ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ಅಧಿಕೃತ ಅನುಮತಿಯಿಲ್ಲದೆ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಬಿಹಾರದ ದರ್ಭಂಗಾ ಜಿಲ್ಲಾಡಳಿತ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಗುರುವಾರ ದೂರು ನೀಡಿದೆ. ಅದನ್ನು ಆಧರಿಸಿ ಪೊಲೀಸರು ಎರಡು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ರಾಹುಲ್ ದರ್ಭಂಗಾ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ಕಾರ್ಯಕ್ರಮ ನಡೆಸಿ ಪಾಟ್ನಾಗೆ ತೆರಳಿದ ಬೆನ್ನಲ್ಲೇ ಪ್ರಕರಣ ದಾಖಲಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳಡಿ ದರ್ಭಂಗಾದ ಲಹೇರಿಯಾಸರೈ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳಲ್ಲಿ ರಾಹುಲ್ ಗಾಂಧಿ ಜೊತೆಗೆ ಇತರ 18 ಜನರನ್ನು ಹೆಸರಿಸಲಾಗಿದೆ. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅಲೋಕ್ ಕುಮಾರ್ ಮತ್ತು ಬ್ಲಾಕ್ ಕಲ್ಯಾಣ ಸಮಾಜ ಅಧಿಕಾರಿ ಖುರ್ಸಿದ್ ಆಲಂ ನೀಡಿದ ಎರಡು ಪ್ರತ್ಯೇಕ ದೂರುಗಳ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ವರದಿ ವಿವರಿಸಿದೆ.
ಎಫ್‌ಐಆರ್ ಪ್ರಕಾರ, ಕಾಂಗ್ರೆಸ್ ಪಕ್ಷಕ್ಕೆ ಟೌನ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ, ಅವರು ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ಸಭೆ ನಡೆಸಿದ್ದಾರೆ. ಇದಕ್ಕೆ ಯಾವುದೇ ಅನುಮತಿ ಇರಲಿಲ್ಲ ಎಂದು ಅಧಿಕಾರಿಗಳು ಆರೋಪಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆರೋಪಗಳ ಕುರಿತು ದೆಹಲಿಗೆ ತೆರಳುವ ಮೊದಲು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ “ನಾನು ಹಾಸ್ಟೆಲ್‌ಗೆ ಹೋಗುವುದನ್ನು ತಡೆಯಲು ನೀವು ಬಯಸಿದ್ದರೆ ತಡೆಯಿರಿ ಎಂದು ನಾನು ಅಧಿಕಾರಿಗಳಿಗೆ ಹೇಳಿದ್ದೆ. ಆದರೆ, ನಾನು ಹೋದಾಗ ಅವರು ತಡೆದಿಲ್ಲ ಎಂದು ಹೇಳಿದ್ದಾಗಿ ವರದಿ ತಿಳಿಸಿದೆ.
“ಇವೆಲ್ಲವೂ ನನಗೆ ಪದಕಗಳು, ನನ್ನ ವಿರುದ್ಧ 30-32 ಪ್ರಕರಣಗಳಿವೆ” ಎಂದು ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಿಹಾರ: ತಳ ಸಮುದಾಯಗಳ ‘ಭಯದಿಂದ’ ಮೋದಿ ಜಾತಿ ಜನಗಣತಿ ಘೋಷಣೆ; ರಾಹುಲ್ ಗಾಂಧಿ


