ಲಕ್ನೋ: ಉತ್ತರ ಪ್ರದೇಶದಲ್ಲಿ 7 ಹಂತದ ಮಹಾ ಚುನಾವಣೆಯ ಕೊನೆಯ ಹಂತದ ಮತದಾನ ಇಂದು ನಡೆಯುತ್ತಿದ್ದು, 54 ಕ್ಷೇತ್ರಗಳಲ್ಲಿ ಮತದಾನ ನಡೆಯತ್ತಿದೆ. ಈ ಸುತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾದ ವಾರಣಾಸಿಯತ್ತ ಎಲ್ಲರ ಕಣ್ಣು ನೆಟ್ಟಿದೆ.
ಅಜಂಗಢ, ಮೌ, ಜೌನ್‌ಪುರ್, ಗಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ, ಭದೋಹಿ ಮತ್ತು ಸೋನ್‌ಭದ್ರ ಜಿಲ್ಲೆಗಳಲ್ಲಿನ 54 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.
ವಾರಣಾಸಿ ಮತ್ತು ಅದರ ಪಕ್ಕದ ಜಿಲ್ಲೆಗಳಾದ ಬನಾರಸ್ ಸಿಟಿ ಸೌತ್, ಬನಾರಸ್ ಸಿಟಿ ನಾರ್ತ್, ಶಿವಪುರ, ಸೇವಾಪುರಿ, ಕಂಟೋನ್ಮೆಂಟ್, ಅಜ್ಗರ, ಪಿಂದ್ರಾ ಮತ್ತು ರೊಹನಿಯಾದ ಕ್ಷೇತ್ರಗಳು ಬಹುಕೋನ ಸ್ಪರ್ಧೆಗೆ ಸಾಕ್ಷಿಯಾಗಿವೆ.
ಕಳೆದ ಬಾರಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಈ ಪ್ರದೇಶದಲ್ಲಿ ಮುನ್ನಡೆ ಸಾಧಿಸಿದ್ದವು. ಆರು ಸ್ಥಾನಗಳು ಬಿಜೆಪಿ ಪಾಲಾಗಿವೆ. ಉಳಿದ ಎರಡರಲ್ಲಿ ಬಿಜೆಪಿ ಮಿತ್ರ ಪಕ್ಷವಾದ ಅನುಪ್ರಿಯಾ ಪಟೇಲ್ ಅವರ ಅಪ್ನಾ ದಳ (ಎಸ್) ಒಂದು ಸ್ಥಾನ, ಈಗ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಪಾಲುದಾರರಾಗಿರುವ ಓಂ ಪ್ರಕಾಶ್ ರಾಜ್‌ಭರ್ ಅವರ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಒಂದು ಸ್ಥಾನವನ್ನು ಗೆದ್ದಿವೆ.
ಐದು ಕ್ಷೇತ್ರಗಳು ಪ್ರಧಾನಿ ಮೋದಿಯವರ ಸಂಸದೀಯ ಕ್ಷೇತ್ರವಾದ ವಾರಣಾಸಿ ವ್ಯಾಪ್ತಿಯಲ್ಲಿವೆ. ಕಳೆದ ಬಾರಿ ಬಿಜೆಪಿ ಗೆದ್ದಿದ್ದ ನೆರೆಯ ಮಿರ್ಜಾಪುರ ಮತ್ತು ಜೌನ್‌ಪುರದಲ್ಲೂ ಪ್ರಬಲ ಚುನಾವಣಾ ಸಮರ ಏರ್ಪಟ್ಟಿದೆ.
3 ಲಕ್ಷ ಮುಸ್ಲಿಮರಲ್ಲದೆ ವಾರಣಾಸಿಯಲ್ಲಿ 3.25 ಲಕ್ಷ ವೈಶ್ಯರು, ಸ್ಥಳೀಯವಾಗಿ ಒಬಿಸಿ ಕುರ್ಮಿ 2 ಲಕ್ಷ, ಯಾದವರು 1.5 ಲಕ್ಷ, ಠಾಕೂರ್ 1 ಲಕ್ಷ, ದಲಿತರು 80,000 ಮತ್ತು ಇತರ ಒಬಿಸಿ ಜಾತಿಗಳು 70,000 ಜನರಿದ್ದಾರೆ.
ಅಖಿಲೇಶ್ ಯಾದವ್ ಅವರ ಪಾಲುದಾರರಾದ ಅಪ್ನಾ ದಳ (ಕೆ), ರಾಜ್‌ಭರ್ ಅವರ ಎಸ್‌ಬಿಎಸ್‌ಪಿ ಮತ್ತು ಬಿಜೆಪಿ ಮಿತ್ರಪಕ್ಷಗಳಾದ ಅಪ್ನಾ ದಳ, ನಿಶಾದ್ ಪಕ್ಷಗಳ ನಡುವಿನ ಸಮರವೆಂದೇ ಕೊನೆಯ ಹಂತದ ಚುನಾವಣೆಯನ್ನು ನೋಡಲಾಗುತ್ತಿದೆ.
ಅಖಿಲೇಶ್ ಯಾದವ್ ಅವರು ವಾರಣಾಸಿ ಭಾಗದಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಎಸ್‌ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಇನ್ನುಳಿದ ಸ್ಥಾನಗಳನ್ನು ಇತರ ಮಿತ್ರಪಕ್ಷಗಳಾದ ಅಪ್ನಾ ದಳ, ಎಸ್‌ಬಿಎಸ್‌ಪಿಗೆ ಬಿಟ್ಟುಕೊಟ್ಟಿದ್ದಾರೆ.
ಬಿಜೆಪಿ ಏಳು ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರೊಹಾನಿಯಾ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ನೇತೃತ್ವದ ಅಪ್ನಾ ದಳ (ಎಸ್) ಅಭ್ಯರ್ಥಿ ಸ್ಪರ್ಧಿಸಿದ್ದಾರೆ.
ಈ ಚುನಾವಣೆಯು ಸಮಾಜವಾದಿ ಪಕ್ಷದ ಮುಖ್ಯಸ್ಥರಿಗೆ ಪರೀಕ್ಷೆಯೊಡ್ಡಿದೆ. ಅಖಿಲೇಶ್ ಅವರ ಸಂಸದೀಯ ಕ್ಷೇತ್ರವಾದ ಅಜಂಗಢ್‌ಗೆ ಸಹ ಚುನಾವಣೆ ನಡೆಯುತ್ತಿದೆ. 2017ರಲ್ಲಿ ಬಿಜೆಪಿ ಪ್ರಚಂಡ ಬಹುಮತದ ನಡುವೆಯೂ ಈ ಪ್ರದೇಶವು ಎಸ್‌ಪಿಗೆ ನಿಷ್ಠವಾಗಿತ್ತು. ಜಿಲ್ಲೆಯ 10 ಸ್ಥಾನಗಳಲ್ಲಿ ಎಸ್‌ಪಿ ಐದರಲ್ಲಿ ಗೆದ್ದಿತ್ತು.
ಉತ್ತರ ಪ್ರದೇಶ ಮತ್ತು ಇತರ ನಾಲ್ಕು ರಾಜ್ಯಗಳ ಮತ ಎಣಿಕೆಯು ಮಾರ್ಚ್ 10 ರಂದು ನಡೆಯಲಿದೆ.
ಕೋವಿಡ್ ಬಿಕ್ಕಟ್ಟು ನಿರ್ವಹಣೆ: ಬಿಜೆಪಿಗೆ ಮುಳುವಾಗುವುದೇ?
ಮಾನವ ಹಕ್ಕುಗಳ ಸಂಸ್ಥೆಯಾದ ಸಿಟಿಜನ್ ಫಾರ್ ಜಸ್ಟೀಸ್ ಅಂಡ್ ಫೀಸ್ (ಸಿಜೆಪಿ) ಹಾಗೂ ಸ್ವತಂತ್ರ ತಜ್ಞರು ಸಂಗ್ರಹಿಸಿ, ವಿಶ್ಲೇಷಿಸಿದ ದತ್ತಾಂಶಗಳು ಮಹತ್ವದ ಸಂಗತಿಯೊಂದನ್ನು ಇತ್ತೀಚೆಗೆ ಬಿಚ್ಚಿಟ್ಟಿತ್ತು. ಪ್ರಧಾನಿ ನರೇಂದ್ರ ಮೋದಿಯವರ ತವರು ಜಿಲ್ಲೆಯಾದ ವಾರಣಾಸಿಯನ್ನು ಹೊಂದಿರುವ ಪೂರ್ವ ಉತ್ತರ ಪ್ರದೇಶದ ಪೂರ್ವಂಚಲ ಭಾಗದಲ್ಲಿ ಅತಿಹೆಚ್ಚಿನ ಜನರು ಕೋವಿಡ್ ಸಾಂಕ್ರಾಮಿಕದ ವೇಳೆ ಸಾವಿಗೀಡಾಗಿದ್ದಾರೆ ಎಂದು ವರದಿ ವಿಶ್ಲೇಷಿಸಿತ್ತು.
ಸಮೀಕ್ಷೆ ನಡೆಸಿದ ಪ್ರದೇಶದ ಅಂಕಿ ಅಂಶಗಳು ಹೇಳುವುದೇನೆಂದರೆ “ಜನವರಿ 2020ರಿಂದ ಆಗಸ್ಟ್ 2021ರವರೆಗೆ ದಾಖಲಾದ ಸಾವಿನ ಪ್ರಮಾಣವು 2019ರ ದಾಖಲೆಗೆ ಹೋಲಿಕೆ ಮಾಡಿದರೆ ಶೇ. 60ರಷ್ಟು ಹೆಚ್ಚಾಗಿದೆ”. ಇದು ಸರ್ಕಾರಿ ದಾಖಲೆಗಳನ್ನು ಆಧರಿಸಿ ಮಾಡಿದ ವರದಿಯಾಗಿದೆ ಎಂದು ಸಿಜೆಪಿ ಹೇಳಿತ್ತು. ಈ ಎಲ್ಲ ಅಂಶಗಳು ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ?- ಮಾರ್ಚ್ 10ರವರೆಗೆ ಕಾಯಬೇಕಷ್ಟೇ.
ಉತ್ತರ ಪ್ರದೇಶ: ಕೋವಿಡ್ ಅವಧಿಯಲ್ಲಿ ಮೋದಿಯ ವಾರಣಾಸಿ ಕಂಡ ಸಾವು ನೋವು: ಬೆಚ್ಚಿಬೀಳಿಸುವ ವರದಿ ಬಹಿರಂಗ


