ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ (ಎಂಆರ್‌ಪಿಎಲ್) ಇಬ್ಬರು ಕಾರ್ಮಿಕರು ಶನಿವಾರ (ಜು. 12) ಬೆಳಿಗ್ಗೆ ಕಂಪನಿಯ ತೈಲ ಸಾಗಣೆ ಪ್ರದೇಶದಲ್ಲಿ (ಒಎಂಎಸ್) ಕೆಲಸ ನಿರ್ವಹಿಸುತ್ತಿದ್ದಾಗ ಸಾವನ್ನಪ್ಪಿದ್ದಾರೆ.
ಮೃತರು ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮೂಲದ ಫೀಲ್ಡ್ ಆಪರೇಟರ್‌ಗಳಾದ ದೀಪ್ ಚಂದ್ರ ಭಾರ್ತೀಯಾ (33) ಮತ್ತು ಕೇರಳದ ಬಿಜಿಲ್ ಪ್ರಸಾದ್ (33) ಎಂದು ತಿಳಿದು ಬಂದಿದೆ. ತನ್ನ ಇಬ್ಬರು ಸಹೋದ್ಯೋಗಿಗಳನ್ನು ರಕ್ಷಿಸಲು ಹೋದ ಗದಗ ಜಿಲ್ಲೆಯ ಫೀಲ್ಡ್ ಆಪರೇಟರ್ ವಿನಾಯಕ್ ಮೈಗೇರಿ ಅಪಾಯದಿಂದ ಪಾರಾಗಿದ್ದಾರೆ.
ಅನುಭವಿ ಫೀಲ್ಡ್ ಆಪರೇಟರ್‌ಗಳಾದ ಭಾರ್ತೀಯಾ ಮತ್ತು ಪ್ರಸಾದ್ ತೈಲ ಸಾಗಣೆ ಪ್ರದೇಶದಲ್ಲಿ ಟ್ಯಾಂಕ್‌ನ ಶಂಕಿತ ಮಟ್ಟದ ಅಸಮರ್ಪಕ ಕಾರ್ಯವನ್ನು (Suspected level malfunction) ಪರಿಶೀಲಿಸಲು ಬೆಳಿಗ್ಗೆ 8 ಗಂಟೆ ಸುಮಾರಿಗೆ ಟ್ಯಾಂಕ್‌ನ ರೂಫ್ ಪ್ಲಾಟ್‌ಫಾರ್ಮ್‌ಗೆ ಹೋಗಿದ್ದರು ಎಂದು ಎಂಆರ್‌ಪಿಎಲ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಟ್ಯಾಂಕ್ ರೂಫ್ ಪ್ಲಾಟ್‌ಫಾರ್ಮ್‌ನಲ್ಲಿ ಭಾರ್ತಿಯ ಮತ್ತು ಪ್ರಸಾದ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ತನ್ನ ಸಹೋದ್ಯೋಗಿಗಳನ್ನು ರಕ್ಷಿಸಲು ಹೋದ ಮೂರನೇ ಫೀಲ್ಡ್ ಆಪರೇಟರ್ ವಿನಾಯಕ್ ಮೈಗೇರಿ ಅಪಾಯದಿಂದ ಪಾರಾಗಿದ್ದಾರೆ. ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ ಎಂದು ವರದಿಗಳು ಹೇಳಿವೆ.
ಘಟನೆ ಕುರಿತು ತನಿಖೆ ನಡೆಸಲು ಗ್ರೂಪ್ ಜನರಲ್ ಮ್ಯಾನೇಜರ್‌ಗಳ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಎಲ್ಲಾ ಸಂಬಂಧಿತ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಎಂಆರ್‌ಪಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಮತ್ತು ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಧ್ಯವಾಗುವ ಗರಿಷ್ಠ ಪರಿಹಾರ ಪಾವತಿಸುವಂತೆಯೂ ಅವರು ಕಂಪನಿಗೆ ಮನವಿ ಸೂಚನೆ ನೀಡಿದ್ದಾರೆ.
ಎಂಆರ್‌ಪಿಎಲ್‌ನ ಎಚ್ 2ಎಸ್ ಗ್ಯಾಸ್ ಉತ್ಪಾದನಾ ಘಟಕದಲ್ಲಿ ಸಣ್ಣ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದೆ. ನಿಯಮಿತ ಕರ್ತವ್ಯದ ಭಾಗವಾಗಿ ಅದನ್ನು ಪರಿಶೀಲಿಸುವಾಗ ಇಬ್ಬರೂ ಕಾರ್ಮಿಕರು ಅನಿಲವನ್ನು ಉಸಿರಾಡಿದ್ದಾರೆ ಎಂದು ತೋರುತ್ತದೆ ಎಂದು ಮಂಗಳೂರು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಂಆರ್‌ಪಿಎಲ್ ಅಗ್ನಿಶಾಮಕ ಮತ್ತು ಸುರಕ್ಷತಾ ಸಿಬ್ಬಂದಿ ಸೋರಿಕೆಯನ್ನು ಸರಿಪಡಿಸಿದ್ದಾರೆ ಮತ್ತು ಪ್ರದೇಶವು ಈಗ ಸುರಕ್ಷಿತವಾಗಿದೆ. ಮೃತರ ಕುಟುಂಬ ಸದಸ್ಯರು, ಸಂಬಂಧಿಕರ ಹೇಳಿಕೆಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣ | ಪೊಲೀಸ್ ರಕ್ಷಣೆಯೊಂದಿಗೆ ಬೆಳ್ತಂಗಡಿ ಕೋರ್ಟ್‌ಗೆ ಹಾಜರಾದ ದೂರುದಾರ


