ಬೀಜಿಂಗ್: ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷವು ತೀವ್ರ ಸ್ವರೂಪ ಪಡೆಯುತ್ತಿದೆ. ಅಮೆರಿಕವು ಇರಾನ್ ವಿರುದ್ಧ ‘ಬಲಪ್ರಯೋಗ’ದ ಹೇಳಿಕೆ ನೀಡಿದೆ. ಚೀನಾವು ಇದನ್ನು ಖಂಡಿಸಿ ಸ್ಪಷ್ಟ ಎಚ್ಚರಿಕೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಅವರು, ಅಮೆರಿಕದಿಂದ ಯಾವುದೇ ರೀತಿಯ ಬಲಪ್ರಯೋಗವು ಇರಾನ್‌ನ ಸಾರ್ವಭೌಮತೆ ಮತ್ತು ಭದ್ರತೆಯ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದರು.
ಚೀನಾವು ಇದನ್ನು ವಿರೋಧಿಸುತ್ತದೆ. ಜೊತೆಗೆ, ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಇಂತಹ ಯಾವುದೇ ಬಲಪ್ರಯೋಗದ ಬೆದರಿಕೆಯನ್ನು ಸಹ ನಾವು ವಿರೋಧಿಸುತ್ತೇವೆ ಎಂದು ಅವರು ವರದಿಗಾರರಿಗೆ ಸ್ಪಷ್ಟಪಡಿಸಿದರು.
ಈ ವಾರದ ಆರಂಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು, ಇರಾನ್ ವಿರುದ್ಧ ಇಸ್ರೇಲ್‌ನ ಮಿಲಿಟರಿ ದಾಳಿಗಳ ಬಗ್ಗೆ ಬೀಜಿಂಗ್ “ತೀವ್ರವಾಗಿ ಚಿಂತಿತವಾಗಿದೆ” ಎಂದು ಹೇಳಿಕೆ ನೀಡಿದ್ದರು.
ಕಜಕಿಸ್ತಾನ್‌ನಲ್ಲಿ ಐದು ಮಧ್ಯ ಏಷ್ಯಾ ರಾಷ್ಟ್ರಗಳೊಂದಿಗೆ ನಡೆದ ಶೃಂಗಸಭೆಯ ಸಂದರ್ಭದಲ್ಲಿ ಮಾತನಾಡಿದ ಚೀನಾ ಅಧ್ಯಕ್ಷರು, ಇಸ್ರೇಲ್ ಮತ್ತು ಇರಾನ್‌ಗಳಿಗೆ ಸಂಘರ್ಷವನ್ನು ಕೊನೆಗೊಳಿಸಲು ಕರೆ ನೀಡಿದರು.
ಕ್ಸಿ ಜಿನ್‌ಪಿಂಗ್ ಅವರು “ಎಲ್ಲಾ ಪಕ್ಷಗಳು ಆದಷ್ಟು ಬೇಗ ಸಂಘರ್ಷವನ್ನು ಕಡಿಮೆ ಮಾಡಲು ಮತ್ತು ಪರಿಸ್ಥಿತಿ ಇನ್ನಷ್ಟು ಹದಗೆಡುವುದನ್ನು ತಡೆಯಲು ಶ್ರಮಿಸಬೇಕು” ಎಂದು ಹೇಳಿರುವುದಾಗಿ ಚೀನಾದ ಸರ್ಕಾರಿ ಪ್ರಸಾರಕ ಸಿಜಿಟಿಎನ್ ವರದಿ ಮಾಡಿದೆ.
ಚೀನಾವು ಎಲ್ಲಾ ಸಂಬಂಧಿತ ಪಕ್ಷಗಳಿಗೆ, ವಿಶೇಷವಾಗಿ ಇಸ್ರೇಲ್ ಮೇಲೆ ವಿಶೇಷ ಪ್ರಭಾವ ಹೊಂದಿರುವ ದೇಶಗಳಿಗೆ, ತಮ್ಮ ಜವಾಬ್ದಾರಿಗಳನ್ನು ಹೊರಲು, ಉದ್ವಿಗ್ನ ಪರಿಸ್ಥಿತಿಯನ್ನು ತಣ್ಣಗಾಗಿಸಲು ಮತ್ತು ಸಂಘರ್ಷವು ಉಲ್ಬಣಗೊಳ್ಳುವುದನ್ನು ಹಾಗೂ ಹರಡುವುದನ್ನು ತಡೆಯಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡುತ್ತದೆ” ಎಂದು ಗುವೊ ಮತ್ತೊಂದು ಪತ್ರಿಕಾಗೋಷ್ಠಿಯಲ್ಲಿ ಯಾವುದೇ ದೇಶಗಳನ್ನು ನೇರವಾಗಿ ಹೆಸರಿಸದೆ ಹೇಳಿದರು.
ಚೀನಾದ ಈ ಇತ್ತೀಚಿನ ಹೇಳಿಕೆಯು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ದಾಳಿಗಳನ್ನು ಆಯೋಜಿಸಲು ಪರಿಗಣಿಸುತ್ತಿರುವುದಾಗಿ ಹೇಳಿದ ನಂತರ ಬಂದಿದೆ. ಅಮೆರಿಕ ದಶಕಗಳಿಂದ ಇಸ್ರೇಲ್‌ನ ಪ್ರಮುಖ ಮಿತ್ರರಾಷ್ಟ್ರವಾಗಿದೆ. ಅಕ್ಟೋಬರ್ 2023ರಲ್ಲಿ ಗಾಜಾದಲ್ಲಿ ಯುದ್ಧ ಪ್ರಾರಂಭವಾದ ನಂತರ ಇಸ್ರೇಲ್‌ಗೆ ಅಮೆರಿಕದ ಬೆಂಬಲ ಮತ್ತಷ್ಟು ಹೆಚ್ಚಾಗಿದೆ.
ಶ್ವೇತಭವನದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಬಗ್ಗೆ ಮಿಶ್ರ ಸಂದೇಶವನ್ನು ನೀಡಿದರು. ಅವರು ಇರಾನ್ ವಿರುದ್ಧ ದಾಳಿಗಳನ್ನು ಆದೇಶಿಸಬಹುದು ಅಥವಾ ಆದೇಶಿಸದೇ ಇರಬಹುದು ಎಂದು ಹೇಳಿದರು. ನಾನು ತಾಳ್ಮೆಯನ್ನು ಕಳೆದುಕೊಂಡಿದ್ದೇನೆ. ಇರಾನ್ ಈ ಸಂಘರ್ಷದಿಂದ ಹಿಂದೆ ಸರಿಯುವಂತೆ ಟ್ರಂಪ್ ಕರೆ ನೀಡಿದ್ದಾರೆ.


