ಶನಿವಾರ ಮಣಿಪುರಕ್ಕೆ ಭೇಟಿ ನೀಡಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿಯೋಗದ ನಡೆಯನ್ನು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಸ್ವಾಗತಿಸಿದ್ದು, ಆದರೆ ಪ್ರಧಾನಿ ನರೇಂದ್ರ ಮೋದಿ ಗಲಭೆ ಪೀಡಿತ ರಾಜ್ಯಕ್ಕೆ ಯಾವಾಗ ಭೇಟಿ ನೀಡುತ್ತಾರೆ ಎಂದು ಕೇಳಿದ್ದಾರೆ.
ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ಜೈರಾಮ್ ಅವರು, “ಮಣಿಪುರಕ್ಕೆ ಹೋಗಿರುವ ಆರು ನ್ಯಾಯಮೂರ್ತಿಗಳ ನಡೆಯನ್ನು ನಾವು ಸ್ವಾಗತಿಸುತ್ತೇವೆ. ಅಲ್ಲಿ ಕಳೆದ 22 ತಿಂಗಳಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ, ಸುಮಾರು 60,000 ಜನರು ನಿರಾಶ್ರಿತರಾಗಿದ್ದಾರೆ ಮತ್ತು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ಇಂದಿಗೂ ಮಣಿಪುರದ ಜನ ಸಮುದಾಯಗಳಲ್ಲಿ ಭಯ ಮತ್ತು ಅನುಮಾನದ ವಾತಾವರಣವಿದೆ” ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ
“ಫೆಬ್ರವರಿ 13 ರಂದು ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು. ಆದರೆ ಪ್ರಶ್ನೆ ಏನೆಂದರೆ, ಆಗಸ್ಟ್ 1, 2023 ರಂದು ಸ್ವತಃ ಸುಪ್ರೀಂಕೋರ್ಟ್, ‘ಮಣಿಪುರದಲ್ಲಿ ಸಾಂವಿಧಾನಿಕ ವ್ಯವಸ್ಥೆ ಸಂಪೂರ್ಣವಾಗಿ ಬುಡಮೇಲಾಗಿದೆ’ ಎಂದು ಹೇಳಿದ ನಂತರವೂ, ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲು 18 ತಿಂಗಳುಗಳು ಏಕೆ ತೆಗೆದುಕೊಂಡಿತು? ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಹೋಗಿರುವುದು ಒಳ್ಳೆಯದೆ, ಆದರೆ ಪ್ರಧಾನಿ ಯಾವಾಗ ಭೇಟಿ ನೀಡುತ್ತಾರೆ ಎಂಬುದು ದೊಡ್ಡ ಪ್ರಶ್ನೆ?” ಎಂದು ಅವರು ಹೇಳಿದ್ದಾರೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿಯೋಗವು ಶನಿವಾರ ಮಣಿಪುರದ ಚುರಾಚಂದ್‌ಪುರದಲ್ಲಿರುವ ಪರಿಹಾರ ಶಿಬಿರಕ್ಕೆ ಭೇಟಿ ನೀಡಿತು. ನಿಯೋಗದಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಸೂರ್ಯಕಾಂತ್, ವಿಕ್ರಮ್ ನಾಥ್, ಎಂ.ಎಂ. ಸುಂದರೇಶ್, ಕೆ.ವಿ. ವಿಶ್ವನಾಥನ್ ಮತ್ತು ಎನ್. ಕೋಟೀಶ್ವರ್ ಇದ್ದರು.
ಸಂಸತ್ತಿನಲ್ಲಿ ಗೃಹ ಸಚಿವಾಲಯದ (ಎಂಎಚ್‌ಎ) ಕಾರ್ಯವೈಖರಿಯ ಕುರಿತು ಚರ್ಚೆಯ ಸಂದರ್ಭದಲ್ಲಿ ಮಣಿಪುರದ ಪರಿಸ್ಥಿತಿಯನ್ನು ತಿಳಿಸದ ಗೃಹ ಸಚಿವ ಅಮಿತ್ ಶಾ ಅವರನ್ನು ಜೈರಾಮ್ ರಮೇಶ್ ಟೀಕಿಸಿದ್ದಾರೆ.
“ನಿನ್ನೆ, ಗೃಹ ಸಚಿವರು ತಮ್ಮ ಗೃಹ ಸಚಿವಾಲಯದ ಕೆಲಸದ ಬಗ್ಗೆ ರಾಜ್ಯಸಭೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಪ್ರತಿಕ್ರಿಯೆ ನೀಡಿದರು. ಆದರೆ ಅವರು ಮಣಿಪುರದ ಬಗ್ಗೆ ಹೆಚ್ಚಾಗಿ ಹೇಳಲಿಲ್ಲ. ಫೆಬ್ರವರಿ 2022 ರಲ್ಲಿ ಅಲ್ಲಿ ಎನ್‌ಡಿಎ ಭಾರಿ ಬಹುಮತದಿಂದ ಚುನಾವಣೆಯನ್ನು ಗೆದ್ದಿತ್ತು. ಆದರೆ 15 ತಿಂಗಳೊಳಗೆ ಮಣಿಪುರ ಹೊತ್ತಿ ಉರಿಯಲು ಪ್ರಾರಂಭಿಸಿತು. ಅದಕ್ಕೆ ಅವರಲ್ಲಿ ಉತ್ತರವಿಲ್ಲ. ಅಲ್ಲಿಗೆ ಪ್ರಧಾನಿ ಏಕೆ ಹೋಗಲಿಲ್ಲ ಎಂಬುದಕ್ಕೆ ಉತ್ತರವಿಲ್ಲ” ಎಂದು ಅವರು ಹೇಳಿದ್ದಾರೆ.
ರಾಷ್ಟ್ರಪತಿ ಆಳ್ವಿಕೆ ಹೇರುವಲ್ಲಿನ ವಿಳಂಬವನ್ನು ಪ್ರಶ್ನಿಸಿದ ಅವರು, ಮಣಿಪುರಕ್ಕೆ ಭೇಟಿ ನೀಡದೆ ಮಿಜೋರಾಂಗೆ ಭೇಟಿ ನೀಡಿದ್ದಕ್ಕಾಗಿ ಅಮಿತ್ ಶಾ ಅವರನ್ನು ಟೀಕಿಸಿದ್ದಾರೆ.
“ರಾಷ್ಟ್ರಪತಿ ಆಳ್ವಿಕೆ ಹೇರುವಲ್ಲಿ ಇಷ್ಟೊಂದು ವಿಳಂಬ ಏಕೆ ಎಂಬುದಕ್ಕೆ ಅವರಲ್ಲಿ ಉತ್ತರವಿಲ್ಲ. ಗೃಹ ಸಚಿವರು ಮಿಜೋರಾಂಗೆ ಹೋಗುತ್ತಾರೆ, ಮಣಿಪುರಕ್ಕೆ ಏಕೆ ಹೋಗಲಿಲ್ಲ? ಮತ್ತು ಅಮೆರಿಕಕ್ಕೆ ಹೋದ ನಂತರ ಮಿಜೋರಾಂ ಮುಖ್ಯಮಂತ್ರಿ ಹೇಳಿರುವ ವಿಷಯಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ” ಎಂದು ಅವರು ಹೇಳಿದ್ದಾರೆ.
ಬ್ಯಾಂಕಾಕ್‌ಗೆ ಹೋಗುವ ಮೊದಲು ಅಥವಾ ಹಿಂದಿರುಗುವಾಗ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. “ಬ್ಯಾಂಕಾಕ್‌ಗೆ ಹೋಗುವ ದಾರಿಯಲ್ಲಿ ಅಥವಾ ಬ್ಯಾಂಕಾಕ್‌ನಿಂದ ಹಿಂದಿರುಗುವಾಗ, ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ. ಪ್ರಧಾನ ಮಂತ್ರಿಯವರ ಭೇಟಿಯು ಅಲ್ಲಿಗೆ ನಿರ್ಣಾಯಕವಾಗಿದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಬ್ಯಾಂಕಾಕ್‌ನಲ್ಲಿ ಆರನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 2 ರಿಂದ 4 ರವರೆಗೆ ಥೈಲ್ಯಾಂಡ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ. ಫೆಬ್ರವರಿ 13 ರಂದು, ರಾಜ್ಯಪಾಲರ ವರದಿಯ ನಂತರ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಗೌಪ್ಯ ದಾಖಲೆ ಪ್ರಕರಣದಲ್ಲಿ ಪತ್ರಕರ್ತ ಮಹೇಶ್ ಲಾಂಗಾಗೆ ಗುಜರಾತ್ ಹೈಕೋರ್ಟ್ ನಿರೀಕ್ಷಣಾ ಜಾಮೀನು
ಗೌಪ್ಯ ದಾಖಲೆ ಪ್ರಕರಣದಲ್ಲಿ ಪತ್ರಕರ್ತ ಮಹೇಶ್ ಲಾಂಗಾಗೆ ಗುಜರಾತ್ ಹೈಕೋರ್ಟ್ ನಿರೀಕ್ಷಣಾ ಜಾಮೀನು

