ಬಿಜೆಪಿ ಆಡಳಿತದ ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ, ಭೂಮಾಲೀಕರು ಮತ್ತು ಅವರ ಸಹಾಯಕರು 40 ವರ್ಷದ ದಲಿತ ಕೃಷಿ ಕಾರ್ಮಿಕನನ್ನು ಥಳಿಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಹೌಸಿಲಾ ಪ್ರಸಾದ್ ಎಂದು ಗುರುತಿಸಲಾದ ದಲಿತ ವ್ಯಕ್ತಿ, ಭೂಮಾಲೀಕರಿಂದ ಬಾಕಿ ಇದ್ದ ಕೂಲಿ ಹಣ ಕೇಳಿದ್ದು ಅವರ ಸಾವಿಗೆ ಕಾರಣವಾಯಿತು ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.
ಪ್ರಸಾದ್ ಪ್ರಬಲ ಜಾತಿ ಭೂಮಾಲೀಕ ಶುಭಂ ಸಿಂಗ್ ಅವರ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಪ್ರಸಾದ್ ಮತ್ತು ಅವರ ಜೊತೆಗಾರರನ್ನು ಅಕ್ಟೋಬರ್‌ನಲ್ಲಿ ದಿನಕ್ಕೆ 350 ರೂ.ಗಳ ಭರವಸೆ ನೀಡಿ ಕೆಲಸಕ್ಕೆ ಕರೆದೊಯ್ದರು. ಆದರೆ, ಒಂದು ವಾರ ಕೆಲಸ ಮಾಡಿದ ನಂತರವೂ ಅವರಿಗೆ ಕೂಲಿ ನೀಡಲಾಗಿಲ್ಲ ಎಂದು ಪ್ರಸಾದ್ ಅವರ ಪತ್ನಿ ಕೀರ್ತಿ ಹೇಳಿದ್ದಾರೆ.
ತನ್ನ ಪತಿ ವೇತನಕ್ಕಾಗಿ ಬೇಡಿಕೆ ಇಟ್ಟಾಗ, ಭೂಮಾಲೀಕರು ಮತ್ತು ಅವರ ಜನರು ಅವರನ್ನು ರಾಡ್‌ಗಳಿಂದ ಹೊಡೆದರು. ಅವರು ಪ್ರಜ್ಞೆ ತಪ್ಪಿದಾಗ, ಆರೋಪಿಗಳು ಅವರನ್ನು ತಮ್ಮ ಮನೆಗೆ ಕರೆದೊಯ್ದು ಬಾಗಿಲಿನ ಬಳಿ ಎಸೆದರು.
ಪೊಲೀಸರು ಭೂಮಾಲೀಕನನ್ನು ಬಂಧಿಸಿದರು. ಆದರೆ ಅವರ ಮೇಲೆ ಕೊಲೆಗೆ ಸಮಾನವಲ್ಲದ ಅಪರಾಧಿಕ ನರಹತ್ಯೆ ಆರೋಪವನ್ನು ಮಾತ್ರ ಹೊರಿಸಿದರು.
ಬಲಿಪಶುವಿನ ಕುಟುಂಬ ಮತ್ತು ಗ್ರಾಮಸ್ಥರು, ಪೊಲೀಸರು ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಸಾದ್ ಮೇಲೆ ದಾಳಿಯಲ್ಲಿ ನಾಲ್ವರು ಭಾಗಿಯಾಗಿದ್ದಾರೆ. ಪ್ರಕರಣದಲ್ಲಿ ಭೂಮಾಲೀಕನ ಹೆಸರು ಮಾತ್ರ ಸೇರಿಸಲಾಗಿದೆ. ಕೊಲೆಗಾರನ ವಿರುದ್ಧದ ಆರೋಪಗಳನ್ನು ಪೊಲೀಸರು ದುರ್ಬಲಗೊಳಿಸಿದ್ದಾರೆ ಎಂದು ಅವರು ಆರೋಪಿಸಿದರು.
“ಪೊಲೀಸರು ಮೊದಲು ಸಣ್ಣ ಜಗಳಕ್ಕೆ ಸಂಬಂಧಿಸಿದ ಆರೋಪವನ್ನು ಮಾತ್ರ ಹೊರಿಸಿ ನಂತರ ಅದನ್ನು ಕೊಲೆಗೆ ಸಮಾನವಲ್ಲದ ಅಪರಾಧಿಕ ನರಹತ್ಯೆ ಎಂದು ಬದಲಾಯಿಸಿದರು. ಕೇವಲ ಒಬ್ಬ ವ್ಯಕ್ತಿಯ ವಿರುದ್ಧ ಮಾತ್ರ ದೂರು ದಾಖಲಿಸಿದ್ದಾರೆ. ದಲಿತ ವ್ಯಕ್ತಿ ಪ್ರಸಾದ್ ಹತ್ಯೆಯ ಹಿಂದೆ ಯಾರಿದ್ದಾರೆ ಎಂಬುದು ಇಡೀ ಗ್ರಾಮಕ್ಕೆ ತಿಳಿದಿದೆ” ಎಂದು ಪ್ರಸಾದ್ ಅವರ ಸಂಬಂಧಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.


