ಭಾರತ ರಫ್ತು ಮಾಡುವ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸಿರುವ ಶೇಕಡ 50ರಷ್ಟು ಸುಂಕ ಬುಧವಾರ (ಆ.27) ಜಾರಿಯಾಗಲಿದೆ. ಇದರಿಂದ ಭಾರತದ ವಿದೇಶಿ ವ್ಯಾಪಾರದ ಮೇಲೆ ತೀವ್ರವಾದ ಹೊಡೆತ ಬೀಳುವ ಸಾಧ್ಯತೆಯಿದೆ.
ಅಮೆರಿಕದ ಹೆಚ್ಚುವರಿ ಸುಂಕ ಹೇರಿಕೆಯು ಅಮೆರಿಕಕ್ಕೆ ಭಾರತದ ಒಟ್ಟಾರೆ ರಫ್ತಿನ ಅರ್ಧ ಭಾಗದ ಮೇಲೆ ಪರಿಣಾಮ ಬೀರಲಿದೆ. ಸುಂಕ ಹೆಚ್ಚಳವು ಅಮೆರಿಕ-ಭಾರತ ನಡುವೆ ವ್ಯಾಪಾರ ಸಂಬಂಧ ಹದೆಗೆಟ್ಟಿರುವುದನ್ನು ಎತ್ತಿ ತೋರಿಸುತ್ತದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭದಲ್ಲಿ ಭಾರತೀಯ ಸರಕುಗಳ ಮೇಲೆ ಶೇ.25ರಷ್ಟು ಸುಂಕ ಘೋಷಿಸಿದ್ದರು. ಆದರೆ, ಈ ತಿಂಗಳ ಆರಂಭದಲ್ಲಿ ಅವರು ಭಾರತವು ರಷ್ಯಾದಿಂದ ತೈಲ ಖರೀದಿಸಿದ್ದಕ್ಕೆ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದರಿಂದಾಗಿ ಅಮೆರಿಕವು ತನ್ನ ಮಿತ್ರ ರಾಷ್ಟ್ರದ ಮೇಲೆ ವಿಧಿಸಿದ ಒಟ್ಟು ಸುಂಕ ಶೇ.50ಕ್ಕೆ ತಲುಪಿದೆ.
ಭಾರತ ಸರ್ಕಾರವು ಅಮೆರಿಕದ ಸುಂಕ ಹೇರಿಕೆ 48.2 ಬಿಲಿಯನ್ ಡಾಲರ್ ಮೌಲ್ಯದ ರಫ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಿದೆ. ಹೊಸ ಸುಂಕ ಹೇರಿಕೆ ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳಿಂದ ಭಾರತಕ್ಕೆ ಯಾವುದೇ ವಾಣಿಜ್ಯಿಕ ಲಾಭ ಸಿಗದಂತೆ ಮಾಡಲಿದೆ. ಉದ್ಯೋಗ ನಷ್ಟಕ್ಕೆ ಕಾರಣವಾಗಲಿದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತ-ಅಮೆರಿಕ ನಡುವಿನ ವ್ಯಾಪಾರ ಸಂಬಂಧಗಳು ವಿಸ್ತರಿಸಿವೆ. ಆದರೆ, ಮಾರುಕಟ್ಟೆ ಪ್ರವೇಶ ಮತ್ತು ದೇಶೀಯ ರಾಜಕೀಯ ಒತ್ತಡಗಳ ಮೇಲಿನ ವಿವಾದಗಳಿಗೆ ಅದು ಗುರಿಯಾಗುತ್ತಿವೆ. ಭಾರತವು ಪ್ರಮುಖ ಜಾಗತಿಕ ಆರ್ಥಿಕತೆಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ. ಹೆಚ್ಚುವರಿ ಸುಂಕ ಇದನ್ನು ನಿಧಾನಗೊಳಿಸಬಹುದು.
ಅಮೆರಿಕದ ಸುಂಕ ಪರಿಣಾಮ ಬೀರುವ ವಲಯಗಳು
ನವದೆಹಲಿ ಮೂಲದ ಚಿಂತಕರ ಚಾವಡಿ ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್‌ನ ಅಂದಾಜಿನ ಪ್ರಕಾರ, ಜವಳಿ, ರತ್ನಗಳು ಮತ್ತು ಆಭರಣಗಳು, ಚರ್ಮದ ಸರಕುಗಳು, ಆಹಾರ ಮತ್ತು ವಾಹನಗಳಂತಹ ಕಾರ್ಮಿಕ-ತೀವ್ರ ವಲಯಗಳ ಮೇಲೆ ಅಮೆರಿಕದ ಸುಂಕ ಹೇರಿಕೆ ಹೆಚ್ಚು ಪರಿಣಾಮ ಬೀರಲಿದೆ.
“ಹೊಸ ಸುಂಕ ಪದ್ಧತಿಯು ಒಂದು ಕಾರ್ಯತಂತ್ರದ ಆಘಾತವಾಗಿದ್ದು, ಅಮೆರಿಕದಲ್ಲಿ ದೀರ್ಘಕಾಲದಿಂದ ಸ್ಥಾಪಿತವಾಗಿರುವ ಭಾರತದ ಉಪಸ್ಥಿತಿಯನ್ನು ಅಳಿಸಿಹಾಕುವ ಬೆದರಿಕೆ ಒಡ್ಡಿದೆ. ರಫ್ತು ಆಧಾರಿತ ಕೇಂದ್ರಗಳಲ್ಲಿ ನಿರುದ್ಯೋಗವನ್ನು ಉಂಟುಮಾಡಲಿದೆ ಮತ್ತು ಕೈಗಾರಿಕಾ ಮೌಲ್ಯ ಸರಪಳಿಯಲ್ಲಿ ಭಾರತದ ಪಾತ್ರವನ್ನು ದುರ್ಬಲಗೊಳಿಸುತ್ತದೆ” ಎಂದು ಚಿಂತಕರ ಚಾವಡಿಯ ಸಂಸ್ಥಾಪಕ ಮತ್ತು ಮಾಜಿ ಭಾರತೀಯ ವ್ಯಾಪಾರ ಅಧಿಕಾರಿ ಅಜಯ್ ಶ್ರೀವಾಸ್ತವ ಹೇಳಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ.
ಅಮೆರಿಕವು ಔಷಧಗಳು ಮತ್ತು ಎಲೆಕ್ಟ್ರಾನಿಕ್ ಸರಕುಗಳಂತಹ ಕೆಲವು ವಲಯಗಳಿಗೆ ಹೆಚ್ಚುವರಿ ಸುಂಕದಿಂದ ವಿನಾಯಿತಿ ನೀಡಿದೆ. ಈ ವಲಯಗಳಲ್ಲಿ ಭಾರತಕ್ಕೆ ಅದರ ಮಾನ್ಯತೆ ಗಮನಾರ್ಹವಾಗಿರುವುದರಿಂದ ಸ್ವಲ್ಪ ಪರಿಹಾರ ಸಿಕ್ಕಿದೆ ಎಂದು ವರದಿ ತಿಳಿಸಿದೆ.
ನಷ್ಟದ ಭೀತಿಯಲ್ಲಿ ರಫ್ತುದಾರರು
“ದೇಶೀಯ ಬೇಡಿಕೆ ಬಲಗೊಂಡು ಇತರ ವಿದೇಶಿ ಮಾರುಕಟ್ಟೆಗಳು ಹೆಚ್ಚಿನ ಭಾರತೀಯ ವಸ್ತುಗಳನ್ನು ಖರೀದಿಸದಿದ್ದೆ ನಮ್ಮ ಉದ್ಯಮವು ಸದ್ಯದಲ್ಲಿಯೇ ಗಣನೀಯ ಹೊಡೆತವನ್ನು ಅನುಭವಿಸಲಿದೆ ಎಂದು ಉತ್ತರ ಭಾರತದ ಆಗ್ರಾ ನಗರದ ಚರ್ಮದ ಪಾದರಕ್ಷೆ ರಫ್ತುದಾರ ಪೂರಣ್ ದಾವರ್ ಹೇಳುತ್ತಾರೆ.
“ಇದು ಸಂಪೂರ್ಣ ಆಘಾತ” ಎಂಬುವುದಾಗಿ ಇತ್ತೀಚಿನ ವರ್ಷಗಳಲ್ಲಿ ಅಮೆರಿಕದೊಂದಿಗೆ ವ್ಯವಹಾರ ವೃದ್ದಿಸಿಕೊಂಡಿರುವ ದಾವರ್ ಹೇಳಿದ್ದಾರೆ. ದಾವರ್ ಅವರ ಗ್ರಾಹಕರಲ್ಲಿ ಪ್ರಮುಖ ಫ್ಯಾಷನ್ ಚಿಲ್ಲರೆ ವ್ಯಾಪಾರ ಸಂಸ್ಥೆ ‘ಝಾರಾ’ ಕೂಡ ಒಂದು.
ರಫ್ತು ಉತ್ತೇಜನಾ ಸಂಸ್ಥೆಯಾದ ಚರ್ಮ ರಫ್ತು ಮಂಡಳಿಯ ಪ್ರಾದೇಶಿಕ ಅಧ್ಯಕ್ಷರೂ ಆಗಿರುವ ದಾವರ್, ಹೆಚ್ಚಿನ ಸುಂಕಗಳು ತನ್ನದೇ ಆದ ಗ್ರಾಹಕರಿಗೆ ಹಾನಿ ಮಾಡುತ್ತದೆ ಎಂಬುದನ್ನು ಅಮೆರಿಕ ಅರ್ಥಮಾಡಿಕೊಳ್ಳಬೇಕು ಎಂಬುವುದಾಗಿ ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ.
ರಫ್ತುದಾರರನ್ನು ಪ್ರತಿನಿಧಿಸುವ ಗುಂಪುಗಳು ಹೊಸ ಆಮದು ಸುಂಕಗಳು ಅಮೆರಿಕದ ಮಾರುಕಟ್ಟೆಯ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹಾನಿ ಮಾಡಬಹುದು ಎಂದು ಎಚ್ಚರಿಸಿದ್ದಾರೆ.
“ಇದು ಒಂದು ಕ್ಲಿಷ್ಟಕರ ಪರಿಸ್ಥಿತಿ. ಕೆಲವು ಉತ್ಪನ್ನ ಮಾರ್ಗಗಳು ರಾತ್ರೋರಾತ್ರಿ ಕಾರ್ಯಸಾಧ್ಯವಾಗುವುದಿಲ್ಲ” ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಮಹಾನಿರ್ದೇಶಕ ಅಜಯ್ ಸಹಾಯ್ ಹೇಳಿದ್ದಾರೆ.
ಅಮೆರಿಕದ ಒತ್ತಡಕ್ಕೆ ಮಣಿಯುವುದಿಲ್ಲ ಎಂದ ಮೋದಿ
ಭಾರತದ ಕೃಷಿ ಮತ್ತು ಡೈರಿ ಕ್ಷೇತ್ರಗಳಿಗೆ ಹೆಚ್ಚಿನ ಪ್ರವೇಶಕ್ಕಾಗಿ ಅಮೆರಿಕ ಆಡಳಿತವು ಒತ್ತಾಯಿಸುತ್ತಿರುವುದರಿಂದ ಹೆಚ್ಚಿನ ಸುಂಕಗಳು ಹೇರಿವೆ.
ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕಾಗಿ ಐದು ಸುತ್ತಿನ ಮಾತುಕತೆಗಳನ್ನು ನಡೆಸಿವೆ, ಆದರೆ ಇನ್ನೂ ಒಪ್ಪಂದಕ್ಕೆ ಬಂದಿಲ್ಲ.
ಇದಕ್ಕೆ ಮುಖ್ಯ ಕಾರಣ, ಈ ವಲಯಗಳನ್ನು ಅಗ್ಗದ ಅಮೆರಿಕನ್ ಆಮದುಗಳಿಗೆ ತೆರೆಯುವುದನ್ನು ಭಾರತ ವಿರೋಧಿಸಿದ್ದು, ಜೀವನೋಪಾಯಕ್ಕಾಗಿ ಇವುಗಳನ್ನು ಅವಲಂಬಿಸಿರುವ ಲಕ್ಷಾಂತರ ಭಾರತೀಯರ ಉದ್ಯೋಗಗಳಿಗೆ ಅಪಾಯವಿದೆ ಎಂಬ ಕಳವಳವನ್ನು ವ್ಯಕ್ತಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
“ನನಗೆ ರೈತರು, ಸಣ್ಣ ವ್ಯವಹಾರಗಳು ಮತ್ತು ಹೈನುಗಾರಿಕೆಯ ಹಿತಾಸಕ್ತಿಗಳು ಅತ್ಯಂತ ಮುಖ್ಯ. ನನ್ನ ಸರ್ಕಾರವು ಅವರಿಗೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತದೆ” ಎಂದು ಮೋದಿ ಈ ವಾರ ತಮ್ಮ ತವರು ರಾಜ್ಯ ಗುಜರಾತ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಹೇಳಿದ್ದಾರೆ. “ಜಗತ್ತು ‘ಆರ್ಥಿಕ ಸ್ವಾರ್ಥದ ರಾಜಕೀಯ’ಕ್ಕೆ ಸಾಕ್ಷಿಯಾಗುತ್ತಿದೆ” ಎಂದಿದ್ದಾರೆ.
ಈ ವಾರ ಆರನೇ ಸುತ್ತಿನ ವ್ಯಾಪಾರ ಮಾತುಕತೆಗಾಗಿ ನವದೆಹಲಿಗೆ ಭೇಟಿ ನೀಡುವ ಯೋಜನೆಯನ್ನು ಅಮೆರಿಕದ ನಿಯೋಗ ರದ್ದುಗೊಳಿಸಿದೆ.
ಸುಂಕಗಳಿಂದಾಗುವ ಹೊಡೆತವನ್ನು ತಗ್ಗಿಸಲು ಭಾರತ ಸ್ಥಳೀಯ ಸುಧಾರಣೆಗಳನ್ನು ಯೋಜಿಸುತ್ತಿದೆ.
ಸ್ಥಳೀಯ ಬಳಕೆಯನ್ನು ಹೆಚ್ಚಿಸಲು ಮತ್ತು ಆರ್ಥಿಕತೆಯನ್ನು ನಿರೋಧಿಸಲು ಸರ್ಕಾರ ಸುಧಾರಣೆಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆ.
ಅಕ್ಟೋಬರ್‌ನಲ್ಲಿ ಬರುವ ಪ್ರಮುಖ ಹಿಂದೂ ಹಬ್ಬ ದೀಪಾವಳಿಗೂ ಮುನ್ನ ವಿಮೆ, ಕಾರುಗಳು ಮತ್ತು ಉಪಕರಣಗಳ ವೆಚ್ಚವನ್ನು ಕಡಿಮೆ ಮಾಡಲು ಸರಕು ಮತ್ತು ಸೇವಾ ತೆರಿಗೆ ಅಥವಾ ಬಳಕೆ ತೆರಿಗೆಯನ್ನು ಬದಲಾಯಿಸಲು ಅದು ಮುಂದಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ತೆರಿಗೆ ಕಡಿತಗೊಳಿಸುವ ಬಗ್ಗೆ ನಿರ್ಧರಿಸಲು ಸರ್ಕಾರಿ ಮಂಡಳಿ ಮುಂದಿನ ತಿಂಗಳ ಆರಂಭದಲ್ಲಿ ಸಭೆ ಸೇರಲಿದೆ. ರಫ್ತುದಾರರಿಗೆ ಅನುಕೂಲಕರ ಬ್ಯಾಂಕ್ ಸಾಲ ದರಗಳನ್ನು ಒಳಗೊಂಡಿರುವ ಆರ್ಥಿಕ ಪ್ರೋತ್ಸಾಹಕಗಳ ಕುರಿತು ವ್ಯಾಪಾರ ಸಚಿವಾಲಯ ಮತ್ತು ಹಣಕಾಸು ಸಚಿವಾಲಯ ಚರ್ಚಿಸುತ್ತಿವೆ ಎಂದು ವರದಿ ಉಲ್ಲೇಖಿಸಿದೆ.
ವ್ಯಾಪಾರ ಸಚಿವಾಲಯವು ಇತರ ಪ್ರದೇಶಗಳಿಗೆ, ವಿಶೇಷವಾಗಿ ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾಕ್ಕೆ ರಫ್ತುಗಳನ್ನು ವಿಸ್ತರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಭಾರತವು ಅಮೆರಿಕದ ಮಾರುಕಟ್ಟೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಶ್ರಮಿಸುತ್ತಿರುವುದರಿಂದ ಯುರೋಪಿಯನ್ ಒಕ್ಕೂಟದೊಂದಿಗೆ ನಡೆಯುತ್ತಿರುವ ವ್ಯಾಪಾರ ಮಾತುಕತೆಗಳು ಹೊಸ ಆಯಾಮವನ್ನು ಪಡೆಯಬಹುದು ಎಂದು ವರದಿ ಅಭಿಪ್ರಾಯಪಟ್ಟಿದೆ.
Courtesy : newindianexpress.com
ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಲು ಅಮೆರಿಕ ಅಧಿಸೂಚನೆ: ಆಗಸ್ಟ್ 27ರಿಂದ ಜಾರಿ


