ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಮೀರಾನ್ ಹೈದರ್, ಗುಲ್ಫಿಶಾ ಫಾತಿಮಾ, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಂ ಖಾನ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ 6ಕ್ಕೆ ಮುಂದೂಡಿದೆ.
ವರದಿಗಳ ಪ್ರಕಾರ, ಸೋಮವಾರ (ನ.3) ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠದ ಮುಂದೆ ವಿಚಾರಣೆ ಮುಂದುವರಿಯಿತು. ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಂ ಖಾನ್ ಪರ ವಕೀಲರು ವಾದ ಮಂಡಿಸಿದರು.
ಶಿಫಾ ಉರ್ ರೆಹಮಾನ್ ಪರ ಹಿರಿಯ ವಕೀಲ ಸಲ್ಮಾನ್ ಖುರ್ಷೀದ್ ವಾದ ಮಂಡನೆ ಮಾಡಿದ್ದು, “ತನ್ನ ಕಕ್ಷಿದಾರ ಮತ್ತು ಇತರ ಬಂಧಿತರು ವಿಚಾರಣೆಯಿಲ್ಲದೆ ಐದು ವರ್ಷಗಳಿಗೂ ಹೆಚ್ಚು ಸಮಯವನ್ನು ಕಸ್ಟಡಿಯಲ್ಲಿ ಕಳೆದಿದ್ದಾರೆ. ಇದು ‘ವಿಚಾರಣೆಯಿಲ್ಲದ ಶಿಕ್ಷೆ’ಗೆ ಸಮಾನವಾಗಿದೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ತ್ವರಿತ ವಿಚಾರಣೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಹಿರಿಯ ವಕೀಲ ಸಿದ್ದಾರ್ಥ್ ಅಗರ್ವಾಲ್ ಮತ್ತು ವಕೀಲ ಗೌತಮ್ ಖಝಾನಾಂಚಿ ಅವರು ಮೀರಾನ್ ಹೈದರ್ ಮತ್ತು ಮೊಹಮ್ಮದ್ ಸಲೀಂ ಪರ ವಾದ ಮಂಡನೆ ಮಾಡಿದ್ದಾರೆ.
ಅಕ್ಟೋಬರ್ 31ರಂದು ನಡೆದ ವಿಚಾರಣೆಯಲ್ಲಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಪರ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ಮತ್ತು ಸಿದ್ದಾರ್ಥ್ ದಾವೆ ತಮ್ಮ ವಾದ ಮಂಡಿಸಿದ್ದರು.
ಪ್ರಾಸಿಕ್ಯೂಷನ್ (ದೆಹಲಿ ಪೊಲೀಸ್) ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್.ವಿ. ರಾಜು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ, ಅವರು ಯಾವುದೇ ವಾದ ಮಂಡಿಸಿಲ್ಲ ಎಂದು ವರದಿಗಳು ಹೇಳಿವೆ.
ಮುಂದಿನ ವಿಚಾರಣೆ ದಿನ ಅವರು ವಾದ ಮಂಡನೆ ಮಾಡುವ ಸಾಧ್ಯತೆ ಇದೆ.
ಬಂಧಿತರು ‘ವಿಕ್ಟಿಮ್ ಕಾರ್ಡ್’ ಬಳಸುತ್ತಿದ್ದಾರೆ. ವಿಳಂಬದ ಕಾರಣ ಪರಿಗಣಿಸಿ ಜಾಮೀನು ನೀಡುವ ಅಗತ್ಯ ಇಲ್ಲ. ಏಕೆಂದರೆ, ವಿಚಾರಣೆ ಆರಂಭ ವಿಳಂಬವಾಗಲು ಬಂಧಿತರು ಉದ್ದೇಶಪೂರ್ವಕವಾಗಿಯೇ ತಡೆಯೊಡ್ಡುತ್ತಿದ್ದಾರೆ ಎಂದು ಜಾಮೀನು ಅರ್ಜಿಯ ವಿರುದ್ದ ದೆಹಲಿ ಪೊಲೀಸರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೇಳಿದ್ದಾರೆ.
ಇದೇ ವಾದವನ್ನು ಮುಂದಿಟ್ಟು ಜಾಮೀನು ಅರ್ಜಿಗೆ ಎಎಸ್‌ಜಿ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ.
ದೆಹಲಿ ಹೈಕೋರ್ಟ್ ಸೆಪ್ಟೆಂಬರ್ 2ರಂದು ಜಾಮೀನು ಅರ್ಜಿಗಳನ್ನು ವಜಾಗೊಳಿಸಿ ನೀಡಿದ್ದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.


