ಕೃಷಿ ಕಾಯ್ದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ತೀವ್ರ ಚಳಿಗೆ ಮೃತಪಟ್ಟ ಹುತಾತ್ಮರಿಗೆ ತುಮಕೂರಿನಲ್ಲಿ ಜನಸಂಗ್ರಾಮ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು. ಮಕ್ಕಳು, ಯುವತಿಯರು ಮೇಣದ ಬತ್ತಿಗಳನ್ನು ಹಿಡಿದು ಅಗಲಿದ ರೈತರಿಗೆ ನಮನ ಸಲ್ಲಿಸಿದರು.
ಹೋರಾಟದ ಸಂದರ್ಭದಲ್ಲಿ ಮಡಿದ ರೈತ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂದು ಸಂಘಟನೆಗಳ ಸದಸ್ಯರು ಹೇಳಿದರು.
ಜನಸಂಗ್ರಾಮ ಪರಿಷತ್ ಜಿಲ್ಲಾ ಮುಖಂಡ ಜವಾಹರ್ ಮಾತನಾಡಿ, “ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು 25 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಚಳಿಯನ್ನೂ ಲೆಕ್ಕಿಸದೆ ದೆಹಲಿ ಸಮೀಪದ ಸಿಂಘು ಗಡಿಯಲ್ಲಿ ಬೀಡುಬಿಟ್ಟಿದ್ದಾರೆ. ಆದರೆ ಕೇಂದ್ರ ಸರ್ಕಾರ ರೈತರ ಪ್ರತಿಭಟನೆಗೆ ಕಿಂಚಿತ್ತು ಗಮನ ಕೊಡುತ್ತಿಲ್ಲ. ದೇಶಕ್ಕೆ ಅನ್ನ ಕೊಡುವ ರೈತರೊಂದಿಗೆ ಮಾತನಾಡುವ ಸೌಜನ್ಯವನ್ನೂ ಪ್ರಧಾನಿ ತೋರುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮೋದಿ ಮನ್ ಕಿ ಬಾತ್ ಸಮಯದಲ್ಲಿ ತಟ್ಟೆ ಬಾರಿಸಿ: ಹೋರಾಟನಿರತ ರೈತರ ಕರೆ
“ಪ್ರಧಾನಿ ನರೇಂದ್ರ ಮೋದಿ ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ಆದರೆ ಅವರ ಸಂಪುಟ ಸಹದ್ಯೋಗಿಗಳು ರೈತರಿಗೆ ಅವಮಾನ ಮಾಡುತ್ತಿದ್ದಾರೆ. ತೋರಿಕೆಗೆ ರೈತರನ್ನು ಮಾತುಕತೆಗೆ ಆಹ್ವಾನಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಕೇಂದ್ರದ ಈ ನಡೆಯಲ್ಲಿ ಏನೋ ಹುನ್ನಾರ ಇದ್ದಂತೆ ಕಾಣುತ್ತಿದೆ. ಚಳವಳಿಯನ್ನು ಹತ್ತಿಕ್ಕಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಅನಗತ್ಯ ಮಾಹಿತಿಗಳನ್ನು ಹರಿಯಬಿಡುತ್ತಿದೆ” ಎಂದು ಅವರು ಟೀಕಿಸಿದರು.
“ರೈತರ ಹೋರಾಟವನ್ನು ಬಗ್ಗುಬಡಿಯಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಚಳವಳಿಕಾರರನ್ನು ಖಲಿಸ್ತಾನಿಗಳು, ನಕ್ಸಲರು, ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಬಿಂಬಿಸಲಾಗುತ್ತಿದೆ. ದೇಶಾದ್ಯಂತ ಪ್ರತಿಭಟನೆಗಳು ನಡೆದರೂ ಕೇಂದ್ರ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇದು ದೇಶ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ರೈತರ ಬೆನ್ನಿಗೆ ಎಲ್ಲಾ ವರ್ಗದ ಜನರೂ ನಿಲ್ಲಬೇಕು. ಸಾಮಾನ್ಯ ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಹಾಗಾಗಿ ಜನರನ್ನು ಒಗ್ಗೂಡಿಸಲು ಸಾಮಾನ್ಯ ವೇದಿಕೆಯ ನಿರ್ಮಾಣ ಆಗಬೇಕು. ಆ ಮೂಲಕ ಸರ್ಕಾರದ ವಿರೋಧಿ ನೀತಿಗಳನ್ನು ಪ್ರಶ್ನಿಸಬೇಕು” ಎಂದು ಹೇಳಿದರು.
ಪರಿಸರವಾದಿ, ಜನಪರ ಹೋರಾಟಗಾರ ಸಿ.ಯತಿರಾಜು ಮಾತನಾಡಿ ಕೇಂದ್ರ ಸರ್ಕಾರ ತನ್ನ ಧೋರಣೆಯನ್ನು ಬದಲಿಸಿಕೊಳ್ಳಬೇಕು. ರೈತರ ಸಮಸ್ಯೆಗಳನ್ನು ಆಲಿಸಬೇಕು. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ರೈತ ಮುಖಂಡ ಸಿ.ಅಜ್ಜಪ್ಪ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಗೋದಿ ಮೀಡಿಯಾಗಳಿಗೆ ಸೆಡ್ಡು: ಸ್ವಂತ ಚಾನೆಲ್ ಆರಂಭಿಸಿದ ದೆಹಲಿಯ ಹೋರಾಟನಿರತ ರೈತರು!


