ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ರೈಲ್ವೆ ರಕ್ಷಣಾ ಪಡೆ ಕಸ್ಟಡಿಯಲ್ಲಿ ದಲಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರ ಮೇಲೆ ಕಬ್ಬಿಣದ ರಾಡ್ ಮತ್ತು ಚಾಕುಗಳಿಂದ ಹಲ್ಲೆ ನಡೆಸಿರುವ ಆಳವಾದ ಗಾಯದ ಗುರುತುಗಳು ಇವೆ ಎಂದು ಕುಟುಂಬದ ಸದಸ್ಯರು ಆರೋಪಿಸಿದೆ.
ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, 36 ವರ್ಷದ ಸಂಜಯ್ ಕುಮಾರ್ ಸೋಂಕರ್ ಅವರನ್ನು ಆಸ್ಪತ್ರೆಗೆ ಕರೆತರುವ ಮುನ್ನವೇ ಸತ್ತಿದ್ದಾರೆ; ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ ಎಂದು ಹೇಳಿದರು. ಆದರೆ, ಸಂಭವನೀಯ ಆಂತರಿಕ ಹಾನಿಗಳ ಬಗ್ಗೆ ಸುಳಿವು ನೀಡಿದರು.
ರೈಲ್ವೆ ಇಲಾಖೆಯ ಆರ್‌ಪಿಎಫ್‌ನ ಮೂವರು ಸಿಬ್ಬಂದಿಯ ಮೇಲೆ ಕೊಲೆ ಆರೋಪ ಹೊರಿಸಿ ಅಮಾನತುಗೊಳಿಸಲಾಗಿದೆ.
ಅಕ್ಟೋಬರ್‌ನಿಂದ ಉತ್ತರ ಪ್ರದೇಶದಲ್ಲಿ ದಲಿತನೊಬ್ಬನನ್ನು ಚಿತ್ರಹಿಂಸೆ ನೀಡಿ ಕೊಂದ ಮೂರನೇ ಪ್ರಕರಣ ಇದಾಗಿದೆ. ಅಮೇಥಿಯಲ್ಲಿ ₹2,500 ಪಾವತಿಸದ ವೇತನಕ್ಕಾಗಿ ಬೇಡಿಕೆ ಇಟ್ಟಿದ್ದಕ್ಕಾಗಿ ಶ್ರೀಮಂತ ಭೂಮಾಲೀಕ ಮತ್ತು ಅವರ ಸಹಚರರು ಭಾನುವಾರ ಒಬ್ಬ ಕೃಷಿ ಕಾರ್ಮಿಕನನ್ನು ಥಳಿಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಅಕ್ಟೋಬರ್ 1 ರಂದು, ಒಬ್ಬ ದಲಿತನನ್ನು ‘ಡ್ರೋನ್ ಕಳ್ಳ’ ಎಂದು ಹಣೆಪಟ್ಟಿ ಕಟ್ಟಿ ರಾಯ್ ಬರೇಲಿಯಲ್ಲಿ ಗುಂಪು ಹಲ್ಲೆ ನಡೆಸಲಾಯಿತು.
ಮಂಗಳವಾರ, ಕಿಂಕಿ ಗ್ರಾಮದಲ್ಲಿರುವ ಕೃಷಿ ಕಾರ್ಮಿಕ ಸಂಜಯ್ ಅವರನ್ನು ಮೂವರು ಆರ್‌ಪಿಎಫ್ ಸಿಬ್ಬಂದಿಗಳು ಗೂಡ್ಸ್ ರೈಲಿನಿಂದ ಪೆಟ್ರೋಲ್ ಕಳ್ಳತನದ ಬಗ್ಗೆ ಪ್ರಶ್ನಿಸಲು ಅವರ ಮನೆಯಿಂದ ಕರೆದೊಯ್ದಿದ್ದರು ಎಂದು ಅವರ ಕಿರಿಯ ಸಹೋದರ ರಾಜು ವರದಿಗಾರರಿಗೆ ತಿಳಿಸಿದರು.
“ಕೆಲವು ಗಂಟೆಗಳ ನಂತರ ಪೊಲೀಸರು ಸಂಜಯ್ ಅವರನ್ನು ಬಿಟ್ಟು ಕಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ಅವರು ಹಿಂತಿರುಗಿ ಪಕ್ಕದ ಬರುವಾ ಗ್ರಾಮದಲ್ಲಿರುವ ಅಂಗಡಿಯವನ ಬಳಿಗೆ ಕರೆದೊಯ್ದರು” ಎಂದು ರಾಜು ಹೇಳಿದರು.
“ನಂತರ ಅವರು ಸಂಜಯ್ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು, ನಂತರ ಬುಧವಾರ ಸ್ಥಳೀಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರು. ಸಂಜೆ ಯಾರೋ ಒಬ್ಬರು ಅವರನ್ನು ಆಸ್ಪತ್ರೆಗೆ ತರಲಾಗಿದೆ ಎಂದು ನಮಗೆ ತಿಳಿಸಿದರು. ಅಲ್ಲಿಂದ ನಾವು ಅವರ ದೇಹವನ್ನು ಪಡೆದುಕೊಂಡೆವು’ ಎಂದು ಹೇಳಿದರು.
“ಆರ್‌ಪಿಎಫ್ ಸಿಬ್ಬಂದಿ ಅವರನ್ನು 20 ಗಂಟೆಗಳಿಗೂ ಹೆಚ್ಚು ಕಾಲ ವಶದಲ್ಲಿ ಇಟ್ಟುಕೊಂಡಿದ್ದರು. ಕಬ್ಬಿಣದ ರಾಡ್ ಮತ್ತು ಚಾಕುಗಳಿಂದ ಹೊಡೆದಂತೆ ಅವರ ದೇಹದ ಮೇಲೆ ಹಲವಾರು ಆಳವಾದ ಗಾಯದ ಗುರುತುಗಳನ್ನು ನಾವು ನೋಡಿದ್ದೇವೆ” ಎಂದು ಅವರು ಹೇಳಿದರು.
ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ವಿವೇಕ್ ತ್ರಿವೇದಿ ಮಾತನಾಡಿ, ಆರ್‌ಪಿಎಫ್ ಸಬ್-ಇನ್‌ಸ್ಪೆಕ್ಟರ್ ಸುರೇಂದ್ರ ಕುಮಾರ್, ಕಾನ್‌ಸ್ಟೆಬಲ್‌ಗಳಾದ ಕರಣ್ ಸಿಂಗ್ ಯಾದವ್ ಮತ್ತು ಅಮಿತ್ ಕುಮಾರ್ ಯಾದವ್ ಮತ್ತು ಓರ್ವ ಅಪರಿಚಿತ ವ್ಯಕ್ತಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
“ಸೆಪ್ಟೆಂಬರ್ 28 ರಂದು ಬರುವಾಚಕ್ ರೈಲು ನಿಲ್ದಾಣದ ಬಳಿ ಸರಕು ರೈಲಿನಿಂದ ತೈಲ ಕಳ್ಳತನ ನಡೆದ ಬಗ್ಗೆ ಆರ್‌ಪಿಎಫ್ ತನಿಖೆ ನಡೆಸುತ್ತಿತ್ತು. ಸಂಜಯ್ ಅವರನ್ನು ಅನುಮಾನದ ಮೇಲೆ ಬಂಧಿಸಲಾಯಿತು” ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಮೋತಿಗಂಜ್‌ನಲ್ಲಿರುವ ಸ್ಥಳೀಯ ಆರ್‌ಪಿಎಫ್ ಪೋಸ್ಟ್‌ನ ಉಸ್ತುವಾರಿ ಅಧಿಕಾರಿ ಅನಿರುದ್ಧ್ ರೈ ಮಾತನಾಡಿ, “ಮೂವರು ಆರೋಪಿ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ, ಇಲಾಖಾ ತನಿಖೆಗೆ ಆದೇಶಿಸಲಾಗಿದೆ” ಎಂದು ಹೇಳಿದರು.
“ಅಪರಾಧದಲ್ಲಿ ಭಾಗಿಯಾಗಿರುವವರು ಯಾರು ಎಂದು ಆರ್‌ಪಿಎಫ್ ಸಂಜಯ್‌ನಿಂದ ತಿಳಿದುಕೊಳ್ಳಲು ಬಯಸಿತು. ಆರ್‌ಪಿಎಫ್ ಒಬ್ಬ ರಾಂಫರ್ ಕುಮಾರ್‌ಗಾಗಿಯೂ ಹುಡುಕಾಟ ನಡೆಸುತ್ತಿತ್ತು” ಎಂದು ರೈ ಹೇಳಿದರು.
“ರಾಂಫರ್ ಕಿಂಕಿಯಿಂದ ಸ್ವಲ್ಪ ದೂರದಲ್ಲಿರುವ ಮಂಕಾಪುರದಲ್ಲಿರುವ ತನ್ನ ಅತ್ತೆಯಂದಿರ ಮನೆಗೆ ಹೋಗಿದ್ದಾನೆ ಎಂದು ಸಂಜಯ್ ಅವರಿಗೆ ಹೇಳಿದರು. ತಂಡವು ಅವರನ್ನು ಮಂಕಾಪುರಕ್ಕೆ ಕರೆದೊಯ್ದಿತು. ಆದರೆ ರಾಂಫರ್ ಈಗಾಗಲೇ ಓಡಿಹೋಗಿದ್ದ. ವಿಚಾರಣೆಯ ಸಮಯದಲ್ಲಿ ಸಂಜಯ್ ಅವರ ಸ್ಥಿತಿ ಹದಗೆಟ್ಟಿತು, ಅವರನ್ನು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು” ಎಂದು ವಿವರಿಸಿದರು. ರೈ ಚಿತ್ರಹಿಂಸೆಯನ್ನು ದೃಢಪಡಿಸಲಿಲ್ಲ ಅಥವಾ ನಿರಾಕರಿಸಲಿಲ್ಲ.
ಹಿಮಾಚಲ ಪ್ರದೇಶ| ಮತ್ತೊಂದು ದಲಿತ ಮಗುವಿನ ಮೇಲೆ ದೈಹಿಕ ಶಿಕ್ಷಕರಿಂದ ಚಿತ್ರಹಿಂಸೆ


