ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಅಮೆರಿಕದ ಏಜೆನ್ಸಿಯ (ಯುಎಸ್‌ಏಡ್) 2 ಸಾವಿರ ಉದ್ಯೋಗಿಗಳನ್ನು ಭಾನುವಾರ (ಫೆ.23) ವಜಾ ಮಾಡಿದ್ದು, ಇತರೆ ಸಾವಿರಾರು ನೌಕರರನ್ನು ರಜೆ ಮೇಲೆ ಕಳುಹಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕ ಮತ್ತು ವಿದೇಶಗಳಲ್ಲಿ ಸಾವಿರಾರು ಯುಎಸ್‌ಏಡ್ ಸಿಬ್ಬಂದಿಯನ್ನು ವಜಾಗೊಳಿಸಲು ಆಡಳಿತಕ್ಕೆ ಅವಕಾಶ ನೀಡಿದ ಫೆಡರಲ್ ನ್ಯಾಯಾಲಯದ ತೀರ್ಪಿನ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ತಮ್ಮನ್ನು ವಜಾಗೊಳಿಸುವ ಸರ್ಕಾರದ ಯೋಜನೆಯ ಮೇಲಿನ ತಾತ್ಕಾಲಿಕ ತಡೆಯಾಜ್ಞೆಯನ್ನು ವಿಸ್ತರಿಸುವಂತೆ ಯುಎಸ್‌ಏಡ್ ಸಿಬ್ಬಂದಿ ಸಲ್ಲಿಸಿದ್ದ ಅರ್ಜಿಯನ್ನು ಯುಎಸ್ ಜಿಲ್ಲಾ ನ್ಯಾಯಾಧೀಶ ಕಾರ್ಲ್ ನಿಕೋಲ್ಸ್ ತಿರಸ್ಕರಿಸಿದ್ದರು. ಇದು ಆಡಳಿತದ ನಿರ್ಧಾರಕ್ಕೆ ಪರಿಣಾಮಕಾರಿಯಾಗಿ ಹಸಿರು ನಿಶಾನೆ ತೋರಿಸಿತ್ತು.
ನಿರ್ಣಾಯಕ ವಿಷಯಗಳ ಹುದ್ದೆಗಳು, ಪ್ರಮುಖ ನಾಯಕತ್ವದ ಹುದ್ದೆಗಳು ಅಥವಾ ವಿಶೇಷವಾಗಿ ಗೊತ್ತುಪಡಿಸಿದ ವಿಷಯಗಳನ್ನು ನಿರ್ವಹಿಸುವವರನ್ನು ಹೊರತುಪಡಿಸಿ, ಉಳಿದ ಎಲ್ಲಾ ನೇರ ನೇಮಕಾತಿ ಸಿಬ್ಬಂದಿಯನ್ನು ಆಡಳಿತಾತ್ಮಕ ರಜೆಯ ಮೇಲೆ ಇರಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಅಮೆರಿಕದ ಸರ್ಕಾರಿ ದಕ್ಷತೆಯ ಇಲಾಖೆಯು ವೆಚ್ಚಗಳಲ್ಲಿ ಕಡಿತ ಮಾಡುವುದಾಗಿ ಈಚೆಗೆ ಘೋಷಿಸಿತ್ತು. ಇದರ ಬೆನ್ನಲ್ಲೇ ಯುಎಸ್‌ಏಡ್‌ನ ಉದ್ಯೋಗಿಗಳನ್ನು ಕಡಿತಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಟ್ರಂಪ್ ಅಧಿಕಾರವಹಿಸಿಕೊಂಡ ಬಳಿಕ ಆಡಳಿತಾತ್ಮಕವಾಗಿ ಹಲವು ಬದಲಾವಣೆಗಳು ಆಗಿವೆ. ಈ ಪೈಕಿ ಅಮೆರಿಕದಿಂದ ಹೊರ ಹೋಗುತ್ತಿರು ಆರ್ಥಿಕ ಸಹಾಯವನ್ನು ಕಡಿತಗೊಳಿಸುವುದರ ಬಗ್ಗೆ ಆಡಳಿತ ಪ್ರಮುಖವಾಗಿ ಒತ್ತು ನೀಡುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ, ಪ್ಯಾರಿಸ್ ಒಪ್ಪಂದ, ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಹೊರ ಬಂದಿರುವುದು ಇತ್ಯಾದಿ ಇದಕ್ಕೆ ಉದಾಹಣೆಗಳಾಗಿವೆ.
ಯುಎಸ್‌ಏಡ್ ವಿಚಾರದಲ್ಲಿ ಭಾರತ ಪ್ರಮುಖವಾಗಿ ತಳುಕು ಹಾಕಿಕೊಂಡಿದೆ. ಭಾರತದ ಚುನಾವಣೆಗೆ 21 ಮಿಲಿಯ ಡಾಲರ್ ಖರ್ಚು ಮಾಡಲಾಗಿದೆ ಎಂಬುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಟ್ರಂಪ್ ಆಡಳಿತ 4,600 ಯುಎಸ್‌ಏಡ್ ಉದ್ಯೋಗಿಗಳ ಕಡಿತ ಸೇರಿದಂತೆ ಅಮೆರಿಕದ ನಾಗರಿಕ ಸೇವೆ ಮತ್ತು ವಿದೇಶಾಂಗ ಸಚಿವಾಲಯದ ಸಿಬ್ಬಂದಿಯನ್ನು ರಜೆ ಮೇಲೆ ಕಳುಹಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
5 ತಿಂಗಳುಗಳ ಬಳಿಕ ಹಿಜ್ಬೊಲ್ಲಾ ಮಾಜಿ ನಾಯಕ ನಸ್ರಲ್ಲಾ ಅಂತ್ಯಕ್ರಿಯೆ; ಸಾವಿರಾರು ಜನ ಭಾಗಿ


