ಬಿಹಾರದ ಬಕ್ಸಾರ್ ಜಿಲ್ಲೆಯ ವಿಚಾರಣಾಧೀನ ಕೈದಿ ಚಂದನ್ ಕುಮಾರ್ ಅಲಿಯಾಸ್ ಚಂದನ್ ಮಿಶ್ರಾ ಅವರನ್ನು ಗುರುವಾರ ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪೊಂದು ಗುಂಡಿಕ್ಕಿ ಹತ್ಯೆ ಮಾಡಿದೆ.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಚಂದನ್ ಕುಮಾರ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರು. ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಾಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಘಟನೆಯನ್ನು ದೃಢಪಡಿಸಿದ ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಾರ್ತಿಕೇಯ ಶರ್ಮಾ, “ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದನ್ ಕುಮಾರ್ ಅವರನ್ನು ಪಾಟ್ನಾದ ಬೇವೂರ್ ಕೇಂದ್ರ ಜೈಲಿನಲ್ಲಿ ಇರಿಸಲಾಗಿತ್ತು. ಅಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ, ಪೆರೋಲ್ ಮೇಲೆ ಬಿಡುಗಡೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿಸಿದ್ದಾರೆ.
ಗ್ಯಾಂಗ್‌ಗಳ ನಡುವಿನ ವೈಷಮ್ಯವೇ ಕೊಲೆಗೆ ಕಾರಣ ಎಂದು ನಂಬಲಾಗಿದೆ. ಹತ್ಯೆಯಲ್ಲಿ ಭಾಗಿಯಾದವರ ಗುರುತನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ವಿಚಾರಣಾಧೀನ ಕೈದಿಯನ್ನು ಹಾಡಹಗಲೇ ಹತ್ಯೆ ಮಾಡಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಮುಖ ಉದ್ಯಮಿ ಗೋಪಾಲ್ ಖೇಮ್ಕಾ, ವಕೀಲ ಜಿತೇಂದ್ರ ಕುಮಾರ್ ಮೆಹ್ತಾ ಮತ್ತು ಮರಳು ವ್ಯಾಪಾರಿ ರಾಮಕಾಂತ್ ಯಾದವ್ ಇತ್ತೀಚೆಗಷ್ಟೆ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು.
ಗುತ್ತಿಗೆ ಹಂತಕರನ್ನು ಮಟ್ಟ ಹಾಕಲು ಬಿಹಾರ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಕಾರ್ಯನಿರ್ವಹಿಸುತ್ತಿದೆ. ಇದರಡಿ ಗುತ್ತಿಗೆ ಹಂತಕರ ಡೇಟಾ ಬ್ಯಾಂಕ್ ನಿರ್ವಹಿಸಲು ಪ್ರತ್ಯೇಕ ವಿಭಾಗ ಸ್ಥಾಪಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) (ಪ್ರಧಾನ ಕಚೇರಿ) ಕುಂದನ್ ಕೃಷ್ಣನ್, “ಕೆಲವು ಯುವಕರು ಹಣಕ್ಕಾಗಿ ಗುತ್ತಿಗೆ ಹತ್ಯೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಗುತ್ತಿಗೆ ಹಂತಕರ ಮೇಲೆ ನಿಗಾ ಇಡಲು ಹೊಸ ಘಟಕವನ್ನು ರಚಿಸಲಾಗಿದೆ. ಭವಿಷ್ಯದಲ್ಲಿ ಅವರ ಚಟುವಟಿಕೆಗಳನ್ನು ಪರಿಶೀಲಿಸಲು ಗುತ್ತಿಗೆ ಹಂತಕರ ಡೇಟಾ ಬ್ಯಾಂಕ್ ಸ್ಥಾಪಿಸಲಾಗುವುದು ಎಂದಿದ್ದಾರೆ.


