ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಪ್ರಬಲ ಜಾತಿಯವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಹೊಸ ನಿಯಮಗಳ ‘ಜಾತಿ ಆಧಾರಿತ ತಾರತಮ್ಯ’ ಎಂಬುವುದರ ವ್ಯಾಖ್ಯಾನವನ್ನು ವಿರೋಧ ವ್ಯಕ್ತಪಡಿಸಿದವರು ಪ್ರಶ್ನಿಸಿದ್ದು, ‘ಸುಳ್ಳು ದೂರುಗಳ’ ವಿರುದ್ದದ ಕ್ರಮಗಳ ಕುರಿತು ಸ್ಪಷ್ಟವಾಗಿ ತಿಳಿಸದೆ ಪಕ್ಷಪಾತ ಮಾಡುವ ಮೂಲಕ ‘ಸಾಮಾನ್ಯ ವರ್ಗದ’ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪೋಸ್ಟ್-ಡಾಕ್ಟರೇಟ್ ಸಂಶೋಧಕ ಮೃತ್ಯುಂಜಯ್ ತಿವಾರಿ ಎಂಬವರು ವಿಶ್ವವಿದ್ಯಾಲಯ ಅನುದಾನ ಆಯೋಗ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026 ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಅವರ ವಕೀಲ ನೀರಜ್ ಸಿಂಗ್ ಮಂಗಳವಾರ (ಜ.27) ನ್ಯಾಯಾಲಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸುವುದಾಗಿ ದಿ ಹಿಂದೂಗೆ ಹೇಳಿದ್ದಾರೆ.
ಹೊಸ ನಿಯಮಗಳಿಗೆ ರಾಜಕೀಯ ವಿರೋಧವೂ ಹೆಚ್ಚಾಗಿದೆ. ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಪೋಸ್ಟ್ ಹಾಕಿ, ನಿಯಮಗಳನ್ನು ವಾಪಸ್ ಪಡೆಯಬೇಕು ಅಥವಾ ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕಾನೂನು ಎಲ್ಲರಿಗೂ ಸಮಾನ ರಕ್ಷಣೆಯನ್ನು ನೀಡಬೇಕು ಮತ್ತು ಸರ್ವರನ್ನೂ ಒಳಗೊಳ್ಳಬೇಕು. ಹೀಗಿರುವಾಗ, ಈ ಕಾನೂನುಗಳನ್ನು ಅನುಷ್ಠಾನ ಮಾಡುವಾಗ ಏಕೆ ತಾರತಮ್ಯ ಮಾಡಲಾಗಿದೆ? ಎಂದು ಅವರು ಪ್ರಶ್ನಿಸಿದ್ದಾರೆ. ಸುಳ್ಳಾರೋಪ ಮಾಡಿದರೆ ಏನಾಗಬಹುದು? ತಪ್ಪನ್ನು ನಿರ್ಧರಿಸುವುದು ಹೇಗೆ? ಪದಗಳು, ಕ್ರಿಯೆಗಳು ಅಥವಾ ಗ್ರಹಿಕೆಗಳ ಮೂಲಕ ತಾರತಮ್ಯವನ್ನು ವ್ಯಾಖ್ಯಾನಿಸುವುದು ಹೇಗೆ? ಎಂದು ಕೇಳಿದ್ದಾರೆ.
ಉತ್ತರ ಪ್ರದೇಶ ಬಿಜೆಪಿ ಎಂಎಲ್‌ಸಿ ದೇವೇಂದ್ರ ಪ್ರತಾಪ್ ಸಿಂಗ್ ಅವರು ಯುಜಿಸಿಗೆ ಪತ್ರ ಬರೆದಿದ್ದು, ಹೊಸ ನಿಯಮಗಳು ದಲಿತರು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿರುದ್ಧದ ತಾರತಮ್ಯವನ್ನು ತಡೆಯಬೇಕೇ ಹೊರತು, ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಭಯದ ವಾತಾವರಣ ಸೃಷ್ಟಿಸಬಾರದು ಎಂದು ಹೇಳಿದ್ದಾರೆ. ಹೊಸ ನಿಯಮಗಳು ಜಾತಿ ಕೇಂದ್ರಿತ ವಿಭಜನೆಯನ್ನು ವಿಸ್ತರಿಸಬಹುದು ಮತ್ತು ಸಾಮಾಜಿಕ ಸಮತೋಲನವನ್ನು ಹಾಳುಮಾಡಬಹುದು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಸಮಾನತೆ ಅಗತ್ಯ, ಆದರೆ ಅದು ಯಾವುದೇ ವರ್ಗದ ವಿದ್ಯಾರ್ಥಿಗಳನ್ನು ಕಡೆಗಣಿಸಬಾರದು ಎಂದಿದ್ದಾರೆ.
ವಿದ್ಯಾರ್ಥಿ ಸಂಘಟನೆಗಳಿಂದ ಕೂಡ ವಿರೋಧ ವ್ಯಕ್ತವಾಗಿದೆ. ಉತ್ತರಾಖಂಡದ ನೈನಿತಾಲ್‌ನಲ್ಲಿರುವ ಕುಮೌನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘವು ಯುಜಿಸಿಗೆ ಪತ್ರವೊಂದನ್ನು ಸಲ್ಲಿಸಿದ್ದು, ಹೊಸ ನಿಯಮಗಳು “ನೈಸರ್ಗಿಕ ನ್ಯಾಯದ ತತ್ವ”ಕ್ಕೆ ವಿರುದ್ಧವಾಗಿವೆ ಎಂದು ಹೇಳಿದೆ. ವಿವಿಯ ಉಪಕುಲಪತಿಗಳ ಮೂಲಕ ಸಲ್ಲಿಸಿದ ತಮ್ಮ ಪತ್ರದಲ್ಲಿ, ಹೊಸ ನಿಯಮಗಳು ವಿವಿ ಕ್ಯಾಂಪಸ್‌ಗಳಲ್ಲಿ “ಸಮತೋಲನ”ವನ್ನು ಕದಡಬಹುದು, “ಭಯ ಮತ್ತು ಅಪನಂಬಿಕೆಯ” ವಾತಾವರಣವನ್ನು ಸೃಷ್ಟಿಸಬಹುದು, ಇದು ನಿಯಮಗಳ “ದುರುಪಯೋಗ”ಕ್ಕೆ ಕಾರಣವಾಗಬಹುದು ಎಂದು ವಿದ್ಯಾರ್ಥಿ ಸಂಘ ಹೇಳಿದೆ.
ಬಿಜೆಪಿ ಸರ್ಕಾರದ ನಿಯಮದ ವಿರುದ್ದವೇ ಪ್ರಬಲ ಜಾತಿಯವರು ಆಕ್ರೋಶ ವ್ಯಕ್ತಪಡಿಸುತ್ತಿರುವ ಹಿನ್ನೆಲೆ, ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದು, “ಹೊಸ ನಿಯಮಗಳ ಕುರಿತ ಎಲ್ಲಾ ತಪ್ಪು ಕಲ್ಪನೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ‘ಬಡ ಸವರ್ಣೀಯರ’ ಪೈಕಿ ಆರ್ಥಿಕವಾಗಿ ದುರ್ಬಲರಿಗೆ (ಇಡಬ್ಲ್ಯೂಎಸ್) 10% ಮೀಸಲಾತಿಯನ್ನು ತಂದಿದೆ. ಮೋದಿ ಜಿ ಇರುವವರೆಗೆ ಪ್ರಬಲ ಜಾತಿಯ ಮಕ್ಕಳಿಗೆ ಯಾವುದೇ ಹಾನಿಯಾಗುವುದಿಲ್ಲ” ಎಂದಿದ್ದಾರೆ.
ಯುಜಿಸಿಯು ಜನವರಿ 13, 2026ರಂದು “Promotion of Equity in Higher Education Institutions Regulations,2026” ಎಂಬ ಹೊಸ ನಿಯಮಗಳನ್ನು ಅಧಿಸೂಚನೆ ಮಾಡಿದೆ. ಇದು 2012ರಲ್ಲಿ ಇದ್ದ ಹಳೆಯ ನಿಯಮಗಳನ್ನು ಬದಲಾಯಿಸುತ್ತದೆ.
ಹೊಸ ನಿಯಮಗಳಲ್ಲಿ “ಜಾತಿ ಆಧಾರಿತ ತಾರತಮ್ಯ” (caste-based discrimination) ಎಂಬುವುದನ್ನು ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ವಿದ್ಯಾರ್ಥಿಗಳ ಮೇಲಾಗುವ ಜಾತಿ ಅಥವಾ ಗೋತ್ರ ಆಧಾರಿತ ತಾರತಮ್ಯ ಎಂದು ವ್ಯಾಖ್ಯಾನಿಸಲಾಗಿದೆ.
2025ರಲ್ಲಿ ಕರಡು ನಿಯಮಗಳನ್ನು ಪರಿಚಯಿಸಿದಾಗ ಸುಳ್ಳು ದೂರುಗಳನ್ನು ದಾಖಲಿಸಿದರೆ ದಂಡ ವಿಧಿಸುವ ಮತ್ತು ಶಿಸ್ತು ಕ್ರಮ ತೆಗೆದುಕೊಳ್ಳುವ ಅವಕಾಶ ಅದರಲ್ಲಿ ಇತ್ತು. ಆದರೆ, 2026ರ ಅಂತಿಮ ಅಧಿಸೂಚನೆಯಲ್ಲಿ ಅದನ್ನು ತೆಗೆದು ಹಾಕಲಾಗಿದೆ. ಇದರಿಂದ ಸುಳ್ಳು ಆರೋಪಗಳಿಗೆ ಯಾವುದೇ ಶಿಕ್ಷೆ ಇಲ್ಲದಂತಾಗಿದ್ದು, ಕಾನೂನು ದುರುಪಯೋಗದ ಆತಂಕವಿದೆ ಎಂಬುವುದು ವಿರೋಧ ವ್ಯಕ್ತಪಡಿಸಿದ ಪ್ರಬಲ ಜಾತಿಯವರ ವಾದವಾಗಿದೆ.
ಮತ್ತೊಂದೆಡೆ ಜಾತಿ ವಿರೋಧಿ ಹೋರಾಟಗಾರರು ಕೂಡ ಹೊಸ ನಿಯಮಗಳ ಬಗ್ಗೆ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿಲ್ಲ. ನಿಯಮಗಳು ಅಷ್ಟೊಂದು ಬಲವಾಗಿಲ್ಲ ಎಂದಿದ್ದಾರೆ.
ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ ದೊಡ್ಡ ಮಟ್ಟದಲ್ಲಿ ಇದೆ. ಯುಜಿಸಿಯ ದತ್ತಾಂಶದ ಪ್ರಕಾರ ಕಳೆದ 5 ವರ್ಷಗಳಲ್ಲಿ ಜಾತಿ ತಾರತಮ್ಯದ ದೂರುಗಳು ಶೇಕಡ 118ರಷ್ಟು ಹೆಚ್ಚಾಗಿದೆ. ಹೊಸ ನಿಯಮಗಳು ವಿಶಾಲವಾಗಿ ಇದ್ದರೂ, ಅನುಷ್ಠಾನದಲ್ಲಿ ದುರ್ಬಲವಾಗಬಹುದು ಅಥವಾ ಸಂಸ್ಥೆಗಳು ಸರಿಯಾಗಿ ಅನುಸರಿಸದಿರಬಹುದು. ಸುಳ್ಳು ದೂರುಗಳಿಗೆ ಶಿಕ್ಷೆ ತೆಗೆದು ಹಾಕಿದ್ದರೂ, ದೂರುಗಳನ್ನು ವೇಗವಾಗಿ ಮತ್ತು ನ್ಯಾಯಯುತವಾಗಿ ಪರಿಶೀಲಿಸುವ ಬಲವಾದ ವ್ಯವಸ್ಥೆ ಇಲ್ಲದಿರುವುದು ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೋರಾಟಗಾರರು ಹೇಳುತ್ತಾರೆ.
ನೆತ್ರಪಾಲ್ ಎಂಬ ಒಬ್ಬರು ಸೇವಾನಿರತ ಐಆರ್‌ಎಸ್ ಅಧಿಕಾರಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವಿದ್ಯಾರ್ಥಿಗಳು ಎದುರಿಸುವ ನಿರ್ದಿಷ್ಟ ರೀತಿಯ ಜಾತಿ ತಾರತಮ್ಯಗಳಿಂದ ಹೊಸ ಕಾನೂನು ಸರಿಯಾದ ರಕ್ಷಣೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಪ್ರವೇಶ ಪ್ರಕ್ರಿಯೆ, ಸಂದರ್ಶನಗಳು ಮತ್ತು ಮೌಖಿಕ ಪರೀಕ್ಷೆಗಳ ಸಮಯದಲ್ಲಿ ನಿರ್ದಿಷ್ಟವಾಗಿ ಆಗುವ ತಾರತಮ್ಯಗಳನ್ನು ನಿಯಮಗಳು ಸ್ಪಷ್ಟವಾಗಿ ಗುರುತಿಸುವುದಿಲ್ಲ ಅಥವಾ ಬಲವಾಗಿ ತಡೆಯುವ ವ್ಯವಸ್ಥೆ ಮಾಡಿಲ್ಲ ಎಂದಿದ್ದಾರೆ. ಈ ಪ್ರಕ್ರಿಯೆಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವಿದ್ಯಾರ್ಥಿಗಳು ಹೆಚ್ಚಾಗಿ ತಾರತಮ್ಯಕ್ಕೊಳಗಾಗುತ್ತಾರೆ (ಉದಾ : ಕಡಿಮೆ ಅಂಕಗಳನ್ನು ನೀಡುವುದು, ಅರ್ಹರಾದರೂ ಅವಕಾಶ ನಿರಾಕರಿಸುವುದು ಇತ್ಯಾದಿ), ಆದರೆ 2026ರ ಹೊಸ ನಿಯಮಗಳು 2012ರ ಹಳೆಯ ನಿಯಮಗಳಲ್ಲಿ ಇದ್ದಂತಹ ವಿವರವಾದ ನಿಷೇಧಗಳನ್ನು ತೆಗೆದುಹಾಕಿವೆ ಎಂದು ಅವರು ಟೀಕಿಸಿದ್ದಾರೆ.
ಅಲ್ಲದೆ, ನಿಯಮಗಳು ರಚಿಸುವ ಸಮಾನತೆ ಸಮಿತಿಗಳು ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಎದುರಿಸುವ ನಿರ್ದಿಷ್ಟ ತಾರತಮ್ಯಗಳನ್ನು ಸರಿಯಾಗಿ ಪರಿಹರಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಸಮಿತಿಗಳು ಎಲ್ಲಾ ರೀತಿಯ ತಾರತಮ್ಯಗಳನ್ನು (ಜಾತಿ, ಲಿಂಗ, ಅಂಗವಿಕಲತೆ, ಆರ್ಥಿಕ ಇತ್ಯಾದಿ) ಒಟ್ಟಿಗೆ ನೋಡುತ್ತವೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಂಬಂಧಿಸಿದ ಸಾಮಾಜಿಕ ತಾರತಮ್ಯಕ್ಕೆ ವಿಶೇಷ ಗಮನ ಮತ್ತು ನಿರ್ದಿಷ್ಟ ರಕ್ಷಣೆ ಬೇಕು. ಹಾಗಾಗಿ, ಈ ಸಮಿತಿಗಳು ದುರ್ಬಲವಾಗುತ್ತವೆ ಎಂಬುವುದು ಅಧಿಕಾರಿಯ ವಾದವಾಗಿದೆ.
ಮೃತ್ಯುಂಜಯ್ ತಿವಾರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, ಯುಜಿಸಿಯ ಹೊಸ ಕಾನೂನು ತಾರತಮ್ಯ ಒಂದು ದಿಕ್ಕಿನಲ್ಲಿ ಮಾತ್ರ ನಡೆಯುತ್ತದೆ ಎಂಬ ಅಸಾಧ್ಯವಾದ ಊಹೆ ಮೇಲೆ ನಿಂತಿವೆ. ಅಂದರೆ, ತಾರತಮ್ಯ ಎಂದರೆ ಕೇವಲ ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳ ವಿರುದ್ಧ ಸಾಮಾನ್ಯ ವರ್ಗದವರು ಮಾಡುವುದು ಎಂದು ಭಾವಿಸಲಾಗಿದೆ ಎಂದಿದ್ದಾರೆ. ಹೊಸ ನಿಯಮಗಳ ರಚನೆ ಮತ್ತು ಅನುಷ್ಠಾನದದಲ್ಲಿ ಕಾನೂನಾತ್ಮಕ ಸಂತ್ರಸ್ತ ಸ್ಥಾನವನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗದವರಿಗೆ ಮಾತ್ರ ನೀಡಲಾಗಿದೆ ಎಂದಿದ್ದಾರೆ. ಇದರಿಂದ ಸಾಮಾನ್ಯ ಅಥವಾ ಪ್ರಬಲ ಜಾತಿಯ ವಿದ್ಯಾರ್ಥಿಗಳು ಜಾತಿಯ ಕಾರಣದಿಂದ ಎದುರಿಸುವ ಯಾವುದೇ ತಾರತಮ್ಯಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಈ ನಡುವೆ, 2019ರ ಬ್ಯಾಚ್‌ನ ಪ್ರಾಂತೀಯ ಸೇವಾ ಅಧಿಕಾರಿ ಬರೇಲಿ ನಗರ ಮ್ಯಾಜಿಸ್ಟ್ರೇಟ್ ಅಲಂಕ್ ಅಗ್ನಿಹೋತ್ರಿ ಸೋಮವಾರ (ಜ. 26) ಯುಜಿಸಿ ನಿಯಮಗಳ ಬಗ್ಗೆ ಅತೃಪ್ತಿಯನ್ನು ವ್ಯಕ್ತಪಡಿಸಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಲಕ್ನೋದಲ್ಲಿ ಸುಮಾರು 10ಕ್ಕೂ ಹೆಚ್ಚು ಸ್ಥಳೀಯ ಬಿಜೆಪಿ ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.


