ರಾಷ್ಟ್ರವ್ಯಾಪಿ ಅನ್‌ಲಾಕ್ ಭಾಗವಾಗಿ ಜೂನ್ 11 ರಂದು ದೇವಾಲಯಗಳನ್ನು ಮತ್ತೆ ತೆರೆಯಲಾಯಿತು. ಅದರಂತೆ ಆಂಧ್ರಪ್ರದೇಶದ ತಿರುಪತಿ ದೇವಾಲಯವನ್ನು ತೆರೆಯಲಾಯಿತು. ಭಕ್ತಾದಿಗಳು ನುಗ್ಗಿಬಂದರು. ಜುಲೈ ತಿಂಗಳೊಂದರಲ್ಲಿಯೇ 2.38 ಲಕ್ಷ ಭಕ್ತಾದಿಗಳು ದೇವಾಲಯಕ್ಕೆ ಬಂದಿದ್ದಾರೆ. ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ತಿರುಪತಿ ದೇವಾಲಯವೀಗ ಕೊರೊನಾ ಹಾಟ್‌ಸ್ಪಾಟ್ ಕೇಂದ್ರವಾಗಿ ಮಾರ್ಪಟ್ಟಿದೆ.
ಈ ಎರಡು ತಿಂಗಳಿನಲ್ಲಿ ದೇವಸ್ಥಾನದ ಅರ್ಚಕರು ಸೇರಿದಂತೆ 743 ಜನಕ್ಕೆ ಕೊರೊನಾ ಸೋಂಕು ತಗುಲಿದೆ. ಮೂರು ಜನ ಸಾವನಪ್ಪಿದ್ದಾರೆ. ಇನ್ನು ದೇವಾಲಯಕ್ಕೆ ಭೇಟಿ ನೀಡಿದ ಎಷ್ಟು ಭಕ್ತರಿಗೆ ಕೊರೊನಾ ಸೋಂಕು ಹರಡಿದೆ ಎಂಬುದರ ಕುರಿತು ಮಾಹಿತಿ ಲಭ್ಯವಿಲ್ಲ.
ಆಶ್ಚರ್ಯವೆಂದರೆ ಇಷ್ಟೆಲ್ಲಾ ಅನಾಹುತದ ನಂತರವೂ ದೇವಾಲಯವನ್ನು ಸೀಲ್‌ಡೌನ್ ಮಾಡಿಲ್ಲ. ಜುಲೈ 17 ರಂದು ಮಾಜಿ ಮುಖ್ಯ ಅರ್ಚಕ ಕೊರೊನಾದಿಂದ ಮೃತಪಟ್ಟ ನಂತರ ಹಲವಾರು ಜನ ದೇವಾಲಯವನ್ನು ಕೆಲ ಸಮಯ ಮುಚ್ಚಬೇಕೆಂದು ಒತ್ತಾಯಿಸಿದ್ದರು. ಕೇವಲ ಹಣ ಬರುತ್ತದೆಯೆಂದು ಸಾವಿರಾರು ಜನರನ್ನು ಬಲಿಕೊಡಲು ಸಾಧ್ಯವಿಲ್ಲ ಎಂದು ಆಗ್ರಹಿಸಿದ್ದರು. ಅದೆಲ್ಲದರ ಹೊರತಾಗಿಯೂ ಇಂದಿಗೂ ದೇವಾಲಯಕ್ಕೆ ಇನ್ನೂ ಭಕ್ತಾದಿಗಳು ಬರುತ್ತಿದ್ದಾರೆ.. ಪೂಜೆ ನಡೆಯುತ್ತಿದೆ ಮತ್ತು ಕೊರೊನಾ ಹರಡುತ್ತಲೇ ಇದೆ. ಆಂಧ್ರಪ್ರದೇಶ ರಾಜ್ಯವು ದೇಶದ ಅತಿಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಮೂರನೇ ಸ್ಥಾನಕ್ಕೆ ಏರಿದೆ.
ಸಾಂಕ್ರಾಮಿಕದ ಆರಂಭದ ದಿನಗಳಲ್ಲಿ ಕೋವಿಡ್ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದ ದೆಹಲಿಯ ತಬ್ಲಿಘಿ ಜಮಾತ್‌ಗೆ ತಿರುಪತಿಯನ್ನು ಹೋಲಿಕೆ ಮಾಡದಿರಲು ಸಾಧ್ಯವಿಲ್ಲ. ಮಾರ್ಚ್ ಕೊನೆಯಲ್ಲಿ ಬಹುಪಾಲು ಮಾಧ್ಯಮಗಳು ತಬ್ಲಿಘಿ ಜಮಾತ್ ವಿರುದ್ಧ ಅತ್ಯಂತ ಕೆಟ್ಟ ಅಭಿಯಾನ ನಡೆಸಿದ್ದವು. ಜಮಾತ್ ಉದ್ದೇಶಪೂರ್ವಕವಾಗಿ ರೋಗವನ್ನು ಹರಡುತ್ತಿದೆ ಎಂದು ಆರೋಪಿಸಿದ್ದರು. ಆಗಿನ್ನೂ ವೈರಸ್ ಅಪಾಯ ಅತಿಯಾಗಿರಲಿಲ್ಲ ಮಾತ್ರವಲ್ಲ ತಬ್ಲಿಘಿ ಜಮಾತ್ ಸಭೆ ಸೇರುವ ಕೆಲವೇ ದಿನಗಳ ಮುಂಚೆ ದೇಶದ ಅತ್ಯುನ್ನತ ಪ್ರಜಾಪ್ರಭುತ್ವ ಸಂಸ್ಥೆ ಎಂದು ಕರೆಸಿಕೊಳ್ಳುವ ‘ಸಂಸತ್’ ಅಧಿವೇಶನ ನಡೆಸುತ್ತಿತ್ತು. ಜಮಾತ್ ಸಾಂಕ್ರಾಮಿಕ ಕಾಲದಲ್ಲಿ ಸಭೆ ನಡೆಸಿದ್ದು ತಪ್ಪೇ ಇದ್ದರೂ ಸಹ ಸರ್ಕಾರವು ಪ್ರತಿ ದಿನ ಜಮಾತ್‌ನಿಂದ ಹರಡಿದ ವೈರಸ್ ಪ್ರಕರಣಗಳನ್ನು ಬಿಡುಗಡೆ ಮಾಡುತ್ತಿತ್ತು. ಇದು ಜಮಾತ್ ಪ್ರಭಾವನ್ನು ತಿರುಚಲು ಸಹಕಾರಿಯಾಯಿತು. ಆಗ ಜಮಾತ್ ಸಭೆಯಲ್ಲಿ ಭಾಗವಹಿಸಿದವರೆಲ್ಲಾ ಪರೀಕ್ಷೆಗೆ ಒಳಗಾದರೆ, ಇತರ ಭಾರತದಲ್ಲಿ ಕೊರೊನಾ ಪರೀಕ್ಷೆಯ ದರ ತೀರಾ ಕೆಳಮಟ್ಟದಲ್ಲಿತ್ತು ಎನ್ನುವುದನ್ನು ನಾವು ಮರೆಯಬಾರದು. ಹಾಗಾಗಿ ತಬ್ಲಿಘಿಯ ಸಂಖ್ಯೆಗಳು ಅತಿ ಹೆಚ್ಚು ಎಂದು ಬಿಂಬಿತವಾದವು.
ಅಲ್ಲಿಂದ ದೆಹಲಿಯನ್ನೇ ಹಾಟ್‌ಸ್ಪಾಟ್ ಎನ್ನಲಾಯಿತು. ಜಮಾತ್ ಕೇಂದ್ರ ಕಚೇರಿಯನ್ನು ಸೀಲ್‌ಡೌನ್ ಮಾಡಲಾಯಿತು. ಜಮಾತ್ ಸದಸ್ಯರನ್ನು ಹಿಡಿಯಲು ಯೋಜನೆ ಸಿದ್ಧವಾಯಿತು. ಹಲವಾರು ಜಮಾತ್ ಸದಸ್ಯರನ್ನು ಜೈಲಿಗೆ ಕಳಿಸಲಾಯಿತು.
ಸೇಫ್ ಆಗುತ್ತಿದ್ದ ಭಾರತವನ್ನು ತಬ್ಲಿಘಿ ಡೇಂಜರ್ ಝೋನ್ಗೆ ತಳ್ಳಿದ್ದು ಹೇಗೆ?#NewDelhi #TablighiJamaat #Covid19 https://t.co/3jk46oTQSu
— Suvarna News 24×7 (@suvarnanewstv) April 12, 2020
Aerial view of #TablighiJamaat Markaz in #Nizamuddin in New Delhi. This is the new hotbed of #coronavirus spreaders in India. This place is singlehandedly derailing India’s efforts to fight the COVID-19 pic.twitter.com/Dr75S77KR0
— Sudhir Chaudhary (@sudhirchaudhary) April 1, 2020
ಆದರೆ ಈಗ ಈ ಯಾವ ಮಾನದಂಡಗಳನ್ನು ತಿರುಪತಿಗೆ ಅಳವಡಿಸಲಾಗುತ್ತಿಲ್ಲ. ದೇವಾಲಯವನ್ನು ಸೀಲ್‌ಡೌನ್ ಮಾಡಿಲ್ಲ. ದೇವಾಲಯಕ್ಕೆ ಭೇಟಿ ನೀಡಿದವರನ್ನು ಪತ್ತೆ ಹಚ್ಚಲಾಗುತ್ತಿಲ್ಲ! ಯಾರಿಗೂ ದೇವಾಲಯ ಇನ್ನು ತೆರೆದಿರುವುದರ ಕುರಿತು ಕೋಪ, ಆಕ್ರೋಶಗಳಿಲ್ಲ.
ತಬ್ಲಿಘಿ ಮತ್ತು ತಿರುಪತಿ ನಡುವೆ ಇರುವ ವ್ಯತ್ಯಾಸವು ಸಾಂಕ್ರಾಮಿಕ ರೋಗವನ್ನು ಕೋಮುವಾದೀಕರಿಸಿರುವ ಅಹಿತಕರ ಸತ್ಯವನ್ನು ಸೂಚಿಸುತ್ತದೆ: ಕೋವಿಡ್ -19 ಅನ್ನು ಭಾರತದಲ್ಲಿ ಬಹುಸಂಖ್ಯಾತ ರಾಜಕೀಯಕ್ಕೆ ಬಳಸಲಾಗಿದೆ.
ಇದೊಂದೆ ಉದಾಹರಣ ಮಾತ್ರವಲ್ಲ. ನರೇಂದ್ರ ಮೋದಿಯವರು ಮಾರ್ಚ್ 25ರಿಂದ ದೇಶಾದ್ಯಂತ ಲಾಕ್‌ಡೌನ್ ಹೇರಿ, ಧಾರ್ಮಿಕ ಕ್ಷೇತ್ರಗಳಿಗೆ ನಿಷೇಧ ಹೇರಿದರೂ ಸಹ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರು ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅಯೋಧ್ಯೆಯಲ್ಲಿ ಉದ್ದೇಶಿತ ರಾಮಮಂದಿರ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಕೊರೊನಾ ಆರಂಭದ ಸಮಯದಲ್ಲಿ ಜನರಿಗೆ ವಿಪರೀತ ಭಯ, ಭೀತಿ ಇತ್ತು. ಆಗ ಸಾಂಕ್ರಾಮಿಕವನ್ನು ಬಳಸಿಕೊಂಡು ಭಾರತದ ಮುಸ್ಲಿಂ ಅಲ್ಪಸಂಖ್ಯಾತರರ ಬಗ್ಗೆ ಆಕ್ರಮಣ ಮಾಡಲಾಯಿತು. ಇದು ಅನೈತಿಕವಾದುದು. ಕೋವಿಡ್ 19 ಅನ್ನು ಕೋಮುಸಾಧನವನ್ನಾಗಿ ಬಳಸಿಕೊಂಡಿದ್ದು ಸಾಂಕ್ರಾಮಿಕದ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಿತು ಎನ್ನಬಹುದು. ಅಧಿಕಾರಿಗಳು ಉತ್ತಮ ನಂಬಿಕೆಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಯಾರಾದರೂ ತಿಳಿದರೆ ಅವರು ನೀತಿ ನಿಯಮಗಳನ್ನು ಪಾಲಿಸುವುದನ್ನು ನಿಲ್ಲಿಸುತ್ತಾರೆ ಅಲ್ಲವೇ?
ಕಳೆದ ಐದು ದಿನಗಳಲ್ಲಿ ಭಾರತವು ಪ್ರಪಂಚದ ಇತರ ದೇಶಗಳಿಗಿಂತ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳನ್ನು ದಾಖಲಿಸಿದೆ. ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ದಿನನಿತ್ಯದ ಪ್ರಕರಣಗಳು ಕುಸಿಯುತ್ತಿದ್ದರೆ ಭಾರತದಲ್ಲಿ ಮಾತ್ರ ನಿರಂತರವಾಗಿ ಏರುತ್ತಲೇ ಇದೆ.
ಕೋವಿಡ್ ಸಮಯವನ್ನು ಬಹುಸಂಖ್ಯಾತವಾದಕ್ಕೆ ಬಳಸಿಕೊಳ್ಳಲಾಗಿದೆ ಎಂದು ಭಾರತ ಅರಿತುಕೊಳ್ಳಬೇಕು. ನಮ್ಮ ಗುರಿಯು ಸಾಂಕ್ರಾಮಿಕವನ್ನು ನಿರ್ಮೂಲನೆ ಮಾಡಲು ಅಗತ್ಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಮೇಲೆ ಕೇಂದ್ರೀಕರಿಸಬೇಕಿದೆ.
- ಶೋಯಬ್ ದನಿಯಾಲ್ (ಸ್ಕ್ರೋಲ್.ಇನ್)
ಇದನ್ನೂ ಓದಿ: ಬಿಎಸ್‌ಎನ್‌ಎಲ್‌ನಲ್ಲಿ ದೇಶದ್ರೋಹಿಗಳಿದ್ದಾರೆ: ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ತೀವ್ರ ವಿರೋಧ


