ಉಡುಪಿ ಜಿಲ್ಲೆಯ ಕಾರ್ಕಾಳ ತಾಲೂಕಿನ ಕಕ್ಕುಂದೂರು ಗ್ರಾಮದಲ್ಲಿರುವ ಪ್ರಗತಿ ಕ್ರೈಸ್ತ ಪ್ರಾರ್ಥನಾಲಯದಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ, ಬಿಜೆಪಿ ಬೆಂಬಲಿತ ಸಂಘ ಪರಿವಾರದ ಕಾರ್ಯಕರ್ತರು ದಾಳಿ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಾರ್ಥನೆಯ ಸಮಯದಲ್ಲಿ ಸುಮಾರು 25 ಜನರು ಬಂದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಕಾರ್ಕಳ ನಗರ ಠಾಣೆಯ ಅಧಿಕಾರಿಯೊಬ್ಬರು ನಾನುಗೌರಿ.ಕಾಂಗೆ ತಿಳಿಸಿದ್ದಾರೆ.
ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿನ ನಕ್ರೆ ಆನಂದಿ ಮೈದಾನದ ಪ್ರಗತಿ ಪ್ರಾಥನಾಲಯ ಕಾರ್ಯಾಚರಿಸುತ್ತಿದೆ. ಅಲ್ಲಿ ಬೆನಡಿಕ್ಟ್ ಎಂಬವರು ಅಕ್ರಮವಾಗಿ ಮತಾಂತರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿತ ಸಂಘಟನೆಯ ಕಾರ್ಯಕರ್ತರು, ಪ್ರಾರ್ಥನಾಲಯಕ್ಕೆ ಏಕಾಏಕಿ ನುಗ್ಗಿ ಗಲಾಟೆ ನಡೆಸಿದ್ದಾರೆ.
ಇದನ್ನೂ ಓದಿ: ರೋಹಿಂಗ್ಯಾ ನಿರಾಶ್ರಿತರಿಗೆ ದೆಹಲಿ ಸರ್ಕಾರ ಸೌಲಭ್ಯಗಳನ್ನು ಒದಗಿಸಿದೆ ಎಂದು ಸುಳ್ಳು ಸುದ್ದಿ ಹಂಚುತ್ತಿರುವ ಬಿಜೆಪಿ
ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿತ ಸಂಘ ಪರಿವಾರದ ಸದಸ್ಯರು ಉಡುಪಿಯ ಕಾರ್ಕಳದ ಪ್ರಗತಿ ಚರ್ಚ್ ಪ್ರಾರ್ಥನಾಲಯದ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ.#NaanuGauri pic.twitter.com/9lDYQKP5JR
— Naanu Gauri (@naanugauri) September 10, 2021
ದಾಳಿಯ ವೇಳೆ ಸ್ಥಳದಲ್ಲಿ ಹಲವಾರು ಮಹಿಳೆಯರು, ಮಕ್ಕಳು ಪ್ರಾರ್ಥನೆ ನಡೆಸುತ್ತಿದ್ದರು ಎಂದು ವರದಿಯಾಗಿದೆ. ಪ್ರಾರ್ಥನೆ ಮಾಡುತ್ತಿದ್ದಾಗ ಒಳ ನುಗ್ಗಿದ ದುಷ್ಕರ್ಮಿಗಳು ಅಲ್ಲಿ ಗಲಾಟೆ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿದೆ ಎಂದು ವರದಿಯಾಗಿದೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಕಾರ್ಕಳ ನಗರ ಠಾಣೆಯ ಎಸ್‌ಐ, “ಘಟನೆಗೆ ಸಂಬಂಧಿಸಿ ಬೆನಡಿಕ್ಟ್ ಎಂಬುವವರು ದೂರು ನೀಡಿದ್ದಾರೆ. ಪ್ರಾರ್ಥನೆ ನಡೆಸುತ್ತಿದ್ದಾಗ ಸುಮಾರು 25 ರಷ್ಟು ಮಂದಿ ಬಂದು ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ತನಿಖೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ‘ಟೂಲ್‌ಕಿಟ್’ ಆರೋಪ ಸುಳ್ಳು: ಬಿಜೆಪಿಗೆ ಭಾರೀ ಮುಖಭಂಗ


