ಆಸೆ ಆ ತಾಯಿಯದ್ದಾಗಿತ್ತು.
ಇಂದು ಬೆಳಿಗ್ಗೆ ಮಕ್ಕಳನ್ನು ಹೈದರಾಬಾದ್ ರೈಲು ಹತ್ತಿಸಲು ತಂದೆ ಯೆಲ್ಲಯ್ಯ ಸ್ಥಳೀಯ ರೈಲು ನಿಲ್ದಾಣಕ್ಕೆ ಕರೆದೊಯ್ದಿದ್ದರು. ಆದರೆ, ಅವರಿಗೆ ರೈಲು ತಪ್ಪಿತ್ತು. ಹಾಗಾಗಿ, ಮೂವರು ಸಹೋದರಿಯರು ಹೈದರಾಬಾದ್ ಬಸ್ ಹತ್ತಿದ್ದರು.
ಮಕ್ಕಳನ್ನು ಬಸ್ ಹತ್ತಿಸಿ ಯಲ್ಲಯ್ಯ ಮನೆಗೆ ಹಿಂದಿರುಗಿದ ಕೆಲವೇ ಹೊತ್ತಿನಲ್ಲಿ ಮೂವರ ಸಾವಿನ ಸುದ್ದಿ ಬರ ಸಿಡಿಲು ಬಡಿದಂತೆ ಬಂದಿದೆ. ಜೀವಂತ ಇದ್ದಾಗ ಒಬ್ಬರಿಗೊಬ್ಬರು ಬಹಳ ಅನ್ಯೋನ್ಯತೆಯಿಂದ ಇದ್ದ ಮೂವರು ಸಹೋದರಿಯರು ಸಾವಲ್ಲೂ ಒಂದಾದರು ಎಂದು ವರದಿಗಳು ಹೇಳಿವೆ.
ಮೃತ ಮೂವರು ಸಹೋದರಿಯರ ಊರು ರಂಗಾರೆಡ್ಡಿ ಜಿಲ್ಲೆಯ ಗಾಂಧಿನಗರದ ವಡ್ಡೇರಗಲ್ಲಿ. ಇವರು ಹೈದರಾಬಾದ್‌ನಲ್ಲಿ ಓದುತ್ತಿದ್ದರು. ತನುಷಾ ಎಂಬಿಎ ವ್ಯಾಸಂಗ ಮಾಡುತ್ತಿದ್ದರೆ, ಆಕೆಯ ಸಹೋದರಿ ಸಾಯಿ ಪ್ರಿಯಾ ಪದವಿ ಕೋರ್ಸ್‌ನ ಅಂತಿಮ ವರ್ಷದಲ್ಲಿದ್ದರು. ಇನ್ನೊಬ್ಬರು ನಂದಿನಿ ಪದವಿ ಕೋರ್ಸ್‌ನ ಮೊದಲ ವರ್ಷದಲ್ಲಿದ್ದರು. ಇವರೆಲ್ಲರ ಹಿರಿಯ ಸಹೋದರಿ ಅನುಷಾ ಅವರ ಮದುವೆ ಕೇವಲ 20 ದಿನಗಳ ಹಿಂದೆ, ಅಂದರೆ ಅಕ್ಟೋಬರ್ 17 ರಂದು ನಡೆದಿತ್ತು. ಆ ಮದುವೆ ನಿಮಿತ್ತ ಮೂವರು ಊರಿಗೆ ಹೋಗಿದ್ದರು.
ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ಇನೊಬ್ಬರು ಹೆಣ್ಣು ಮಗಳು ಅಖಿಲಾ ರೆಡ್ಡಿಯ ತಾಯಿ ಕೂಡ ಘಟನಾ ಸ್ಥಳದಲ್ಲಿ ಆಕ್ರಂದನ ವ್ಯಕ್ತಪಡಿಸುತ್ತಿದ್ದರು. “ರಸ್ತೆ ಪ್ರಯಾಣದ ಬಗ್ಗೆ ನನಗೆ ಸದಾ ಭಯ ಇತ್ತು. ಇವತ್ತು ನನ್ನ ಮಗಳನ್ನು ಕಳೆದುಕೊಳ್ಳುವ ಮೂಲಕ ನನ್ನ ಆತಂಕ ನಿಜವಾಗಿದೆ” ಎಂದು ಅಖಿಲಾ ಅವರ ತಾಯಿ ಸುದ್ದಿಗಾರರಿಗೆ ನೋವಿನಲ್ಲಿ ಹೇಳಿದ್ದಾರೆ.
ಅಖಿಲಾ ರೆಡ್ಡಿ ಯಲಾಲ್ ಮಂಡಲದ ಲಕ್ಷ್ಮೀನಾರಾಯಣ ಪುರ ಗ್ರಾಮದವರು. ಹೈದರಾಬಾದ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು.
ದುರಂತ ಘಟನೆಯಲ್ಲಿ ತಾಯಿ ಮತ್ತು ಆಕೆಯ ಮೂರು ತಿಂಗಳ ಕಂದಮ್ಮ ಸಾವನ್ನಪ್ಪಿರುವ ಮತ್ತೊಂದು ಹೃದಯ ವಿದ್ರಾವಕ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಜಲ್ಲಿಕಲ್ಲು ತುಂಬಿಕೊಂಡು ಹೈದರಾಬಾದ್ ಕಡೆಯಿಂದ ಬಿಜಾಪುರ ಕಡೆಗೆ ಹೋಗುತ್ತಿದ್ದ ಲಾರಿಯೊಂದು ತಾಂಡೂರ್‌ನಿಂದ ಹೈದರಾಬಾದ್ ಕಡೆಗೆ ತೆರಳುತ್ತಿದ್ದ ತೆಲಂಗಾಣ ಸಾರಿಗೆ ಸಂಸ್ಥೆಯ (ಟಿಜಿಎಸ್‌ಆರ್‌ಟಿಸಿ) ಬಸ್‌ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಚೆವೆಲ್ಲಾ ಮಂಡಲದ ಮಿರ್ಜಗೂಡ ಬಳಿ ಹೈದರಾಬಾದ್-ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ವಾರದ ಹಿಂದೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಕರ್ನೂಲ್ ಜಿಲ್ಲೆಯಲ್ಲಿ ಬೆಂಕಿಗಾಹುತಿಯಾಗಿ 21 ಜನರು ಸಜೀವ ದಹನವಾಗಿದ್ದರು. ಹಲವರು ಗಾಯಗೊಂಡಿದ್ದರು. ಆ ಘಟನೆ ಕಣ್ಣಿಂದ ಮಾಸುವ ಮುನ್ನವೇ ತೆಲುಗು ನಾಡಿನಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿದೆ.


