ಮೊಹಾಲಿ ನ್ಯಾಯಾಲಯವು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದ ಒಂದು ದಿನದ ನಂತರ, ಸ್ವಘೋಷಿತ ಕ್ರಿಶ್ಚಿಯನ್ ಧರ್ಮಪ್ರಚಾರಕ ಬಜಿಂದರ್ ಸಿಂಗ್ ವಿರುದ್ಧ ಶನಿವಾರ (ಮಾ.29) ಮತ್ತಿಬ್ಬರು ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
ಅಕಾಲಿ ತಕ್ತ್‌ನ ಅಧಿಕಾರ ನಡೆಸುತ್ತಿರುವ ಗ್ಯಾನಿ ಕುಲದೀಪ್ ಸಿಂಗ್ ಗರ್ಗಾಜ್ ಅವರನ್ನು ಭೇಟಿ ಮಾಡಿದ ಈ ಇಬ್ಬರು ಮಹಿಳೆಯರು ಈ ಮಾಹಿತಿ ನೀಡಿದ್ದಾರೆ. ಪಾದ್ರಿ ಮತ್ತು ಧರ್ಮಪ್ರಚಾರಕ ಎಂದು ಘೋಷಿಸಿಕೊಂಡಿರುವ ಬಜಿಂದರ್, ತನ್ನ ದೇರಾದಲ್ಲಿ (ಕಾನ್ವೆಂಟ್) ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಅಕಾಲಿ ತಕ್ತ್‌ನ ಕಾರ್ಯಾಲಯ ಹೊರಡಿಸಿದ ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಈ ಸಂಬಂಧ ಪಂಜಾಬ್ ಪೊಲೀಸರು ಎಫ್ಐಆರ್ ದಾಖಲಿಸಿರುವುದನ್ನೂ ಅಕಾಲಿ ತಕ್ತ್ ದೃಢಪಡಿಸಿದೆ.
ಎಫ್ಐಆರ್ ದಾಖಲಿಸಿದ ಬಳಿಕವೂ ಪಾದ್ರಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದ ಕಾರಣ ತಮಗೆ ಬೆದರಿಕೆ ಹಾಕಲಾಗುತ್ತಿತ್ತು ಮತ್ತು ದಾಳಿ ನಡೆದಿತ್ತು ಎಂದು ಮಹಿಳೆಯರು ದೂರಿದ್ದಾರೆ. ಈ ಹಿನ್ನೆಲೆ ಅವರು ನೆರವಿಗಾಗಿ ಅಕಾಲಿ ತಕ್ತ್‌ಗೆ ಮನವಿ ಮಾಡಿಕೊಂಡಿದ್ದಾಗಿ ತಿಳಿಸಿದೆ.
ಪಾದ್ರಿಯ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕುಲದೀಪ್ ಸಿಂಗ್ ಗರ್ಗಾಜ್, ಆರೋಪಿಗಳ ವಿರುದ್ಧ ತಕ್ಷಣ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಇಬ್ಬರು ಮಹಿಳೆಯರಿಗೆ ರಕ್ಷಣೆ ಒದಗಿಸುವಂತೆ ಪಂಜಾಬ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಮಹಿಳೆಯರು ತಮಗಾದ ಅನ್ಯಾಯ ತಿಳಿಸಲು ಮುಂದೆ ಬಂದ ಧೈರ್ಯವನ್ನು ಜಥೇದಾರ್ ಶ್ಲಾಘಿಸಿದ್ದು, ಅವರಿಗೆ ಬೆಂಬಲ ನೀಡುವ ಭರವಸೆ ಕೊಟ್ಟಿದ್ದಾರೆ. ಗುರುಸಾಹಿಬ್ ನಲ್ಲಿ ನಂಬಿಕೆ ಇಡುವಂತೆ ಮಹಿಳೆಯರಿಗೆ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಒಬ್ಬರು ಮಹಿಳೆ, “ಬಜಿಂದರ್ ಮಹಿಳೆಯೊಬ್ಬರಿಗೆ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಮಹಿಳೆ ನಾನೆ. ಜಥೇದಾರ್ ಅವರನ್ನು ಭೇಟಿಯಾದ ಬಳಿಕ ನಮಗೆ ನ್ಯಾಯ ಸಿಗುವ ವಿಶ್ವಾಸ ಮೂಡಿದೆ. ನಾವು ಹಲವರ ಬಳಿ ಸಹಾಯ ಕೇಳಿದ್ದೇವೆ. ಕೆಲವರು ಸಹಾಯ ಮಾಡಿದ್ದಾರೆ, ಇನ್ನು ಕೆಲವರು ನಿರ್ಲಕ್ಷಿಸಿದ್ದಾರೆ. ನಾನು ಕಳೆದ 10 ವರ್ಷಗಳಿಂದ ಬಜಿಂದರ್ ಅವರ ಚರ್ಚ್‌ಗೆ ಹೋಗುತ್ತಿದ್ದೆ. ಕಳೆದ ಆರೇಳು ವರ್ಷಗಳಿಂದ ಅವರ ಡೇರಾದಲ್ಲಿ ಸೇವೆ ಮಾಡಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.
ಜೈಲು ಸೇರಿದ ಬಜಿಂದರ್
2018ರ ಅತ್ಯಾಚಾರ ಪ್ರಕರಣವೊಂದರಲ್ಲಿ ತಪ್ಪಿತಸ್ಥನೆಂದು ಸಾಬೀತಾದ ನಂತರ ಶುಕ್ರವಾರ (ಮಾ.29) ಬಜಿಂದರ್ ಸಿಂಗ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಪಂಜಾಬ್‌ನ ಮೊಹಾಲಿಯ ನ್ಯಾಯಾಲಯವು ಪಾದ್ರಿಯನ್ನು ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಘೋಷಿಸಿದೆ. ಇದೇ ಪ್ರಕರಣದ ಇತರ ಐವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
2018ರಲ್ಲಿ ಪಂಜಾಬ್‌ನ ಜಿರಾಕ್‌ಪುರದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ದಾಖಲಾದ ಪ್ರಕರಣದ ವಿಚಾರಣೆಗಾಗಿ ಮಾರ್ಚ್ 29 ರಂದು ಪಾದ್ರಿ ಬಜಿಂದರ್ ಸಿಂಗ್ ಸೇರಿದಂತೆ ಆರು ಆರೋಪಿಗಳು ಮೊಹಾಲಿಯ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ವಿಚಾರಣೆ ವೇಳೆ ಪಾದ್ರಿಯ ಬೆಂಬಲಿಗರು ಪ್ರತಿಭಟನೆ ನಡೆಸಿದರೆ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗಬಹುದು ಎಂದು ನಿರೀಕ್ಷಿಸಿ, ನ್ಯಾಯಾಲಯದ ಒಳಗೆ ಮತ್ತು ಹೊರಗೆ ಸುಮಾರು 150 ಪೊಲೀಸರನ್ನು ನಿಯೋಜಿಸಲಾಗಿತ್ತು. ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಣೆ ಮಾಡುತ್ತಿದ್ದಂತೆ ಪಾದ್ರಿಯನ್ನು ಪೊಲೀಸರು ತಕ್ಷಣ ರೋಪರ್ ಜೈಲಿಗೆ ಕರೆದೊಯ್ದಿದ್ದಾರೆ.
ಮಹಾರಾಷ್ಟ್ರ | ಹಾಸ್ಯನಟ ಕುನಾಲ್ ಕಾಮ್ರಾ ವಿರುದ್ಧ ಇನ್ನೂ 3 ಎಫ್ಐಆರ್


