ತುಮಕೂರು ಜಿಲ್ಲೆ ಕವಿಗಳ ತವರು. ಹಲವು ಕವಿಗಳು, ವಿದ್ವಾಂಸರು, ಬರಹಗಾರರು ಇಲ್ಲಿ ಜನಿಸಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ಹೆಗ್ಗಳಿಕೆ ಜಿಲ್ಲೆಗಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಅಪಾರ. ಪ್ರಾಚೀನ- ಆಧುನಿಕ ಸಾಹಿತ್ಯದ ಕೊಂಡಿಯಾಗಿ ಕೆಲಸ ಮಾಡಿದವರು, ಕನ್ನಡ ಸಾಹಿತ್ಯಕ್ಕೆ ಹೊಸತನವನ್ನು ತಂದುಕೊಟ್ಟ ಹಲವು ಬರಹಗಾರರು ಈ ಜಿಲ್ಲೆಯವರಾಗಿದ್ದಾರೆ. ಅಂಥವರಲ್ಲಿ ಬಿಎಂಶ್ರೀ ಕೂಡ ಒಬ್ಬರು. ಅವರು ತಮ್ಮ ತಾಯಿಯ ತವರೂರು ತುರುವೇಕೆರೆಯ ಸಂಪಿಗೆ ಗ್ರಾಮದಲ್ಲಿ ಜನಿಸಿದ ಬಿಎಂಶ್ರೀ ದೊಡ್ಡ ವಿದ್ವಾಂಸರಾಗಿ ರಾಜಸೇವಾಸಕ್ತ ಬಿರುದು ಪಡೆದವರು. ಕನ್ನಡ ಸಾಹಿತ್ಯಕ್ಕೆ ಹೊಸಮಾರ್ಗ ಹಾಕಿಕೊಟ್ಟವರು.
ಅಂಥ ಘನ ವಿದ್ವಾಂಸರ ಹೆಸರಿನಲ್ಲಿ ಸಂಪಿಗೆಯಲ್ಲಿ ನಿರ್ಮಾಣಗೊಂಡಿರುವ ಬಿಎಂಶ್ರೀ ಭವನ ಯಾವುದೇ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿಲ್ಲ. ಅದರ ನಿರ್ವಹಣೆಗೆಂದು ಯಾರೂ ಇಲ್ಲವಾಗಿದೆ. ಇನ್ನು ಅದರಿಂದ ಆದಾಯ ಬರುವುದಾದರೂ ಹೇಗೆ? ಹೀಗಾಗಿ ಸರಿಯಾದ ನಿರ್ವಹಣೆ ಇಲ್ಲದ ಅಕ್ರಮ ಚಟುವಟಿಕೆಗಳ ತಾಣವಾಗಿದೆ.
2006-07ನೇ ಸಾಲಿನಲ್ಲಿ ಬಿಎಂಶ್ರೀ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ 2008-09ನೇ ಸಾಲಿನ ಹೊತ್ತಿಗೆ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯನ್ನು ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ಭವನ ನಿರ್ಮಿಸಿ ಒಂದು ದಶಕ ಕಳೆದರೂ ಯಾವುದೇ ಚಟುವಟಿಕೆಗಳಿಗೆ ಬಳಸದೆ ಭವನ ವ್ಯರ್ಥವಾಗಿ ಪಾಳುಬಿದ್ದಿದೆ.
ಅಂದಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಪ್ಪ, ಸಾಹಿತಿಗಳು, ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ತಂದ ಪರಿಣಾಮ 16 ಲಕ್ಷ ರೂಪಾಯಿ ಬಿಡುಗಡೆಯಾಗಿತ್ತು. ತುರುವೇಕೆರೆಯ ಅಂದಿನ ಶಾಸಕ ಎಂ.ಟಿ.ಕೃಷ್ಣಪ್ಪ 3 ಲಕ್ಷ ರೂಪಾಯಿ ಹಣವನ್ನು ಶಾಸಕರ ನಿಧಿಯಿಂದ ನೀಡಿದ್ದರು. ಒಟ್ಟು 19-20 ಲಕ್ಷ ರೂ. ವೆಚ್ಚದಲ್ಲಿ ಬಿಎಂಶ್ರೀ ಭವನವನ್ನು ನಿರ್ಮಾಣ ಮಾಡಲಾಗಿದೆ. ಇಷ್ಟೊಂದು ಹಣವನ್ನು ವೆಚ್ಚ ಮಾಡಿದ್ದರೂ ಯಾವುದೇ ಚಟುವಟಿಕೆಗಳು ನಡೆಯದಿರುವುದು ದುರಂತ.
ಬಳಕೆಗೆ ಬಾರದ ಬಿಎಂಶ್ರೀ ಭವನ, ಅನೈತಿಕ ಚಟುವಟಿಕೆಗಳ ತಾಣ
ತುಮಕೂರು: ಬಳಕೆಗೆ ಬಾರದ ಬಿಎಂಶ್ರೀ ಭವನ, ಅನೈತಿಕ ಚಟುವಟಿಕೆಗಳ ತಾಣ, ತಿರುಗಿ ನೋಡದ ಇಲಾಖೆ!
Posted by Naanu Gauri on Tuesday, September 8, 2020
ಈ ಕುರಿತು ಕಸಾಪ ಮಾಜಿ ಅಧ್ಯಕ್ಷ ಚಂದ್ರಪ್ಪ ಮಾತನಾಡಿ “ಬಿಎಂಶ್ರೀ ದೊಡ್ಡ ವಿದ್ವಾಂಸರು. ಅವರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಭವನ ಯಾವುದೇ ನಿರ್ವಣೆಯಿಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಬಾಗಿಲು ತೆಗೆದಿಲ್ಲ, ಕಸ ಹೊಡೆಯುತ್ತಿಲ್ಲ. ನಿರ್ವಹಣೆಯ ಹೊಣೆ ಹೊತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಪಿಗೆ ಗ್ರಾಮದತ್ತ ತಿರುಗಿಯೂ ನೋಡುತ್ತಿಲ್ಲ. ಸಾಹಿತ್ಯ, ಸಂಸ್ಕೃತಿ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕಿದ್ದ ಬಿಎಂಶ್ರೀ ಭವನದ ಸ್ಥಿತಿಯನ್ನು ನೋಡಿದರೆ ನೋವಾಗುತ್ತದೆ. ಭವನದ ನಿರ್ವಹಣೆಯ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಎಂದು ದೂರಿದ್ದಾರೆ.
ಹೌದು ಸಾಹಿತಿಗಳ ಹೆಸರಿನಲ್ಲಿ ಭವನ ನಿರ್ಮಿಸುವುದು ಸರಿಯಾದ ಕ್ರಮವೇ ಇರಬಹುದು. ಅದರೆ ಅದರ ನಿರ್ವಹಣೆ ಮಾಡದೇ ಇದ್ದರೆ, ಕಾರ್ಯಕ್ರಮಗಳಿಗೆ ಬಳಸಿಕೊಳ್ಳದಿದ್ದರೆ ಇಂಥ ಭವನಗಳ ನಿರ್ಮಾಣ ವ್ಯರ್ಥ ಎಸಿಸುತ್ತದೆ. ಗ್ರಾಮೀಣ ಭಾಗದಲ್ಲಿ ಯಾವುದೇ ಸಾಹಿತ್ಯಕ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಇಷ್ಟೊಂದು ಹಣ ವೆಚ್ಚ ಮಾಡಿದ್ದಾದರೂ ಏಕೆ ಎಂಬ ಮಾತುಗಳು ಕೂಡ ಕೇಳಿಬಂದಿವೆ.
ಬಿಎಂಶ್ರೀ ಭವನದಲ್ಲಿ ಸದಾ ಸಾಂಸ್ಕೃತಿಕ ಚಟುವಟಿಕೆಗಳ ನಡೆಯುವಂತೆ ಆಸಕ್ತಿ ವಹಿಸಬೇಕು. ಬಿಎಂಶ್ರೀ ಸಾಹಿತ್ಯದ ಕುರಿತು ಚರ್ಚೆ, ಸಂವಾದಗಳು ನಡೆಸಲು ಕಾರ್ಯಯೋಜನೆಗಳನ್ನು ಹಾಕಿಕೊಳ್ಳಬೇಕು. ಪ್ರತಿ ತಿಂಗಳಿಗೆ ಎರಡು ಸಾಹಿತ್ಯ, ಸಂಸ್ಕೃತಿ, ಜಾನಪದ ಮೇಳಗಳನ್ನು ನಡೆಸಿ ಕವಿ-ಕಲಾವಿದರನ್ನು ಗೌರವಿಸುವ ಕೆಲಸ ಆಗಬೇಕು. ಆಗ ಮಾತ್ರ ಇಂಥ ಭವನಗಳಿಗೆ ಅರ್ಥ ಬರುತ್ತದೆ. ಇಲ್ಲದಿದ್ದರೆ ಲಕ್ಷಾಂತರ ರೂಪಾಯಿ ವೆಚ್ಚೆದಲ್ಲಿ ನಿರ್ಮಾಣಗೊಂಡ ಬಿಎಂಶ್ರೀ ಭವನ ಪ್ರಯೋಜನಕ್ಕೆ ಬಾರದಂತೆ ಆಗುತ್ತವೆ. ಈಗಲಾದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಕಾರ್ಯಕ್ರಮಗಳನ್ನು ಯೋಜಿಸಿ ಸದಾ ಚಟುವಟಿಕೆಗಳು ನಡೆಯುವಂತಹ ವಾತಾವರಣ ನಿರ್ಮಾಣ ಮಾಡಬೇಕಿದೆ ಎಂಬ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ: 490 ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ಜಿಂದಾಲ್: ನಾವೆಲ್ಲಿಗೆ ಹೋಗಬೇಕೆಂದು ಕಾರ್ಮಿಕರ ಅಳಲು


