ರಾಜ್ಯಪಾಲರ ಭಾಷಣ ಎಂದರೆ ನಿರ್ದಿಷ್ಟ ವಿಷಯದ ಮೇಲೆ ಮಾತನಾಡಬೇಕು ಎಂದೇನಿಲ್ಲ. ರಾಜ್ಯಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಮಾತನಾಡಬಹುದು. ರಾಜಕೀಯ ಕೂಡ ಮಾತಾಡಬಹುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸದನದಲ್ಲಿ ಮಾತು ಆರಂಭಿಸಿದರು.
ನಾಲ್ಕನೇ ದಿನ ಸದನ ಆರಂಭದಲ್ಲಿ ಮಾತನಾಡಿದ ಅವರು ಇತ್ತೀಚಿನ ವರ್ಷಗಳಲ್ಲಿ ಶ್ರದ್ಧಾ ರೀತಿ ಆಗಿಬಿಟ್ಟಿದೆ. ಪಾಲಿಸಿಗಳ ಬಗ್ಗೆ ಚರ್ಚೆ ಕಡಿಮೆಯಾಗಿದೆ. ಈ ರಾಜ್ಯಪಾಲರ ಭಾಷಣದಲ್ಲಿ ಅಂತಹ ಮಹತ್ವದ ಅಂಶಗಳಿಲ್ಲ ಎಂದರು.
ಚುನಾವಣೆ ನಡೆದಾಗ ಈ ರಾಜ್ಯದ ಜನ ಯಾರಿಗೂ ಬಹುಮತ ಕೊಡಲಿಲ್ಲ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರಿಂದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶಕೊಟ್ಟರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾದರು. ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ರಾಜೀನಾಮೆ ಕೊಟ್ಟರು. ಆನಂತರ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚಿಸಿ ಎಚ್.ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆದರು. ಆನಂತರ ಬಿಜೆಪಿ ಪಕ್ಷವು ಕಾಂಗ್ರೆಸ್‌ನ 14 ಮತ್ತು ಜೆಡಿಎಸ್‌ನ 03 ಶಾಸಕರನ್ನು ರಾಜೀನಾಮೆ ಕೊಡಿಸಿ ಸರ್ಕಾರ ಬೀಳಿಸಿ ಈ ಸರ್ಕಾರ ತಂದರು ಎಂದರು.
ಆಪರೇಷನ್ ಕಮಲದ ಮೂಲಕ ಅನೈತಿಕವಾಗಿ ಹುಟ್ಟಿದ ಕೂಸು ಈ ಸರ್ಕಾರ ಎಂದು ಹೇಳುತ್ತೇನೆ. ಇದು ಜನಾದೇಶದ ಮೂಲಕ ರಚನೆಯಾದುದ್ದು ಅಲ್ಲ. 17ಜನ ಶಾಸಕರು ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದರಿಂದ ಸರ್ಕಾರ ರಚನೆಯಾಗಿದೆಯೇ ಹೊರತು, ಜನಾರ್ಶಿವಾದದಿಂದ ಅಲ್ಲ. ಹಾಗಾಗಿ ಆಪರೇಷನ್ ಕಮಲದಿಂದ ಬಂದಿದ್ದೇವೆ ಎಂದು ಹೇಳಬೇಕು ಎಂದರು.
ರಾಜ್ಯಪಾಲರು ಜಂಟಿ ಸದನ ಉಲ್ಲೇಖಿಸಿ ಭಾಷಣ ಮಾಡಿದ್ದಾರೆ. ಈ ಸರ್ಕಾರದ ಕಾರ್ಯಕ್ರಮ, ಮುನ್ನೋಟ, ನೀತಿಯ ಕುರಿತು ಏನೂ ಇಲ್ಲ ಅದರಲ್ಲಿ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಬಿಟ್ಟರೆ ಮತ್ತೇನಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಏಳು ತಿಂಗಳಾಗುತ್ತಾ ಬಂದಿದೆ. ಇಷ್ಟರಲ್ಲಿ ಹೆಸರಿಸಬಹುದಾದ ಯಾವುದೇ ಕಾರ್ಯಕ್ರಮಗಳಿಲ್ಲ ಎಂದರು.
2 ಲಕ್ಷದವರೆಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಮತ್ತು 1 ಲಕ್ಷದವರೆಗಿನ ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿಯವರು. ಉಳಿದೆಲ್ಲ ಕಾರ್ಯಕ್ರಮಗಳು ನಮ್ಮ ಸರ್ಕಾರ 2013-18ರವರೆಗೆ ನಾವು ಮಾಡಿದ್ದು. ಕಾಡು ಬೆಳವಣಿಗೆಯಲ್ಲಿ ಕರ್ನಾಟಕ ನಂಬರ್ 1 ಆಗಲು ಕಾಡು ಬೆಳೆಸಿದ್ದು ನಾವು. ಹೈನುಗಾರಿಕೆಯಲ್ಲಿ ಗುಜರಾತ್ ಬಿಟ್ಟರೆ ಎರಡನೇ ಸ್ಥಾನದಲ್ಲಿ ನಾವಿದ್ದೇವೆ. ದಿನಕ್ಕೆ 80 ಲಕ್ಷ ಹಾಲು ಉತ್ಪಾದನೆಯಾಗುತ್ತಿದೆ. ಇದಕ್ಕೆ ಕಾರಣ ಲೀಟರ್ 5 ರೂ ಪ್ರೋತ್ಸಾಹ ಧನ ಕೊಡಲು ಆರಂಭಿಸಿದೆವು. ಅಂದಾಜು 4 ಕೋಟಿ ರೂ ದಿನಕ್ಕೆ ಕೊಡಲು ಶುರು ಮಾಡಿದ್ದೇ ನಾವು ಎಂದರು.
ಸಿದ್ದರಾಮಯ್ಯ ಭಾಷಣ ಆರಂಭಕ್ಕೂ ಮೊದಲು ಸದನದ ಅವಧಿ ವಿಸ್ತರಿಸಲು ಸದಸ್ಯರು ಮನವಿ ಮಾಡಿದರು. ಸದನದಲ್ಲಿ ಜಟಾಪಟಿ ನಡೆಯಿತು. ಯತ್ನಾಳ್ ಮಾತನಾಡಲು ಅವಕಾಶ ಕೋರಿದರು.
ಸಿದ್ದರಾಮಯ್ಯನವರು ಮಾತನಾಡಿ ಯತ್ನಾಳ್ ನೀವು ಸೀನಿಯರ್ ಲೀಡರ್ ನೀವು ಹೀಗೆ ಹೇಳಿದರೆ ಹೇಗೆ ಎಂದರು. ಆಗ ನಮಗೆ ಏನು ಕೊಡುತ್ತಿಲ್ಲ ಎಂದು ಯತ್ನಾಳ್ ಹೇಳಿದರು.
ಮಾಧುಸ್ವಾಮಿಯವರು ಮಧ್ಯಪ್ರವೇಶಿಸಿ ಆಡಳಿತ ಪಕ್ಷ ನಾವು ಉತ್ತರ ಕೊಡಲು ಇದ್ದೇವೆ. ಮಾತನಾಡಲು ಅಲ್ಲ ಸುಮ್ಮನಿರಿ ಎಂದು ಯತ್ನಾಳ್‌ಗೆ ಹೇಳಿದರು.


