Homeಮುಖಪುಟ'ಸಮಾಜ ಕಲ್ಯಾಣ ಇಲಾಖೆಯಲ್ಲಿ 4 ವರ್ಷಗಳಿಂದ ಟಿಕಾಣಿ ಹೂಡಿರುವ ಅಧಿಕಾರಿಗಳನ್ನು ವರ್ಗಾಯಿಸಿ': ಒಳಮೀಸಲಾತಿ ಹೋರಾಟಗಾರರಿಂದ ಸಿಎಂಗೆ...

‘ಸಮಾಜ ಕಲ್ಯಾಣ ಇಲಾಖೆಯಲ್ಲಿ 4 ವರ್ಷಗಳಿಂದ ಟಿಕಾಣಿ ಹೂಡಿರುವ ಅಧಿಕಾರಿಗಳನ್ನು ವರ್ಗಾಯಿಸಿ’: ಒಳಮೀಸಲಾತಿ ಹೋರಾಟಗಾರರಿಂದ ಸಿಎಂಗೆ ಪತ್ರ

- Advertisement -
- Advertisement -

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಸ್ವಜಾತಿ ಪ್ರೇಮದಿಂದ ಒಂದು ನಿರ್ದಿಷ್ಟ ಸಮುದಾಯಕ್ಕೆ ಒಲವು ತೋರುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಒಳಮೀಸಲಾತಿ ಹೋರಾಟ ಸಮಿತಿ ಹೋರಾಟಗಾರರು, ಇಲಾಖೆಯಲ್ಲಿ 4 ವರ್ಷಗಳಿಂದ ಟಿಕಾಣಿ ಹೂಡಿರುವ ಮೂವರು ಅಧಿಕಾರಿಗಳನ್ನು ಈ ಕೂಡಲೇ ಅವರ ಸ್ಥಾನಗಳಿಂದ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂಬಂಧ, ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತಕ್ಷಣದ ಕ್ರಮಕ್ಕೆ ಆಗ್ರಹಿಸಿದೆ.

ಒಳಮೀಸಲಾತಿ ಪ್ರಕ್ರಿಯೆಯಲ್ಲಿ ತಾರತಮ್ಯದ ಆರೋಪ

ಪತ್ರದಲ್ಲಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ (MRHS) ರಾಜ್ಯ ಅಧ್ಯಕ್ಷ ಶಿವರಾಯ ಅಕ್ಷರಕಿ ಅವರು, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸರಕಾರದ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಮತ್ತು ಸಮಾಜ ಕಲ್ಯಾಣ ಆಯುಕ್ತ ರಾಕೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಒಳಮೀಸಲಾತಿ ವರ್ಗೀಕರಣ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಈ ಅಧಿಕಾರಿಗಳು ಒಂದು ನಿರ್ದಿಷ್ಟ ಸಮುದಾಯಕ್ಕೆ ಅನುಕೂಲವಾಗುವಂತೆ ನಡೆದುಕೊಂಡಿದ್ದಾರೆ. ಸುಮಾರು 35 ವರ್ಷಗಳ ಮಾದಿಗ ಸಮುದಾಯದ ಹೋರಾಟವನ್ನು ಸಂಪೂರ್ಣವಾಗಿ ಕಡೆಗಣಿಸಿ, ಅವರನ್ನು ಮೂಲೆಗುಂಪು ಮಾಡುವ ರೀತಿಯಲ್ಲಿ ನಡೆದುಕೊಂಡಿರುವುದು ಖಂಡನೀಯ ಎಂದು ಪತ್ರದಲ್ಲಿ ಹೇಳಿದ್ದಾರೆ.

ಸಚಿವರ ವರ್ತನೆ ಮತ್ತು ಆದೇಶಗಳಲ್ಲಿ ಗೊಂದಲ

ಸಮಾಜ ಕಲ್ಯಾಣ ಸಚಿವರಾದ ಡಾ. ಮಹದೇವಪ್ಪ ಅವರು, ಇಲಾಖೆಯ ಮುಖ್ಯಸ್ಥರಾಗಿ ಎಲ್ಲಾ ಜಾತಿಗಳಿಗೆ ಸಮಾನ ನ್ಯಾಯ ಒದಗಿಸುವ ಬದಲು, ಕೇವಲ ಒಂದು ಸಮುದಾಯದ ಪ್ರತಿನಿಧಿಗಳಂತೆ ವರ್ತಿಸಿದ್ದಾರೆ. ಸರಕಾರದ ಆದೇಶ ಹೊರಡಿಸುವಾಗಲೂ, ಮಾದಿಗ ಸಮುದಾಯವನ್ನು ‘ಬಿ’ ಗುಂಪಿನಲ್ಲಿ ಸೇರ್ಪಡೆ ಮಾಡಿ ಗೊಂದಲ ಮೂಡಿಸಿದ್ದಾರೆ. ಆದಿ ಆಂಧ್ರ ಮತ್ತು ಆದಿ ಕರ್ನಾಟಕ ಸಮುದಾಯಗಳನ್ನು ‘ಎ’ ಮತ್ತು ‘ಬಿ’ ಗುಂಪಿನಲ್ಲಿ ಸೇರಿಸುವ ಜವಾಬ್ದಾರಿಯನ್ನು ಹೊರತುಪಡಿಸಿ, ಪಕ್ಷಪಾತದಿಂದ ನಡೆದುಕೊಂಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಹಣ ಹಂಚಿಕೆ 

ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿರುವ ಈ ತಾರತಮ್ಯ ಕೇವಲ ಮೀಸಲಾತಿ ವಿಷಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲಾಖೆಯ ಅನುದಾನ ಹಂಚಿಕೆಯಲ್ಲೂ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವಿಶೇಷವಾಗಿ, ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರು ನಾಲ್ಕು ವರ್ಷಗಳಿಂದಲೂ ಒಂದೇ ಹುದ್ದೆಯಲ್ಲಿ ಮುಂದುವರಿದಿದ್ದು, ಈ ರೀತಿಯ ತಾರತಮ್ಯದ ನಡೆಗೆ ಸಹಕಾರ ನೀಡುತ್ತಿದ್ದಾರೆ. ಈ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡದಿದ್ದರೆ, ಅವರ ವಿರುದ್ಧ ದೊಡ್ಡ ಪ್ರಮಾಣದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ, ಮುಖ್ಯಮಂತ್ರಿಗಳು ಕೂಡಲೇ ಈ ಮೂವರನ್ನು ತಮ್ಮ ಸ್ಥಾನದಿಂದ ಬದಲಾಯಿಸಿ, ನ್ಯಾಯಯುತ ಆಡಳಿತಕ್ಕೆ ದಾರಿ ಮಾಡಿಕೊಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವಂತೆ ಬಲವಂತ: ಹಾಪುರದಲ್ಲಿ ಮುಸ್ಲಿಂ ಯುವಕರ ಮೇಲೆ ಹಲ್ಲೆ, ದ್ವೇಷದ ಘಟನೆ ಬೆಳಕಿಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -