ಆಕ್ರಮಿತ ಪಶ್ಚಿಮ ದಂಡೆಯನ್ನು ಸ್ವಾಧೀನಪಡಿಕೊಂಡರೆ ಇಸ್ರೇಲ್ ಅಮೆರಿಕದ ನಿರ್ಣಾಯಕ ಬೆಂಬಲವನ್ನು ಕಳೆದುಕೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಗುರುವಾರ (ಅ.23) ಪ್ರಕಟಗೊಂಡ ಟೈಮ್ ನಿಯತಕಾಲಿಕೆಯ ಸಂದರ್ಶನದಲ್ಲಿ, “ಪಶ್ಚಿಮ ದಂಡೆ ಸ್ವಾಧೀನಪಡಿಸಿಕೊಂಡರೆ ಪರಿಣಾಮಗಳು ತೀವ್ರವಾಗಿರುತ್ತದೆ” ಎಂದು ಟ್ರಂಪ್ ಎಚ್ಚರಿಸಿದ್ದು, ಅರಬ್ ರಾಷ್ಟ್ರಗಳಿಗೆ ಕೊಟ್ಟ ಮಾತನ್ನು ನೆನಪಿಸಿಕೊಂಡಿದ್ದಾರೆ.
“ಅದು (ಪಶ್ಚಿಮ ದಂಡೆಯ ಸ್ವಾಧೀನ) ನಡೆಯಲು ಸಾಧ್ಯವಿಲ್ಲ. ಕಾರಣ ನಾನು ಅರಬ್ ದೇಶಗಳಿಗೆ ಮಾತು ಕೊಟ್ಟಿದ್ದೇನೆ. ಅರಬ್ ದೇಶಗಳ ದೊಡ್ಡ ಬೆಂಬಲ ನಮಗಿದೆ. ಒಂದು ವೇಳೆ ಇಸ್ರೇಲ್ ಸ್ವಾಧೀನಕ್ಕೆ ಮುಂದಾದರೆ ಅಮೆರಿಕದ ನಿರ್ಣಾಯಕ ಬೆಂಬಲವನ್ನು ಅದು ಕಳೆದುಕೊಳ್ಳಲಿದೆ” ಎಂದು ಅಕ್ಟೋಬರ್ 15ರಂದು ದೂರವಾಣಿ ಮೂಲಕ ಟ್ರಂಪ್ ಹೇಳಿರುವುದಾಗಿ ಟೈಮ್ ನಿಯತಕಾಲಿಕೆ ವಿವರಿಸಿದೆ.
ಈ ವರ್ಷದ ಅಂತ್ಯದ ವೇಳೆಗೆ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಅಬ್ರಹಾಂ ಒಪ್ಪಂದಗಳಿಗೆ ಸೌದಿ ಅರೇಬಿಯಾ ಸೇರಬಹುದು ಎಂಬ ನಿರೀಕ್ಷೆಯನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ.
ಗಾಝಾದ ಮೇಲಿನ ಇಸ್ರೇಲ್ ಆಕ್ರಮಣ ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಉಲ್ಲೇಖಿಸಿದ ಟ್ರಂಪ್, “ನೋಡಿ ಅವರಿಗೆ ಒಂದು ಸಮಸ್ಯೆ ಇತ್ತು. ಅವರಿಗೆ ಗಾಝಾ ಸಮಸ್ಯೆ ಇತ್ತು, ಅವರಿಗೆ ಇರಾನ್ ಸಮಸ್ಯೆಯೂ ಇತ್ತು. ಈಗ ಆ ಎರಡು ಸಮಸ್ಯೆಗಳು ಪರಿಹಾರಗೊಂಡಿದೆ” ಎಂದಿದ್ದಾರೆ.
ವಿಶಾಲ ಶಾಂತಿ ಕ್ರಮಗಳ ಭಾಗವಾಗಿ ‘ಫತ್ಹ್’ ಚಳವಳಿಯ ಉನ್ನತ ಮಟ್ಟದ ನಾಯಕ, ಪ್ಯಾಲೆಸ್ತೀನಿಯನ್ ಕೈದಿ ಮಾರ್ವಾನ್ ಬರ್ಘೌಟಿಯನ್ನು ಇಸ್ರೇಲ್ ಬಿಡುಗಡೆ ಮಾಡಬೇಕೆ ಎಂಬುವುದನ್ನು ನಿರ್ಧರಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಕತಾರ್‌ನ ದೋಹಾದಲ್ಲಿ ಹಮಾಸ್ ಸಮಾಲೋಚಕರ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಟ್ರಂಪ್ ಭಯಾನಕ ಮತ್ತು ನೆತನ್ಯಾಹು ಅವರ ಯುದ್ಧತಂತ್ರದ ತಪ್ಪು ಎಂದು ಬಣ್ಣಿಸಿದ್ದಾರೆ. ಆದರೆ, ದಾಳಿಯ ಮೇಲಿನ ಆಕ್ರೋಶವು ಅಂತಿಮವಾಗಿ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮವನ್ನು ಜಾರಿಗೆ ತರಲು ಎಲ್ಲರನ್ನು ಒಟ್ಟುಗೂಡಿಸಿತು ಎಂದಿದ್ದಾರೆ.
ಇಸ್ರೇಲ್‌ಗೆ ಭೇಟಿ ನೀಡಿದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಪಶ್ಚಿಮ ದಂಡೆಯ ಸ್ವಾಧೀನವನ್ನು ವಿರೋಧಿಸಿದ್ದು, “ಅಧ್ಯಕ್ಷ ಟ್ರಂಪ್ ಅವರು ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸುತ್ತಾರೆ ಮತ್ತು ಅದು ಸಂಭವಿಸುವುದಿಲ್ಲ” ಎಂದು ಹೇಳಿದ್ದಾರೆ.
1967ರಲ್ಲಿ ನಡೆದ ಆರು ದಿನಗಳ ಯುದ್ಧದಲ್ಲಿ ಇಸ್ರೇಲಿ ಸೇನೆ ಪ್ಯಾಲೆಸ್ತೀನ್‌ನ ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೆಮ್ ಅನ್ನು ವಶಪಡಿಸಿಕೊಂಡಿದೆ. ಅಂದಿನಿಂದ, ಈ ಪ್ಯಾಲೆಸ್ತೀನ್ ಪ್ರದೇಶಗಳ ನಗರಗಳಲ್ಲಿ 7,00,000 ಯಹೂದಿಗಳು ವಾಸಿಸುವ ಸುಮಾರು 160 ವಸತಿ ಪ್ರದೇಶಗಳನ್ನು ಇಸ್ರೇಲ್ ನಿರ್ಮಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ಪ್ರಸ್ತುತ ಕನಿಷ್ಠ 3.3 ಮಿಲಿಯನ್ ಪ್ಯಾಲೆಸ್ತೀನಿಯರು ಯಹೂದಿಗಳ ಜೊತೆ ವಾಸಿಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಇಸ್ರೇಲಿ ಪಡೆಗಳು ನಿಯಮಿತವಾಗಿ ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೆಮ್‌ಗಳಲ್ಲಿ ಪ್ಯಾಲೆಸ್ತೀನೀಯರ ಮೇಲೆ ಅಕ್ರಮಣ ನಡೆಸುತ್ತಲೇ ಇದೆ. ಪ್ರತಿನಿತ್ಯ ಪ್ಯಾಲೆಸ್ತೀನಿಯ ಹತ್ಯೆಗಳಾಗುತ್ತಿವೆ. ಅವರ ಮನೆ, ಆಸ್ತಿ-ಪಾಸ್ತಿಗಳನ್ನು ಇಸ್ರೇಲ್ ಕ್ರಮೇಣ ನಾಶಪಡಿಸುತ್ತಿವೆ. ಪಶ್ಚಿಮ ದಂಡೆಯಲ್ಲಿ ವಾಸಿಸುವ ಯಹೂದಿಗಳು ಇಸ್ರೇಲ್‌ನ ಚುನಾವಣೆಗಳಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಆದರೆ, ಪ್ಯಾಲೆಸ್ತೀನಿಯರು ಆ ಹಕ್ಕಿನಿಂದ ವಂಚಿತರಾಗಿದ್ದಾರೆ.
ಆಕ್ರಮಿತ ಪಶ್ಚಿಮ ದಂಡೆಯನ್ನು ಅಧಿಕೃತವಾಗಿ ಸ್ವಾಧೀನಪಡಿಸಿಕೊಳ್ಳುವ ಅಥವಾ ಕಾನೂನು ಹೇರುವ ವಿವಾದಾತ್ಮಕ ಮಸೂದೆಗೆ ಇಸ್ರೇಲ್ ಸಂಸತ್ (ನೆಸೆಟ್) ಬುಧವಾರ (ಅ.22) ಪ್ರಾಥಮಿಕ ಅನುಮೋದನೆ ನೀಡಿದೆ.
“ಜೂಡಿಯಾ ಮತ್ತು ಸಮರಿಯಾದಲ್ಲಿ ಇಸ್ರೇಲಿ ಸಾರ್ವಭೌಮತ್ವದ ಅನ್ವಯ, 2025” ಎಂಬ ಶೀರ್ಷಿಕೆಯ ಈ ಮಸೂದೆಯನ್ನು ನೋಮ್ ಪಕ್ಷವನ್ನು ಪ್ರತಿನಿಧಿಸುವ ತೀವ್ರ ಬಲಪಂಥೀಯ ಸಂಸದ ಅವಿ ಮಾವೋಜ್ ಅವರು ಸಂಸತ್‌ನಲ್ಲಿ ಮಂಡಿಸಿದ್ದರು.
ಇಸ್ರೇಲಿ ಸಂಸತ್ತಿನ 120 ಶಾಸಕರಲ್ಲಿ 25-24 ಮತಗಳಿಂದ ಮಸೂದೆಯನ್ನು ಅಂಗೀಕರಿಸಲಾಗಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷವು ಮಸೂದೆಯನ್ನು ಬೆಂಬಲಿಸದಿದ್ದರೂ, ಅವರ ಒಕ್ಕೂಟದ ಕೆಲವು ಸದಸ್ಯರು, ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಅವರ ಯಹೂದಿ ಶಕ್ತಿ ಪಕ್ಷ ಮತ್ತು ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರ ರಿಲೀಜಿಯಸ್ ಜಿಯೋನಿಸಂ ಪಕ್ಷದ ಸದಸ್ಯರು ಮಸೂದೆ ಪರ ಮತ ಚಲಾಯಿಸಿದ್ದಾರೆ.
ಇನ್ನು ಮಾಲೆ ಅದುಮಿಮ್ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪವನ್ನು ಹೊಂದಿರುವ ವಿರೋಧ ಪಕ್ಷದ ಎರಡನೇ ಮಸೂದೆಯು 31-9 ಮತಗಳಿಂದ ಅಂಗೀಕಾರಗೊಂಡಿದೆ.
ಮಸೂದೆಯು ಆರಂಭಿಕ ಮತದಾನದಲ್ಲಿ ಅಂಗೀಕಾರವಾಗಿದ್ದರೂ, ಅಂತಿಮ ಅಂಗೀಕಾರ ಪಡೆಯಲು ಇನ್ನೂ ಮೂರು ಸುತ್ತುಗಳನ್ನು ಒಳಗೊಂಡ ದೀರ್ಘ ಶಾಸಕಾಂಗ ಪ್ರಕ್ರಿಯೆನ್ನು ಹಾದು ಹೋಗಬೇಕಿದೆ.
ಆಕ್ರಮಿತ ಪಶ್ಚಿಮ ದಂಡೆ ಸ್ವಾಧೀನ ಮಸೂದೆಗೆ ಇಸ್ರೇಲ್ ಸಂಸತ್ತು ಪ್ರಾಥಮಿಕ ಅನುಮೋದನೆ


