ಕಳೆದ ವಾರ ನಾಪತ್ತೆಯಾಗಿದ್ದ 27 ವರ್ಷದ ಭಾರತೀಯ ಮಹಿಳೆ ನಿಕಿತಾ ಗೋಡಿಶಾಲಾ ಅಮೆರಿಕಾದ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಆಕೆಯ ಮಾಜಿ ಗೆಳೆಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆತ ಆಕೆಯನ್ನು ಕೊಂದು ಭಾರತಕ್ಕೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಎಲ್ಲಿಕಾಟ್ ನಗರದ ಗೋಡಿಶಾಲಾ ಜನವರಿ 2 ರಂದು ನಾಪತ್ತೆಯಾಗಿದ್ದಾರೆ ಎಂದು ಆಕೆಯ ಮಾಜಿ ಗೆಳೆಯ 26 ವರ್ಷದ ಅರ್ಜುನ್ ಶರ್ಮಾ ದೂರು ನೀಡಿದ್ದರು.
ಕಾಣೆಯಾದ ವ್ಯಕ್ತಿಯ ಬಗ್ಗೆ ದೂರು ದಾಖಲಿಸಿದ ಕೂಡಲೇ ಅರ್ಜುನ್ ಶರ್ಮಾ ಭಾರತಕ್ಕೆ ವಿಮಾನದಲ್ಲಿ ದೇಶ ತೊರೆದಿದ್ದಾರೆ ಎಂದು ಪೊಲೀಸರಿಗೆ ನಂತರ ತಿಳಿದುಬಂದಿದೆ. ಹೊವಾರ್ಡ್ ಕೌಂಟಿ ಪೊಲೀಸ್ ಪತ್ತೆದಾರರು ಅವರ ಅಪಾರ್ಟ್ಮೆಂಟ್ ನಲ್ಲಿ ಶೋಧ ನಡೆಸಲು ವಾರಂಟ್ ಕಾರ್ಯಗತಗೊಳಿಸಿದರು ಆ ವೇಳೆ ಇರಿತದ ಗಾಯಗಳೊಂದಿಗೆ ಗೋಡಿಶಾಲ ಅವರ ಮೃತ ದೇಹವು ಪತ್ತೆಯಾಗಿದೆ.
ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಪ್ರಕಾರ, ಗೋಡಿಶಾಲ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ಸಾಧ್ಯವಿರುವ ಎಲ್ಲಾ ಕಾನ್ಸುಲರ್ ಸಹಾಯವನ್ನು ನೀಡುತ್ತಿದೆ ಎನ್ನಲಾಗಿದೆ.
“ರಾಯಭಾರ ಕಚೇರಿಯು ಸ್ಥಳೀಯ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಚರ್ಚಿಸುತ್ತಿರುವುದಾಗಿ” ಹೇಳಿದೆ.
ತನಿಖೆಯ ಮೂಲಕ, ಡಿಸೆಂಬರ್ 31 ರಂದು ಸಂಜೆ 7 ಗಂಟೆಯ ನಂತರ ಶರ್ಮಾ ಗೋಡಿಶಾಲನನ್ನು ಕೊಲ್ಲಲಾಗಿದೆ ಎಂಬ ವಿಚಾರ ಬಯಲಾಗಿದ್ದು, ತನಿಖೆ ಮುಂದುವರೆದಿದೆ. ಈವರೆಗೆ ಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಹೊವಾರ್ಡ್ ಕೌಂಟಿ ಪೊಲೀಸರು ತಿಳಿಸಿದ್ದಾರೆ. ಶರ್ಮಾ ಅವರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಅಮೆರಿಕದ ಫೆಡರಲ್ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ನಿಕಿತಾ ಗೋಡಿಶಾಲ ಯಾರು?
ಗೋಡಿಶಾಲಾ ಅವರು ಮೇರಿಲ್ಯಾಂಡ್‌ನ ಕೊಲಂಬಿಯಾದ ವೇಡಾ ಹೆಲ್ತ್‌ನಲ್ಲಿ ಡೇಟಾ ಮತ್ತು ಸ್ಟ್ರಾಟಜಿ ವಿಶ್ಲೇಷಕರಾಗಿದ್ದರು. ಅವರು ಫೆಬ್ರವರಿ 2025 ರಲ್ಲಿ ಸಂಸ್ಥೆಯನ್ನು ಸೇರಿದರು ಮತ್ತು ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ, ಅವರ ಕಾರ್ಯಕ್ಷಮತೆಗಾಗಿ “ಆಲ್-ಇನ್ ಪ್ರಶಸ್ತಿ” ಪಡೆದರು.
ಇದಕ್ಕೂ ಮೊದಲು ಅವರು ಆರೋಗ್ಯ ನಿರ್ವಹಣಾ ವಿಜ್ಞಾನದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಡೇಟಾ ವಿಶ್ಲೇಷಣೆ ಮತ್ತು ದೃಶ್ಯೀಕರಣ ತಜ್ಞರಾಗಿ (ತಾಂತ್ರಿಕ ಸಲಹೆಗಾರ) ಕೆಲಸ ಮಾಡಿದರು. ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಬಾಲ್ಟಿಮೋರ್ ಕೌಂಟಿ ಕ್ಯಾಂಪಸ್‌ನಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ ಅವರು ಅಮೆರಿಕದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
ಅವರ ವೃತ್ತಿಪರ ಪ್ರೊಫೈಲ್ ಪ್ರಕಾರ ಅವರು 2022 ರಲ್ಲಿ ಅಮೆರಿಕಕ್ಕೆ ತೆರಳಿದರು ಮತ್ತು ಅದಕ್ಕೂ ಮೊದಲು ತೆಲಂಗಾಣದ KIMS ಆಸ್ಪತ್ರೆಯಲ್ಲಿ 2 ವರ್ಷಗಳ ಕಾಲ ಕ್ಲಿನಿಕಲ್ ಡೇಟಾ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡಿದ್ದರು.


