ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ. ಹಾಗಾಗಿ, ಕಳೆದ 70 ದಿನಗಳಲ್ಲಿ ಅಮೆರಿಕದ ನಾಯಕರು ನೀಡಿರುವ ಹೇಳಿಕೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಸ್ಪಷ್ಟ ಪ್ರತಿಕ್ರಿಯೆ ನೀಡಬೇಕು ಎಂದು ಕಾಂಗ್ರೆಸ್ ಶನಿವಾರ ಆಗ್ರಹಿಸಿದೆ.
ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ಸಮಯದಲ್ಲಿ “ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ. ನಮ್ಮ ಮಧ್ಯಪ್ರವೇಶದ ಬಳಿಕ ಸಂಘರ್ಷ ಅಂತ್ಯವಾಯಿತು ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ. ಈ ಹಿನ್ನೆಲೆ, ಕಾಂಗ್ರೆಸ್ ಮೋದಿ ಮೌನ ಮುರಿಯಲು ಒತ್ತಾಯಿಸಿದೆ.
ಎರಡೂ ದೇಶಗಳು ಜೆಟ್‌ಗಳನ್ನು ಕಳೆದುಕೊಂಡಿವೆಯೇ ಅಥವಾ ಎರಡೂ ಕಡೆಯವರ ಒಟ್ಟಾರೆ ನಷ್ಟವನ್ನು ಅವರು ಉಲ್ಲೇಖಿಸಿದ್ದಾರೆಯೇ ಎಂಬುದನ್ನು ಟ್ರಂಪ್ ಸ್ಪಷ್ಟಪಡಿಸಿಲ್ಲ.
ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲು ಕೇವಲ ಎರಡು ದಿನಗಳು ಬಾಕಿಯಿರುವಾಗ ‘ಅಮೆರಿಕ ಮಧ್ಯಸ್ಥಿಕೆ ವಹಿಸಿ ಭಾರತ-ಪಾಕಿಸ್ತಾನ ಯುದ್ದ ನಿಲ್ಲಿಸಿತು. ಕದನ ವಿರಾಮಕ್ಕೆ ಒಪ್ಪದಿದ್ದರೆ ವ್ಯಾಪರ ನಿರ್ಬಂಧ ಹೇರುವ ಎಚ್ಚರಿಕೆಯನ್ನು ನಾವು ನೀಡಿದ್ದೆವು’ ಈ ಎರಡು ವಿಷಯಗಳನ್ನು ಉಲ್ಲೇಖಸಿ ಟ್ರಂಪ್ 24ನೇ ಬಾರಿಗೆ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಈ ಬಾರಿ ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಟ್ರಂಪ್ ಹೊಸ ಹೇಳಿಕೆ ನೀಡಿದ್ದಾರೆ. ಸೆಪ್ಟೆಂಬರ್ 2019ರಲ್ಲಿ ‘ಹೌಡಿ ಮೋದಿ’, 2020ರಲ್ಲಿ ನಮಸ್ತೆ ಟ್ರಂಪ್‌ಗಳಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಟ್ರಂಪ್ ಅವರೊಂದಿಗೆ ಮೋದಿ ಹಲವು ವರ್ಷಗಳಿಂದ ಗೆಳೆತನ ಹೊಂದಿದ್ದಾರೆ. ಆದ್ದರಿಂದ ಟ್ರಂಪ್ ಕಳೆದ 70 ದಿನಗಳಲ್ಲಿ ನೀಡಿರುವ ಹೇಳಿಕೆಗಳ ಕುರಿತು ಮೋದಿ ಸಂಸತ್ತಿಗೆ ಸ್ಪಷ್ಟನೆ ನೀಡಬೇಕು ಎಂದು ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
ಶುಕ್ರವಾರ ಶ್ವೇತಭವನದಲ್ಲಿ ರಿಪಬ್ಲಿಕನ್ ಸೆನೆಟರ್‌ಗಳಿಗೆ ಆಯೋಜಿಸಿದ್ದ ಭೋಜನ ಕೂಟದಲ್ಲಿ ಮಾತನಾಡಿದ್ದ ಟ್ರಂಪ್, ನೀವು ಭಾರತ-ಪಾಕಿಸ್ತಾನ ನಡುವೆ ಸಂಘರ್ಷ ನಡೆದಿದೆ ಎಂದು ಭಾವಿಸಿದ್ದೀರಿ. ವಾಸ್ತವವಾಗಿ ಎರಡು ದೇಶಗಳು ಆಕಾಶದಲ್ಲಿ ಕಾದಾಡಿಕೊಂಡಿವೆ. ಈ ವೇಳೆ ನಾಲ್ಕರಿಂದ ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ನಾನು ಭಾವಿಸುತ್ತೇನೆ, ವಾಸ್ತವವಾಗಿ, ಪರಿಸ್ಥಿತಿ ಕೆಟ್ಟದಾಗುತ್ತಾ ಹೋಗುತ್ತಿತ್ತು. ಎರಡೂ ದೇಶಗಳು ತೀವ್ರ ಸಂಘರ್ಷಕ್ಕೆ ಮುಂದಾಗಿದ್ದವು” ಎಂದಿದ್ದರು.
ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ: ಅಮೆರಿಕ ಅಧ್ಯಕ್ಷ ಟ್ರಂಪ್


