ಎಐಸಿಸಿ (ಕಾಂಗ್ರೆಸ್) ಸಂಶೋಧನಾ ವಿಭಾಗದ ನಕಲಿ ಲೆಟರ್‌ಹೆಡ್ ಬಳಸಿ, “ಸುಳ್ಳು ಮತ್ತು ಕಲ್ಪಿತ” ವಿಷಯವನ್ನು ಮುದ್ರಿಸಿ ಅಪಪ್ರಚಾರ ಮಾಡಿದ ಆರೋಪದ ಮೇಲೆ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ರಮಣ್ ಸಿಂಗ್ ಮತ್ತು ಪಕ್ಷದ ವಕ್ತಾರ ಸಂಬಿತ್ ಪಾತ್ರಾ ವಿರುದ್ಧ ಛತ್ತೀಸಘಡದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಂಬಿತ್ ಪಾತ್ರಾ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಕಾಂಗ್ರೆಸ್ ದೆಹಲಿ ಪೊಲೀಸರಿಗೆ ದೂರು ನೀಡಿದೆ.
‘ಹೆಚ್ಚಿನ ತನಿಖೆಗಾಗಿ ಅವರಿಬ್ಬರಿಗೂ ಸಮನ್ಸ್ ಕಳಿಸಲಾಗಿದೆ’ ಎಂದು ರಾಯ್‌ಪುರ ಸಿವಿಲ್ ಲೈನ್ಸ್ ಪೊಲೀಸ್ ಎಸ್‌ಎಚ್‌ಒ ಆರ್.ಕೆ ಮಿಶ್ರಾ ಭಾನುವಾರ ತಿಳಿಸಿದ್ದಾರೆ. “ವೈಯಕ್ತಿಕವಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಇಲ್ಲಿಗೆ ಹಾಜರಾಗುವಂತೆ ಸಂಬಿತ್ ಪಾತ್ರಾರನ್ನು ಕೇಳಿದ್ದೇವೆ. ಛತ್ತೀಸಘಡ್ ಪ್ರದೇಶ ಕಾಂಗ್ರೆಸ್ ಎನ್‌ಎಸ್‌ಯುಐ ಅಧ್ಯಕ್ಷರು ದೂರು ದಾಖಲಿಸಿದ್ದಾರೆ” ಎಂದು ಮಿಶ್ರಾ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರೆದಿ ಮಾಡಿದೆ.
ಮಂಗಳವಾರ ಬಿಜೆಪಿಯು ಟೂಲ್‌ಕಿಟ್ ಆರೋಪದ ಮೇಲೆ ಕಾಂಗ್ರೆಸ್ ವಿರುದ್ಧ ಟ್ವೀಟ್ ಸಮರ ಸಾರಿತ್ತು. ಕೋವಿಡ್ ಬಿಕ್ಕಟ್ಟನ್ನು ಬಳಸಿ ಮೋದಿ ಮತ್ತು ಸರ್ಕಾರವನ್ನು ಹಣಿಯಲು ಕಾಂಗ್ರೆಸ್ ಉದ್ದೇಶಿಸಿತ್ತು ಎಂದು ಆರೋಪಿಸಿತ್ತು.
ಬಿಜೆಪಿ “ನಕಲಿ ಟೂಲ್‌ಕಿಟ್” ಅನ್ನು ಪ್ರಚಾರ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಲೆಟರ್‌ಹೆಡ್ ಫೋರ್ಜರಿ ಮಾಡಿದ್ದನ್ನು ಒಪ್ಪಿದ ಟ್ವೀಟರ್ ಕೂಡ ಬಿಜೆಪಿ ವಿರುದ್ಧ ಕ್ರಮ ಕೈಗೊಂಡಿತ್ತು. ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ (ಎನ್‌ಎಸ್‌ಯುಐ) ರಾಜ್ಯ ಮುಖ್ಯಸ್ಥ ಆಕಾಶ್ ಶರ್ಮಾ ಅವರ ದೂರಿನ ಆಧಾರದ ಮೇಲೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ “ನಕಲಿ ಸುದ್ದಿ ಹರಡುವುದು” ಮತ್ತು “ಜನರ ನಡುವೆ ದ್ವೇಷವನ್ನು ಉತ್ತೇಜಿಸುವುದು” ಎಂಬ ಪ್ರಕರಣ ದಾಖಲಿಸಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ “ಟೂಲ್‌ಕಿಟ್” ಎಂದು ಹೇಳಲಾದ ಬಿಜೆಪಿಯ ಕೆಲವು ಪೋಸ್ಟ್‌ಗಳನ್ನು ಟ್ವಿಟರ್ “ತಿರುಚಿದ ಮಾಧ್ಯಮ” ಎಂದು ಟ್ಯಾಗ್ ಮಾಡಿದೆ. ಟ್ಯಾಗ್ ಆದವರಲ್ಲಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಕೂಡ ಸೇರಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಂತರ ಟ್ಯಾಗ್‌ಗೆ ಆಕ್ಷೇಪ ವ್ಯಕ್ತಪಡಿಸಿತು. ಪತ್ರವೊಂದರಲ್ಲಿ, ಸಚಿವಾಲಯವು ಟ್ವಿಟರ್‌ನ ಈ ಕ್ರಮವು “ಪೂರ್ವಾಗ್ರಹ ಪೀಡಿತ” ಮತ್ತು “ಅನಿಯಂತ್ರಿತ” ಎಂದು ಹೇಳಿತ್ತು.
ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ‘ಟೂಲ್‌ಕಿಟ್’ ಆರೋಪ ಸುಳ್ಳು: ಬಿಜೆಪಿಗೆ ಭಾರೀ ಮುಖಭಂಗ


