ಕೋವಿಡ್ ಎರಡನೇ ಅಲೆ ಭಾರತವನ್ನು ಅಕ್ಷರಶಃ ಸ್ಮಶಾನವನ್ನಾಗಿಸಿದೆ. ದೇಶದ ಆರೋಗ್ಯ ವ್ಯವಸ್ಥೆಯ ಕಳಪೆ ಮಟ್ಟವನ್ನು ಜಗಜ್ಜಾಹೀರುಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೇಜವಾಬ್ದಾರಿತನವನ್ನು ಬಯಲುಗೊಳಿಸಿದೆ. ಕಳೆದ ಆರು ವರ್ಷಗಳಲ್ಲಿ ಕೈಗೊಂಡ ಮುಂದಾಲೋಚನಾ ರಹಿತ ನೋಟುರದ್ದತಿ, ಜಿಎಸ್‌ಟಿ, ಕೋವಿಡ್ ಲಾಕ್‌ಡೌನ್‌ಗಳಿಂದಾಗಿ ಭಾರತದ ಆರ್ಥಿಕ ಪರಿಸ್ಥಿತಿಯು ಐಸಿಯುನಲ್ಲಿದೆ. ಇದರ ಪರಿಣಾಮವಾಗಿ ಕಳೆದ ಒಂದೂವರೆ ವರ್ಷದಿಂದ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಇಲ್ಲ. ಹಲವು ರಾಜ್ಯ ಸರ್ಕಾರಗಳ ನೌಕರರ ಸಂಬಳದಲ್ಲಿ ಕಡಿತಗೊಳಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನೂರರ ಗಡಿ ಮುಟ್ಟಿದೆ. ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಪರೋಕ್ಷ ತೆರಿಗೆ ಆಕಾಶ ನೋಡುತ್ತಿದೆ. ಅಸಂಘಟಿತ ಶ್ರಮಿಕರಂತೂ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಇದೆಲ್ಲದರ ಪರಿಣಾಮವಾಗಿ ಭಾರತದ ಜಿಡಿಪಿ ದರ ಸಾರ್ವಕಾಲಿಕವಾಗಿ ಪಾತಾಳಕ್ಕಿಳಿದಿದೆ. ಇನ್ನೇನು ಚೇತರಿಸಿಕೊಳ್ಳುತ್ತಿರುವಾಗ ಮತ್ತೆ ಎರಡನೆಯ ಅಲೆ ಅಪ್ಪಳಿಸಿದೆ.

ಒಂದು ಕಡೆ ಭಾರತ ಸರ್ಕಾರವು ಕೋವಿಡ್ ನಿರ್ವಹಣೆಯಲ್ಲಿ ಸೋತು ಭಾರತೀಯರನ್ನು ಬೀದಿ ಹೆಣವಾಗಿಸುತ್ತಿದ್ದರೆ ಮತ್ತೊಂದು ಕಡೆಯಲ್ಲಿ ದೇಶದ ಅತಿ ಶ್ರೀಮಂತರು ಖಾಸಗಿ ಜೆಟ್ ವಿಮಾನಗಳಲ್ಲಿ ತಮ್ಮ ಕುಟುಂಬಗಳ ಸಮೇತ ವಿದೇಶಗಳಿಗೆ ಸುರಕ್ಷತೆಗಾಗಿ ಹಾರಿದ್ದಾರೆ. ಮತ್ತಷ್ಟು ಶ್ರೀಮಂತರು ತಮ್ಮ ಐಷಾರಾಮಿ ಕೋಟೆಗಳೊಳಗೆ ಸುರಕ್ಷಿತವಾಗಿದ್ದಾರೆ. ಆಶ್ಚರ್ಯವೆಂದರೆ, ಕೋವಿಡ್ ಕಾಲದಲ್ಲಿಯೂ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ.

ಮೊದಲ ಕೋವಿಡ್ ಲಾಕ್‌ಡೌನ್‌ನಿಂದಾಗಿ ಇಡೀ ಭಾರತದ ಆರ್ಥಿಕ ಪರಿಸ್ಥಿತಿ ನೆಲಕ್ಕುರುಳಿತು. ಆದರೆ ಇದೇ ಸಮಯದಲ್ಲಿ ಭಾರತದಲ್ಲಿ ಹೆಚ್ಚುವರಿಯಾಗಿ ನಾಲ್ವರು ಶತಕೋಟ್ಯಾಧಿಪತಿಗಳು ಹುಟ್ಟಿಕೊಂಡರು. ಮುಖೆಶ್ ಅಂಬಾನಿಯ ಆದಾಯ ಶೇ.24 ರಷ್ಟು, ಗೌತಮ್ ಅದಾನಿಯ ಆದಾಯ ಶೇ.174 ರಷ್ಟು ಹೆಚ್ಚಾಯಿತು. ಇದೇ ರೀತಿ ಶೇ. 91 ರಷ್ಟು ಅತಿ ಶ್ರೀಮಂತರು ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಭಾರತದಲ್ಲಿ 9,12,000 ದಶಲಕ್ಷಾಧಿಪತಿಗಳು ಹಾಗೂ 140 ಶತಕೋಟ್ಯಾಧಿಪತಿಗಳನ್ನು ಹೊಂದಿರುವ ಜಗತ್ತಿನ ಮೂರನೇ ರಾಷ್ಟ್ರ ಭಾರತವಾಗಿದೆ. ಒಟ್ಟಾರೆ 953 ಜನರು ತಮ್ಮ ವಾರ್ಷಿಕ ಸರಾಸರಿ ಆದಾಯವನ್ನು ತಲಾ 5,278 ಕೋಟಿಗಿಂತಲೂ ಹೆಚ್ಚು ಗಳಿಸಿ ಅತಿಶ್ರೀಮಂತರೆನಿಸಿಕೊಂಡಿದ್ದಾರೆ. ಭಾರತದ ಮೊದಲ ಹತ್ತು ಅತಿಶ್ರೀಮಂತರ ಒಟ್ಟು ಸಂಪತ್ತು ಬರೋಬ್ಬರಿ 12 ಲಕ್ಷಕೋಟಿ! ಅಷ್ಟೇ ಅಲ, 2025 ರಷ್ಟೊತ್ತಿಗೆ ಅತಿಶ್ರೀಮಂತರ ಜನಸಂಖ್ಯೆ ಶೇ.63ರಷ್ಟು ಹೆಚ್ಚಾಗಲಿದೆ. ಆಕ್ಸ್‌ಫಾಮ್ ವರದಿಯ ಪ್ರಕಾರ ದೇಶದ ಶೇ.10 ರಷ್ಟು ಶ್ರೀಮಂತರು ಶೇ.74ರಷ್ಟು ಸಂಪತ್ತನ್ನು ಹೊಂದಿದ್ದರೆ, ಇನ್ನುಳಿದ ಶೇ.90ರಷ್ಟು ಮೇಲ್ಮಧ್ಯಮ, ಮಧ್ಯಮ ಮತ್ತು ಬಡ ಭಾರತೀಯರು ಕೇವಲ ಶೇ.26ರಷ್ಟು ಸಂಪತ್ತನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಭಾರತದಲ್ಲಿ ಅತಿಶ್ರೀಮಂತರ ಮತ್ತು ಬಡವರ ಜನಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಸಾಕ್ಷಿ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ 94ಕ್ಕೆ ಕುಸಿದಿರುವುದು!

ಈ ಮೇಲಿನ ಮಾಹಿತಿಯಿಂದ 1. ಭಾರತದ ಆರ್ಥಿಕ ಕುಸಿತದ ಪರಿಣಾಮ ಭಾರತದವರೇ ಆದ ಶ್ರೀಮಂತರ ಮೇಲೆ ಬೀರುವುದಿಲ್ಲವೇ? 2. ಭಾರತದ ಜಿಡಿಪಿ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಅತಿ ಶ್ರೀಮಂತರ ಆಸ್ತಿ ಹೆಚ್ಚಾಗಲು ಕಾರಣವೇನು? ಎಂಬ ಪ್ರಶ್ನೆಗಳು ಮೂಡುತ್ತವೆ. ಇದಕ್ಕೆ ಉತ್ತರ ಸ್ಪಷ್ಟ. ಅದೇನೆಂದರೆ, ’ಭಾರತ ಸರ್ಕಾರ ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿರುವುದು ಹಾಗೂ ಶ್ರೀಮಂತರಿಗೆ ನೀಡುವ ವಿಶೇಷ ಸೌಲಭ್ಯಗಳು’. ಭಾರತವು ಮೊದಲ ಕೋವಿಡ್ ಅಲೆಯ ಹೊಸ್ತಿಲಲ್ಲಿದ್ದಾಗ, ನೋಟು ರದ್ದತಿಯ ಹಾನಿಯನ್ನು ಮುಂದಿಟ್ಟುಕೊಂಡು ಮೋದಿ ಸರ್ಕಾರ ಕಾರ್ಪೊರೇಟ್ ತೆರಿಗೆಯನ್ನು ಶೇ೩೦ರಿಂದ ಶೇ.22ಕ್ಕೆ ಇಳಿಸಿತು. ನೂತನ ಕಂಪೆನಿಗಳ ತೆರಿಗೆಯನ್ನು ಶೇ.25ರಿಂದ ಶೇ.15ಕ್ಕೆ ಇಳಿಸಿತು. ಇದರಿಂದಾಗಿ 2019-20ನೇ ಸಾಲಿನಲ್ಲಿ ಶ್ರೀಮಂತರಿಗೆ 1.5 ಲಕ್ಷ ಕೋಟಿ ಲಾಭವಾಯಿತು. ಅಷ್ಟೇ ಪ್ರಮಾಣದ ನಷ್ಟ ಸಾರ್ವಜನಿಕ ಖಜಾನೆಗಾಯಿತು. ಇದಕ್ಕೂ ಮುಂಚೆ 2016ರಲ್ಲಿಯೇ ಮೋದಿ ಸರ್ಕಾರ ’ಸಂಪತ್ತಿನ ತೆರಿಗೆ’ಯನ್ನೇ ರದ್ದುಗೊಳಿಸಿತ್ತು.

ಇದರಿಂದಾಗಿ ಕ್ರಮೇಣ ಭಾರತ ಸರ್ಕಾರದ ಖಜಾನೆಗೆ ಪ್ರತ್ಯಕ್ಷ ತೆರಿಗೆಯ ಪಾಲು ಕಡಿಮೆಯಾಯಿತು. ಈ ಹಾನಿಯನ್ನು ತಪ್ಪಿಸಿಕೊಳ್ಳಲು ಸಾಮಾನ್ಯ ಜನರ ಮೇಲೆ ಪೆಟ್ರೋಲ್, ಡೀಸೆಲ್ ಮುಂತಾದ ದಿನಬಳಕೆ ಖರೀದಿಯಲ್ಲಿನ ಪರೋಕ್ಷ ತೆರಿಗೆಯನ್ನು ಹಿಂದೆಂದೂ ಕಾಣದಷ್ಟು ಏರಿಸಲಾಯಿತು.

ಈ ಮೇಲಿನ ಕಾರಣಗಳಿಂದಾಗಿ ದೇಶ ಕುಸಿದರೂ ಶ್ರೀಮಂತರು ಕುಸಿಯಲಿಲ್ಲ. ಇಷ್ಟಿದ್ದಾಗ್ಯೂ ಕೋವಿಡ್ ಕಾಲದಲ್ಲಿ ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ಹಾಕುವ ಮನಸ್ಸು ನಮ್ಮ ಸರ್ಕಾರಕ್ಕೆ ಬರಲೇ ಇಲ್ಲ. ಹಲವರು ಶ್ರೀಮಂತರ ಪರವಾಗಿ ಮಾತನಾಡುತ್ತ ಕೋವಿಡ್ ಸಮಯದಲ್ಲಿ ಅವರು ಮಾಡಿದ ದಾನಗಳನ್ನು ಮುಂದಿಡುತ್ತಾರೆ. ಇಂತಹವರಿಗೆ ಸ್ಪಷ್ಟಪಡಿಸಬೇಕಾದ ವಿಷಯವೆಂದರೆ ಈ ಶ್ರೀಮಂತರು ಕೋವಿಡ್ ಸಮಯದಲ್ಲಿ ಮಾಡಿರುವ ಸಹಾಯ ಖಂಡಿತವಾಗಿಯೂ ದಾನವಲ್ಲ. ಕಾರ್ಪೊರೇಟ್ ಕಾಯ್ದೆ ಪ್ರಕಾರ ಶೇ.2ರಷ್ಟು (ಹಿಂದಿನ ಮೂರು ವರ್ಷಗಳ ಸರಾಸರಿ ಆದಾಯದಲ್ಲಿ) ಸಾಮಾಜಿಕ ಕಾರ್ಯಗಳಿಗೆ ಖರ್ಚು ಮಾಡಲೇಬೇಕಾದುದು ಕಾನೂನಾತ್ಮಕ ಕರ್ತವ್ಯ (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ). ಇದಿಷ್ಟೇ ಅಲ್ಲದೆ ತೆರಿಗೆ ವಿನಾಯಿತಿ ಪಡೆಯಲೂ ಸಹ ಶ್ರೀಮಂತರು ಹಣವನ್ನು ಸಾರ್ವಜನಿಕ ಕಾರ್ಯಗಳಿಗೆ ಖರ್ಚು ಮಾಡುತ್ತಾರೆ. ಹೀಗೆ ಸಹಾಯ ಮಾಡಿದ ಹಣ ಆಯಾ ಶ್ರೀಮಂತರ ಸಂಪತ್ತಿಗೆ ಹೋಲಿಸಿಕೊಂಡರೆ ತೀರಾ ಕಡಿಮೆ ಪ್ರಮಾಣದ್ದಾಗಿರುತ್ತದೆ. ಉದಾಹರಣೆಗೆ 2020ರಲ್ಲಿ ಕೋವಿಡ್ ಪರಿಹಾರಕ್ಕಾಗಿ ಮುಖೆಶ್ ಅಂಬಾನಿ ತಮ್ಮ 6 ಲಕ್ಷಕೋಟಿ ಸಂಪತ್ತಿನಿಂದ 458 ಕೋಟಿ (0.076%) ಖರ್ಚು ಮಾಡಿದ್ದರೆ, ಗೌತಮ್ ಅದಾನಿ ತಮ್ಮ 3.6 ಲಕ್ಷಕೋಟಿ ಸಂಪತ್ತಿನಿಂದ ಕೇವಲ 88 ಕೋಟಿ (0.024%) ಖರ್ಚು ಮಾಡಿದ್ದಾರೆ.

ಇವರಿಗೆ ಹೋಲಿಸಿಕೊಂಡರೆ ಲಾಕ್‌ಡೌನ್ ಸಂದರ್ಭದಲ್ಲಿ ಭಾರತ 1.5 ಲಕ್ಷಕೋಟಿಯನ್ನು ಕಳೆದುಕೊಂಡಿದೆ. ಇದರ ಅರ್ಥ ಭಾರತದ ಅಸಂಘಟಿತ ಕಾರ್ಮಿಕರು, ರೈತರು, ದಿನಗೂಲಿ ನೌಕರರು, ಮಧ್ಯಮ ಮತ್ತು ಬಡ ಜನರು ಭಾರತದೊಂದಿಗೆ ಪಾತಾಳಕ್ಕಿಳಿದಿದ್ದರೆ, ಅತಿಶ್ರೀಮಂತರು ಇದಕ್ಕೆ ವಿರುದ್ಧವಾಗಿ
ಆಕಾಶಕ್ಕೇರಿದ್ದಾರೆ!

ಹಾಗಾಗಿ ಕೋವಿಡ್ ಎರಡನೇ ಅಲೆಯು ಭಾರತವನ್ನು ಕಿತ್ತು ತಿನ್ನುತ್ತಿರುವಾಗ ಯಾವುದೇ ದೇಶಪ್ರೇಮಿ ಸರ್ಕಾರವು ಕೋವಿಡ್ ಕಾಲದಲ್ಲಿಯೂ ಹೆಚ್ಚು ಆದಾಯ ಗಳಿಸಿಕೊಂಡ ಅತಿಶ್ರೀಮಂತರ ಮೇಲೆ ಹೆಚ್ಚುವರಿಯಾಗಿ ’ಕೋವಿಡ್ ತೆರಿಗೆ’ ವಿಧಿಸಬೇಕಾಗುತ್ತದೆ. ಯುರೋಪ್ ದೇಶಗಳಿಗೆ ಅಲ್ಲಿನ ಆರ್ಥಿಕ ತಜ್ಞರೂ ಸಹ ಇದೇ ಸಲಹೆಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿಯೂ ಸಹ ಇದರ ಬಗ್ಗೆ ಚರ್ಚೆಗಳಾಗಿವೆ. ದೇಶದ 953 ಅತಿಶ್ರೀಮಂತರ ಒಟ್ಟು ಸಂಪತ್ತು ಸುಮಾರು 50.3 ಲಕ್ಷಕೋಟಿ! ಭಾರತದ ಜಿಡಿಪಿಯ ಶೇ.26 ರಷ್ಟು ಸಂಪತ್ತು ಇವರ ಬಳಿ ಇದೆ. ಕನಿಷ್ಠ ಪಕ್ಷ ಇವರ ಮೇಲೆ ಶೇ.4 ರಷ್ಟಾದರೂ ’ಕೋವಿಡ್ ತೆರಿಗೆ’ ವಿಧಿಸಿದರೆ ಭಾರತ ಸರ್ಕಾರವು ಕೋವಿಡ್ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಬಹುದಾಗಿದೆ. ಇದರಿಂದಾಗಿ ಅತಿಶ್ರೀಮಂತರು ಏನನ್ನೂ ಕಳೆದುಕೊಳ್ಳಲಾರರು. ಈ ಹಿಂದಿನ ಎಲ್ಲಾ ಸರ್ಕಾರಗಳು ನೀಡಿದ್ದ ಸೌಲಭ್ಯದಲ್ಲಿ ಒಂದಷ್ಟನ್ನು ಮರಳಿ ದೇಶಕ್ಕಾಗಿ ನೀಡುತ್ತಾರಷ್ಟೆ. ಆದರೆ ಅಂತಹ ದೊಡ್ಡ ಮನಸ್ಸನ್ನು ಖಂಡಿತವಾಗಿಯೂ ಅತಿಶ್ರೀಮಂತರು ಹೊಂದಿರುವುದು ಕಷ್ಟ. ಹಾಗಾಗಿ ಮೋದಿ ಸರ್ಕಾರವೇ ಭಾರತೀಯರನ್ನು ಹಾಗೂ ಜಾಗತಿಕವಾಗಿ ಭಾರತದ ಮಾನವನ್ನು ಉಳಿಸುವಷ್ಟು ದೇಶಪ್ರೇಮವನ್ನು ಹಾಗೂ ಧೈರ್ಯವನ್ನು ಪ್ರದರ್ಶಿಸಬೇಕಾಗಿದೆ.

ವಿಕಾಸ್‌ ಆರ್‌.ಮೌರ್ಯ

ವಿಕಾಸ್ ಆರ್ ಮೌರ್‍ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಚಮ್ಮಟಿಕೆ’ ಪ್ರಕಟಿತ ಕೃತಿ


ಇದನ್ನೂ ಓದಿ: ಲ್ಯುಟಿನ್ಸ್ ದೆಹಲಿಯ ಐಶಾರಾಮದ ಬಗ್ಗೆ ಗೇಲಿ; ಸಾವಿನ ಸರಣಿಯ ಮಧ್ಯೆ 20 ಸಾವಿರ ಕೋಟಿ ಮಹಲು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ವಿಕಾಸ್ ಆರ್ ಮೌರ್‍ಯ
+ posts

LEAVE A REPLY

Please enter your comment!
Please enter your name here