Homeಮುಖಪುಟಯುಪಿ ಚುನಾವಣೆ: ಅಯೋಧ್ಯೆಯಲ್ಲಿ ಬದಿಗೆ ಸರಿದ ರಾಮಮಂದಿರ; ವ್ಯಾಪಾರಿಗಳ ಕೂಗು ಮುನ್ನಲೆಗೆ

ಯುಪಿ ಚುನಾವಣೆ: ಅಯೋಧ್ಯೆಯಲ್ಲಿ ಬದಿಗೆ ಸರಿದ ರಾಮಮಂದಿರ; ವ್ಯಾಪಾರಿಗಳ ಕೂಗು ಮುನ್ನಲೆಗೆ

- Advertisement -
- Advertisement -

ಉತ್ತರ ಪ್ರದೇಶದ ಅಯೋಧ್ಯೆಯ ಕೇಂದ್ರಬಿಂದುವಾಗಿರುವ ರಾಮ್ ಕಿ ಪೈಡಿ ಘಾಟ್ ಪ್ರದೇಶದಲ್ಲಿ ಸುಮಾರು 750 ದೊಡ್ಡ ಮತ್ತು ಚಿಕ್ಕ ಅಂಗಡಿಗಳಿವೆ. ಅವುಗಳಲ್ಲಿ ಕೆಲವು ಅಂಗಡಿಗಳು ಬಹಳ ಕಾಲದಿಂದಲೂ ಇವೆ. ಆ ಅಂಗಡಿಗಳಿಂದ ತುಂಬಿರುವ ರಸ್ತೆಯು ಹನುಮಾನ್ ಗರ್ಹಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಆ ಕಾರಣದಿಂದಾಗಿ ರಾಜ್ಯ ಸರ್ಕಾರವು ರಸ್ತೆ ಅಗಲೀಕರಣ ಯೋಜನೆಯನ್ನು ರೂಪಿಸಿ, ಜಾರಿಗೊಳಿಸಲು ಮುಂದಾಗಿದೆ. ಇದರಿಂದಾಗಿ, ಕೆಲವು ವ್ಯಾಪಾರಗಳು ಮತ್ತು ಅವುಗಳ ಮಾಲೀಕರಿಗೆ ತಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆ ಬೀಳಲಿದೆ ಎಂಬ ಆತಂಕ ಉಂಟಾಗಿದೆ.

ಈ ವಿವಾದವು ಯುಪಿ ವಿಧಾನಸಭಾ ಚುನಾವಣೆಯಲ್ಲಿ ಅಯೋಧ್ಯೆ ಕ್ಷೇತ್ರದ ಪ್ರಮುಖ ಚುನಾವಣಾ ವಿಷಯವಾಗಿ ಮಾರ್ಪಟ್ಟಿದೆ. ನಿರ್ಮಾಣ ಹಂತದಲ್ಲಿರುವ ರಾಮ ಮಂದಿರ, ರಾಮ ಇಲ್ಲಿ ಜನಿಸಿದನೆಂಬ ನಂಬಿಕೆಗಳು ಮತ್ತು ಹಿಂದುತ್ವ ಯೋಜನೆಗಳ ಕೇಂದ್ರವಾಗಿದ್ದ ಅಯೋಧ್ಯೆ, ಇವೆಲ್ಲವುಗಳ ಹೊರತಾಗಿ ಈ ಬಾರಿಯ ಚುನಾವಣೆಯಲ್ಲಿ ಅಸಲಿ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದೆ.

ಅಯೋಧ್ಯೆ ಜಿಲ್ಲೆಯು ಬಿಜೆಪಿ ಭದ್ರಕೋಟೆಯಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಐದು ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಇದೀಗ, ವಿಧಾನಸಭಾ ಚುನಾವಣೆಯಲ್ಲಿ ಐದನೇ ಹಂತದ (ಫೆ.27) ಮತದಾನ ನಡೆಯಲಿರುವ ಜಿಲ್ಲೆಗಳಲ್ಲಿ ಅಯೋಧ್ಯೆಯೂ ಒಂದಾಗಿದೆ.

ಈ ಬಾರಿ ಮೂಲಸೌಕರ್ಯ ಮತ್ತು ಸ್ಥಳೀಯ ಆಡಳಿತ ಸಮಸ್ಯೆಗಳು ಚುನಾವಣೆಯ ವಿಷಯವಾಗಿದೆ. ಇದರ ಮಧ್ಯೆ, ಅನೇಕರಿಗೆ ತಮ್ಮ ಜೀವನೋಪಾಯದ ಪ್ರಶ್ನೆಯು ಪ್ರಮುಖವಾಗಿದೆ.

“ಅಯೋಧ್ಯೆಯಲ್ಲಿ ರಸ್ತೆ ಅಗಲೀಕರಣ ಯೋಜನೆ ಜಾರಿಗೆ ಬಂದರೆ, ನಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಭಯವಿದೆ. ಯುವಕನಾಗಿದ್ದಾಗ ನಾನು ರಾಮಮಂದಿರ ಚಳವಳಿಯನ್ನು ನೋಡಿದ್ದೇನೆ, ಭಾಗವಹಿಸಿದ್ದೇನೆ. ಆದರೆ, ಈಗ ನಾವು ನಮ್ಮ ಜೀವನೋಪಾಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ಖದೌಸ್ (ಮರದ ಚಪ್ಪಲಿ)ಗಳಿಗೆ ಬೇಡಿಕೆಯೂ ಹೆಚ್ಚಿದೆ. ಈಗ ನಾನು ಅಂಗಡಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಊಹೆಯೇ ಭಯಾನಕವಾಗಿದೆ” ಎಂದು ಖದೌಸ್‌‌ ವ್ಯಾಪಾರಿ ರಾಮ್ ಸಾಗರ್ ಹೇಳುತ್ತಾರೆ.

ಇದನ್ನೂ ಓದಿರಿ: ಭೂ ಹಗರಣ, ಬ್ರಾಹ್ಮಣರ ಮತಗಳು ಕೈ ತಪ್ಪುವ ಭಯ: ಅಯೋಧ್ಯೆಯ ಟಿಕೆಟ್‌ ಯೋಗಿ ಕಳೆದುಕೊಳ್ಳಲು ಕಾರಣವೇ?

51 ವರ್ಷದ ರಾಧಾ ಕೃಷ್ಣ ಅವರು ಕಳೆದ ಮೂರು ತಲೆಮಾರುಗಳಿಂದ ಸಿಹಿತಿಂಡಿ ಅಂಗಡಿ ನಡೆಸುತ್ತಿದ್ದಾರೆ. ಆದರೆ, ಅವರು ಮಳಿಗೆಯನ್ನು ಬಾಡಿಗೆಗೆ ಪಡೆದು ವ್ಯಾಪಾರ ನಡೆಸುತ್ತಿದ್ದಾರೆ. ಈಗ ಆ ಅಂಗಡಿ ಮಳಿಗೆಗಳನ್ನು ಕೆಡವಿದರೆ, ಅದರ ಪರಿಹಾರವು ಮಾಲೀಕರಿಗೆ ಸಿಗುತ್ತದೆ. ನಮ್ಮ ಗತಿ ಏನು? ಎಂದು ಅವರು ಚಿಂತಿತರಾಗಿದ್ದಾರೆ.

”ನಾವು ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ವಿರುದ್ದವಿಲ್ಲ. ಆದರೆ, ಅಂಗಡಿಗಳನ್ನು ಕೆಡವುವ ಮುನ್ನ ಪ್ರತಿಯೊಂದು ಅಂಗಡಿಯವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು” ಎಂದು ಬಟ್ಟೆ ಅಂಗಡಿ ಮಾಲೀಕ ಅನುರಾಗ್ ಶುಕ್ಲಾ ಒತ್ತಾಯಿಸುತ್ತಾರೆ.

ಈ ವ್ಯಾಪಾರಿಗಳ ಅಸಮಾಧಾನ, ಜನರ ಸಂಕಷ್ಟಗಳು ಬಿಜೆಪಿಗೆ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭಯವನ್ನು ಹುಟ್ಟಿಸಿವೆ. ಈ ಕಾರಣಕ್ಕಾಗಿಯೇ, ಫೆಬ್ರವರಿ 24ರಂದು ನಡೆದ ಬಿಜೆಪಿ ರೋಡ್ ಶೋನಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಅಯೋಧ್ಯೆಯ ಸಂತರು ಮತ್ತು ವ್ಯಾಪಾರಿಗಳಿಗೆ ಒಪ್ಪಿಗೆಯಿಲ್ಲದೆ ಅಯೋಧ್ಯೆಯಲ್ಲಿ ಯಾವುದೇ ಯೋಜನೆಯನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ” ಎಂದು ಹೇಳಿದ್ದಾರೆ.

ಈ ಸಮಸ್ಯೆಗಳನ್ನು ಗ್ರಹಿಸಿರುವ ಮತ್ತು ಅವಕಾಶಕ್ಕಾಗಿ ಕಾಯುತ್ತಿದ್ದ ಸಮಾಜವಾದಿ ಪಕ್ಷದ (SP) ಮಾಜಿ ಶಾಸಕ ತೇಜ್ ನಾರಾಯಣ್ ಪಾಂಡೆ ಅವರು ಸಂಪೂರ್ಣವಾಗಿ ವ್ಯಾಪಾರಿಗಳ ಪರ ನಿಂತಿದ್ದಾರೆ. 2012ರಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯ ಲಲ್ಲು ಸಿಂಗ್ ಅವರನ್ನು ಸೋಲಿಸಿದ್ದ ಪಾಂಡೆ, 2017ರಲ್ಲಿ ಬಿಜೆಪಿಯ ವೇದ್ ಪ್ರಕಾಶ್ ಗುಪ್ತಾ ವಿರುದ್ಧ ಸೋತಿದ್ದರು. ಈ ಬಾರಿಯೂ ಅವರು ಎಸ್ಪಿ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯನ್ನು ಮಣಿಸಿ, ಗೆಲುವು ಸಾಧಿಸಲೇಬೇಕು ಎದು ಅವರು ಯತ್ನಿಸುತ್ತಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ, ರಾಮ ಮಂದಿರ ನಿರ್ಮಾಣದ ಕೆಲಸಗಳು ನಡೆಯುತ್ತಿವೆ. ಈಗ ಅಯೋಧ್ಯೆ ವಿವಾದವು ರಾಜಕೀಯ ದಾಳವಾಗಿ ಯಾವ ಪಕ್ಷಕ್ಕೂ ಉಳಿದಿಲ್ಲ. ಜನರು, “ರಾಮಮಂದಿರ ವಿವಾದ ಮುಗಿದಿದೆ. ರಾಮಮಂದಿರ ನಿರ್ಮಾಣವಾಗುತ್ತಿದೆ. ಈಗ ಅದರ ಬಗ್ಗೆ ಮಾತನಾಡುವುದೇನಿದೆ?” ಎಂದು ಪ್ರಶ್ನಿಸುತ್ತಿದ್ದಾರೆ. ತಮ್ಮ ಅಸಲಿ ಸಮಸ್ಯೆಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ.

ಹೀಗಾಗಿ, ಬಿಜೆಪಿಯು ಈ ಬಾರಿಯ ಚುನಾವಣೆಯಲ್ಲಿ ರಾಮಮಂದಿರ ವಿಚಾರವನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಅಲ್ಲದೆ, ಜನರ ಅಸಲಿ ಸಮಸ್ಯೆಗಳಿಗೆ ಉತ್ತರಿಸಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅಯೋಧ್ಯೆಯಲ್ಲಿ ಬಿಜೆಪಿಗೆ ಮತಗಳನ್ನು ತರಲು ಅಲ್ಲಿನ ಸಂತರು ಎಲ್ಲಾ ದೇವಾಲಯಗಳಲ್ಲಿಯೂ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರ ಚಿತ್ತವನ್ನು ಬಿಜೆಪಿಯತ್ತ ಸೆಳೆಯಲು ಯತ್ನಿಸುತ್ತಿದ್ದಾರೆ.

ಸಮಾಜವಾದಿ ಪಕ್ಷವು ಜನರ ಸಮಸ್ಯೆಗಳನ್ನಿಟ್ಟುಕೊಂಡು ಚುನಾವಣಾ ಮೈಲೇಜ್ ಪಡೆಯಲು ಮುಂದಾಗಿದೆ. ಅಯೋಧ್ಯೆ ಜನರು ಏನನ್ನು ನಿರ್ಧರಿಸುತ್ತಾರೆ ಎಂಬುದನ್ನು ಮಾರ್ಚ್ 10ರಂದು ಪ್ರಕಟವಾಗುವ ಫಲಿತಾಂಶದಲ್ಲಿ ನೋಡಬೇಕಿದೆ.


ಇದನ್ನೂ ಓದಿರಿ: ಯೋಗಿ ಆದಿತ್ಯನಾಥ್‌ಗೆ ಅಯೋಧ್ಯೆಯಲ್ಲಿ ಹೆಚ್ಚು ವಿರೋಧವಿದೆ: ರಾಮ ಮಂದಿರದ ಪ್ರಧಾನ ಅರ್ಚಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...