ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿನ ವರದಿಯ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿರುವ ಮುಖ್ಯ ಪ್ರಶ್ನೆ: ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಆರಂಭವಾಗಿಲ್ಲ. ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ? ಇದನ್ನು ನ್ಯಾಯಾಂಗ ಹೇಗೆ ಪರಿಗಣಿಸುತ್ತದೆ? ಎಂಬುದು.
ಉಮರ್ ಖಾಲಿದ್ ಮತ್ತು ಶಾರ್ಜಿಲ್ ಇಮಾಮ್ ಅವರ ಮೇಲಿನ ಯುಎಪಿಎ ಪ್ರಕರಣದಲ್ಲಿ ಇರುವ ಮುಖ್ಯ ಪ್ರಶ್ನೆ: ಭಯೋತ್ಪಾದಕ ಕೃತ್ಯ ಎಂದು ನಿರ್ಧರಿಸಲು ಇರುವ ಮಾನದಂಡಗಳೇನು? ಯಾರು ನಿರ್ಧರಿಸುತ್ತಾರೆ?
ಖಾಲಿದ್ ಮತ್ತು ಇತರ ಆರೋಪಿಗಳ ಪ್ರಕರಣದ ವಿಚಾರಣೆ ಮತ್ತು ನ್ಯಾಯ ಪ್ರಕ್ರಿಯೆಯಲ್ಲಿನ ವಿಳಂಬವು ಶಾಸಕಾಂಗ ಮತ್ತು ನ್ಯಾಯಾಂಗ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆಯಾಗಿದೆ.
ಇಲ್ಲಿ ಯುಎಪಿಎ ಸೆಕ್ಷನ್ ಗಳು ಸಹ ತೀರಾ ಜಟಿಲವಾಗಿದೆ. ಇದೂ ಸಹ ಮುಖ್ಯ ಕಾರಣ.
ಯುಎಪಿಎ ಸೆಕ್ಷನ್ 15ರಲ್ಲಿ ಭಯೋತ್ಪಾದಕ ಕೃತ್ಯವನ್ನು ‘ಭಾರತದ ಏಕತೆ, ಸಮಗ್ರತೆ, ಭದ್ರತೆ, ಆರ್ಥಿಕ ಭದ್ರತೆ ಅಥವಾ ಸಾರ್ವಭೌಮತ್ವವನ್ನು ಬೆದರಿಕೆಗೊಳಿಸುವ ಅಥವಾ ಬೆದರಿಕೆಗೊಳಿಸುವ ಸಾಧ್ಯತೆಯಿರುವ ಉದ್ದೇಶದಿಂದ, ಅಥವಾ ಭಾರತದ ಜನರಲ್ಲಿ ಅಥವಾ ಯಾವುದೇ ವಲಯದ ಜನರಲ್ಲಿ ಭಯ ಹುಟ್ಟಿಸುವ ಅಥವಾ ಭಯ ಹುಟ್ಟಿಸುವ ಸಾಧ್ಯತೆಯಿರುವ ಉದ್ದೇಶದಿಂದ ಮಾಡಿದ ಯಾವುದೇ ಕೃತ್ಯ’ ಎಂದು ವಿವರಿಸುತ್ತದೆ. ಜೊತೆಗೆ ಭಯ ಹುಟ್ಟಿಸುವುದನ್ನು ‘ಬಾಂಬ್‌ಗಳು, ಡೈನಮೈಟ್ ಅಥವಾ ಇತರ ಸ್ಫೋಟಕ ವಸ್ತುಗಳು ಅಥವಾ ಉರಿಯುವ ವಸ್ತುಗಳು ಅಥವಾ ಇತರ ಮಾರಕ ಶಸ್ತ್ರಾಸ್ತ್ರಗಳು… ಅಥವಾ ಯಾವುದೇ ಇತರ ವಿಧಾನಗಳ ಮೂಲಕ ( any other means)’ ಎಂದು ವ್ಯಾಖ್ಯಾನ ಮಾಡಲಾಗಿದೆ
ಇದನ್ನೇ ಉಲ್ಲೇಖಿಸಿ ನ್ಯಾಯಾಲಯವು ‘ಭಯೋತ್ಪಾದಕ ಕೃತ್ಯ’ವು ಕೇವಲ ಸಾಂಪ್ರದಾಯಿಕ ಹಿಂಸೆ ಅಥವಾ ನಿರ್ದಿಷ್ಟ ಶಸ್ತ್ರಾಸ್ತ್ರಗಳಿಗೆ ಮಾತ್ರ ಸೀಮಿತವಲ್ಲದೆ, ಉದ್ದೇಶ, ಯೋಜನೆ ಮತ್ತು ಪರಿಣಾಮಗಳನ್ನು ಆಧರಿಸಿ ‘ಯಾವುದೇ ಇತರ ವಿಧಾನಗಳ ಮೂಲಕ’ ಎಂಬ ಭಾಗವನ್ನು ಉಲ್ಲೇಖಿಸಿ ಉಮರ್ ಮತ್ತು ಶಾರ್ಜಿಲ್ ಅವರಿಗೆ ಜಾಮೀನು ನಿರಾಕರಿಸುತ್ತಿದೆ.
ಯಾವುದೇ ಇತರ ವಿಧಾನಗಳು(any other means) ಎನ್ನುವ ಅಮೂರ್ತವಾದ, ಮುಖ್ಯವಲ್ಲದ ತೀರಾ ಸಾಧಾರಣ(trivial) ವಿಚಾರವೇ ಉಮರ್ ಮತ್ತು ಶಾರ್ಜಿಲ್ ಅವರ ಜಾಮೀನು ನಿರಾಕರಣೆಗೆ ಮುಖ್ಯ ಕಾರಣ ಎನ್ನುವುದಾದರೆ ಇಲ್ಲಿ ಜನಸಾಮಾನ್ಯರ ಪಾಲಿಗೆ ನ್ಯಾಯದ ಬಾಗಿಲು ಮುಚ್ಚಿದಂತೆಯೇ? ಯಾಕೆಂದರೆ ಪ್ರಭುತ್ವ ದ್ವೇಷ ಸಾಧಿಸಲು ಇಂತಹ ಆರೋಪಗಳನ್ನು ದಾಖಲಿಸುತ್ತದೆ, ನ್ಯಾಯಾಂಗ ಪುರಸ್ಕರಿಸುತ್ತದೆ ಅಂದರೆ…
ಪ್ರಾಸಿಕ್ಯೂಷನ್ ‘ ಖಾಲಿದ್ ಮತ್ತು ಇತರ ಆರೋಪಿಗಳು ಆಯೋಜಿಸಿದ್ದ ‘ಚಕ್ಕಾ ಜಾಮ್’ (ರಸ್ತೆ ತಡೆಗಟ್ಟುವಿಕೆ ಅಥವಾ ಟ್ರಾಫಿಕ್ ಜಾಮ್ ಮಾಡುವ ಪ್ರತಿಭಟನೆ) ಸಹ ಯುಎಪಿಎ ಸೆಕ್ಷನ್ 15ರಲ್ಲಿ ಹೇಳಿರುವ ‘ಯಾವುದೇ ಇತರ ವಿಧಾನಗಳ, ದಾರಿಗಳ ಮೂಲಕ'(any other means) ಎಂಬ ವ್ಯಾಖ್ಯಾನದ ಅಡಿಯಲ್ಲಿ ಬರುತ್ತದೆ’ ಎಂದು ವಾದಿಸಿದ್ದಾರೆ
ಖಾಲಿದ್ ಮತ್ತು ಇತರರು ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ‘ಪ್ರಜಾಪ್ರಭುತ್ವದಲ್ಲಿ ಚಕ್ಕಾ ಜಾಮ್ ಅಥವಾ ರಸ್ತೆ ತಡೆಗಟ್ಟುವಿಕೆಗಳಂತ ಮಾರ್ಗಗಳನ್ನು ಪ್ರತಿಭಟನೆಯ ಕಾನೂನುಬದ್ಧ ರೂಪವೆಂದು ಪರಿಗಣಿಸಬೇಕು. ಇದು ಭಾರತದಲ್ಲಿ ರೈತ ಪ್ರತಿಭಟನೆಗಳು, ಇತರ ಸಾಮಾಜಿಕ ಚಳವಳಿಗಳಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಅಹಿಂಸಾತ್ಮಕ ವಿಧಾನವಾಗಿದೆ’ ಎಂದು ಹೇಳಿದರು. ಇದನ್ನು ಪೀಠ ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ.
ಅಂದರೆ ರಸ್ತೆ ತಡೆ ಎನ್ನುವ ಲಾಗಾಯ್ತಿನಿಂದ ನಡೆದುಕೊಂಡು ಬಂದಿರುವ ಪ್ರಜಾತಾಂತ್ರಿಕ ಹೋರಾಟ ಭಯೋತ್ಪಾದನೆಗೆ ಸಮ ಎಂದು ಉಮರ್ ಮತ್ತು ಇತರರ ಪ್ರಕರಣದಲ್ಲಿ ಸಾಬೀತಾಗಿದೆ.
ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಯನ್ನು ನಿರ್ಧರಿಸುವಾಗ ಪ್ರಾಸಿಕ್ಯೂಷನ್‌ನ ಈ ದುರ್ಬಲ ವ್ಯಾಖ್ಯಾನವನ್ನು ಒಪ್ಪಿಕೊಂಡು ‘ಅಂತಹ ಕೃತ್ಯಗಳನ್ನು ಎಸಗುವ ಸಾಧನಗಳು ಬಾಂಬ್‌ಗಳು, ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರಗಳು ಅಥವಾ ಇತರ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳು ಎಂದು ಹೇಳಬೇಕಿಲ್ಲ. ಉದ್ದೇಶಪೂರ್ವಕವಾಗಿ ‘ಯಾವುದೇ ಇತರ ಸಾಧನಗಳ ಮೂಲಕ, ಯಾವುದೇ ಸ್ವರೂಪದಲ್ಲಿ’ ಎಂಬ ಪದಪ್ರಯೋಗವನ್ನು ಬಳಸಿದೆ. ಇದನ್ನು ನಿರ್ಲಕ್ಷಿಸಲಾಗದು. ಆದ್ದರಿಂದ ಕಾನೂನಿನ ಅಡಿಯಲ್ಲಿ ಕೇವಲ ಬಳಸಿದ ಸಾಧನ ಅಥವಾ ಉಪಕರಣದ ಮೇಲೆ ಮಾತ್ರವಲ್ಲದೆ, ಕೃತ್ಯದ ‘ಉದ್ದೇಶ (design/intent), ಯೋಜನೆ ಮತ್ತು ಪರಿಣಾಮದ (effect)’ ಮೇಲಿನ ವ್ಯಾಖ್ಯಾನವನ್ನು ಪರಿಗಣಿಸಲಾಗುತ್ತದೆ ‘ ಎಂದು ತೀರ್ಪಿನಲ್ಲಿ ಹೇಳಿದೆ.
ಅಂದರೆ ಪ್ರಭುತ್ವ ನೀತಿಗಳನ್ನು ವಿರೋಧಿಸಿ ಹೋರಾಟ ಮಾಡುವುದು ಸರ್ಕಾರವನ್ನು ಬುಡಮೇಲುಗೊಳಿಸುವ ಕೃತ್ಯ, ಇದು ಭಯೋತ್ಪಾದನೆಗೆ ಸಮ ಎಂದು ವಾದಿಸುವ ಮೋದಿ ನೇತೃತ್ವದ ಸರ್ಕಾರವನ್ನು ನ್ಯಾಯಾಂಗವು ಬೆಂಬಲಿಸುತ್ತದೆ.
10 ಡಿಸೆಂಬರ್ 2026ರಂದು ಸುಪ್ರೀಂಕೋರ್ಟ್ ಪೀಠದ ಮುಂದೆ ಖಾಲಿದ್ ಮತ್ತು ಇತರರು ಪರ ವಾದ ಮಂಡಿಸಿದ ವಕೀಲರು ‘ವಿಚಾರಣೆಯ ಶೀಘ್ರ ಮುಕ್ತಾಯವಿಲ್ಲದೇ ದೀರ್ಘಕಾಲದವರೆಗೆ ಅವರನ್ನು ವಶದಲ್ಲಿಟ್ಟಿರುವುದು ಸಂವಿಧಾನದ ವಿಧಿ 21ರ ಅಡಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ’ ಎಂದು ಪ್ರತಿಪಾದಿಸಿ ‘ನ್ಯಾಯಾಲಯದಿಂದ ಆರೋಪಪತ್ರದ ಪ್ರಕರಣದ ಯೋಗ್ಯತೆಯನ್ನು (merit) ಪರಿಶೀಲಿಸಲು ಕೇಳುತ್ತಿಲ್ಲ, ಆದರೆ ವಿಚಾರಣೆಯಲ್ಲಿ ಏಕೆ ತಡವಾಗುತ್ತಿದೆ ಎಂಬುದನ್ನು ಮಾತ್ರ ಪರಿಗಣಿಸಬೇಕು’ ಎಂದು ಹೇಳಿದರು.
ಆದರೆ ಸುಪ್ರೀಂ ಕೋರ್ಟ್ ‘ವಿಚಾರಣೆಯಲ್ಲಿ ತಡವನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗದು ಮತ್ತು ಅದು ಮಾತ್ರ ಸ್ವಯಂಚಾಲಿತವಾಗಿ ಜಾಮೀನು ನೀಡಲು ಸಾಕಾಗದು’ ಎಂದು ಹೇಳಿದೆ. ಮುಂದುವರೆದು ‘ಶೀಘ್ರ ವಿಚಾರಣೆಯ ಹಕ್ಕು ವಿಧಿ 21ರ ಮುಖ್ಯ ಭಾಗವಾಗಿದ್ದರೂ, ಈ ಹಕ್ಕನ್ನು ರಾಷ್ಟ್ರೀಯ ಭದ್ರತೆಯೊಂದಿಗೆ ಸಮತೋಲನಗೊಳಿಸಬೇಕು. ಯುಎಪಿಎ ಅಡಿಯಲ್ಲಿ ಜಾಮೀನಿನ ಹಕ್ಕನ್ನು ತೀವ್ರವಾಗಿ ನಿರ್ಬಂಧಿಸಲಾಗಿದೆ. ನ್ಯಾಯಾಲಯಗಳು ಮೊದಲು ಆರೋಪಿಗಳ ವಿರುದ್ಧ ಆಕ್ಟ್‌ನ ಸೆಕ್ಷನ್ 43D(5) ಅಡಿಯಲ್ಲಿ ‘ಪ್ರಾಥಮಿಕವಾಗಿ ಪ್ರಕರಣವಿದೆಯೇ’ (prima facie case) ಎಂದು ನೋಡಬೇಕು ಎಂದು ಅಭಿಪ್ರಾಯಪಟ್ಟಿತು.
ಈ ಸೆಕ್ಷನ್ ಪ್ರಕಾರ ಗಂಭೀರ ಅಪರಾಧಗಳಿಗೆ ಆರೋಪಿತ ವ್ಯಕ್ತಿಯನ್ನು ಸಾಮಾನ್ಯ ಸಂದರ್ಭಗಳಲ್ಲಿ ರೀತಿ ಜಾಮೀನು ನೀಡಲಾಗುವುದಿಲ್ಲ. ಯಾವುದೇ ಜಾಮೀನು ಅರ್ಜಿಯನ್ನು ಪರಿಗಣಿಸುವ ಮೊದಲು ನ್ಯಾಯಾಲಯವು ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಕೇಳಬೇಕು. ಅಲ್ಲದೆ ನ್ಯಾಯಾಲಯವು ಪ್ರಾಥಮಿಕವಾಗಿ ಕೇಸ್ ಡೈರಿ ಅಥವಾ ಚಾರ್ಜ್‌ಶೀಟ್ ನೋಡಿದ ನಂತರ, ಆರೋಪಗಳು ನಿಜವೆಂದು ತೋರಿದರೆ ವಿಚಾರಣೆಯಲ್ಲಿ ಪರೀಕ್ಷಿಸಲ್ಪಡುವ ಕೇಸ್‌ನ ಮೆರಿಟ್ ನ್ನು ಲೆಕ್ಕಿಸದೆ, ಕಾನೂನುಬದ್ಧವಾಗಿ ಜಾಮೀನು ನೀಡಲು ನಿಷೇಧಿಸಲಾಗಿದೆ.
ಸುಪ್ರೀಂಕೋರ್ಟ್ ನ ಹಿಂದಿನ ‘ಯೂನಿಯನ್ ಆಫ್ ಇಂಡಿಯಾ ವಿರುದ್ಧ ಕೆ.ಎ. ನಜೀಬ್ (2021)’
ತೀರ್ಪುನ್ನು ಉಲ್ಲೇಖಿಸಿದ ಪೀಠವು ‘ಅಸಾಧಾರಣ ಸಂದರ್ಭಗಳಲ್ಲಿ ನ್ಯಾಯಾಲಯಗಳು ಜಾಮೀನು ನೀಡಬಹುದು, ಇಲ್ಲಿ ದೀರ್ಘಕಾಲದ ವಿಚಾರಣೆ ಅನ್ಯಾಯವಾಗುತ್ತದೆ.
ಆದರೆ ಆರೋಪಿಯು ದೀರ್ಘಕಾಲ ಜೈಲಿನಲ್ಲಿದ್ದರೆ ಮಾತ್ರ ಜಾಮೀನು ನೀಡಬೇಕು ಎಂಬ ನಜೀಬ್ ತೀರ್ಪಿನ
ಸ್ವಯಂಚಾಲಿತ ನಿಯಮವನ್ನು ಇತರೆ ಪ್ರಕರಣಗಳಿಗೆ ಅನ್ವಯಿಸಲು ಬರುವುದಿಲ್ಲ’ ಎಂದೂ ಹೇಳಿದೆ. ಇದು ಸಹ ವಿರೋಧಾಭಾಸ
ಮುಂದುವರಿದು ‘ಉಮರ್ ಖಾಲಿದ್ ಮತ್ತು ಇತರರು ಪ್ರಕರಣದಲ್ಲಿನ ದೀರ್ಘಕಾಲದ ವಿಳಂಬಕ್ಕೆ ಪ್ರಾಸಿಕ್ಯೂಶನ್ ಅಥವಾ ನ್ಯಾಯಾಲಯಗಳನ್ನು ದೂಷಿಸುವುದು ಸರಿಯಲ್ಲ’ ಎಂದು ಹೇಳುತ್ತಾ ‘ದೀರ್ಘಕಾಲದವರೆಗೆ ಬಂಧನದಲ್ಲಿಡುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಆದರೆ ಈ ಬಂಧನವು ಅಸಂವಿಧಾನಿಕ ಎನ್ನುವ ಹಂತಕ್ಕೆ ತಲುಪಿಲ್ಲ. ಜಾಮೀನು ಕೊಡುವುದರ ಬದಲು ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು’ ಎಂದೂ ಅಭಿಪ್ರಾಯಪಟ್ಟಿದೆ.
ಹೀಗೆ ಹೇಳಿದ ನ್ಯಾಯಾಂಗವು ತನ್ನ ತೀರ್ಪಿನಲ್ಲಿ ‘ಒಂದು ವರ್ಷದ ನಂತರ ಅಥವಾ ಸಂರಕ್ಷಿತ ಸಾಕ್ಷಿಗಳ ಮರು ವಿಚಾರಣೆ ಆಧರಿಸಿ ಜಾಮೀನು ಸಲ್ಲಿಸಬಹುದು’ ಎಂದೂ ಹೇಳಿದೆ. ಇಂತಹ ವೈರುಧ್ಯಗಳು ಈ ತೀರ್ಪಿನಲ್ಲಿ ಹೇರಳವಾಗಿದೆ.
ಕಡೆಗೂ ಸಜ್ಜನರ ಪಾಲಿಗೆ ಸತ್ಯದ ತಾತ್ವಿಕತೆ ಮತ್ತು ಸೈದ್ಧಾಂತಿಕತೆ ನ್ಯಾಯಾಂಗದಲ್ಲಿ ಪರಿಗಣಿಸಲ್ಪಡುವುದಿಲ್ಲ. ದುಷ್ಟರ ಪಾಲಿಗೆ ಮಾತ್ರ ವಿಧಿ 19(1), ವಿಧಿ 21 ಅನ್ವಯವಾಗುತ್ತದೆ.

- ಶ್ರೀಪಾದ್ ಭಟ್, ಸಾಮಾಜಿಕ ಚಿಂತಕರು


