ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ದ ರೈತರ ಹೋರಾಟ 10 ತಿಂಗಳು ಪೂರೈಸಿದೆ. ಆದರೆ, ಸರ್ಕಾರ ಮಾತ್ರ ರೈತರ ಬೇಡಿಕೆಗಳಿಗೆ ಸ್ಪಂದಿಸದೇ, ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಹೋರಾಟ ತೀವ್ರಗೊಳಿಸಲು ಸೆ.27ರಂದು ಭಾರತ್ ಬಂದ್‌ಗೆ ಕರೆ ಕೊಟ್ಟಿದ್ದು ಕರ್ನಾಟಕದಲ್ಲಿಯೂ ಬಂದ್ ನಡೆಸಲು ರೈತರಿಗೆ ವಿವಿಧ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಿವೆ.
1. ಬಂದ್ ಬೆಂಬಲಿಸಿದ ಸಂಘಟನೆಗಳು
ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ರಾಜ್ಯದಲ್ಲಿ ಬಂದ್ ನಡೆಸಲಾಗುತ್ತಿದೆ. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ, ದಸಸಂ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಕಾರ್ಮಿಕ ಸಂಘಟನೆಗಳ ಯೂನಿಯನ್, ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಜನಶಕ್ತಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ, ದಲಿತ ಹಕ್ಕುಗಳ ಸಮಿತಿ, ಕಾಂಗ್ರೆಸ್, ಎಸ್.ಡಿ.ಪಿ.ಐ, CITU, RYFI, ಭೂಮಿ ಮತ್ತು ವಸತಿ ಹೋರಾಟ ಸಮಿತಿ, ದಲಿತ ಹಿತರಕ್ಷಣಾ ಒಕ್ಕೂಟ, ಬಿಎಸ್ಪಿ, ಸಿಪಿಐಎಂಎಲ್(ರೆಡ್ ಸ್ಟಾರ್), ಆಮ್ ಆದ್ಮಿ ಪಕ್ಷ, ಅಖಿಲ ಭಾರತ ವಕೀಲರ ಒಕ್ಕೂಟ, ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮತ್ತು ಎಪಿಎಂಸಿ ವರ್ತಕರ ಸಂಘಗಳು ಭಾರತ್ ಬಂದ್‌ಗೆ ಬೆಂಬಲ ನೀಡಿವೆ.
2. ನೈತಿಕ ಬೆಂಬಲ ಘೋಷಿಸಿದ ಸಂಘಟನೆಗಳು
ಅಲ್ಲದೆ, ಹೋಟೆಲ್ ಮಾಲೀಕರ ಸಂಘ, ಲಾರಿ ಮಾಲೀಕರ ಸಂಘ, ಟ್ಯಾಕ್ಸಿ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘ, ವಕೀಲರ ಸಂಘಗಳು ಭಾರತ್ ಬಂದ್‌ಗೆ ನೈತಿಕ ಬೆಂಬಲ ನೀಡಿವೆ.
3. ಸಾರಿಗೆ ಸೌಲಭ್ಯಗಳು ಕಾರ್ಯಾಚರಣೆ ಮಾಡಲಿವೆ
ಆದರೆ, ಕೊರೊನಾ, ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವುದರಿಂದ ಹೋಟೆಲ್‌ಗಳನ್ನು ಬಂದ್ ಮಾಡುವುದಿಲ್ಲ. ಲಾರಿಗಳು, ಆಟೋ, ಟ್ಯಾಕ್ಸಿ, ಓಲಾ, ಉಬರ್‌ಗಳು ರಸ್ತೆಗಿಳಿಯಲಿವೆ. ನೈತಿಕವಾಗಿ ಬಂದ್‌ಗೆ ಬೆಂಬಲವಿದೆ ಎಂದು ಸಂಘಟನೆಗಳು ತಿಳಿಸಿವೆ.
4. ಬಸ್ ಸಂಚಾರ
ಇನ್ನು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ, ರೈಲುಗಳ ಸಂಚಾರ ಇರಲಿದೆ. ಸರ್ಕಾರಿ ಸಂಸ್ಥೆಗಳು, ಬ್ಯಾಂಕುಗಳು, ಶಾಲಾ-ಕಾಲೇಜುಗಳು ತೆರೆದಿರುತ್ತವೆ.
5. ಹೆದ್ದಾರಿ ತಡೆ
ರಾಜ್ಯಾದ್ಯಂತ ಹೆದ್ದಾರಿ ತಡೆಗೆ ಸಂಘಟನೆಗಳು ನಿರ್ಧರಿಸಿವೆ. ಬೆಂಗಳೂರಿನಲ್ಲಿಯೂ ವಿವಿಧ ಹೆದ್ದಾರಿಗಳು ತಡೆಯಲು ಸಂಘಟನೆಗಳು ಮುಂದಾಗಿವೆ. ಆದರೆ, ಬೆಂಗಳೂರಿನಲ್ಲಿ ರಸ್ತೆ ತಡೆಗೆ ಅವಕಾಶ ಕೊಡುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹೇಳಿದ್ದಾರೆ.
6. ಮೌರ್ಯ ಸರ್ಕಲ್ ಬಳಿ ಧರಣಿ
ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ದಿನವೀಡಿ ಧರಣಿ ನಡೆಯಲಿದೆ.
7. ಟೌನ್ ಹಾಲ್‌ನಿಂದ ಮೆರವಣಿಗೆ
ಸೋಮವಾರ ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್‌ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ದಿಂದ ರೈತರನ್ನು ಬೆಂಬಲಿಸಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ.
8. ಬದಲಿ ಮಾರ್ಗ ಸೂಚನೆ
ರೈತರ ಮೆರವಣಿಗೆ ಹಿನ್ನೆಲೆಯಲ್ಲಿ ಮೆಜೆಸ್ಟಿಕ್, ಫ್ರೀಡಂ ಪಾರ್ಕ್, ಆನಂದ್ ರಾವ್ ಸರ್ಕಲ್ ಸುತ್ತಮುತ್ತ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಸಂಚಾರಕ್ಕೆ ಬದಲಿ ಮಾರ್ಗಗಳನ್ನು ಸೂಚಿಸಲಾಗಿದೆ.
9. ಕಪ್ಪು ಪಟ್ಟಿ ಧರಿಸಿ ಬೆಂಬಲ
ಬಹಳಷ್ಟು ಸಂಘಟನೆಗಳು, ಯುವಕರು, ವಿದ್ಯಾರ್ಥಿಗಳು ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗುವ ಮೂಲಕ ಬಂದ್ ಬೆಂಬಲಿಸಲು ನಿರ್ಧರಿಸಿದ್ದಾರೆ.
10. ಸಾಹಿತಿ, ಹೋರಾಟಗಾರರ ಬೆಂಬಲ
‘ಇದು ಕೇವಲ ರೈತರ ಬೇಡಿಕೆಯಲ್ಲ. ಬದಲಿಗೆ ದೇಶದ ಎಲ್ಲ ಜನರ ಅನ್ನದ ಬಟ್ಟಲಿಗೆ ಕನ್ನ ಹಾಕುವ ಪ್ರಯತ್ನದ ವಿರುದ್ಧದ ಹೋರಾಟ’ ಎಂದಿರುವ ಸಾಹಿತಿಗಳು ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಎಂ.ಎಸ್. ಸತ್ಯು, ಡಾ.ಕೆ.ಮರುಳ ಸಿದ್ದಪ್ಪ, ವಿಜಯಾ, ಡಾ.ಎಸ್.ಜಿ.ಸಿದ್ದರಾಮಯ್ಯ, ಡಾ.ಪುರುಷೋತ್ತಮ ಬಿಳಿಮಲೆ, ಡಾ.ರಾಜೇಂದ್ರ ಚೆನ್ನಿ, ಡಾ.ಗಣೇಶ್ ದೇವಿ, ದೇವನೂರ ಮಹಾದೇವ, ಬೊಳುವಾರು ಮಹ್ಮದ್ ಕುಂಞಿ, ಅಗ್ರಹಾರ ಕೃಷ್ಣಮೂರ್ತಿ ಹಾಗೂ ಇತರರು ಬೆಂಬಲ ವ್ಯಕ್ತಪಡಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ರೈತಾಂದೋಲನ ಮುಂದೇನು? – ನೂರ್ ಶ್ರೀಧರ್


