ಗಣರಾಜ್ಯೋತ್ಸವ ದಿನ ರೈತರು ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್ ರ್‍ಯಾಲಿಯ ವಿರುದ್ಧ ತಡೆಯಾಜ್ಞೆ ಕೋರಿ ದೆಹಲಿ ಪೊಲೀಸರು ಸುಪ್ರೀಂಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ದೆಹಲಿಯ ಗಡಿಗಳಲ್ಲಿ ಕೇಂದ್ರ ಜಾರಿಗೆ ತಂದಿರುವ ಕರಾಳ ಕೃಷಿ ಕಾನೂನಿನ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರು ಜನವರಿ 26 ರಂದು ದೆಹಲಿಗೆ ಟ್ರಾಕ್ಟರ್‌ಗಳ ಮೂಲಕ ಮುತ್ತಿಗೆ ಹಾಕುತ್ತಿರುವುದಾಗಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: No appeal only Repeal: ರೈತ ಹೋರಾಟದ ಇಂದಿನ ಹ್ಯಾಷ್‌ಟ್ಯಾಗ್!
ದೆಹಲಿ ಪೊಲೀಸರು, “ಗಣರಾಜ್ಯೋತ್ಸವ ದಿನದಂದು ಪ್ರತಿಭಟನಾಕಾರರು ಮತ್ತು ಸಂಘಟನೆಗಳ ಒಂದು ಸಣ್ಣ ಗುಂಪು ಟ್ರಾಕ್ಟರ್, ಟ್ರಾಲಿ ಹಾಗೂ ವಾಹನಗಲ್ಲಿ ರ್‍ಯಾಲಿ ನಡೆಸಲು ಯೋಜಿಸಿದೆ. ಈ ರ್‍ಯಾಲಿಯು ಗಣರಾಜ್ಯೋತ್ಸವದ ಪರೇಡ್‌ಗೆ ತೊಂದರೆ ಉಂಟು ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಭದ್ರತಾ ಸಂಸ್ಥೆಗಳ ಅರಿವಿಗೆ ಬಂದಿದೆ. ರ್‍ಯಾಲಿಯು ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸುತ್ತದೆ, ಇದರಿಂದಾಗಿ ರಾಷ್ಟ್ರಕ್ಕೆ ಮುಜುಗರವಾಗುತ್ತದೆ” ಎಂದು ಅರ್ಜಿಯಲ್ಲಿ ಬರೆದಿದ್ದಾರೆ.
ಪ್ರತಿಭಟಿಸುವ ಹಕ್ಕನ್ನು ಎತ್ತಿ ಹಿಡಿಯುವುದು ಸಾರ್ವಜನಿಕ ಆದೇಶ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಒಳಪಟ್ಟಿರುತ್ತದೆ. ಆದರೆ ಜಾಗತಿಕವಾಗಿ ರಾಷ್ಟ್ರದ ಹೆಸರನ್ನು ಕೆಡಿಸುವಂತಿರಬಾರದು ಎಂದು ಅರ್ಜಿ ಹೇಳಿದೆ. ಆದ್ದರಿಂದ, ರಾಷ್ಟ್ರೀಯ ರಾಜಧಾನಿಗೆ ಟ್ರಾಕ್ಟರ್, ಟ್ರಾಲಿ, ವಾಹನ ಮಾರ್ಚ್ ಅಥವಾ ಇನ್ನಾವುದೇ ಮಾದರಿಯ ರೂಪದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸುವುದಕ್ಕೆ ತಡೆ ನೀಡಬೇಕು ಎಂದು ಅರ್ಜಿಯು ಸುಪ್ರೀಂಕೊರ್ಟ್‌ಗೆ ವಿನಂತಿಸಿದೆ.
ದೆಹಲಿ ಪೊಲೀಸರ ಅರ್ಜಿಯ ಹಿನ್ನಲೆಯಲ್ಲಿ ಟ್ರಾಕ್ಟರ್ ರ್‍ಯಾಲಿಯ ವಿವರಗಳನ್ನು ಕೇಳಿ ರೈತ ಸಂಘಟನೆಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ದೆಹಲಿ ಪೊಲೀಸರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ಪೂರ್ಣ ಪಾಠಕ್ಕೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ನೇಮಿಸುವ ಸಮಿತಿಯಲ್ಲಿ ಭಾಗವಹಿಸುವುದಿಲ್ಲ: ರೈತ ಮುಖಂಡರ ನಿರ್ಣಯ


