Homeಮುಖಪುಟಶಿರ್ವ ಚರ್ಚ್‌ ಫಾ. ಮಹೇಶ್‌ ಸಾವಿನ ಪ್ರಕರಣ: ಸತ್ಯ ಬರೆದುದ್ದಕ್ಕೆ ಕೇಸು ದಾಖಲಿಸುವುದಾಗಿ ಹಾರಾಡಿದ್ದ ವ್ಯಕ್ತಿ...

ಶಿರ್ವ ಚರ್ಚ್‌ ಫಾ. ಮಹೇಶ್‌ ಸಾವಿನ ಪ್ರಕರಣ: ಸತ್ಯ ಬರೆದುದ್ದಕ್ಕೆ ಕೇಸು ದಾಖಲಿಸುವುದಾಗಿ ಹಾರಾಡಿದ್ದ ವ್ಯಕ್ತಿ ಜೈಲು ಸೇರಿದ ಕಥೆ!

- Advertisement -
- Advertisement -

ಉಡುಪಿಯ ಶಿರ್ವ ಚರ್ಚ್‌ ಫಾದರ್‌ ಮಹೇಶ್‌ ಸಾವಿನ ಪ್ರಕರಣದಲ್ಲಿ ಬರೋಬ್ಬರಿ ನಾಲ್ಕುವರೆ ತಿಂಗಳ ನಂತರ ಪೊಲೀಸರು ಆರೋಪಿ ಮುದರಂಗಡಿ ಗ್ರಾ.ಪಂ ಅಧ್ಯಕ್ಷ ಡೇವಿಡ್ ಡಿಸೋಜಾನನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ತನಿಖೆ ತೀವ್ರಗೊಂಡಿದೆ.

ವಿಶೇಷವೆಂದರೆ ಈತನೇ ಆರೋಪಿಯಾಗಿರಬಹುದು, ಅದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಮೂರೂವರೆ ತಿಂಗಳ ಹಿಂದೆಯೇ ನವೆಂಬರ್‌ 06ರಂದು ನ್ಯಾಯಪಥ ಪತ್ರಿಕೆ ಮತ್ತು ನಾನುಗೌರಿ.ಕಾಂ ತನಿಖಾ ವರದಿಯೊಂದನ್ನು ಪ್ರಕಟಿಸಿತ್ತು. ಆತ ಈಗ ಸದ್ಯಕ್ಕೆ ಬಂಧನದಲ್ಲಿರುವ ಆರೋಪಿ ಡೇವಿಡ್ ಡಿಸೋಜಾ ಕಚೇರಿಗೆ ಫೋನ್‌ ಮಾಡಿ ಸುಳ್ಳು ಸುದ್ದಿ ಪ್ರಕಟಿಸಿದ್ದೀರಿ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ ಹಾರಾಡಿದ್ದರು.!

ವಾಟ್ಸಾಪ್‌ನಲ್ಲಿ ನವೆಂಬರ್‌ 07ರಂದು ಮಂಗಳೋರಿಯನ್‌.ಕಾಂ ಮತ್ತು ಪೋರ್ಸ್‌.ಕಾಂ ವೆಬ್‌ಸೈಟಿನ ಸುದ್ದಿಯ ಲಿಂಕ್‌ ಕಳಿಸಿ, ನಾವು ಎಸ್‌ಪಿಗೆ ದೂರು ನೀಡಿದ್ದೇವೆ. ಅವರು ನನ್ನ ಹೆಸರು ಪ್ರಕಟಿಸಬಾರದೆಂದು ಆದೇಶಿಸಿದ್ದಾರೆ, ದಯವಿಟ್ಟು ಲೇಖನ ವಾಪಸ್‌ ತೆಗೆದುಕೊಳ್ಳಿ ಎಂದೆಲ್ಲಾ ಹೇಳಿದ್ದರು. ಆದರೆ ಈಗ ಅವರು ಜೈಲಿನಲ್ಲಿದ್ದು, ವಿಚಾರಣೆ ಎದುರಿಸುವ ಸ್ಥಿತಿಗೆ ಬಂದಿದ್ದಾರೆ.

ಅಂದು ನಾನುಗೌರಿ.ಕಾಂ ಪ್ರಕಟಿಸಿದ್ದ ಸ್ಟೋರಿ ಈ ಕೆಳಗಿದೆ ಓದಿ.

ಉಡುಪಿ: ಫಾದರ್ ಮಹೇಶ್ “ಆತ್ಮಹತ್ಯೆ” ಯಾಕಾಯ್ತು?!

ಆತ ಉಡುಪಿಯ ಕ್ರಿಶ್ಚಿಯನ್ ಧರ್ಮ ಪ್ರಾಂತ್ಯದ ಶಿರ್ವ ಚರ್ಚ್‌ನ ಸ್ಫುರದ್ರೂಪಿಯೂ ನ್ಯಾಯ ನಿಷ್ಠೂರನೂ ಆದ ಫಾದರ್. ಅಲ್ಲಿಯೇ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ನಡೆಸುತ್ತಿದ್ದ ಡಾನ್ ಬಾಸ್ಕೋ ವಿದ್ಯಾಸಂಸ್ಥೆಯ ಪ್ರಾಚಾರ್ಯರೂ ಆಗಿದ್ದರು. ಬಹುಮುಖ ಪ್ರತಿಭೆ, ಸಂಸ್ಥೆಯನ್ನು ಕಟ್ಟಿ ಬೆಳೆಸುವ ಕರ್ತೃತ್ವ ಶಕ್ತಿ, ಆಡಳಿತಾತ್ಮಕ ಚಾಕಚಕ್ಯತೆ, ಜನ ನಿಷ್ಠಸೇವೆ, ಪಾಂಡಿತ್ಯಪೂರ್ಣ ಅಧ್ಯಾಪನ, ಧಾರ್ಮಿಕ ಪ್ರವಚನಗಳಿಂದ ಉಡುಪಿ ಮತ್ತು ಮಂಗಳೂರು ಕ್ಯಾಥೋಲಿಕ್ ವಲಯದಲ್ಲಿ ಮನೆ ಮಾತಾಗಿದ್ದರು. ಇಂಥ ಜನಾನುರಾಗಿ ಪಾದ್ರಿ (ಫಾದರ್) ಒಂದು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ತನ್ನ ಪ್ರಾಂಶುಪಾಲರ ಕೊಠಡಿಯಲ್ಲಿ ಹೆಣವಾಗಿ ನೇತಾಡುತ್ತಿದ್ದರು!!

ಶಿರ್ವ ಇಗರ್ಜಿ (ಚರ್ಚ್‌)ಯ ಸಹಾಯಕ ಧರ್ಮ ಗುರುವಿನ ಹೆಸರು ಮಹೇಶ್ ಡಿಸೋಜಾ ಎಂಥ ಟೀಕೆ ಬಂದರೂ ಎದುರಿಸುವ ಛಾತಿಯ ಫಾದರ್. ಮಹೇಶ್ ಕಾಲೇಜಿನಲ್ಲೇ ಸಾವಿಗೀಡಾಗಿದ್ದರೂ ಚರ್ಚ್‌ನ ಅಧಿಕೃತರಾಗಲಿ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಲಿ ಅಥವಾ ಆತನ ಕುಟುಂಬಿಕರಾಗಲಿ ಒಂದು ಪೊಲೀಸ್ ಕಂಪ್ಲೇಂಟೂ ಕೊಡಲಿಲ್ಲ. ಸಂಶಯದ ಪುಕಾರುಗಳು ಸಹಜವಾಗೇ ದಿನಕ್ಕೊಂದರಂತೆ ಎದ್ದಿತು! ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷನೂ ರೌಡಿ ಶೀಟರನೂ ಆಗಿರುವ ಡೇವಿಡ್ ಡಿಸೋಜಾನ ಗೂಂಡಾ ಪಡೆ ಪಾದ್ರಿ(ಫಾದರ್)ಯನ್ನು ಹೊಡೆದು ಕೊಂದು ನೇಣಿಗೇರಿಸಿದೆ ಎಂದು ಜನರಾಡಿಕೊಂಡರು; ಪಾದ್ರಿಗೆ ಗ್ರಾಪಂ ಮಟ್ಟದ ಪುಢಾರಿಯ ಹೆಂಡತಿಯು ಜೊತೆ ಹತ್ತಿರದ ಸಂಪರ್ಕವಿತ್ತು, ಅದೇ ಮುಳುವಾಯ್ತೆಂದರು. ಇಗರ್ಜಿಯ ಪ್ರಧಾನ ಧರ್ಮಗುರು ಡೇವಿಸ್ ಡೇಸಾ ಮತ್ತು ಪಾದ್ರಿ ಮಹೇಶ್ ಸಂಬಂಧ ಹಳಸಿತ್ತು ಮತ್ತು ಬಿಷಪ್ ಕೂಡ ಆತನೊಂದಿಗೆ ಕಠೋರವಾಗಿ ನಡೆದುಕೊಳ್ಳುತ್ತಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದರು. ಸಂಸ್ಥೆಯಲ್ಲಾದ ಹಣಕಾಸಿನ ಲಫಡಾ ಸ್ಥಳೀಯ ಪುಂಡರಿಗೆ ಬ್ಲ್ಯಾಕ್‌ಮೇಲ್‌ಗೆ ಅಸ್ತ್ರವಾಗಿದ್ದರಿಂದ ಹೆದರಿದ ಪಾದ್ರಿ ಉರುಳಾಕಿಕೊಂಡರೆಂದರು.

ಸ್ಥಳೀಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಬ್ದುಲ್ ಖಾದರ್ ಮತ್ತು ಎಸ್ಪಿ ನಿಶಾ ಜೇಮ್ಸ್ ಅದ್ಯಾಕೋ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಪಾದ್ರಿ ಮಹೇಶ್ ಸಾವಿಗೀಡಾಗುವಾಗ ವಿದೇಶದಲ್ಲಿದ್ದ ಇಗರ್ಜಿಯ ಪ್ರಧಾನ ಗುರು ಡೇವಿಸ್ ಡೇಸಾ ಊರಿಗೆ ಬಂದರೂ ಉದಾಸೀನದಲ್ಲೇ ಉಳಿದರು. ಕ್ರಿಶ್ಚಿಯನ್ ಸಮುದಾಯವೂ ಏಕೆ ಪ್ರತಿಭಟನೆ ಮಾಡದೆ ಸುಮ್ಮನಿದ್ದೆ ಎಂಬ ಜಿಜ್ಞಾಸೆಯೂ ಶುರುವಾಯ್ತು. ಎಲ್ಲವೂ ತಣ್ಣಗಾಗಿ ಪ್ರಕರಣವೂ ಪಾದ್ರಿಯ ಕಳೆಬರದೊಂದಿಗೇ ದಫನ್ ಆಯ್ತೆಂಬ ವಾತಾವರಣ ರೂಪಿತವಾಯಿತು. ಅಂದು ಪಾದ್ರಿ ಮಹೇಶ್ ಸಮಾಧಿ ಮಾಡಿದ ಜಾಗದಲ್ಲಿ ಮಾಸಿಕ ಪೂಜೆಯಿತ್ತು. ಸಾವಿರಾರು ಭಕ್ತಾದಿಗಳು ಸೇರಿದ್ದರು. ಈ ಜನರೆಲ್ಲ ಪ್ರವಾಹೋಪಾದಿಯಾಗಿ ಚರ್ಚ್ ಬಳಿ ಬಂದು ಜಮೆಯಾದರು.

ಪಾದ್ರಿ ಮಹೇಶ್ ಅನುಮಾನಾಸ್ಪದ ಸಾವಿನ ತನಿಖೆ ಆಗಬೇಕು. ನ್ಯಾಯ ಬೇಕು ಎಂದು ಕೂಗಾಡತೊಡಗಿದರು. ಪ್ರತಿಭಟನಾರ್ಥವಾಗಿ ಇಗರ್ಜಿಯ ದೊಡ್ಡ ಘಂಟೆಯನ್ನು ಬಾರಿಸಿದರು (ಹೀಗೆ ಚರ್ಚಿನ ಘಂಟೆ ಬಾರಿಸುವುದು ಅಪಾಯ-ಅನಾಹುತ ಆದಾಗ ಮಾತ್ರ) ಇಗರ್ಜಿಯ ಆಡಳಿತಗಾರರು ಬೆಚ್ಚಿಬಿದ್ದರು. ನೀವ್ಯಾಕೆ ಪಾದ್ರಿ ಸಾವಿನ ತನಿಖೆ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ ಎಂದು ಜನರು ಪ್ರಶ್ನಿಸಿದಾಗ ಚರ್ಚ್ ಅಧಿಕೃತದಲ್ಲಿ ಸರಿಯಾದ ಉತ್ತರವೇ ಇರಲಿಲ್ಲ. ಮುದರಂಗಡಿ ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜಾನೇ ಹೊಡೆದು ಕೊಂದಿದ್ದಾನೆ ಅಥವಾ ಆತನ ಬೆದರಿಕೆ ತಾಳಲಾಗದೆ ಹೆದರಿಕೆಯಿಂದ ಪಾದ್ರಿ ಮಹೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಶಂಕೆ ಪ್ರತಿಭಟನಾಕಾರರಲ್ಲಿದೆ.

ಇದಕ್ಕೊಂದು ಬಲವಾದ ಕಾರಣವೂ ಇದೆ. ಶಿರ್ವ-ಮುದರಂಗಡಿ ಏರಿಯಾ ತನ್ನ ಅಂಕಿತದಲ್ಲಿರಬೇಕು; ಚರ್ಚ್ ಆಡಳಿತ, ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆ ತನ್ನ ಆಣತಿ ಮೀರುವಂತಿಲ್ಲ ಎಂಬ ಪೊಗರಿನ ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜಾ ಮತ್ತು ಪಾದ್ರಿ ಮಹೇಶ್ ಮಧ್ಯೆ ಅಕ್ಟೋಬರ್ 11 ರಂದು ವಾಗ್ವಾದ ನಡೆದಿತ್ತು. ಡೇವಿಡ್ ಮಗ ಡೇವಿನ್ ಡಾನ್ ಬಾಸ್ಕೋ ಕಾಲೇಜಿನಲ್ಲೇ ಗೆಳೆಯರ ಜತೆಗೂಡಿ ಡ್ರಗ್ಸ್ ವಿನಿಮಯ ಸೇವನೆ ಮಾಡುತ್ತಾನೆಂದು ಆರೋಪ ಊರಲ್ಲೆಲ್ಲಾ ಕೇಳಿಬರುತ್ತಿದೆ. ಕಾಲೇಜಿನ ಸಿಸಿ ಕ್ಯಾಮೆರಾದಲ್ಲೂ ಡೇವಿನ್ ಪಠಾಲಮ್ಮಿನ ಅನಾಚಾರ ದಾಖಲು ಆಗಿದೆಯಂತೆ. ಪ್ರಾಂಶುಪಾಲ ಮಹೇಶ್ ಡಿಸೋಜಾರನ್ನು ಶಿಸ್ತಿನ ಕ್ರಮಕ್ಕೆ ಕೈಗೊಂಡಿದ್ದರು. ಹುಡುಗನನ್ನು ಕಾಲೇಜಿನಿಂದ ಡಿಬಾರ್ ಮಾಡಿದ್ದರಿಂದ ಡೇವಿಡ್‌ನ ಪಿತ್ತ ನೆತ್ತಿಗೇರಿತ್ತು.

ಡಿಬಾರ್ ಆದೇಶ ರದ್ದು ಮಾಡುವಂತೆ, ಪ್ರಾಂಶುಪಾಲ ಆದೇಶ ಕೊಡುವಂತೆ, ಡೇವಿಡ್ ಕಾಲೇಜಿನ ಆಡಳಿತ ಮಂಡಳಿತ ಮುಖ್ಯಸ್ಥ ಫಾ| ಡೇನಿಸ್ ಡೇಸಾ ಮೇಲೆ ಒತ್ತಡ ಹಾಕಿದ್ದ. ಡೇಸಾ ಪ್ರಾಂಶುಪಾಲರಿಗೆ ಫೋನಾಯಿಸಿ ಡಿಬಾರ್ ಹಿಂಪಡೆಯುವಂತೆ ಹೇಳಿದ್ದರು. ಆ ಹೊತ್ತಲ್ಲಿ ಡೇಸಾ ವಿದೇಶದಲ್ಲಿದ್ದರು. ಚರ್ಚ್ ಮತ್ತು ಕಾಲೇಜಿನ ತಾತ್ಕಾಲಿಕ ಆಡಳಿತ ಫಾದರ್ ಮಹೇಶ್ ಸುಪರ್ದಿಯಲ್ಲಿತ್ತು. ಹೀಗಾಗಿ ಡಿಬಾರ್ ಆದೇಶ ಹಿಂಪಡೆಯಲು ಪ್ರಾಂಶುಪಾಲ ಮಹೇಶ್ ಸಿದ್ಧರಾಗಲಿಲ್ಲ. ಇದರಿಂದ ಕೆರಳಿದ ಡೇವಿಡ್ ತನ್ನ ಗ್ಯಾಂಗ್ ಕಟ್ಟಿಕೊಂಡು ಸಂಜೆ ಹೊತ್ತಲ್ಲಿ ಪ್ರಾಚಾರ್ಯರ ಕೊಠಡಿಗೆ ನುಗ್ಗಿದ್ದಾನೆ. ಮಾತಿಗೆ ಮಾತು ಬೆಳಿದಿದೆ. ಇದಕ್ಕೂ ಮೊದಲು ಫೋನ್‌ನಲ್ಲಿ ಇಬ್ಬರ ನಡುವೆ ಬಿಸಿಬಿಸಿ ಜಗಳವಾಗಿದೆ. ಈ ಕಾಲ್ ಇಬ್ಬರ ಮೊಬೈಲ್‌ನಲ್ಲೂ ರಿಜಿಸ್ಟರ್ ಸಹ ಆಗಿದೆ.

ಫಾದರ್ ಮಹೇಶ್ ಮತ್ತು ಡೇವಿಡ್ ಹೆಂಡತಿ ನಡುವೆ ಸಂಪರ್ಕವಿತ್ತು. ಮಹೇಶ್ ಆಕೆಗೆ ವಾಟ್ಸಾಪ್ ಮೆಸೇಜ್ ಕೂಡ ಕಳಿಸಿದ್ದರು. ಇದು ಡೇವಿಡ್ ಕೈಗೂ ಸಿಕ್ಕಿತ್ತು. ಇದನ್ನೇ ಅಸ್ತ್ರವಾಗಿ ಬಳಸಿದ ಡೇವಿಡ್, ಮಗನ ಡಿಬಾರ್ ವಾಪಸ್ ಪಡೆಯದಿದ್ದರೆ ನಿನ್ನ ಮಾನ ಹರಾಜು ಹಾಕುತ್ತೇನೆಂದು ಬ್ಲ್ಯಾಕ್‌ಮೇಲ್ ಮಾಡಿದ್ದ. ಮಗನ ಡಿಬಾರ್ ರದ್ದುಮಾಡಿ ಎಲ್ಲಾ ವಿದ್ಯಾರ್ಥಿಗಳೆದುರು ತನ್ನ ಕ್ಷಮೆ ಕೇಳಬೇಕೆಂಬುದು ಡೇವಿಡ್ ಡಿಮಾಂಡ್ ಆಗಿತ್ತು. ಇದರಿಂದ ಕಂಗಾಲು ಬಿದ್ದ ಪಾದ್ರಿ ಮಹೇಶ್ ಅಂದೇ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾರೆಂಬುದು ತನಿಖಾತಜ್ಞರ ಅಭಿಪ್ರಾಯ. ಆದರೆ ಧಾಡಸಿಯಾಗಿದ್ದ ಮಹೇಶ್ ಇದಕ್ಕೆಲ್ಲಾ ಹೆದರುವಂಥವರಲ್ಲವಾಗಿದ್ದರು. ಜಗಳದ ಹೊತ್ತಲ್ಲಿ ಡೇವಿಡ್ ಪಡೆಯ ಹಲ್ಲೆಯಿಂದ ಸತ್ತುಹೋಗಿದ್ದಾರೆ. ಆಗ ನೇಣಿಗೆ ಹಾಕಲಾಗಿದೆ ಎಂಬ ಆರೋಪವೂ ಇದೆ. ಇದಕ್ಕೆಲ್ಲಾ ಉತ್ತರವಿರುವುದು ಕಾಲೇಜಿನ ಸಿಸಿ ಕ್ಯಾಮರಾದಲ್ಲಿ!!

ಒಟ್ಟಿನಲ್ಲಿ ಈ ಇಡೀ ಪ್ರಕರಣ ಆರಂಭದಲ್ಲೇ ದಿಕ್ಕು ತಪ್ಪಲು ಮುಖ್ಯ ಕಾರಣ ಕ್ಯಾಥೋಲಿಕ್ ಧರ್ಮ ಪ್ರಾಂತ್ಯದಲ್ಲಿ ಪಾದ್ರಿ ಮಹೇಶ್ ಬಗೆಗಿದ್ದ ದ್ವೇಷಾಸೂಯೆ. ಮೂಡುಬೆಳ್ಳೆಯ ಶ್ರೀಮಂತ ಮನೆತನದ ಫಾ. ಮಹೇಶ್ ಗುರು ದೀಕ್ಷೆ 2013ರಲ್ಲಿ ಪಡೆದಿದ್ದರು. ಮೊದಲು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಆತ ಅಲ್ಲಿ ಒಳ್ಳೆಯ ಹೆಸರು ಪಡೆದಿದ್ದರು. ಹಾಗಾಗಿ ಮಂಗಳೂರು ಉಡುಪಿ ಕ್ಯಾಥೋಲಿಕ್ ಧರ್ಮ ಪ್ರಾಂತ್ಯದಲ್ಲಿ ಮಹತ್ವ ಹೊಂದಿದ್ದ ಪ್ರತಿಷ್ಠಿತ ಶಿರ್ವ ಚರ್ಚ್‌ಗೆ ಆತನ ವರ್ಗಾಯಿಸಲಾಗಿತ್ತು. ಅಲ್ಲೂ ಆತ ಜನಾನುರಾಗಿಯಾಗಿದ್ದು ಫಾದರ್-ಬಿಷಪ್ ಲಾಬಿಯಲ್ಲಿ ಹೊಟ್ಟೆಕಿಚ್ಚು ಮೂಡಿಸಿತ್ತು. ಸೀನಿಯರ್‌ಗಳು ಬಿಷಪ್‌ರನ್ನು ದಾರಿ ತಪ್ಪಿಸಿದ್ದರು. ಉಡುಪಿ ಬಿಷಪ್ ರೇಡಾ ಜೆರಾಲ್ಡ್ ಐಸಾಕ್ ಲೋಬೋಗೂ ಮಹೇಶ್ ಎಂದರೆ ಅಷ್ಟಕ್ಕಷ್ಟೇ ಆಗಿತ್ತು. ಆತನ ಕಾರ್ಕಳದ ಕಣಚಾರು ಚರ್ಚ್ಗೆ ವರ್ಗಾಮಾಡಲು ಪ್ರಯತ್ನ ಒಳಗೊಳಗೇ ನಡೆದಿತ್ತು.

ಇದೆಲ್ಲಾ ಒಂದು ಹಂತದಲ್ಲಿ ಪಾದ್ರಿ ಮಹೇಶ್‌ರನ್ನು ಹತಾಶರನ್ನಾಗಿ ಮಾಡಿತ್ತು. ರೌಡಿ ಡೇವಿಡ್ ಪ್ರಕರಣದಲ್ಲೂ ಆತನಿಗೆ ಚರ್ಚ್ ಕಡೆಯಿಂದ ಸರಿಯಾದ ನೆರವು-ಧೈರ್ಯ ಸಿಗಲಿಲ್ಲ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ. ಆದರೆ ಇದಕ್ಕೇ ಪ್ರೇರಣೆ ಡೇವಿಡ್ ಮತ್ತು ಚರ್ಚ್‌ನ ಅಸೂಯೆಯ ಗ್ಯಾಂಗು ಎಂಬುದು ನಿರ್ವಿವಾದ. ಹಾಗಾಗಿಯೇ ಈಗ ಚರ್ಚ್ ಭಕ್ತಾದಿಗಳು ಬಿಷಪ್ ಮೇಲೆ ಸಿಟ್ಟಾಗಿದ್ದಾರೆ. ಶನಿವಾರ ಶುರುವಾದ ಪ್ರತಿಭಟನೆ ರವಿವಾರವೂ ನಡೆದಿದೆ. ಬಿಷಪ್ ಜೆರಾಲ್ಡ್ ಬೇಬೋ ಸ್ಥಳಕ್ಕೆ ಬಂದು ಸಾವಿನ ಸ್ಪಷ್ಟನೆ ಕೊಡಬೇಕೆಂದು ಆಗ್ರಹಿಸಿದ್ದಾರೆ. ಕಂಗಾಲಾದ ಬಿಷಪ್ ಶಿರ್ವ ಚರ್ಚ್ ಬಳಿಗೋಡಿ ಬಂದು ಏನೇನೋ ಸಬೂಬು ಹೇಳಿ ಕಳ್ಳದಾರಿಯಲ್ಲಿ ಪಲಾಯನ ಮಾಡಿದ್ದಾರೆ. ಫಾದರ್ ಮಹೇಶ್ ಮನೆಯವರು ಪೊಲೀಸ್ ತನಿಖೆ ಬಗ್ಗೆ ಆಸಕ್ತಿ ವಹಿಸಲಿಲ್ಲ ಎಂದಿದ್ದಾರೆ.

ಗುರುದೀಕ್ಷೆ ಪಡೆದನಂತರ ಪೂರ್ವಾಶ್ರಮಕ್ಕೆ ಆತನ ಯಾವ ಜವಾಬ್ದಾರಿಯೂ ಇರದು. ಅದೇನಿದ್ದರೂ ಫಾದರ್ ಬಿಷಪ್ ಮತ್ತು ಚರ್ಚ್‌ನ ಹೊಣೆಗಾರಿಕೆ. ತನ್ನ ಅಧೀನ ಸಹಾಯಕ ಧರ್ಮಗುರು ಅನುಮಾನಸ್ಪದವಾಗಿ ಸತ್ತರೂ ಬಿಷಪ್ ಜೆರಾಲ್ಡ್ ಲೋಬೋ ಮತ್ತವನ ಧರ್ಮ ಪರಿವಾರ ಉದಾಸೀನ ಮಾಡುತ್ತಿರುವುದೇ ಇಡೀ ಪ್ರಕರಣದ ಅಸಲೀ ನಿಗೂಢ!!

ಶುದ್ಧೋಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...