ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು “ಭಾರತದ ಮಾತೆ” ಎಂದು ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಸುರೇಶ್ ಗೋಪಿ ಬಣ್ಣಿಸಿದ್ದು, ಕಾಂಗ್ರೆಸ್ ಸರಕಾರದಲ್ಲಿ ದಿವಂಗತ ಮುಖ್ಯಮಂತ್ರಿಯಾಗಿದ್ದ ಕೆ ಕರುಣಾಕರನ್ ಅವರು ಧೈರ್ಯಶಾಲಿ ಆಡಳಿತಗಾರ ಎಂದು ಎಂದು ಹೇಳಿದ್ದಾರೆ.
ಪುಂಕುನ್ನಂನಲ್ಲಿರುವ ಕರುಣಾಕರನ್ ಅವರ ಸ್ಮಾರಕ “ಮುರಳಿ ಮಂದಿರಂ” ಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಗೋಪಿ, ಕರುಣಾಕರನ್ ಮತ್ತು ಮಾರ್ಕ್ಸ್‌ವಾದಿ ಹಿರಿಯ ಇ ಕೆ ನಾಯನಾರ್ ಅವರನ್ನು ತಮ್ಮ ರಾಜಕೀಯ ಗುರುಗಳು ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸುರೇಶ್ ಗೋಪಿ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಸುನೀಲ್ ಕುಮಾರ್ ಗೆಲುವನ್ನು ಸಾಧಿಸಿದ್ದರು. ಸುರೇಶ್ ಗೋಪಿ ಸತತ ಎರಡನೇ ಬಾರಿಗೆ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. 2019 ರಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಟಿಎನ್ ಪ್ರತಾಪನ್ ಅವರಿಂದ 1,21,267 ಮತಗಳಿಂದ ಸೋತಿದ್ದರು. ಮೂರನೇ ಸ್ಥಾನಕ್ಕೆ ತೃಪ್ತರಾಗಿದ್ದರು. ಈ ಬಾರಿ ಗೆಲ್ಲುವ ಮೂಲಕ ಕೇರಳದಲ್ಲಿ ಗೆದ್ದ ಮೊದಲ ಬಿಜೆಪಿ ಸಂಸದರಾಗಿದ್ದಾರೆ. ಎಲ್‌ಡಿಎಫ್‌ನಿಂದ ವಿಎಸ್ ಸುನೀಲ್ ಕುಮಾರ್ ಎರಡನೇ ಸ್ಥಾನದಲ್ಲಿದ್ದರೆ, ಯುಡಿಎಫ್‌ನಿಂದ ಕೆ ಮುರಳೀಧರನ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿದ್ದರು.
ಕರುಣಾಕರನ್ ಸ್ಮಾರಕಕ್ಕೆ ಭೇಟಿಗೆ ಯಾವುದೇ ರಾಜಕೀಯ ಅರ್ಥವನ್ನು ಕಲ್ಪಿಸಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ ಸುರೇಶ್ ಗೋಪಿ, ತಮ್ಮ ಗುರುಗಳಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ. ಇ ಕೆ ನಾಯನಾರ್ ಮತ್ತು ಪತ್ನಿ ಶಾರದಾ ಟೀಚರ್ ಅವರಂತೆ ಕರುಣಾಕರನ್ ಮತ್ತು ಅವರ ಪತ್ನಿ ಕಲ್ಯಾಣಿಕುಟ್ಟಿ ಅಮ್ಮ ಅವರೊಂದಿಗೆ ನಾನು ನಿಕಟ ಸಂಬಂಧ ಹೊಂದಿದ್ದೆ ಎಂದು ಹೇಳಿದ್ದಾರೆ.
ಇಂದಿರಾ ಗಾಂಧಿಯನ್ನು ಭಾರತದ ಮಾತೆ ಮತ್ತು ಕರುಣಾಕರನ್ ಅವರು ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಪಿತಾಮಹ ಎಂದು ಕೂಡ ಸುರೇಶ್ ಗೋಪಿ ಹೇಳಿದ್ದಾರೆ. ಇದಲ್ಲದೆ ಪ್ರಸಿದ್ಧ ಲೂರ್ದ್ ಮಾತಾ ಚರ್ಚ್‌ಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನು ಓದಿ: ಶ್ರೀಲಂಕಾ ಸಂಘರ್ಷ ಕುರಿತ ‘ಬ್ರದರ್ಲೆಸ್ ನೈಟ್’ ಕಾದಂಬರಿಗೆ ಅಂತರಾಷ್ಟ್ರೀಯ ಪ್ರಶಸ್ತಿ


