ರಾಜ್ಯ ಸರ್ಕಾರ ಪಾರ್ಕಿಂಗ್ 2.0 ನೀತಿ ಜಾರಿಗೆ ತರಲು ಉದ್ದೇಶಿಸಿದ್ದು, ರಸ್ತೆ ಬದಿ ಪಾರ್ಕಿಂಗ್‌ಗೆ ದುಬಾರಿ ಶುಲ್ಕ, ಮನೆ ಮುಂದೆ ಪಾರ್ಕಿಂಗ್‌ಗೆ ಸಹ ಶುಲ್ಕ ವಿಧಿಸಲು ಹೊರಟಿದೆ. ಹೊಸ ವಾಹನ ಖರೀದಿಗೆ ವಾಹನ ನಿಲುಗಡೆ ಪರವಾನಗಿ ಕಡ್ಡಾಯಗೊಳಿಸಿದ್ದು ಆರು ತಿಂಗಳಿನಿಂದ ವರ್ಷದೊಳಗೆ ಈ ನಿಯಮಗಳನ್ನು ಜಾರಿಗೊಳಿವುದಾಗಿ ತಿಳಿಸಿದೆ.
ಮನೆ ಮುಂದೆ ಸಣ್ಣ ಕಾರು ಪಾರ್ಕಿಂಗ್‌ಗೆ ವಾರ್ಷಿಕ 1000 ರೂ ಮತ್ತು ದೊಡ್ಡ ಕಾರುಗಳಿಗೆ 5000 ರೂವರೆಗೆ ಶುಲ್ಕ ವಿಧಿಸುವುದಾಗಿ ಸರ್ಕಾರ ಘೋಷಿಸಿದೆ. ನಗರ ಭೂಸಾರಿಗೆ ನಿರ್ದೇಶನಾಲಯ ಮತ್ತು ಬಿಬಿಎಂಪಿ ಜಂಟಿಯಾಗಿ ಇದನ್ನು ಅನುಷ್ಠಾನಗೊಳಿಸುವ ಹೊಣೆ ಹೊತ್ತಿವೆ.
ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಾಹನ ಕೊಳ್ಳುವಾಗಲೇ ತೆರಿಗೆ ಕಟ್ಟಿರುತ್ತೇವೆ ಹಾಗಿದ್ದೂ ಮತ್ತೆ ಮತ್ತೆ ಶುಲ್ಕ ಸಂಗ್ರಹಿಸುವ ಮೂಲಕ ಸರ್ಕಾರ ಹಗಲು ದರೋಡೆಗಿಳಿದಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಸ್ತೆ ಬದಿ ವಾಹನ ನಿಲುಗಡೆಗೆ ದುಬಾರಿ ಶುಲ್ಕ ವಿಧಿಸಲು ಹೊರಟಿರುವ ಬಿಬಿಎಂಪಿಯ ಅವೈಜ್ಞಾನಿಕ ನಿರ್ಧಾರವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಸರಿಯಾದ ಮೂಲ ಸೌಕರ್ಯಗಳನ್ನೇ ನೀಡದೆ ತರಲು ಹೊರಟಿರುವ ಈ ನಿರ್ಧಾರ ಮೂರ್ಖತನದ್ದು, ಜನರನ್ನು ಸುಲಿಗೆ ಮಾಡಲು ನಿಂತಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆ ಮಾಡುತ್ತಿರುವುದು ವಾಸ್ತವ. ಈ ಸಮಸ್ಯೆಗಳಿಗೆ ಬಿಬಿಎಂಪಿಯ ವೈಫಲ್ಯವೇ ಕಾರಣ, ಏಕೆಂದರೆ ರಸ್ತೆ ಬದಿಗಳಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುವ ತನಕ ಕಣ್ಣು ಮುಚ್ಚಿಕೊಂಡು ಕೂತ ಕಾರಣ ಇಂದು ಈ ಸಮಸ್ಯೆಯನ್ನು ಎದುರಿಸಬೇಕಿದೆ. ದೊಡ್ಡ ದೊಡ್ಡ ಕಟ್ಟಡಗಳು ತಮ್ಮ ನೆಲ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲೇ ಬೇಕು ಎನ್ನುವ ನಿಯಮವಿದೆ. ನೆಲ ಮಾಳಿಗೆಯಲ್ಲೂ ಬಾಡಿಗೆಗೆ ಮಳಿಗೆಗಳನ್ನು ನೀಡಿ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ದ ಬಿಬಿಎಂಪಿ ಇದುವರೆಗೂ ಯಾವ ಕ್ರಮ ತೆಗೆದುಕೊಂಡ ಉದಾಹರಣೆ ಇಲ್ಲ ಎಂದು ಹೇಳಿದ್ದಾರೆ.

ಶುಲ್ಕ ಪಾವತಿ ಮಾಡಿ ರಸ್ತೆ ಬದಿ ವಾಹನ ನಿಲ್ಲಿಸುವ ನಿಯಮದಿಂದ ರಸ್ತೆಗಳ ಮೇಲಿನ ಒತ್ತಡ ಕಡಿಮೆ ಆಗುತ್ತದೆ ಎನ್ನುವುದು ಸದ್ಯಕ್ಕೆ ದೂರವಾದ ಮಾತು. ಇದು ಜನರನ್ನು ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡುವ ತಂತ್ರ, ಸಮಸ್ಯೆಯನ್ನು ನಿಜವಾಗಿ ಬಗೆಹರಿಸುವ ಯಾವುದೇ ಆಲೋಚನೆ ಬಿಬಿಎಂಪಿಗೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಸರಕು ಸಾಗಣೆ ಲಾರಿಗಳು ಸೇರಿದಂತೆ ಇತರೇ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ವಾಹನಗಳಿಂದ ರಸ್ತೆಗಳ ಮೇಲೆ ಹೆಚ್ಚು ಹೊರೆಯಾಗುತ್ತಿದೆ. ಇಂತಹ ವಾಹನಗಳ ಮಾಲೀಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ವಾಹನ ನಿಲುಗಡೆಗೆ ಪ್ರತ್ಯೇಕ ಡಿಪೋ ಸ್ಥಾಪನೆ, ಬಿಬಿಎಂಪಿಯಿಂದ ಪಾರ್ಕಿಂಕ್ ಲಾಟ್‌ಗಳನ್ನು ಸ್ಥಾಪಿಸದ ಹೊರತು ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವುದು ಅಸಾಧ್ಯ ಎಂದರು.
ಕಟ್ಟಡ ನಿರ್ಮಾಣ ಮಾಡುವಾಗಲೇ ವಾಹನ ನಿಲುಗಡೆಗೂ ಸೂಕ್ತ ಸ್ಥಳವಾಕಾಶ ಬಿಡದ ಕಟ್ಟಡಗಳಿಗೂ ಅನುಮತಿ ನೀಡಿದ ಬಿಬಿಎಂಪಿ ತನ್ನ ವೈಫಲ್ಯವನ್ನು ಜನರ ಮೇಲೆ ಹಾಕಲು ಹೊರಟಿದೆ. ಈ ಕೂಡಲೇ ತನ್ನ ಅವೈಜ್ಞಾನಿಕ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಬಿಬಿಎಂಪಿ ಮನೆ ಮನೆಯಲ್ಲಿ ಕಸಕ್ಕೂ ಶುಲ್ಕ ವಿಧಿಸಲು ಹೊರಟಿತ್ತು. ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಕೈಬಿಟ್ಟಿತು. ಈಗ ವಾಹನ ಪಾರ್ಕಿಂಗ್‌ಗೆ ಶುಲ್ಕ ವಿಧಿಸಲು ಹೊರಟಿದೆ. ಇದನ್ನು ಸಾರ್ವಜನಿಕರು ಯಾವ ರೀತಿ ಸ್ವೀಕರಿಸುತ್ತಾರೆ ಕಾದು ನೋಡಬೇಕಿದೆ.
ಇದನ್ನೂ ಓದಿ: ಯತ್ನಾಳ್‌ಗೆ ನೋಟಿಸ್: 15 ದಿನದಲ್ಲಿ ಉತ್ತರಿಸುವಂತೆ ಬಿಜೆಪಿ ಹೈಕಮಾಂಡ್ ಆದೇಶ


