ಜಿಲ್ಲಾ ಜೈಲು ಸೂಪರಿಂಟೆಂಡೆಂಟ್ ತನ್ನ ತಾಯಿಗೆ ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಡೆಪ್ಯೂಟಿ ಜೈಲರ್ ಒಬ್ಬರ ಮಗಳು ದೂರು ದಾಖಲಿಸಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. “ಒಂದು ದಿನದೊಳಗೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಎಫ್‌ಐಆರ್ ದಾಖಲಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಪೊಲೀಸರು ನನಗೆ ಭರವಸೆ ನೀಡಿದ್ದಾರೆ” ಎಂದು ಸಂತ್ತಸ್ತೆ ಜೈಲರ್ ಅವರ ಮಗಳು ಹೇಳಿದ್ದಾರೆ. ಉತ್ತರ ಪ್ರದೇಶ
ಆರೋಪಿಯನ್ನು ವಾರಣಾಸಿ ಜಿಲ್ಲಾ ಜೈಲು ಸೂಪರಿಂಟೆಂಡೆಂಟ್ ಉಮೇಶ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಡೆಪ್ಯೂಟಿ ಜೈಲರ್ ಮೀನಾ ಕನೋಜಿಯಾ ಅವರ ಪುತ್ರಿ ನೇಹಾ ಶಾ ಅವರು ಲಾಲ್‌ಪುರ ಪಾಂಡೆಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಅದಾಗ್ಯೂ, ಉಮೇಶ್ ಸಿಂಗ್ ಅವರನ್ನು ಸೋನ್‌ಭದ್ರ ಜಿಲ್ಲಾ ಜೈಲಿಗೆ ವರ್ಗಾಯಿಸಲಾಗಿದ್ದು, ಅವರ ಬದಲಿಗೆ ಸೌರಭ್ ಶ್ರೀವಾಸ್ತವ ಅವರನ್ನು ತಾತ್ಕಾಲಿಕವಾಗಿ ವಿಶೇಷ ಕರ್ತವ್ಯದ ಮೇಲೆ ವಾರಣಾಸಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ
ಡೆಪ್ಯೂಟಿ ಜೈಲರ್ ಮೀನಾ ಕನೋಜಿಯಾ ಅವರು ಉಮೇಶ್ ಸಿಂಗ್ ವಿರುದ್ಧ ಕಿರುಕುಳ ಆರೋಪ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಈ ವಿಷಯವು ಗಮನ ಸೆಳೆಯಿತು. ವಿಡಿಯೋ ಕಾಣಿಸಿಕೊಂಡ ನಂತರ, ಅವರನ್ನು ಕೂಡಾ ನೈನಿ ಜಿಲ್ಲಾ ಜೈಲಿಗೆ ವರ್ಗಾಯಿಸಲಾಯಿತು ಎಂದು ವರದಿಯಾಗಿದೆ.
ಮಾರ್ಚ್ 18 ರಂದು ಡೈರೆಕ್ಟರ್ ಜನರಲ್ (ಜೈಲು) ಪಿವಿ ರಾಮಶಾಸ್ತ್ರಿ ಹೊರಡಿಸಿದ ಆದೇಶದ ಪ್ರಕಾರ, ಉಮೇಶ್ ಸಿಂಗ್ ಅವರನ್ನು ಯಾವುದೇ ಹೆಚ್ಚುವರಿ ಸಂಬಳ ಅಥವಾ ಭತ್ಯೆಗಳಿಲ್ಲದೆ ಸೋನ್‌ಭದ್ರದಲ್ಲಿ ವಿಶೇಷ ಕರ್ತವ್ಯದಲ್ಲಿ ಇರಿಸಲಾಗಿದೆ. ನೇಮಕಾತಿ ತಾತ್ಕಾಲಿಕವಾಗಿದ್ದು, ಮುಂದಿನ ಸೂಚನೆ ಬರುವವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನೇಹಾ ಶಾ ಅವರ ತಾಯಿ, ಪರಿಶಿಷ್ಟ ಜಾತಿಯ ಅಧಿಕಾರಿಯಾಗಿದ್ದು, ಉಮೇಶ್ ಸಿಂಗ್ ಅವರಿಂದ ತಿಂಗಳುಗಟ್ಟಲೆ ನಿರಂತರ ಮಾನಸಿಕ ಮತ್ತು ದೈಹಿಕ ಕಿರುಕುಳ ಅನುಭವಿಸಿದ್ದಾರೆ ಎಂದು ನೇಹಾ ಶಾ ಅವರ ದೂರಿನಲ್ಲಿ ಆರೋಪಿಸಲಾಗಿದೆ.
“ಅವರು ನನ್ನ ತಾಯಿಯನ್ನು ಆಗಾಗ್ಗೆ ಅವಮಾನಿಸುತ್ತಿದ್ದರು, ಜಾತಿ ಆಧಾರಿತ ನಿಂದನೆಗಳನ್ನು ಬಳಸುತ್ತಿದ್ದರು ಮತ್ತು ಅವರ ಕಚೇರಿಯಲ್ಲಿ ಅವರ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಉಮೇಶ್ ಸಿಂಗ್ ಅಶ್ಲೀಲ ಸನ್ನೆಗಳನ್ನು ಮಾಡುತ್ತಿದ್ದರು. ನನ್ನ ತಾಯಿಯನ್ನು ಅವರ ಕಚೇರಿ ಮತ್ತು ಮನೆಗೆ ಭೇಟಿ ನೀಡುವಂತೆ ಒತ್ತಡ ಹೇರಿದ್ದರು, ಜೊತೆಗೆ ಮಹಿಳಾ ಕೈದಿಗಳನ್ನು ಶೋಷಣೆಗೆ ಒಳಪಡಿಸುವಂತೆ ಒತ್ತಾಯಿಸಿದ್ದರು” ಎಂದು ನೇಹಾ ಅವರು ಆರೋಪಿಸಿದ್ದಾರೆ.
“ಇದನ್ನು ನನ್ನ ತಾಯಿ ವಿರೋಧಿಸಿದಾಗ, ಅವರು ನನ್ನ ತಾಯಿಯ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ, ನಮ್ಮ ಕುಟುಂಬಕ್ಕೆ ಹಾನಿ ಮಾಡುವುದಾಗಿ ಮತ್ತು ನಮ್ಮ ಜೀವವನ್ನು ಸಹ ತೆಗೆಯುವುದಾಗಿ ಬೆದರಿಕೆ ಹಾಕಿದರು” ಎಂದು ಅವರು ಆರೋಪಿಸಿದ್ದಾರೆ.
ಆರೋಪಿ ಉಮೇಶ್ ಸಿಂಗ್ ಈ ಹಿಂದೆ ಕೂಡಾ ದುಷ್ಕೃತ್ಯ ಎಸಗಿದ್ದಾರೆ ಎಂದು ನೇಹಾ ಅವರು ಹೇಳಿಕೊಂಡಿದ್ದಾರೆ. “ಅವರು ಮಾಜಿ ಉಪ ಜೈಲರ್ ರತನ್ ಪ್ರಿಯಾ ಅವರೊಂದಿಗೂ ಕೂಡಾ ಅದೇ ರೀತಿ ಮಾಡಿದ್ದರು. ಈ ಬಗ್ಗೆ ನೀವು ಅವರನ್ನು ಕೇಳಬಹುದು” ಎಂದು ಅವರು ತಮ್ಮ ದೂರಿನಲ್ಲಿ ಬರೆದಿದ್ದಾರೆ. ಅಷ್ಟೆ ಅಲ್ಲದೆ, ಉಮೇರ್ಶ ಸಿಂಗ್ ತನ್ನ ತಾಯಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಲು ಪ್ರಯತ್ನಿಸಿದ್ದು, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
“ತಾನು 2027 ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ, ಜೈಲು ಸಚಿವರಾಗುವುದಾಗಿ ನನ್ನ ತಾಯಿಗೆ ಪಾಠ ಕಲಿಸುವುದಾಗಿ ಹೇಳಿದ್ದರು. ಉಮೇಶ್ ಸಿಂಗ್ ಜೈಲಿನೊಳಗೆ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಮತ್ತು ಮಾದಕವಸ್ತು ಕಳ್ಳಸಾಗಣೆ ನಡೆಯಲು ಅವಕಾಶ ನೀಡಿದ್ದಾರೆ. ಇತ್ತೀಚೆಗೆ ವೈರಲ್ ಆದ ವೀಡಿಯೊದಲ್ಲಿ ಜೈಲಿನಲ್ಲಿ ಮಾದಕವಸ್ತು ಮಾರಾಟವಾಗುತ್ತಿರುವುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ.” ಎಂದು ಅವರು ಆರೋಪಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಉತ್ತರಾಖಂಡ| ಕೇದಾರನಾಥದಲ್ಲಿ ಹಿಂದೂಯೇತರರನ್ನು ನಿಷೇಧಿಸಬೇಕು ಎಂದು ಬಿಜೆಪಿ ಶಾಸಕಿ ಒತ್ತಾಯ

