ಶಾಲಾ ಶಿಕ್ಷಣಕ್ಕಾಗಿ ರೂಪಿಸಿರುವ ಸಮಗ್ರ ಶಿಕ್ಷಣ (ಎಸ್‌ಎಸ್) ಯೋಜನೆಗೆ ನೀಡಬೇಕಾದ ತನ್ನ ಪಾಲಿನ ಅನುದಾನವನ್ನು ತಡೆಹಿಡಿದಿರುವ ಕೇಂದ್ರ ಸರ್ಕಾರ ನಿರ್ಧಾರದ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ತ್ರಿಭಾಷಾ ಸೂತ್ರ ಸೇರಿದಂತೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ನಿಬಂಧನೆಗಳು ಒಳಗೊಂಡಿರುವ ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (ಪಿಎಂಶ್ರೀ) ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರಲು ತಮಿಳುನಾಡು ನಿರಾಕರಿಸಿದ ಹಿನ್ನೆಲೆ ಕೇಂದ್ರ ಸರ್ಕಾರ ಅನುದಾನ ತಡೆ ಹಿಡಿದಿದೆ ಎಂದು ವರದಿಯಾಗಿದೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಮಿಳುನಾಡು ಸರ್ಕಾರ, ಮೇ 1,2025 ರಿಂದ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳುವವರಗೆ 2,151.59 ಕೋಟಿ ರೂಪಾಯಿ ಮೂಲ ಮೊತ್ತದ ಮೇಲೆ ವಾರ್ಷಿಕ ಶೇ. 6 ದರದಲ್ಲಿ ಭವಿಷ್ಯದ ಬಡ್ಡಿಯೊಂದಿಗೆ 2,291.30 ಕೋಟಿ ರೂಪಾಯಿಯನ್ನು ನ್ಯಾಯಾಲಯ ನಿಗದಿಪಡಿಸುವ ಸಮಯದೊಳಗೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದೆ.
ಶನಿವಾರ ಚೆನ್ನೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ಅನುದಾನ ತಡೆ ಹಿಡಿದ ಬಗ್ಗೆ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಘೋಷಿಸಿದ್ದರು. ಕಳೆದ ಏಪ್ರಿಲ್‌ನಲ್ಲಿ ರಾಜ್ಯಪಾಲ ಆರ್.ಎನ್. ರವಿ ವಿರುದ್ಧದ ಪ್ರಕರಣದಲ್ಲಿ ಬಂದಂತೆ ಅನುಕೂಲಕರ ತೀರ್ಪು ಬರುವ ಭರವಸೆ ವ್ಯಕ್ತಪಡಿಸಿದ್ದರು.
ಕೇಂದ್ರ ಸರ್ಕಾರವು ಶಿಕ್ಷಣ ಯೋಜನೆಗಳಿಗೆ ಬಿಡುಗಡೆ ಮಾಡಬೇಕಾದ ಅನುದಾನಗಳನ್ನು ಪ್ರತ್ಯೇಕ ಕೇಂದ್ರ ಪ್ರಾಯೋಜಿತ ಯೋಜನೆಯಾದ ಪಿಎಂಶ್ರಿ ಜೊತೆ ಲಿಂಕ್ ಮಾಡಲು ಉದ್ದೇಶಿಸಿದೆ. ಈ ಮೂಲಕ ತ್ರಿಭಾಷಾ ಸೂತ್ರ ಸೇರಿದಂತೆ ಎನ್‌ಇಪಿಯ ನಿಬಂಧನೆಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದೆ ಎಂದು ವರದಿಯಾಗಿದೆ.
ಸಮಗ್ರ ಶಿಕ್ಷಣ ಯೋಜನೆಗಳ ಅನುದಾನ ನೀಡದೆ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದೆ. ಇದು ಪಟ್ಟಿ IIIರ ನಮೂದು 25 ಅಡಿಯಲ್ಲಿ ಕಾನೂನು ರೂಪಿಸಲು ರಾಜ್ಯ ಸರ್ಕಾರ ಹೊಂದಿರುವ ಅಧಿಕಾರವನ್ನು ಕಸಿದು ಕಸಿದುಕೊಳ್ಳುವ ಪ್ರಯತ್ನವಾಗಿದೆ. ಕೇಂದ್ರ ಸರ್ಕಾರ ಎನ್‌ಇಪಿಯನ್ನು ಹೇರುವ ಮೂಲಕ ಪ್ರಸ್ತುತ ಇರುವ ಶಿಕ್ಷಣ ನೀತಿಯನ್ನು ಕೈಬಿಡಲು ಒತ್ತಾಯಿಸುತ್ತಿದೆ ದೂರಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಔಪಚಾರಿಕ ಒಪ್ಪಂದ ಮಾಡಿಕೊಳ್ಳುವವರೆಗೆ ಎನ್‌ಇಪಿ- 2020 ಮತ್ತು ಪಿಎಂಶ್ರಿ ಯೋಜನೆಯು ತಮಿಳುನಾಡಿಗೆ ಅನ್ವಯಿಸುವುದಿಲ್ಲ ಎಂದು ಘೋಷಿಸಲು ನ್ಯಾಯಾಲಯವನ್ನು ಕೋರಿದೆ.
ಸಮಗ್ರ ಶಿಕ್ಷಣ ಯೋಜನೆಯ ಅನುದಾನವನ್ನು ಪಿಎಂಶ್ರಿ ಯೋಜನೆಯ ಜೊತೆಗೆ ಲಿಂಕ್ ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ‘ಅಸಂವಿಧಾನಿಕ, ಕಾನೂನುಬಾಹಿರ, ಅನಿಯಂತ್ರಿತ ಮತ್ತು ಅಸಮಂಜಸ’ ಎಂದು ಘೋಷಿಸಲು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಫೆಬ್ರವರಿ 23 ಮತ್ತು ಮಾರ್ಚ್ 7, 2024 ರಂದು ಕೇಂದ್ರ ಶಿಕ್ಷಣ ಸಚಿವಾಲಯ ಬರೆದ ಪತ್ರಗಳು ‘ಕಾನೂನುಬಾಹಿರ, ಅನೂರ್ಜಿತ’ ಮತ್ತು ರಾಜ್ಯಕ್ಕೆ ಅನ್ವಯ ಆಗುವುದಿಲ್ಲ’ ಎಂದು ಘೋಷಿಸಲು ಸಹ ಕೋರಿದೆ.
ಈಗಾಗಲೇ ಕೋರಿರುವ ಹಣವನ್ನು ಬಡ್ಡಿಯೊಂದಿಗೆ ಬಿಡುಗಡೆ ಮಾಡುವುದರ ಜೊತೆಗೆ, ಪ್ರತಿ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನ ಮತ್ತು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಸಮಯದ ಮಿತಿಯೊಳಗೆ 2009ರ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನಕ್ಕೆ ಅಗತ್ಯವಾದ ಅನುದಾನವನ್ನು ತಮಿಳುನಾಡಿಗೆ ಬಿಡುಗಡೆ ಮಾಡುವ ಮೂಲಕ ತನ್ನ ಶಾಸನಬದ್ಧ ಬಾಧ್ಯತೆಗಳನ್ನು ಅನುಸರಿಸಲು ಮತ್ತು ನಿರ್ವಹಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದೆ.
ಸುಳ್ಳು ಮಾಹಿತಿ ನೀಡಿದ ಆರೋಪ: ಅರ್ನಬ್ ಗೋಸ್ವಾಮಿ, ಅಮಿತ್ ಮಾಳವೀಯ ವಿರುದ್ಧ ದೂರು ನೀಡಿದ ಕಾಂಗ್ರೆಸ್, ಎಫ್‌ಐಆರ್ ದಾಖಲು