ಬುಧವಾರ (ಜು.30) ಮುಂಜಾನೆ ರಷ್ಯಾದ ಕರಾವಳಿಯಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ನಂತರ, ರಷ್ಯಾದ ಕುರಿಲ್ ದ್ವೀಪಗಳು ಮತ್ತು ಜಪಾನ್‌ನ ಉತ್ತರ ದ್ವೀಪ ಹೊಕ್ಕೈಡೊದ ಕರಾವಳಿ ಪ್ರದೇಶಗಳಿಗೆ ಸುನಾಮಿ ಅಪ್ಪಳಿಸಿದೆ. ರಷ್ಯಾದ ಅಲಾಸ್ಕಾ, ಹವಾಯಿ ಮತ್ತು ನ್ಯೂಜಿಲೆಂಡ್ ಕಡೆಗೆ ಇರುವ ಇತರ ಕರಾವಳಿಗಳಿಗೂ ಎಚ್ಚರಿಕೆ ನೀಡಲಾಗಿದೆ.
ಹೊಕ್ಕೈಡೊದಿಂದ ಟೋಕಿಯೊದ ಈಶಾನ್ಯಕ್ಕೆ ಪೆಸಿಫಿಕ್ ಕರಾವಳಿಯಲ್ಲಿ 16 ಸ್ಥಳಗಳಲ್ಲಿ 40 ಸೆಂಟಿ ಮೀಟರ್ (1.3 ಅಡಿ) ಎತ್ತರದ ಸುನಾಮಿ ಅಲೆಗಳು ಕಂಡು ಬಂದಿವೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಇನ್ನು ದೊಡ್ಡ ಅಲೆಗಳು ಅಪ್ಪಳಿಸುವ ಸಾಧ್ಯತೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಕಮ್ಚಟ್ಕಾ ಪರ್ಯಾಯ ದ್ವೀಪದ ಭೂಕಂಪದ ಕೇಂದ್ರಬಿಂದುವಿನ ಬಳಿಯ ರಷ್ಯಾದ ಪ್ರದೇಶದಲ್ಲಿ ಹಾನಿ ಮತ್ತು ಜನರನ್ನು ಸ್ಥಳಾಂತರಿಸಿದ ಬಗ್ಗೆ ವರದಿಯಾಗಿದೆ.
ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ಅಥವಾ ಹಾನಿಗಳು ವರದಿಯಾಗಿಲ್ಲ ಎಂದು ಜಪಾನ್‌ನ ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
ಸುನಾಮಿ ಮುನ್ನೆಚ್ಚರಿಕೆಯಾಗಿ ಜಪಾನ್‌ನ ಪೆಸಿಫಿಕ್ ಕರಾವಳಿಯ ಹೊಕ್ಕೈಡೊದಿಂದ ಓಕಿನಾವಾವರೆಗಿನ 133 ಪುರಸಭೆಗಳ ವ್ಯಾಪ್ತಿಯ 900,000ಕ್ಕೂ ಹೆಚ್ಚು ನಿವಾಸಿಗಳಿಗೆ ಸ್ಥಳಾಂತರಕ್ಕೆ ಸಲಹೆ ನೀಡಲಾಗಿದೆ.
ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ಬುಧವಾರದ ಭೂಕಂಪದ ನಂತರ ಇಶಿನೊಮಕಿಯಲ್ಲಿ 50 ಸೆಂಟಿಮೀಟರ್ (1.6 ಅಡಿ) ಅತಿ ಎತ್ತರದ ಸುನಾಮಿ ಅಲೆಗಳು ಕಂಡು ಬಂದಿವೆ.
ಜಪಾನ್ ಸ್ಥಳೀಯ ಸಮಯ ಬೆಳಿಗ್ಗೆ 8:25ಕ್ಕೆ ಸಂಭವಿಸಿದ ಭೂಕಂಪದ ತೀವ್ರತೆಯು ಪ್ರಾಥಮಿಕವಾಗಿ 8.0 ರಷ್ಟಿತ್ತು ಎಂದು ಜಪಾನ್ ಮತ್ತು ಯುಎಸ್ ಭೂಕಂಪಶಾಸ್ತ್ರಜ್ಞರು ತಿಳಿಸಿದ್ದರು. ನಂತರ, ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯು ಭೂಕಂಪದ ತೀವ್ರತೆ 8.8ರಷ್ಟಿತ್ತು ಎಂದು ಖಚಿತಪಡಿಸಿದೆ.
ಮಾರ್ಚ್ 2011ರಲ್ಲಿ ಈಶಾನ್ಯ ಜಪಾನ್‌ನಲ್ಲಿ ಸಂಭವಿಸಿದ 9.0 ತೀವ್ರತೆಯ ಭೂಕಂಪದ ನಂತರ, ಇದು ವಿಶ್ವದಲ್ಲಿ ಎಲ್ಲಿಯೂ ಸಂಭವಿಸದ ಅತ್ಯಂತ ಪ್ರಬಲವಾದ ಭೂಕಂಪವಾಗಿದೆ ಎಂದು ವರದಿಗಳು ಹೇಳಿವೆ.
‘ನೆತನ್ಯಾಹು ಆಡಳಿತದಿಂದ ಗಾಝಾದಲ್ಲಿ ನರಮೇಧ..’; ಇಸ್ರೇಲ್‌ನ ಪ್ರಮುಖ ಮಾನವ ಹಕ್ಕುಗಳ ಸಂಸ್ಥೆಯಿಂದ ವರದಿ ಬಿಡುಗಡೆ


