ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬಲವಂತವಾಗಿ ಬೆಂಬಲಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ತಿಳಿಸಿದ್ದಾರೆ.
“ನಾನು ರಾಜಕೀಯ ಪಕ್ಷದ ವಿರುದ್ಧ ಹೋರಾಡುತ್ತಿಲ್ಲ, ಆದರೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಡುತ್ತಿದ್ದೇನೆ” ಎಂದು ಸಿನ್ಹಾ ಅವರು ಗುವಾಹಟಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಉದ್ಧವ್ ಠಾಕ್ರೆ ಆರಂಭದಲ್ಲಿ ವಿರೋಧ ಪಕ್ಷದ ಅಭ್ಯರ್ಥಿಯ ಬೆಂಬಲಿಗರಾಗಿದ್ದರು. ಆದರೆ ಶಿವಸೇನೆಯ 16 ಜನಪ್ರತಿನಿಧಿಗಳ ಗುಂಪು ಒತ್ತಾಯಿಸಿದ ನಂತರ ಈ ವಾರದ ಆರಂಭದಲ್ಲಿ ಮುರ್ಮು ಅವರಿಗೆ ಬೆಂಬಲವನ್ನು ಘೋಷಿಸಿದ್ದಾರೆ.
ಮಂಗಳವಾರ ಪ್ರತಿಕ್ರಿಯೆ ನೀಡಿದ್ದ ಉದ್ಧವ್, “ಪ್ರಸ್ತುತ ರಾಜಕೀಯ ವಾತಾವರಣವನ್ನು ನೋಡಿದರೆ, ನಾನು ಮುರ್ಮು ಅವರನ್ನು ಬೆಂಬಲಿಸಬಾರದಿತ್ತು, ಆದರೆ ನಾವು ಸಂಕುಚಿತ ಮನಸ್ಸಿನವರಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಆದಾಗ್ಯೂ, ಅವರು ಮುರ್ಮು ಅವರಿಗೆ ಬೆಂಬಲ ನೀಡಲು ಬಯಸಿದ್ದಾರೆ. ಶಿವಸೇನೆ ಪಕ್ಷದಲ್ಲಿ ಬೆಳೆಯುತ್ತಿರುವ ವಿಭಜನೆಯನ್ನು ತಡೆಯುವ ಪ್ರಯತ್ನವಾಗಿ ಉದ್ಧವ್ ಈ ಹೆಜ್ಜೆ ಇರಿಸಿದ್ದಾರೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ ಬಂಡಾಯವೆದ್ದ ನಂತರ ರಾಷ್ಟ್ರಪತಿ ಚುನಾವಣೆಗೂ ಮುನ್ನ ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಕಳೆದ ತಿಂಗಳು ಪತನಗೊಂಡಿತ್ತು. 55 ಸೇನಾ ಶಾಸಕರ ಪೈಕಿ 40 ಮಂದಿ ಶಿಂಧೆ ಅವರನ್ನು ಬೆಂಬಲಿಸಿದ್ದರು. ಸಂಸತ್ತಿನಲ್ಲೂ ಕನಿಷ್ಠ ಆರು ಮಂದಿ ಸಂಸದರು ಇನ್ನೊಂದು ಬದಿಯಲ್ಲಿದ್ದಂತೆ ಕಂಡುಬಂದಿತು.
ರಾಷ್ಟ್ರಪತಿ ಚುನಾವಣೆಗೆ ಮುನ್ನ ಪ್ರತಿಪಕ್ಷಗಳನ್ನು ದುರ್ಬಲಗೊಳಿಸಲು ಕೇಂದ್ರವು ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಯಶವಂತ್ ಸಿನ್ಹಾ, “ಜಾರಿ ನಿರ್ದೇಶನಾಲಯದ ದುರುಪಯೋಗ ನಡೆಯುತ್ತಿದೆ. ಸೆಂಟ್ರಲ್ ಏಜೆನ್ಸಿಗಳನ್ನು ಬಳಸಿಕೊಂಡು ಚುನಾಯಿತ ಸರ್ಕಾರಗಳನ್ನು ಉರುಳಿಸುತ್ತಿದ್ದಾರೆ” ಎಂದು ದೂರಿದ್ದಾರೆ.
ರಾಷ್ಟ್ರಪತಿ ಚುನಾವಣೆಗೂ ಮುನ್ನ ವಿರೋಧ ಪಕ್ಷಗಳನ್ನು ಒಡೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಿನ್ಹಾ ಆರೋಪಿಸಿದ್ದಾರೆ.
ಇದನ್ನೂ ಓದಿರಿ: 10% ಮೀಸಲಾತಿ: ಆರ್‌ಎಸ್‌ಎಸ್ ಮಂದಿ ಹಬ್ಬಿಸಿರುವ 100% ಸುಳ್ಳುಗಳು!
ಆದರೆ ಪ್ರಾದೇಶಿಕ ಪಕ್ಷಗಳು ಒಂದರ ನಂತರ ಒಂದರಂತೆ ಮುರ್ಮುವನ್ನು ಬೆಂಬಲಿಸಲು ಉತ್ಸುಕತೆಯನ್ನು ತೋರಿಸುತ್ತಿದ್ದರೂ, ಸಿನ್ಹಾ ಲವಲವಿಕೆಯಿಂದ ಇದ್ದಾರೆ.
“ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ನನ್ನನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷವು ಶೀಘ್ರದಲ್ಲೇ ಬೆಂಬಲ ಸೂಚಿಸುವುದೆಂದು ನನಗೆ ತಿಳಿದಿದೆ. ವಿರೋಧ ಪಕ್ಷದ ಪಾಳಯದಲ್ಲಿ ಕೇವಲ ಒಂದು ಪಕ್ಷ ಮಾತ್ರ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ – ಅದು ಶಿವಸೇನೆ. ತೆಲಂಗಾಣ ರಾಷ್ಟ್ರ ಸಮಿತಿಯು ವಿರೋಧ ಪಕ್ಷದ ಸಭೆಯ ಭಾಗವಾಗಿರಲಿಲ್ಲ, ಆದರೆ ಆ ಪಕ್ಷವೂ ನನ್ನನ್ನು ಬೆಂಬಲಿಸಲಿದೆ. ಆದ್ದರಿಂದ ನಮಗೆ ಸಾಕಷ್ಟು ವಿರೋಧ ಪಕ್ಷದ ಬೆಂಬಲವಿದೆ” ಎಂದು ಸಿನ್ಹಾ ಪ್ರತಿಪಾದಿಸಿದ್ದಾರೆ.


