ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯ ಭಾಗವಾಗಿ ಉತ್ತರ ಪ್ರದೇಶ ಸರ್ಕಾರವು 12 ಗಂಟೆಗಳ ಕೆಲಸದ ಅವಧಿಯನ್ನು ಹೆಚ್ಚಿಸಿದ್ದ ಆದೇಶವನ್ನು ಜನರ ಒತ್ತಾಯಕ್ಕೆ ಮಣಿದು ಶುಕ್ರವಾರ ವಾಪಸ್ ಪಡೆದಿದೆ.
ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಮೇ 15 ರಂದು ಸುತ್ತೋಲೆಯೊಂದನ್ನು ಹೊರಡಿಸುವ ಮೂಲಕ ಆದೇಶ ವಾಪಸ್ ಪಡೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಮೇ 08 ರಂದು ಉತ್ತರ ಪ್ರದೇಶ ಸರ್ಕಾರವು ನೋಟಿಫೀಕೆಶನ್ ಹೊರಡಿಸಿ ಫ್ಯಾಕ್ಟರಿ ಕಾಯ್ದೆಯ ಸೆಕ್ಷನ್ 51, 54, 56, 59 ಗಳ ಅನ್ವಯ ಕೆಲಸದ ಅವಧಿ, ಹೆಚ್ಚುವರಿ ಅವಧಿಗೆ ಸಂಬಳ ಮತ್ತು ವಿರಾಮ ಅವಧಿಗಳನ್ನು ತಿದ್ದುಪಡಿ ಮಾಡಲಾಗಿತ್ತು. ತಿದ್ದುಪಡಿಯನ್ವಯ 8 ಗಂಟೆಗಳ ಬದಲಿಗೆ 12 ಗಂಟೆಗಳಿಗೆ ಕೆಲಸದ ಅವಧಿಯನ್ನು ಹೆಚ್ಚಿಸಲಾಗಿತ್ತು.
ಉತ್ತರ ಪ್ರದೇಶದ ಈ ನಿರ್ಧಾರಕ್ಕೆ ರಾಜ್ಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಲವು ಕಾರ್ಮಿಕ ಸಂಘಟನೆಗಳು ತಿದ್ದುಪಡಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದವು.
ಯುಪಿ ವರ್ಕರ್ಸ್ ಫ್ರಂಟ್, ವಕೀಲರಾದ ಪ್ರಂಜಲ್ ಶುಕ್ಲಾ ಮತ್ತು ವಿನಾಯಕ್ ಮಿತ್ತಲ್ ಸರ್ಕಾರದ ಕ್ರಮ ವಿರೋಧಿಸಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದು ಸಾಂವಿಧಾನಿಕ ಹಕ್ಕುಗಲ ಉಲ್ಲಂಘನೆ ಎಂದು ವಾದಿಸಿದ್ದರು. ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಥೂರ್ ಮತ್ತು ಸಿದ್ಧಾರ್ಥ್ ವರ್ಮಾರವರ ಪೀಠವು ವಿಚಾರಣೆ ನಡೆಸಿ ಮುಂದಿನ ವಿಚಾರಣೆಯನ್ನು ಮೇ 18 ಕ್ಕೆ ಮುಂದೂಡಿತ್ತು.
ಅಷ್ಟರಲ್ಲಿ ರಾಜ್ಯ ಸರ್ಕಾರವು ಜನಾಕ್ರೋಶಕ್ಕೆ ಮಣಿದು ತಿದ್ದುಪಡಿಯನ್ನು ವಾಪಸ್ ಪಡೆದಿದೆ. ಇದರಿಂದ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಇದು ಉಳಿದ ರಾಜ್ಯಗಳ ಕಾರ್ಮಿಕರ ಹೋರಾಟಕ್ಕೂ ಮಾದರಿಯಾಗಲಿದೆ.
ಇದನ್ನೂ ಓದಿ: ರಾಷ್ಟ್ರಪತಿ ಒಪ್ಪಿಗೆ ಇಲ್ಲದೆ ರಾಜ್ಯಗಳ ಸುಗ್ರೀವಾಜ್ಞೆ ಅಂಗೀಕಾರ ಸಂವಿಧಾನಬಾಹಿರ: ಜಸ್ಟೀಸ್ ಗೋಪಾಲಗೌಡ


